Connect with us

Uncategorized

ಗೋಮಾಂಸ ವಿಚಾರದಲ್ಲಿ ಹಲ್ಲೆ ಪ್ರಕರಣ..ಆರೋಪಿಗಳಿಬ್ಬರ ಬಂಧನ..ಸಾಗಾಟಗಾರನ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಪೊಲೀಸರು.

Published

on

ಮಂಗಳೂರು: ಗಂಜಿಮಠ ಸಮೀಪದ ಮಳಲಿ – ನಾರ್ಲಪದವು ಎಂಬಲ್ಲಿ ಗೋಮಾಂಸ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗಳ ಮೇಲೆ ತಂಡವೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ವಿವರವಾದ ಸ್ಪಷ್ಟನೆ ನೀಡಿದ್ದಾರೆ.

ಮುಲ್ಲರಪಟ್ಣ ನಿವಾಸಿ ಅಬ್ದುಲ್ ಸತ್ತಾರ್ ಎಂಬವರು ತನ್ನ 11 ವರ್ಷದ ಪುತ್ರಿ ಜೊತೆ ದ್ವಿಚಕ್ರ ವಾಹನದಲ್ಲಿ ಸುಮಾರು19 ಕಿಲೋ ಗೋಮಾಂಸವನ್ನು ಯಾವುದೇ ಕಾನೂನುಬದ್ಧ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಟಾಟಾ ಸುಮೋ ವಾಹನದಲ್ಲಿ ಬಂದ ಎಡಪದವು ನಿವಾಸಿಗಳಾದ ಸುಮಿತ್ ಭಂಡಾರಿ ಮತ್ತು ರಜತ್ ನಾಯಕ್ ಎಂಬಿಬ್ಬರು ಅಬ್ದುಲ್ ಸತ್ತಾರ್ ಅವರ ಬೈಕನ್ನು ಅಡ್ಡಗಟ್ಟಿದ್ದು, ಈ ಸಂದರ್ಭ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಈ ಸಂದರ್ಭ ಬೈಕಿನ ಸೈಲೆನ್ಸರ್ ತಾಗಿ ಬಾಲಕಿಯ ಕಾಲಿಗೆ ಸುಟ್ಟ ಗಾಯಗಳಾಗಿವೆ.

ಘಟನೆಯ ನಂತರ ಅಬ್ದುಲ್ ಸತ್ತಾರ್ ಅವರು ಬೈಕ್ ಬಿಟ್ಟು ಸ್ಥಳದಿಂದ ಓಡಿಹೋಗಿದ್ದು, ಸ್ಥಳೀಯರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆಗಾಗಿ ಪೊಲೀಸರು ಸುಮಿತ್ ಮತ್ತು ರಜತ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಪರಸ್ಪರ ವಿರೋಧಾಭಾಸದ ಹೇಳಿಕೆಗಳನ್ನು ನೀಡಿದ್ದಾರೆ. ಆರೋಪಿ ರಜತ್ ನಾಯಕ್ ತಾನು ಮೆಡಿಕಲ್ ರಿಪ್ರೆಸೆಂಟೇಟಿವ್ ಆಗಿದ್ದು ಆಸ್ಪತ್ರೆಗೆ ಔಷಧಿ ನೀಡಲು ಹೋಗುತ್ತಿದ್ದೆ ಎಂದು ಹೇಳಿಕೊಂಡಿದ್ದರೂ, ಪೊಲೀಸರು ಆಸ್ಪತ್ರೆಯ ವೈದ್ಯರನ್ನು ವಿಚಾರಿಸಿದಾಗ ಅಲ್ಲಿಗೆ ಯಾವುದೇ ಔಷಧಿ ತಲುಪಿಲ್ಲ ಎಂಬ ಸತ್ಯಾಂಶ ಹೊರಬಿದ್ದಿದೆ. ಬಳಿಕ ಇಬ್ಬರೂ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಹೇಳಿದರೂ, ಯಾವ ದೇವಸ್ಥಾನಕ್ಕೆ ತೆರಳುತ್ತಿದ್ದರು ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ನೀಡಲು ಆರೋಪಿಗಳಿಬ್ಬರೂ ವಿಫಲರಾಗಿದ್ದಾರೆ.

