Connect with us

Bantawala

ದ್ವಿಚಕ್ರ ವಾಹನ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳ ಬಂಧನ; ವಾಹನ ವಶ

Published

on

ಬಂಟ್ವಾಳ: ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪರ್ಲಿಯಾದಲ್ಲಿ ನಡೆದಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಬಂಟ್ವಾಳ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಕಳವು ಮಾಡಿದ್ದ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ.

ಕಳೆದ ಮಾರ್ಚ್ 21, 2026 ರಂದು ಪರ್ಲಿಯಾ ಎಂಬಲ್ಲಿನ ವಸತಿಗೃಹವೊಂದರ ಶೆಡ್‌ನಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವು ಕಳುವಾಗಿತ್ತು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು (ಅ.ಕ್ರ :37/2026, ಕಲಂ:303(2) BNS 2023).

ತನಿಖೆ ಕೈಗೆತ್ತಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಹಸನ್ ಬಾವ (55): ಸಜೀಪ ಮುನ್ನೂರು, ಬಂಟ್ವಾಳ. ಮತ್ತು ಮೊಹಮ್ಮದ್ ಇರ್ಷಾದ್ (37): ಬಿ. ಮೂಡಾ, ಬಂಟ್ವಾಳ ಎಂಬಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ:

ಬಂಧಿತ ಆರೋಪಿಗಳಿಂದ ಕಳ್ಳತನ ಮಾಡಲಾಗಿದ್ದ ಸುಮಾರು 50,000 ರೂಪಾಯಿ ಮೌಲ್ಯದ ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ತಾಂತ್ರಿಕ ಮಾಹಿತಿ ಹಾಗೂ ಇತರ ಮೂಲಗಳ ಮೂಲಕ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.


Continue Reading
Advertisement

Article

ಹಿರಿಯ ಪತ್ರಕರ್ತ ಗೋಪಾಲ್ ಅಂಚನ್ ಎತ್ತಿದ ತೀಕ್ಷ್ಣ ಪ್ರಶ್ನೆಗಳು ? ಬಂಟ್ವಾಳ ಸಾಹಿತ್ಯ ಸಮ್ಮೇಳನ ಮತ್ತು ಪತ್ರಿಕೋದ್ಯಮದ ಆತ್ಮಾವಲೋಕನ!

Published

on

ಬಂಟ್ವಾಳ: ಇತ್ತೀಚೆಗೆ ನಡೆದ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಪತ್ರಕರ್ತರ ಕಡೆಗಣನೆಯ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಹಿರಿಯ ಪತ್ರಕರ್ತ ಹಾಗೂ ‘ಜಾಗೃತ ಸಮಾಜ’ದ ಸಂಪಾದಕ ಗೋಪಾಲ್ ಅಂಚನ್ ಅವರು ಪತ್ರಿಕಾ ರಂಗದ ನೈಜ ಸ್ಥಿತಿಯ ಬಗ್ಗೆ ಕನ್ನಡಿ ಹಿಡಿಯುವಂತಹ ಬರಹವೊಂದನ್ನು ಹಂಚಿಕೊಂಡಿದ್ದಾರೆ. ಪತ್ರಿಕೋದ್ಯಮದ ಮೌಲ್ಯಗಳ ಕುರಿತಾದ ಅವರ ಈ ವಿಚಾರಧಾರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಾಹಿತ್ಯ ಸಮ್ಮೇಳನದಲ್ಲಿ ಬಂಟ್ವಾಳದ ಪತ್ರಕರ್ತರನ್ನು ಕಡೆಗಣಿಸಿದವರು ಯಾರು ಎಂಬ ಪ್ರಶ್ನೆಯೊಂದಿಗೆ ಆರಂಭವಾಗುವ ಇವರ ಬರಹ, ಪತ್ರಿಕೋದ್ಯಮದ ಇಂದಿನ ನಡೆಯನ್ನು ಗಂಭೀರವಾಗಿ ಪ್ರಶ್ನಿಸಿದೆ. ಹಿಂದೆ ನಡೆದ ಸಾರ್ವಜನಿಕ ಹಿತಾಸಕ್ತಿಯ ಕಾರ್ಯಕ್ರಮಗಳಿಗೆ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಎಷ್ಟು ಮಂದಿ ಪತ್ರಕರ್ತರು ಪ್ರಾಮಾಣಿಕವಾಗಿ ನ್ಯಾಯ ಒದಗಿಸಿದ್ದಾರೆ? ಕೇವಲ ವೇದಿಕೆಗಳಲ್ಲಿ ಗೌರವ ಸಿಗದಿದ್ದಾಗ ಮಾತ್ರ ಧ್ವನಿ ಎತ್ತುವುದು ಸರಿಯೇ ಎನ್ನುವ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಬಂಟ್ವಾಳದ ಇಂದಿನ ಪರಿಸ್ಥಿತಿಯಲ್ಲಿ ಸಮಾಜದ ಹಿತವನ್ನು ಬಯಸುವ “ನೈಜ ಮಾನವ ಪತ್ರಕರ್ತರು” ಎಷ್ಟು ಜನರಿದ್ದಾರೆ ಎನ್ನುವ ತೀಕ್ಷ್ಣ ಪ್ರಶ್ನೆಯನ್ನು ಅವರು ಸಮಾಜದ ಮುಂದಿಟ್ಟಿದ್ದಾರೆ. ಪತ್ರಿಕೋದ್ಯಮ ಎನ್ನುವುದು ಕೇವಲ ಸುದ್ದಿಗಾಗಿ ಅಲ್ಲ, ಅದು ಸಮಾಜದ ಹಿತಕ್ಕಾಗಿ ಇರಬೇಕು. ಸಾರ್ವಜನಿಕ ಹಿತಾಸಕ್ತಿಯ ಕಾರ್ಯಕ್ರಮಗಳಿಗೆ ಸ್ಪಂದಿಸದವರು ಈಗ ಗೌರವಕ್ಕಾಗಿ ಹಪಹಪಿಸುವುದು ಎಷ್ಟು ಸರಿ ಎನ್ನುವುದು ಈ ಲೇಖನದ ಪ್ರಮುಖ ಆಶಯವಾಗಿದೆ.

