Connect with us

Dakshina Kannada

ದ.ಕ.ಜಿಲ್ಲಾಧಿಕಾರಿ ಸೂಚನೆ; ದಕ್ಷಿಣ ಕನ್ನಡ ಜಿಲ್ಲೆಯ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಇನ್ಮುಂದೆ ಕನ್ನಡ ಕಡ್ಡಾಯ.

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇನ್ಮುಂದೆ ಎಲ್ಲಾ ರೀತಿಯ ಅಂಗಡಿ, ಕಂಪನಿ, ಕಚೇರಿಗಳು ಹೋಟೇಲುಗಳು ಸೇರಿದಂತೆ ವಾಣಿಜ್ಯ ಸಂಸ್ಥೆಗಳ ಹೆಸರನ್ನು ನಾಮಫಲಕಗಳಲ್ಲಿ ಕನ್ನಡದಲ್ಲಿ ಕಡ್ಡಾಯವಾಗಿ ಬರೆಯಬೇಕೆಂದು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಸೋಮವಾರ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‍ಗಳು ವಾಣಿಜ್ಯ ಸಂಸ್ಥೆಗಳಿಗೆ ಟ್ರೇಡ್ ಲೈಸೆನ್ಸ್ ಮಂಜೂರು ಮಾಡುವಾಗಲೇ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಎಂಬ ಷರತ್ತು ವಿಧಿಸಿಯೇ ಮಂಜೂರು ಮಾಡಬೇಕು.

ಈ ಬಗ್ಗೆ ಆಗ್ಗಿಂದಾಗೆ ಪರಿಶೀಲನೆ ನಡೆಸಬೇಕು ಎಂದು ಅವರು ಸೂಚಿಸಿದ್ದಾರೆ. ರಾಷ್ಟ್ರ್ರೀಯ ಹೆದ್ದಾರಿಗಳಲ್ಲಿ ವಿವಿಧ ಸೂಚನಾ ಫಲಕಗಳಲ್ಲಿ ಕನ್ನಡದಲ್ಲಿ ಮಾಹಿತಿ ನಮೂದಿಸಲು ರಾಷ್ಟ್ರ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗುವುದು. ಬ್ಯಾಂಕುಗಳಲ್ಲಿ ಅರ್ಜಿ ನಮೂನೆಗಳನ್ನು ಕನ್ನಡದಲ್ಲಿಯೂ ಒದಗಿಸಲು ಬ್ಯಾಂಕುಗಳ ಸಮಿತಿ ಸಭೆಯಲ್ಲಿ ನಿರ್ದೇಶಿಸಲಾಗುವುದು ಎಂದು ಅವರು ತಿಳಿಸಿದರು.


ಇಂಗ್ಲಿಷ್ ಮೀಡಿಯಂ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಇಂಗ್ಷೀಷ್ ಮಾಧ್ಯಮದಲ್ಲಿ ಬೋಧಿಸುತ್ತಿದ್ದರೂ, ಶಾಲೆಯ ನಾಮ ಫಲಕಗಳಲ್ಲಿ ಕನ್ನಡದಲ್ಲಿಯೂ ಹೆಸರು ಬರೆಯಬೇಕು. ಖಾಸಗಿ ಬಸ್ಸುಗಳ ಬೋರ್ಡುಗಳಲ್ಲಿ ಕನ್ನಡದಲ್ಲಿ ಊರಿನ ಹೆಸರು ಬರೆಯುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.


ನಗರದ ಮಾಲ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳ ನಾಮಫಲಕದಲ್ಲಿ ಹೆಸರನ್ನು ಕನ್ನಡದಲ್ಲಿ ಕಡ್ಡಾಯವಾಗಿ ನಮೂದಿಸುವ ಬಗ್ಗೆ ಕ್ರಮ ಕೈಗೊಳ್ಳಲು ಮಹಾನಗರಪಾಲಿಕೆಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರಾಜ್ಯ ಸರ್ಕಾರದ ಆದೇಶ.
ಕರ್ನಾಟಕದಾದ್ಯಂತ ಎಲ್ಲಾ ವಾಣಿಜ್ಯ, ಕೈಗಾರಿಕಾ, ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಜಾಗದಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ (ಅಧಿನಿಯಮ) 2024ರಡಿಯಲ್ಲಿ ಈ ಆದೇಶ ಜಾರಿಯಲ್ಲಿದ್ದು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಇದರ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.

ಸಭೆಯಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು ಮಾತನಾಡುತ್ತಾ, ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿದ್ದು, ಈ ಸಮಸ್ಯೆಯನ್ನು ಪರಿಹರಿಸಬೇಕು. ಕೆಲ ಉದ್ಯಮಗಳಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ನೇಮಿಸಲಾಗುತ್ತಿದ್ದು, ಸ್ಥಳೀಯರನ್ನು ನಿರ್ಲಕ್ಷಿಸಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಠೇವಣಿ ಹಾಗೂ ಹಣ ಹಿಂತೆಗೆಯುವಿಕೆ ಸ್ಲಿಪ್‍ಗಳನ್ನು ಕನ್ನಡದಲ್ಲಿಯೂ ಒದಗಿಸಬೇಕು. ಗ್ರಾಮೀಣ ಪ್ರದೇಶದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಜ್ಞಾನವಿಲ್ಲದ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಸ್ಥಳೀಯರ ಬ್ಯಾಂಕ್ ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್ ಅವರ ಮಾತನಾಡಿ, ಮಂಗಳೂರು ನಗರದಲ್ಲಿ ಜಿಲ್ಲಾ ಮಟ್ಟದ ಕನ್ನಡ ಭವನ ನಿರ್ಮಿಸಲು ನಿವೇಶನ ಮಂಜೂರು ಮಾಡಲು ಸಭೆಯಲ್ಲಿ ಆಗ್ರಹಿಸಿದರು.


ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಡಾ.ಸಂತೋಷ್ ಕುಮಾರ್ ಜಿ, ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್‍ದಾಸ್ ನಾಯಕ್, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ದೇವಿಪ್ರಸಾದ್, ರಾಜಶೇಖರ್ ಅಜ್ರಿ, ರಾಜೇಶ್ ಡಿಸೋಜಾ, ದಿವಾಕರ್ ದಾಸ್, ಹಸೈನಾರ್ ತಾಳಿತ್ತನೂಜಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

court

ವಕೀಲರ ರಕ್ಷಣೆಗಾಗಿ ಆಗ್ರಹ: ನಾಳೆ (ನವೆಂಬರ್ 3) ರಾಜ್ಯಾದ್ಯಂತ ನ್ಯಾಯಾಲಯ ಕಲಾಪಗಳಿಂದ ವಕೀಲರು ದೂರ ಉಳಿಯಲು ಕರೆ.

Published

on

​ಬೆಂಗಳೂರು: ವಕೀಲರ ಮೇಲೆ ನಡೆಯುತ್ತಿರುವ ಸರಣಿ ಹಲ್ಲೆಗಳು ಮತ್ತು ಕೊಲೆಗಳನ್ನು ಖಂಡಿಸಿ ಹಾಗೂ ಕಟ್ಟುನಿಟ್ಟಿನ ‘ವಕೀಲರ ರಕ್ಷಣಾ ಕಾಯ್ದೆ’ (Advocates Protection Act) ಜಾರಿಗೆ ಒತ್ತಾಯಿಸಿ, ದಿ ವಕೀಲರ ಅಸೋಸಿಯೇಷನ್ ಬೆಂಗಳೂರು (The Advocates’ Association, Bengaluru) ವತಿಯಿಂದ ನಾಳೆ ಅಂದರೆ ನವೆಂಬರ್ 3, 2026ರ ಮಂಗಳವಾರ ರಾಜ್ಯಾದ್ಯಂತ ನ್ಯಾಯಾಲಯ ಕಲಾಪಗಳಿಂದ ವಕೀಲರು ಸಂಪೂರ್ಣವಾಗಿ ದೂರ ಉಳಿದು (Abstain from work) ಪ್ರತಿಭಟಿಸಲು ಕರೆ ನೀಡಲಾಗಿದೆ.