ಗಾಯಗೊಂಡ ಬಾಲಕಿಯು ತನ್ನ ತಂದೆಯನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದಡಿ ಸುಮಿತ್ ಭಂಡಾರಿ ಮತ್ತು ರಜತ್ ನಾಯಕ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅದೇ ರೀತಿ ಯಾವುದೇ ಬಿಲ್ ಅಥವಾ ದಾಖಲೆಗಳಿಲ್ಲದೇ ಗೋಮಾಂಸ ಸಾಗಣೆ ಮಾಡಿದ ಹಿನ್ನೆಲೆಯಲ್ಲಿ ಅಬ್ದುಲ್ ಸತ್ತಾರ್ ವಿರುದ್ಧವೂ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದ್ದು, ಕೇವಲ ಒಂದು ವಾಹನವನ್ನು ಮಾತ್ರ ಹಿಂಬಾಲಿಸಲಾಗಿದ್ದು, ಇಬ್ಬರು ವ್ಯಕ್ತಿಗಳು ಭಾಗಿಯಾಗಿರುವುದು ಸ್ಪಷ್ಟವಾಗಿದೆ.

ಕೆಲವರು ಎರಡು ವಾಹನಗಳು ಮತ್ತು 5 ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂಬ ವದಂತಿಗಳನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರ ಹೆಸರುಗಳು ಮತ್ತು ಭಾಗಿಯಾಗದವರ ಚಿತ್ರಗಳನ್ನು ನೀಡಿದ್ದಾರೆ.

ಇದು 353 ಬಿಎನ್‌ಎಸ್ ಅಡಿಯಲ್ಲಿ ಅಪರಾಧವಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Article

ಇತಿಹಾಸ ಪ್ರಸಿದ್ಧ ವಿಟ್ಲ ಕೋಟಿಕೆರೆಗೆ ಮರುಜೀವ: ಭರದಿಂದ ಸಾಗುತ್ತಿದೆ ಹೂಳೆತ್ತುವ ಕಾರ್ಯ, ದಾನಿಗಳ ಸಹಕಾರಕ್ಕೆ ಕರೆ

Published

on

ವಿಟ್ಲ: .ಇತಿಹಾಸ ಪ್ರಸಿದ್ಧ ವಿಟ್ಲದ ‘ಕೋಟಿಕೆರೆ’ಯ ಅಭಿವೃದ್ಧಿ ಹಾಗೂ ಪುನಶ್ಚೇತನ ಕಾರ್ಯವು‌ ವಿಟ್ಲ ಅರಮನೆಯವರ ಮುಂದಾಳುತ್ವದಲ್ಲಿ ಕೋಟಿ ಕೆರೆಗೆ ಶಾಶ್ವತವಾದ ಕಾಯಕಲ್ಪವನ್ನು ನೀಡಲು ಸಂಕಲ್ಪತೊಟ್ಟ ವರ್ತಕರ ಸಂಘದ ಕ್ಲಿಫರ್ಡ್ ವೇಗಸ್ ಮತ್ತು ಕೊಡುಗೈ ದಾನಿ ಪ್ರಿಯಾ ಬಾಬಣ್ಣ ಅವರ ನೇತೃತ್ವದಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಅತ್ಯಂತ ಭರದಿಂದ ಸಾಗುತ್ತಿದೆ. ದಿನೇ ದಿನೇ ಸುಂದರ ರೂಪ ಪಡೆಯುತ್ತಿರುವ ಕೆರೆಯ ಅಭಿವೃದ್ಧಿ ಕಾರ್ಯವನ್ನು ಪ್ರತಿನಿತ್ಯ ನೂರಾರು ಸಾರ್ವಜನಿಕರು ಕುತೂಹಲದಿಂದ ಬಂದು ಕಣ್ತುಂಬಿಕೊಳ್ಳುತ್ತಿದ್ದಾರೆ.

