fire
ಚಿಕನ್ ಸೆಂಟರ್ನಲ್ಲಿ ತಡರಾತ್ರಿ ಬೆಂಕಿ ಆಕಸ್ಮಿಕ – ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
ವಿಟ್ಲ: ಇಲ್ಲಿನ ಬೊಬ್ಬೆಕೇರಿಯ ದೇವಸ್ಥಾನದ ಒಳರಸ್ತೆಯಲ್ಲಿರುವ ‘ಜನಪ್ರಿಯ ಚಿಕನ್ ಸೆಂಟರ್’ನಲ್ಲಿ ತಡರಾತ್ರಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಸ್ಥಳೀಯರ ತುರ್ತು ಕಾರ್ಯಾಚರಣೆಯಿಂದಾಗಿ ದೊಡ್ಡ ಮಟ್ಟದ ಅಪಾಯವೊಂದು ತಪ್ಪಿದ ಘಟನೆ ನಡೆದಿದೆ.

ಇಸ್ಮಾಯಿಲ್ ಎಂಬವರ ಮಾಲೀಕತ್ವದ ಈ ಚಿಕನ್ ಸೆಂಟರ್ನಲ್ಲಿ ಭಾನುವಾರ ತಡರಾತ್ರಿ ಸುಮಾರು 1 ಗಂಟೆಯ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಸಮಾರಂಭವೊಂದಕ್ಕಾಗಿ ಕೋಳಿ ಮಾಂಸದ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ, ಗ್ಯಾಸ್ ಒಲೆಯಿಂದ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕ್ಷಣಾರ್ಧದಲ್ಲಿ ಬೆಂಕಿ ಅಂಗಡಿಯಾದ್ಯಂತ ವ್ಯಾಪಿಸತೊಡಗಿತ್ತು.
ರಕ್ಷಣಾ ಕಾರ್ಯಾಚರಣೆ: ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ‘ಫ್ರೆಂಡ್ಸ್ ವಿಟ್ಲ’ ತಂಡದ ಮುರಳೀಧರ ವಿಟ್ಲ ಅವರು ಕೂಡಲೇ ತಮ್ಮ ಪಿಕಪ್ ವಾಹನದಲ್ಲಿ ನೀರು ತಂದು ಬೆಂಕಿ ನಂದಿಸಲು ಮುಂದಾದರು. ಇದೇ ಸಂದರ್ಭದಲ್ಲಿ ಆಸಿಫ್ ಪೆರುವಾಯಿ, ನವೀದ್ ವಿಟ್ಲ ಮತ್ತು ಅನ್ಸಾರ್ ಪೆರುವಾಯಿ ಅವರು ಹತ್ತಿರದ ಬೊಬ್ಬೆಕೇರಿ ಪೆಟ್ರೋಲ್ ಬಂಕ್ನಲ್ಲಿದ್ದ ಅಗ್ನಿಶಾಮಕ ಸಿಲಿಂಡರ್ಗಳನ್ನು ತಂದು ಬೆಂಕಿ ಹರಡದಂತೆ ತಡೆದರು. ಇವರ ಸಮಯಪ್ರಜ್ಞೆ ಮತ್ತು ಸಾಹಸಮಯ ಕಾರ್ಯದಿಂದಾಗಿ ಬೆಂಕಿ ನಿಯಂತ್ರಣಕ್ಕೆ ಬಂದು, ಪಕ್ಕದ ಕಟ್ಟಡಗಳಿಗೆ ಹಾನಿಯಾಗುವುದು ತಪ್ಪಿದಂತಾಗಿದೆ.

ಘಟನೆಯಲ್ಲಿ ಚಿಕನ್ ಸೆಂಟರ್ನ ಕೆಲವು ಸಾಮಗ್ರಿಗಳು ಹಾನಿಗೀಡಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
accident
ಬ್ರಹ್ಮಾವರ ಸಮೀಪ ಚಲಿಸುತ್ತಿದ್ದ ಖಾಸಗಿ ಬಸ್ನಲ್ಲಿ ಬೆಂಕಿ: ನಿರ್ವಾಹಕನ ಸಮಯಪ್ರಜ್ಞೆಯಿಂದ ಪಾರಾದ 7 ಪ್ರಯಾಣಿಕರು!
ಉಡುಪಿ: ಚಲಿಸುತ್ತಿದ್ದ ಖಾಸಗಿ ಬಸ್ ಒಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನಿರ್ವಾಹಕನ ಸಮಯಪ್ರಜ್ಞೆಯಿಂದಾಗಿ ಬಸ್ನಲ್ಲಿದ್ದ ಏಳು ಮಂದಿ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬ್ರಹ್ಮಾವರ ಸಮೀಪ ಸಂಭವಿಸಿದೆ.