ಈ ಬರಹವು ಪತ್ರಕರ್ತರ ವಲಯದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದ್ದು, ಪತ್ರಿಕಾ ರಂಗವು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸಾರಿ ಹೇಳುತ್ತಿದೆ.

ಕೃಪೆ: ಗೋಪಾಲ್ ಅಂಚನ್ (ಸಂಪಾದಕರು, ಜಾಗೃತ ಸಮಾಜ ನ್ಯೂಸ್ ಕರ್ನಾಟಕ)

ಬಂಟ್ವಾಳದಲ್ಲಿ “ನೈಜ ಮಾನವ ಪತ್ರಕರ್ತರು” ಎಷ್ಠಿದ್ದಾರೆ?.
✍🏻ಗೋಪಾಲ ಅಂಚನ್
ಸಂಪಾದಕ,ಜಾಗೃತಸಮಾಜ ನ್ಯೂಸ್ ಕರ್ನಾಟಕ

Continue Reading

Bantawala

ಕಟ್ಟತ್ತಿಲ: ಮಠ-ಮಸೀದಿ ಸಂಪರ್ಕಿಸುವ ‘ಸೌಹಾರ್ದ ಪಥ’ ಲೋಕಾರ್ಪಣೆ

Published

on

ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪದ ಕಟ್ಟತ್ತಿಲ ಎಂಬ ಪುಣ್ಯಭೂಮಿ ಇಂದು ಕೇವಲ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಮಾತ್ರವಲ್ಲದೆ, ಕೋಮು ಸೌಹಾರ್ದತೆಯ ಭವ್ಯ ಪ್ರತೀಕವಾಗಿಯೂ ಇಡೀ ಜಿಲ್ಲೆಗೆ ಮಾದರಿಯಾಗಿ ನಿಂತಿದೆ. ಇತಿಹಾಸ ಪ್ರಸಿದ್ಧ ಕಟ್ಟತ್ತಿಲ ದರ್ಗಾ ಮತ್ತು ಕಟ್ಟತ್ತಿಲ ಮಠವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯು ಇಂದು ನವವಧುವಿನಂತೆ ಸಿಂಗಾರಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ.