ರೂಪುಗೊಳ್ಳುತ್ತಿದೆ ತಡೆಗೋಡೆ; ಮರ-ಪೊದೆಗಳ ತೆರವು

ಕೋಟಿಕೆರೆಯ ಸಂರಕ್ಷಣೆಯ ಮೊದಲ ಹಂತವಾಗಿ, ಈ ಹಿಂದೆ ಕುಸಿದು ಬಿದ್ದಿದ್ದ ಕಲ್ಲಿನ ತಡೆಗೋಡೆಯ ಪುನರ್ ನಿರ್ಮಾಣ ಕಾರ್ಯವು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕೆರೆಯ ಸುತ್ತಲೂ ದಟ್ಟವಾಗಿ ಹಬ್ಬಿಕೊಂಡಿದ್ದ ಪೊದೆಗಳು ಮತ್ತು ಗಿಡ-ಗಂಟಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಕೊನೆಯ ಹಂತದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಅಲ್ಲದೆ, ಕೆರೆಯ ನೀರಿಗೆ ಬಾಗಿಕೊಂಡು ಅಪಾಯಕಾರಿಯಾಗಿದ್ದ ಭಾರಿ ಗಾತ್ರದ ನಿರುಪಯುಕ್ತ ಮರಗಳನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ. ತಡೆಗೋಡೆ ನಿರ್ಮಿಸುವ ಹಾಗೂ ಕೆರೆಯನ್ನು ಶುಚಿಗೊಳಿಸುವ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರತಿಯೊಬ್ಬರೂ ಬಂದು ಭಾಗವಹಿಸಲೇ ಬೇಕಾದ, ನೋಡಲೇ ಬೇಕಾದ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಈ ಕೆಲಸ ಕಾರ್ಯಗಳ ಜವಾಬ್ದಾರಿ ಹೊತ್ತವರಿಗೆ ಪ್ರತಿಯೊಬ್ಬರ ಸಹಕಾರದ ಅಗತ್ಯವಿದೆ.

ಹೂಳೆತ್ತುವಿಕೆಗೆ ಕ್ರೇನ್ ಕಾರ್ಯಾಚರಣೆ: ಯುವಕರ ಶ್ರಮಕ್ಕೆ ಹೈಕೋರ್ಟ್ ವಕೀಲರ ಮೆಚ್ಚುಗೆ

ಕೋಟಿಕೆರೆಯ ಉದ್ದಗಲಕ್ಕೂ ತಳಭಾಗದಲ್ಲಿ ಸುಮಾರು ಐದು ಅಡಿಗಳಷ್ಟು ಆಳದಲ್ಲಿ ತುಂಬಿಕೊಂಡಿರುವ ದಶಕಗಳ ಹಳೆಯ ದುರ್ನಾತಭರಿತ ಹೂಳನ್ನು (ಕೆಸರು) ಹೊರತೆಗೆಯುವುದು ಸದ್ಯ ಎದುರಾಗಿರುವ ಅತಿ ದೊಡ್ಡ ಸವಾಲಾಗಿದೆ. ಕಳೆದ ಮೂರು ದಿನಗಳಿಂದ ಹಿಟಾಚಿ ಯಂತ್ರವನ್ನು ಬಳಸಿ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿತ್ತಾದರೂ, ಹೂಳಿನ ಪ್ರಮಾಣ ಅಗಾಧವಾಗಿರುವುದರಿಂದ ಇದೀಗ ಬೃಹತ್ ಕ್ರೇನ್ ಒಂದನ್ನು ಸ್ಥಳಕ್ಕೆ ತರಲಾಗಿದೆ. ಕೆರೆಯ ತಳಭಾಗದಲ್ಲಿ ಹಿಟಾಚಿ ಯಂತ್ರವು ಹೂಳನ್ನು ಒಟ್ಟುಗೂಡಿಸುತ್ತಿದ್ದರೆ, ಮೇಲ್ಭಾಗದಲ್ಲಿ ನಿಂತಿರುವ ಕ್ರೇನ್‌ನ ರೋಪ್ ಮೂಲಕ ಕೆರೆಗೆ ಇಳಿಸಲಾದ ದೊಡ್ಡ ಬಕೆಟ್‌ಗಳಿಗೆ ಹೂಳನ್ನು ತುಂಬಿಸಿ ಮೇಲಕ್ಕೆತ್ತುವ ಜಂಟಿ ಕಾರ್ಯಾಚರಣೆ ಚುರುಕಾಗಿ ಸಾಗುತ್ತಿದೆ.