ಉಡುಪಿಯಿಂದ ಸಾಗರದತ್ತ ತೆರಳುತ್ತಿದ್ದ ಖಾಸಗಿ ಬಸ್ ಬ್ರಹ್ಮಾವರ ಸಮೀಪ ತಲುಪುತ್ತಿದ್ದಂತೆ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ಬಸ್ನ ಎಲೆಕ್ಟ್ರಿಕಲ್ ಬಾಕ್ಸ್ (EDC Box) ಭಾಗದಲ್ಲಿ ಬೆಂಕಿ ವ್ಯಾಪಿಸಲು ಆರಂಭಿಸಿದೆ.
ಅನಾಹುತ ತಪ್ಪಿಸಿದ ನಿರ್ವಾಹಕ: ಬಸ್ನಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿರುವುದನ್ನು ಗಮನಿಸಿದ ಬಸ್ ನಿರ್ವಾಹಕ, ತಕ್ಷಣವೇ ಚಾಲಕನಿಗೆ ಬಸ್ ನಿಲ್ಲಿಸಲು ಸೂಚಿಸಿ, ಸಮಯಪ್ರಜ್ಞೆ ಮೆರೆದಿದ್ದಾರೆ. ಬಸ್ನಲ್ಲಿದ್ದ ಎಲ್ಲಾ ಏಳು ಪ್ರಯಾಣಿಕರನ್ನು ತಕ್ಷಣ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ನಿರ್ವಾಹಕನ ಈ ತ್ವರಿತ ಮತ್ತು ಜಾಗರೂಕ ಕ್ರಮದಿಂದಾಗಿ ಸಂಭವಿಸಬಹುದಾಗಿದ್ದ ಭೀಕರ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.
ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ: ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

accident
ಮಿಜಾರ್: ಬಾಡಿಗೆ ಮನೆಯಲ್ಲಿ ಅನಿಲ ಸೋರಿಕೆ/ಸಿಲಿಂಡರ್ ಸ್ಫೋಟ – ಒಂದೇ ಕುಟುಂಬದ ಮೂವರಿಗೆ ತೀವ್ರ ಗಾಯ!
ಮಿಜಾರ್: ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ಇಂದು ಬೆಳಿಗ್ಗೆ (ಆಗಸ್ಟ್ 11) ಭೀಕರ ಘಟನೆಯೊಂದು ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಆಳ್ವಾಸ್ ಕಾಲೇಜಿನಲ್ಲಿ ವಾಚ್ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವರಾಮ (31), ಅವರ ಪತ್ನಿ ಗಂಗಾ (25) ಹಾಗೂ 6 ವರ್ಷದ ಮಗ ಆದರ್ಶ್ ಗಾಯಗೊಂಡ ದುರದೃಷ್ಟಕರ ವ್ಯಕ್ತಿಗಳು.
ಘಟನೆಯ ವಿವರ:
ಇಂದು ಬೆಳಿಗ್ಗೆ ಸುಮಾರು 6:30ರ ವೇಳೆಗೆ ಈ ದುರಂತ ಸಂಭವಿಸಿದೆ. ಅಡುಗೆ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿದ್ದು ಗಮನಕ್ಕೆ ಬಾರದೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಶಿವರಾಮ ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಪತ್ನಿ ಹಾಗೂ ಮಗನಿಗೂ ಗಾಯಗಳಾಗಿವೆ.
ವರದಿಗಳು ತಿಳಿಸಿರುವಂತೆ, ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಪೊಲೀಸ್ ಭೇಟಿ – ಕಮಿಷನರ್ ಮಾಹಿತಿ:
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕಮಿಷನರ್, ಪ್ರಕರಣದ ಕುರಿತು ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ
accident
ವಿಟ್ಲ: ಅಡುಗೆ ಮನೆಯಲ್ಲಿ ಭೀಕರ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ — ಗೃಹಿಣಿಯ ಸಮಯಪ್ರಜ್ಞೆಯಿಂದ ಪಾರಾದ ವೃದ್ಧೆ, ಮಗು!
ವಿಟ್ಲ: ವಿಟ್ಲ ಕಸಬಾ ಗ್ರಾಮದ ಕುರುಂಬಳ ನಿವಾಸಿ K. ಹಮೀದ್ ಎಂಬುವರ ಮನೆಯಲ್ಲಿ ಭಾನುವಾರ ಬೆಳಿಗ್ಗೆ ಏಕಾಏಕಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮನೆ ಸಂಪೂರ್ಣವಾಗಿ ಜಖಂಗೊಂಡ ದುರಂತ ಸಂಭವಿಸಿದೆ. ಗೃಹಿಣಿಯ ಕ್ಷಿಪ್ರ ಸಮಯಪ್ರಜ್ಞೆಯಿಂದಾಗಿ ಮೂರು ಜೀವಗಳು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿವೆ.