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಭಾವನಾತ್ಮಕ ಬೆಸುಗೆಯಾಗಿರುವ ಕಟ್ಟತ್ತಿಲ ಮಠ ಮತ್ತು ದರ್ಗಾಕ್ಕೆ ಹೋಗುವ ಹಾದಿ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಹೋಗಿತ್ತು. ರಸ್ತೆಯಿಲ್ಲದೆ ಭಕ್ತಾದಿಗಳು ಹಾಗೂ ಸ್ಥಳೀಯ ನಾಗರಿಕರು ನರಕಯಾತನೆ ಅನುಭವಿಸುತ್ತಿದ್ದರು. ಧಾರ್ಮಿಕ ಕೇಂದ್ರಗಳಿಗೆ ಸರಿಯಾದ ರಾಜಮಾರ್ಗವೇ ಇಲ್ಲದ ಸಮಯದಲ್ಲಿ, ಸ್ಥಳೀಯ ಖಾಸಗಿ ಜಮೀನಿನ ಮಾಲೀಕರನ್ನು ಮನವೊಲಿಸಿ, ಎರಡು ಸಮುದಾಯಗಳ ನಡುವಿನ ಸೌಹಾರ್ದತೆಯನ್ನು ಕಾಪಾಡಿಕೊಂಡು ಕಚ್ಚಾ ರಸ್ತೆ ನಿರ್ಮಾಣ ಮಾಡಲು ಈ ಹಿಂದೆ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು ಮುಂಚೂಣಿಯಲ್ಲಿ ನಿಂತು ಪ್ರಮುಖ ಪಾತ್ರ ವಹಿಸಿದ್ದರು. ಆ ಕಾಲದಲ್ಲಿ ಹಲವಾರು ನೂತನ ಕಚ್ಚಾ ರಸ್ತೆ ನಿರ್ಮಾಣ ಮಾಡುವಲ್ಲಿ ಅವರ ದೂರದೃಷ್ಟಿ ಮತ್ತು ಸಾಮಾಜಿಕ ಬದ್ಧತೆ ಇಂದಿಗೂ ಜನಮನದಲ್ಲಿ ಹಚ್ಚಹಸಿರಾಗಿ ಉಳಿದಿದೆ. ಅದರಲ್ಲಿ ಕಟ್ಟತ್ತಿಲ ಮಸೀದಿ-ಮಠ ಸಂಪರ್ಕ ರಸ್ತೆಯೂ ಒಂದಾಗಿದೆ.

ಆನಂತರ ಜಿ.ಪಂ. ಸದಸ್ಯರಾಗಿದ್ದ ಎಂ.ಎಸ್. ಮಹಮ್ಮದ್ ಅವರು ಈ ರಸ್ತೆಯ ಅಭಿವೃದ್ಧಿಗೆ ಡಾಮರೀಕರಣ ಅನುದಾನ ಒದಗಿಸಿ ಎರಡನೇ ಹಂತದ ಅಭಿವೃದ್ಧಿಗೆ ಚಾಲನೆ ನೀಡಿದ್ದರು. ಇದಕ್ಕೆ ಮುಂದುವರಿದಂತೆ, ಸುಭಾಶ್ಚಂದ್ರ ಶೆಟ್ಟಿಯವರ ಅವಧಿಯಲ್ಲಿ ಉಳಿದ ಭಾಗಕ್ಕೆ ಕಾಂಕ್ರೀಟಿಕರಣ ಕಾರ್ಯ ಕೈಗೊಳ್ಳಲಾಗಿದ್ದು, ನಂತರ ನಿಕಟಪೂರ್ವ ಅಧ್ಯಕ್ಷರಾದ ಅಶ್ರಫ್ ಸಾಲೆತ್ತೂರು ಅವರ ಅವಧಿಯಲ್ಲಿ ಈ ಭಾಗದ ರಸ್ತೆ ಅಭಿವೃದ್ಧಿ ಇನ್ನಷ್ಟು ಬಲಗೊಂಡಿತು.

ಇದೀಗ, ರಸ್ತೆ ಉದ್ದವಾದ ಸಂಪರ್ಕ ಮಾರ್ಗವಾಗಿರುವ ಹಿನ್ನೆಲೆಯಲ್ಲಿ, ನಾಗರಿಕರ ಬೇಡಿಕೆಗೆ ಓಗೊಟ್ಟು ಸಾಲೆತ್ತೂರು ಗ್ರಾ.ಪಂಚಾಯತ್ ಮಾಜಿ ಅಧ್ಯಕ್ಷರಾದ ಹಸೈನಾರ್ ಡಿ.ಕೆ. ಹಾಗೂ ಕೊಳ್ನಾಡು ಅಧ್ಯಕ್ಷರಾಗಿದ್ದ ಅಶ್ರಪ್ ಸಾಲೆತ್ತೂರು ಅವರು ವಿಶೇಷ ಮನವಿ ಸಲ್ಲಿಸಿದ್ದರು. ಈ ಮನವಿಗೆ ತಕ್ಷಣ ಸ್ಪಂದಿಸಿದ ಶ್ರೀ ಸುಭಾಶ್ಚಂದ್ರ ಶೆಟ್ಟಿಯವರು, ವಿಧಾನಪರಿಷತ್ ಶಾಸಕರಾದ ಡಾ. ಮಂಜುನಾಥ ಭಂಡಾರಿಯವರ ಗಮನಕ್ಕೆ ತಂದು ಅವರ ವಿಶೇಷ ಅನುದಾನದಲ್ಲಿ ರಸ್ತೆಯ ಸಂಪೂರ್ಣ ಡಾಮರೀಕರಣ ಕಾರ್ಯವನ್ನು ನೆರವೇರಿಸಿದ್ದಾರೆ.