ಈ ಮಹತ್ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ, ಮಾಧ್ಯಮಗಳಲ್ಲಿ ವರದಿಯನ್ನು ವೀಕ್ಷಿಸಿದ ವಿಟ್ಲ ಮೂಲದವರೇ ಆದ ಪ್ರಖ್ಯಾತ ಹೈಕೋರ್ಟ್ ವಕೀಲರಾದ ಅರುಣ್ ಶ್ಯಾಮ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿ ಹಗಲಿರುಳು ಶ್ರಮಿಸುತ್ತಿರುವ ಸ್ಥಳೀಯ ಯುವಕರ ಭಗೀರಥ ಪ್ರಯತ್ನ ಹಾಗೂ ಸಾಮಾಜಿಕ ಕಾಳಜಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಅವರು, ಯುವಕರ ತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದಲ್ಲದೆ, ಕೆರೆಯ ಅಭಿವೃದ್ಧಿ ಕಾರ್ಯಕ್ಕಾಗಿ ತಕ್ಷಣವೇ 11,111 ರೂಪಾಯಿ ಆರ್ಥಿಕ ದೇಣಿಗೆಯನ್ನು ಹಸ್ತಾಂತರಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಇನ್ನಷ್ಟು ಹೃದಯವಂತರ ಸಹಕಾರದ ಅಗತ್ಯವಿದೆ

ಕೋಟಿಕೆರೆಯ ಅಭಿವೃದ್ಧಿ ಹಾಗೂ ಪುನಶ್ಚೇತನಕ್ಕಾಗಿ ಈಗಾಗಲೇ ಊರಿನ ಹಾಗೂ ಪರವೂರ ಹಲವಾರು ದಾನಿಗಳು ಮನಪೂರ್ವಕವಾಗಿ ಧನಸಹಾಯದ ಹಸ್ತ ಚಾಚಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಈವರೆಗೆ ಸುಮಾರು 1,70,000 ರೂಪಾಯಿ ವೆಚ್ಚವಾಗಿದ್ದು, ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳಲು ಇನ್ನೂ ಸುಮಾರು 2,00,000 ರೂಪಾಯಿಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ನಮ್ಮ ಹೆಮ್ಮೆಯ ಇತಿಹಾಸ ಪ್ರಸಿದ್ಧ ಕೋಟಿಕೆರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಈ ಪವಿತ್ರ ಕಾರ್ಯದಲ್ಲಿ ಇನ್ನಷ್ಟು ಜನ ಹೃದಯವಂತ ದಾನಿಗಳು ಆರ್ಥಿಕ ಹಾಗೂ ಎಲ್ಲಾ ರೀತಿಯ ಸಹಕಾರವನ್ನು ನೀಡುವ ಮೂಲಕ ಕೈಜೋಡಿಸಬೇಕಾಗಿ ಕೆರೆ ಅಭಿವೃದ್ಧಿ ಸಮಿತಿಯವರು ವಿನಂತಿಸಿಕೊಂಡಿದ್ದು, ಈ ಬಳಗದ ಗ್ರೂಪ್ ಅಡ್ಮಿನ್ ಗಳಾದ 1) ಬಾಬು ಕೊಪ್ಪಳ, 2) ಕ್ಲಿಫರ್ಡ್ ವೇಗಸ್, 3) ಚಂದ್ರಹಾಸ ಕೊಪ್ಪಳ 4) ಅಣುಪ್ ಲಾಸ್ರಾದೊ 5) ಚಂದ್ರ ಟೈಯರ್ ಅಂಗಡಿ ಇವರುಗಳಲ್ಲಿ ಹಣ ನೀಡಬಹುದು ಅಥವಾ ಕ್ಯೂ ಆರ್ ಕೋಡ್ ಮೂಲಕವೂ ನೀಡಬಹುದಾಗಿದೆ ಎಂದು ವಿನಂತಿಸಿದ್ದಾರೆ.
ಈಗಾಗಲೇ ನಿರ್ಧರಿಸಿದ ಕೆಲಸಗಳು ಮುಕ್ತಾಯವಾದ ಬಳಿಕವೂ ಹಣ ಉಳಿದಲ್ಲಿ ಮತ್ತೆ ತಡೆಗೋಡೆ ಕಾಮಗಾರಿ ಮುಂದುವರಿಸುವ ಬಗ್ಗೆಯೂ ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.