ಘಟನೆಯ ವಿವರ
ಕುರುಂಬಳ ನಿವಾಸಿ ಇಸುಬು ಬ್ಯಾರಿ ಅವರ ಪುತ್ರ K. ಹಮೀದ್ (49) ಅವರ ಮನೆಯಲ್ಲಿ ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದೆ. ಮನೆ ಮಾಲಿಕ ಹಮೀದ್ ಅವರು ಪೇಟೆಗೆ ತೆರಳಿದ್ದ ಸಂದರ್ಭದಲ್ಲಿ, ಅವರ ಪತ್ನಿ ಖೈರುನ್ನಿಸಾ ಅವರು ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಗ್ಯಾಸ್ ಸಿಲಿಂಡರ್ನ ರೆಗ್ಯುಲೇಟರ್ ಬಳಿ ಬೆಂಕಿ ಹತ್ತಿಕೊಂಡಿದೆ.

ಸಾಹಸಪೂರ್ವಕವಾಗಿ ಜೀವ ಉಳಿಸಿದ ಗೃಹಿಣಿ
ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಅಪಾಯದ ತೀವ್ರತೆಯನ್ನು ಅರಿತ ಖೈರುನ್ನಿಸಾ ಅವರು ಧೈರ್ಯಗೆಡದೆ ತಕ್ಷಣವೇ ಕಾರ್ಯಪ್ರವೃತ್ತರಾದರು. ಮನೆಯಲ್ಲಿದ್ದ ತಮ್ಮ 9 ವರ್ಷದ ಪುತ್ರ ಇಮ್ರಾನ್ ಹಾಗೂ ಅನಾರೋಗ್ಯ ಪೀಡಿತರಾಗಿ, ದೃಷ್ಟಿಹೀನರಾಗಿ ಹಾಸಿಗೆ ಹಿಡಿದಿದ್ದ 80 ವರ್ಷದ ಅತ್ತೆ ಮರಿಯಮ್ಮ ಅವರನ್ನು ತಕ್ಷಣವೇ ಮನೆಯಿಂದ ಹೊರಗೆಳೆದು ಅಂಗಳಕ್ಕೆ ತಲುಪಿಸಿದ್ದಾರೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಮನೆಯೊಡತಿ ಖೈರುನ್ನಿಸಾ ಬೊಬ್ಬೆ ಹೊಡೆದಿದ್ದು ಕೇಳಿಸಿಕೊಂಡ ನೆರೆಯ ನಿವಾಸಿ ಉಮ್ಮರ್ ತೋಟದಿಂದ ಓಡಿಬಂದು ರಕ್ಷಿಸಲು ಸಹಕರಿಸಿದ್ದಾರೆ.
ಅವರು ಹೊರಗೆ ಬಂದ ಕೆಲವೇ ಕ್ಷಣಗಳಲ್ಲಿ ಸಿಲಿಂಡರ್ ಭೀಕರವಾಗಿ ಸ್ಪೋಟಗೊಂಡು ಛಿದ್ರಗೊಂಡಿದೆ.
ಮನೆ ಸಂಪೂರ್ಣ ನಾಶ
ಸ್ಪೋಟದ ತೀವ್ರತೆಗೆ ಮನೆಯ ಗೋಡೆಗಳು ಬಿರುಕು ಬಿಟ್ಟು, ಅಡುಗೆ ಕೋಣೆ ಸಂಪೂರ್ಣ ಧ್ವಂಸಗೊಂಡಿದೆ. ಮನೆಯಲ್ಲಿದ್ದ ಗೃಹಬಳಕೆಯ ವಸ್ತುಗಳು, ದಾಖಲೆಗಳು ಹಾಗೂ ಪೀಠೋಪಕರಣಗಳು ಗುರುತು ಹಿಡಿಯಲಾಗದಷ್ಟು ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಅಧಿಕಾರಿಗಳು, ಗ್ಯಾಸ್ ವಿತರಕರ ಭೇಟಿ
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ವಿಟ್ಲದ ಇಂಡೇನ್ ಗ್ಯಾಸ್ ವಿತರಕ ‘ಸಾಯಿ ಗಣೇಶ್’ ಸಂಸ್ಥೆಯ ಮಾಲಿಕ ಸತೀಶ ಆಳ್ವ ಸೇರಿದಂತೆ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಖೈರುನ್ನಿಸಾ ಅವರ ಧೈರ್ಯ ಹಾಗೂ ಸಮಯಪ್ರಜ್ಞೆಗೆ ಸ್ಥಳೀಯರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಐದು ಲಕ್ಷಕ್ಕೂ ಹೆಚ್ಚು ನಷ್ಟ ಅಂದಾಜಿಸಲಾಗಿದೆ. ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಬಡ ಕುಟುಂಬಕ್ಕೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