ಕೇವಲ ರಸ್ತೆ ಮಾತ್ರವಲ್ಲದೆ, ಹೈಮಾಸ್ಕ್ ದೀಪಗಳ ಅಳವಡಿಕೆಯಿಂದಾಗಿ ಇಂದು ರಾತ್ರಿ ವೇಳೆಯೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಈ ಹಿಂದೆ ಮಸೀದಿ ಬಳಿ ಮಾಜಿ ಸಚಿವರಾದ ಬಿ. ರಮನಾಥ ರೈ ಅವರ ಅವಧಿಯಲ್ಲಿ ಅಳವಡಿಸಲಾದ ಹೈಮಾಸ್ಕ್ ದೀಪವನ್ನು ಕೂಡ ಇದೇ ಸಂದರ್ಭದಲ್ಲಿ ದುರಸ್ತಿ ಮಾಡಲಾಗಿದ್ದು, ಸಾರ್ವಜನಿಕ ಬಳಕೆಗೆ ಮತ್ತಷ್ಟು ವೇಗ ನೀಡಿದೆ. ಈ ಅಭಿವೃದ್ಧಿ ಕಾರ್ಯಗಳು ವಿಶೇಷವಾಗಿ ಕಟ್ಟತ್ತಿಲ ಊರೂಸು ಸಮಾರಂಭದ ಸುಸಂದರ್ಭದಲ್ಲೇ ಪೂರ್ಣಗೊಂಡಿರುವುದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಒಟ್ಟಿನಲ್ಲಿ, ಕಟ್ಟತ್ತಿಲ ದರ್ಗಾ–ಮಠ ಸಂಪರ್ಕ ರಸ್ತೆ ಇಂದು ಸೌಹಾರ್ದದ ಹಾದಿಯಾಗಿ ಹೊರಹೊಮ್ಮಿದೆ. ರಾಜಕೀಯ ಮತ್ತು ಜಾತಿ ಭೇದ ಮರೆತು ಈ ರಸ್ತೆಯ ಅಭಿವೃದ್ಧಿಯ ಹಿಂದೆ ಕಾರ್ಯನಿರ್ವಹಿಸಿದ ಪ್ರತಿಯೊಬ್ಬರ ಸೇವೆಯನ್ನು ಸ್ಥಳೀಯರು ಹಾಗೂ ಮಸೀದಿ-ಮಂದಿರದ ಆಡಳಿತ ಮಂಡಳಿಯವರು ಕೃತಜ್ಞತೆಯಿಂದ ಸ್ಮರಿಸುತ್ತಿದ್ದಾರೆ. ಇದು ಜಿಲ್ಲೆಯ ಸೌಹಾರ್ದ ಪರಂಪರೆಗೆ ಮತ್ತೊಂದು ಗರಿ ಎಂದರೆ ತಪ್ಪಾಗಲಾರದು.

Continue Reading

Bantawala

ವಿಟ್ಲ: ಸಿಡಿಪಿಒ ಕಚೇರಿಯಲ್ಲಿ ದಾಂಧಲೆ; ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಪೀಠೋಪಕರಣ ಧ್ವಂಸ

Published

on

ವಿಟ್ಲ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (ಸಿಡಿಪಿಒ) ಕಚೇರಿಯಲ್ಲಿ ದಂಪತಿಗಳ ನಡುವಿನ ಮನಸ್ತಾಪದ ಕುರಿತು ಆಪ್ತ ಸಮಾಲೋಚನೆ (COUNSELING) ನಡೆಯುತ್ತಿದ್ದ ವೇಳೆ, ಪತಿಯ ಕಡೆಯವರು ಏಕಾಏಕಿ ದಾಂಧಲೆ ನಡೆಸಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಘಟನೆ ಬುಧವಾರ ವಿಟ್ಲದ ಬಸವನಗುಡಿ ರಸ್ತೆಯಲ್ಲಿ ಸಂಭವಿಸಿದೆ.