Continue Reading

government

ಸುಬ್ರಹ್ಮಣ್ಯದಲ್ಲಿ ‘ಅನಧಿಕೃತ ಪೂಜೆ’ಗಳ ಹಾವಳಿ: ಭಕ್ತರೇ, ಧಾರ್ಮಿಕ ಮಾಫಿಯಾ ಬಗ್ಗೆ ಎಚ್ಚರ!

Published

on

ಸುಬ್ರಹ್ಮಣ್ಯ: ರಾಜ್ಯದ ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ನಂಬಿಕೆಯನ್ನು ಬಂಡವಾಳವಾಗಿಸಿಕೊಂಡು ಕೋಟಿಗಟ್ಟಲೆ ಲೂಟಿ ಮಾಡುವ ಧಾರ್ಮಿಕ ಮಾಫಿಯಾವೊಂದು ಸದ್ದಿಲ್ಲದೆ ತಲೆಎತ್ತಿದೆ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಈ ಅನಧಿಕೃತ ಪೂಜೆಗಳ ಜಾಲವು ಭಕ್ತರ ಕಿಸೆಗೆ ಕತ್ತರಿ ಹಾಕುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.

ಕ್ಷೇತ್ರಕ್ಕೆ ಬರುವ ಭಕ್ತರು ಇಲ್ಲಿ ಮುಖ್ಯವಾಗಿ ಎರಡು ರೀತಿಯ ಪೂಜಾ ಪದ್ಧತಿಗಳನ್ನು ಗಮನಿಸಬೇಕಾಗಿದೆ.

೧. ಅಧಿಕೃತ ಪೂಜೆ (ಕ್ಷೇತ್ರದ ಸನ್ನಿಧಿಯಲ್ಲಿ ನಡೆಯುವ ಸೇವೆಗಳು)

ದೇವಸ್ಥಾನದ ಕಚೇರಿಯಿಂದ ರಶೀದಿ (ಚೀಟಿ) ಪಡೆದು, ದೇವಸ್ಥಾನದ ಆವರಣದೊಳಗೇ ಅಧಿಕೃತ ವೈದಿಕರ ಮುಖಾಂತರ ಶಾಸ್ತ್ರೋಕ್ತವಾಗಿ ನಡೆಯುವ ಪೂಜೆಗಳಿವು.

ಪ್ರಯೋಜನ: ಈ ಪೂಜೆಗಳಿಗೆ ಭಕ್ತರು ನೀಡುವ ಹಣ ನೇರವಾಗಿ ದೇವಸ್ಥಾನದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ.

ವಿಶ್ವಾಸಾರ್ಹತೆ: ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮುಂತಾದ ಮಹತ್ವಾಕಾಂಕ್ಷೆಯ ಪೂಜೆಗಳು ಸುಬ್ರಹ್ಮಣ್ಯ ಸ್ವಾಮಿಗೆ ನೇರವಾಗಿ ತಲುಪಬೇಕಾದರೆ ಅಧಿಕೃತ ಪೂಜೆಗಳನ್ನೇ ಆಶ್ರಯಿಸಬೇಕು.

೨. ಅನಧಿಕೃತ ಪೂಜೆ (ಖಾಸಗಿ ಲೂಟಿ ಕೇಂದ್ರಗಳು)

ದೇವಸ್ಥಾನದ ಆಡಳಿತ ಮಂಡಳಿಗೂ ಇವರಿಗೂ ಯಾವುದೇ ಸಂಬಂಧವಿರುವುದಿಲ್ಲ. ನಿವೃತ್ತ ವೈದಿಕರು, ದೇವಸ್ಥಾನದಿಂದ ಹೊರಹಾಕಲ್ಪಟ್ಟವರು, ಸಾಲದ ಸುಳಿಗೆ ಸಿಲುಕಿ ಹಣದ ಅಗತ್ಯವಿರುವವರು ಹಾಗೂ ಶೀಘ್ರವಾಗಿ ಶ್ರೀಮಂತರಾಗಲು ಬಯಸುವ ಕೆಲವು ಖಾಸಗಿ ವ್ಯಕ್ತಿಗಳು ಈ ಅನಧಿಕೃತ ಪೂಜೆಗಳ ಸೂತ್ರಧಾರರಾಗಿದ್ದಾರೆ.