​ಇತ್ತೀಚೆಗೆ ವೈಟ್‌ಫೀಲ್ಡ್‌ನ ವಕೀಲರಾದ ಮಂಜುನಾಥ್ ಮತ್ತು ಅನ್ನಪೂರ್ಣೇಶ್ವರಿ ನಗರದ ಶ್ರೀರಾಮ್ ಅವರ ಬರ್ಬರ ಕೊಲೆ ಹಾಗೂ ಗೌರಿಬಿದನೂರಿನ ವಕೀಲ ವೆಂಕಟರಮಣ ಸನ್ನಕಿ ಅವರ ಮೇಲಿನ ಹತ್ಯೆ ಯತ್ನದ ಘಟನೆಗಳನ್ನು ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದೆ. ವಕೀಲರಿಗೆ ವೃತ್ತಿಯಲ್ಲಿ ಸೂಕ್ತ ಭದ್ರತೆ ಇಲ್ಲದಿರುವುದನ್ನು ವಿರೋಧಿಸಿ ಮತ್ತು ವಕೀಲರ ರಕ್ಷಣಾ ಕಾಯ್ದೆಯನ್ನು ಬಲಪಡಿಸುವಂತೆ ಒತ್ತಾಯಿಸಿ ಅಕ್ಟೋಬರ್ 29ರಂದು ನಡೆದ ಸರ್ವಸಭೆಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
​ಈ ಹಿನ್ನೆಲೆಯಲ್ಲಿ, ನವೆಂಬರ್ 3ರಂದು ಮಂಗಳವಾರದಂದು ಕರ್ತವ್ಯದಿಂದ ದೂರ ಉಳಿಯುವಂತೆ ನಿರ್ಧರಿಸಲಾಗಿದ್ದು, ರಾಜ್ಯದ ಎಲ್ಲಾ ವಕೀಲರ ಸಂಘಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಪ್ರವೀಣ್ ಗೌಡ, ಉಪಾಧ್ಯಕ್ಷ ಗಿರೀಶ್ ಕುಮಾರ್ ಸಿ.ಎಸ್. ಹಾಗೂ ಖಚಾಂಚಿ ಶ್ವೇತಾ ರವಿಶಂಕರ್ ಮನವಿ ಮಾಡಿದ್ದಾರೆ

Continue Reading

Bantawala

ವಿಟ್ಲದ ಖ್ಯಾತ ವೈದ್ಯ ಡಾ. ವಿ.ಕೆ. ಹೆಗ್ಡೆ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Published

on

ವಿಟ್ಲದ ಖ್ಯಾತ ವೈದ್ಯ, ಪುಷ್ಪಾಕ್ ಹೆಲ್ತ್ ಸೆಂಟರ್ ಸಂಸ್ಥಾಪಕ *ಡಾ. ವಿ.ಕೆ. ಹೆಗ್ಡೆ* ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.1987 ರಿಂದ ವಿಟ್ಲದಲ್ಲಿ ನಿರಂತರವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಾ ಬಂದಿರುವ ಡಾ. ವಿ.ಕೆ. ಹೆಗ್ಡೆ ಅವರ ವೃತ್ತಿಪರ ಪಯಣವು ಗ್ರಾಮೀಣ ಪ್ರದೇಶದಲ್ಲಿ ದೀರ್ಘಕಾಲದ ಪ್ರಾಥಮಿಕ ಆರೋಗ್ಯ ಸೇವೆಯ ನಿರಂತರ ಅಧ್ಯಾಯವಾಗಿದೆ.ವೈದ್ಯಕೀಯ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಪರಿಗಣಿಸದೆ, ಜನರ ಆರೋಗ್ಯದ ಅಗತ್ಯಗಳಿಗೆ ಸ್ಪಂದಿಸುವ ಮಾನವೀಯ ಸೇವೆಯಾಗಿ ಅವರು ಅಳವಡಿಸಿಕೊಂಡಿದ್ದಾರೆ. ಗ್ರಾಮೀಣ ಹಾಗೂ ಅರೆನಗರ ಪ್ರದೇಶದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ, ವೈಯಕ್ತಿಕ ವೈದ್ಯಕೀಯ ಕಾಳಜಿ ಮತ್ತು ಮಾನವೀಯ ಸ್ಪಂದನೆಯನ್ನು ನೀಡುತ್ತಾ ಬಂದಿದ್ದಾರೆ.ವೈದ್ಯಕೀಯ ವೃತ್ತಿಯ ಜೊತೆಗೆ ರೋಟರಿ ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿಯೂ ದೀರ್ಘಕಾಲದ ಕೊಡುಗೆ ನೀಡಿದ್ದಾರೆ.ವಿಶೇಷವಾಗಿ ಕೋವಿಡ್-19 ಮಹಾಮಾರಿಯ ಸಂಕಷ್ಟದ ಅವಧಿಯಲ್ಲಿ ವೈದ್ಯಕೀಯ ಸೇವೆಯ ನಿರಂತರತೆಯನ್ನು ಕಾಪಾಡಿ, ಅಗತ್ಯವಿರುವ ರೋಗಿಗಳಿಗೆ ಸಲಹೆ, ಚಿಕಿತ್ಸೆ, ಮಾರ್ಗದರ್ಶನ ಮತ್ತು ಸೂಕ್ತ ರೆಫರಲ್ ನೆರವು ನೀಡಿದ ಅವರ ಸೇವಾ ಬದ್ಧತೆಯು ಈ ನಾಮನಿರ್ದೇಶನದ ಪ್ರಮುಖ ಅಂಶವಾಗಿದೆ.