ಘಟನೆಯ ವಿವರ: ವಿಟ್ಲದ ಬಸವನಗುಡಿ ರಸ್ತೆಯಲ್ಲಿರುವ ಕುಲಾಲ ಭವನದಲ್ಲಿ ಕಾರ್ಯಾಚರಿಸುತ್ತಿರುವ ಸಿಡಿಪಿಒ ಕಚೇರಿಯಲ್ಲಿ ಈ ಘಟನೆ ಸಂಭವಿಸಿದೆ. ಇರಾ ಮೂಲದ ಪತ್ನಿ ಹಾಗೂ ಉಳ್ಳಾಲ ಮೂಲದ ಪತಿಯ ನಡುವಿನ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಪತ್ನಿಯ ಕಡೆಯವರು ನೀಡಿದ ದೂರಿನ ಮೇರೆಗೆ ಇಲಾಖೆಯು ಎರಡೂ ತಂಡಗಳಿಗೆ ನೋಟಿಸ್ ಜಾರಿ ಮಾಡಿತ್ತು.

ಬುಧವಾರ ಮಧ್ಯಾಹ್ನ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಸಮ್ಮುಖದಲ್ಲಿ ಆಪ್ತ ಸಮಾಲೋಚನೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಇತ್ತಂಡಗಳ ನಡುವೆ ವಾದ-ಪ್ರತಿವಾದ ತಾರಕಕ್ಕೇರಿದೆ. ಈ ವೇಳೆ ರೊಚ್ಚಿಗೆದ್ದ ಪತಿಯ ಕಡೆಯವರು ಪತ್ನಿಯ ಕಡೆಯವರ ಮೇಲೆ ನೂಕಾಟ-ತಳ್ಳಾಟ ನಡೆಸಿ, ಕೈಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಕಚೇರಿ ಆಸ್ತಿ ಪಾಸ್ತಿ ಧ್ವಂಸ: ಗಲಾಟೆ ನಿಯಂತ್ರಿಸಲು ಕಚೇರಿಯ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಯತ್ನಿಸಿದರಾದರೂ, ಉದ್ರಿಕ್ತ ಗುಂಪು ಕಚೇರಿಯಲ್ಲಿದ್ದ ಪೀಠೋಪಕರಣಗಳನ್ನು ಬಡಿದು ಧ್ವಂಸಗೊಳಿಸಿದೆ. ಇಷ್ಟಕ್ಕೇ ಸುಮ್ಮನಾಗದ ಗುಂಪು, ಕೌನ್ಸಿಲಿಂಗ್ ಕೇಂದ್ರದಿಂದ ಹೊರಗೆ ಬಂದು ಕೇಕೆ ಹಾಕುತ್ತಾ ಆರ್ಭಟಿಸಿದೆ. ಅಲ್ಲದೆ, ಕಚೇರಿಯ ಶಟರ್ ಎಳೆದು ಬೆದರಿಕೆ ಹಾಕಿದ್ದರಿಂದ ಕಚೇರಿ ಸಿಬ್ಬಂದಿಗಳು ತೀವ್ರ ಭಯಭೀತರಾಗಿ ಬೊಬ್ಬೆ ಹೊಡೆದಿದ್ದಾರೆ.

“ಪತಿ-ಪತ್ನಿಯರ ನಡುವಿನ ಸಣ್ಣ ವಿಚಾರದ ಮನಸ್ತಾಪವನ್ನು ಆಪ್ತ ಸಮಾಲೋಚನೆಯ ಮೂಲಕ ಬಗೆಹರಿಸಬಹುದಾಗಿತ್ತು. ಆದರೆ, ಕೌನ್ಸಿಲಿಂಗ್‌ಗೆ ಎರಡೂ ಕಡೆಯಿಂದ ಸಂಬಂಧವಿಲ್ಲದ ಅನಗತ್ಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದೇ ಈ ಗಲಾಟೆಗೆ ಮುಖ್ಯ ಕಾರಣ” ಎಂದು ಇಲಾಖಾ ಮೂಲಗಳಿಂದ ತಿಳಿದು ಬಂದಿದೆ

ಸರ್ಕಾರಿ ಕಚೇರಿಯೊಳಗೆ ನುಗ್ಗಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ ಈ ಘಟನೆ ವಿಟ್ಲ ಪರಿಸರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ವಿಟ್ಲ ಠಾಣೆಗೆ ದೂರು ನೀಡಲಾಗಿದೆ.


Continue Reading

Trending

Copyright © 2025 Deevatige