Continue Reading

CONGRESS

ಕಸ್ತೂರಿ ರಂಗನ್ ವರದಿ: ಜನರ ಆತಂಕ ಸಂಸದರ ಗಮನಕ್ಕೆ ತರದಿರುವುದು ಕಳವಳಕಾರಿ – ಎಂ. ವೆಂಕಪ್ಪ ಗೌಡ

Published

on

ಸುಳ್ಯ: ಕಸ್ತೂರಿ ರಂಗನ್ ವರದಿಯಿಂದ ಸುಳ್ಯ ತಾಲೂಕಿನ ಹಲವು ಗ್ರಾಮಗಳ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಜನರ ಬದುಕಿನ ಅಳಿವು-ಉಳಿವಿನ ಈ ಗಂಭೀರ ವಿಚಾರವನ್ನು ಸಂಬಂಧಪಟ್ಟ ಸಂಸದರ ಗಮನಕ್ಕೆ ಪರಿಣಾಮಕಾರಿಯಾಗಿ ತಲುಪಿಸದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಹೇಳಿದ್ದಾರೆ.

ವರದಿಯಿಂದ ಬಾಧಿತವಾಗಿರುವ ಪ್ರದೇಶಗಳ ಜನರು ಹಲವು ವರ್ಷಗಳಿಂದ ಭಯದಲ್ಲೇ ಜೀವನ ನಡೆಸುತ್ತಿದ್ದು, ಇದರ ವಿರುದ್ಧ ಈಗಾಗಲೇ ಹಲವು ಹಂತದ ಹೋರಾಟಗಳು ನಡೆದಿವೆ. ಜನರ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯನ್ನು ಏಳು ಬಾರಿ ತಿರಸ್ಕರಿಸಿ ವಾಪಸ್ ಕಳುಹಿಸಿದೆ. ಆದರೆ, ಈ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಕೇಂದ್ರ ಸರ್ಕಾರದ ಬಳಿಯೇ ಇರುವುದರಿಂದ, ಬಾಧಿತ ಗ್ರಾಮಗಳ ಜನರ ಭವಿಷ್ಯ ಕೇಂದ್ರದ ನಿರ್ಧಾರದ ಮೇಲೆ ನಿಂತಿದೆ. ಆದ್ದರಿಂದ, ಸ್ಥಳೀಯ ಸಂಸದರು ಮತ್ತು ಕೇಂದ್ರ ಸಚಿವರು ಈ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

ಇತ್ತೀಚೆಗೆ ಸುಳ್ಯ ತಾಲೂಕಿಗೆ ಆಗಮಿಸಿದ್ದ ಸಂಸದರು ವರದಿ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೂ, ಸ್ಥಳದಲ್ಲಿದ್ದ ಹೋರಾಟಗಾರರು ಅವರಿಗೆ ಜನರ ಸಮಸ್ಯೆಗಳನ್ನು ವಿವರಿಸುವ ಮನವಿ ಸಲ್ಲಿಸದಿರುವುದು ಮತ್ತು ಒತ್ತಡ ಹೇರದಿರುವುದು ಬೇಸರದ ಸಂಗತಿ. ಈ ಹೋರಾಟ ಕೇವಲ ರಾಜ್ಯ ಸರ್ಕಾರಕ್ಕೆ ಮಾತ್ರ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಕಸ್ತೂರಿ ರಂಗನ್ ವರದಿಯ ವಿಷಯವು ಕೇಂದ್ರ ప్రభుత్వದ ನಿರ್ಧಾರಕ್ಕೆ ಸಂಬಂಧಿಸಿದ ಮಹತ್ವದ ವಿಚಾರವಾಗಿರುವುದರಿಂದ, ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಕೇಂದ್ರದ ಮೇಲೆಯೂ ಒತ್ತಡ ತರಬೇಕು. ಜನಸಾಮಾನ್ಯರ ನೈಜ ಸಮಸ್ಯೆಗಳನ್ನು ಸಂಸದರ ಗಮನಕ್ಕೆ ತಲುಪಿಸುವ ಜವಾಬ್ದಾರಿಯನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ವೆಂಕಪ್ಪ ಗೌಡ ಅವರು ತಿಳಿಸಿದ್ದಾರೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!