ಗ್ಯಾರೇಜ್, ಪಾರ್ಕಿಂಗ್ ಲಾಡ್ಜ್ ಗಳಲ್ಲಿಯೂ ಹೋಮ-ಹವನ!

ಇತ್ತೀಚಿನ ದಿನಗಳಲ್ಲಿ ಸುಬ್ರಹ್ಮಣ್ಯದಲ್ಲಿ ಇಂತಹ ಅಣಬೆ ಪೂಜಾ ಕೇಂದ್ರಗಳು ಮಿತಿಮೀರಿವೆ. ನಂಬಲಾಗದ ಸಂಗತಿಯೆಂದರೆ:

ಗ್ಯಾರೇಜ್‌ಗಳಲ್ಲಿ ಪೂಜೆ: ಸುಸ್ಥಿತಿಯಲ್ಲಿದ್ದ ವಾಹನ ಗ್ಯಾರೇಜ್‌ಗಳನ್ನು ಮುಚ್ಚಿ, ಅಲ್ಲಿ ಭಕ್ತರನ್ನು ವಂಚಿಸುವ ಪೂಜಾ ಕೇಂದ್ರಗಳನ್ನು ತೆರೆಯಲಾಗಿದೆ.

ಕಾರ್ ಪಾರ್ಕಿಂಗ್‌ನಲ್ಲಿ ಹೋಮ: ಕಾಶಿಕಟ್ಟೆ ಬಳಿಯ ಲಾಡ್ಜ್ ಒಂದರ ಕಾರ್ ಪಾರ್ಕಿಂಗ್ ಜಾಗದಲ್ಲೂ ಅಂಡಿಗುಂಡಿ ಪೂಜೆಗಳನ್ನು ನಡೆಸಿ ಭಕ್ತರನ್ನು ಯಾಮಾರಿಸಲಾಗುತ್ತಿದೆ.

ಖಾಸಗಿ ಮಂದಿರಗಳ ದುರ್ಬಳಕೆ: ಸುಜ್ಞಾನ ಮಂದಿರ, ಶಾರದಾ ಮಂದಿರ, ಶಿವ ಸದನ, ಹಾಗೂ ಕೆಲವು ಖಾಸಗಿ ಮನೆಗಳಲ್ಲೂ ಶಾಸ್ತ್ರೋಕ್ತವಲ್ಲದ, ಕೇವಲ “ಹೊಗೆ ಎಬ್ಬಿಸುವ” ನಾಮಕಾವಸ್ತೆ ಪೂಜೆಗಳನ್ನು ನಡೆಸಿ ಭಕ್ತರ ಕಿಸೆ ಖಾಲಿ ಮಾಡಲಾಗುತ್ತಿದೆ.

ಅಡುಗೆ ಭಟ್ಟರ ಮನೆಯಲ್ಲಿಯೂ ಸೇವೆ : ದೇವಸ್ಥಾನದ ಅಡುಗೆ ಭಟ್ಟರೊಬ್ಬರ ಮನೆಯಲ್ಲಿಯೂ ಹೋಮದ ಹೊಗೆ ಹೊರಬರುತ್ತಿದೆ.

ಸರ್ವರ್‌ ಈಶನ ವಿಶೇಷ ನಾಗಾರಾಧನೆ : ಇವರೂ ಖಾಸಗೀಯಾಗಿ ಅನಧಿಕೃತ ಸಂಸ್ಕಾರ ಮಾಡುತ್ತಿದ್ದಾರೆ

ಬಳ್ಪದ ಭಟ್ರವರಿಂದಲೂ ಅನಧಿಕೃತ ಪೂಜೆ : ಆದಿ ಸುಬ್ರಹ್ಮಣ್ಯ ದೇಗುಲದ ದಾರಿಯಲ್ಲಿ ಇವರ ಅನಧಿಕೃತ ಪೂಜೆ ನಡೆಯುತ್ತಿದೆ.

ವಿಶೇಷವೆಂದರೆ ಕೇರಳದ ಭಟ್ರವರಿಂದಲೂ ಪೂಜೆ ಆರಂಭ : ಸ್ಥಳೀಯರು ನಮ್ಮ ಜಿಲ್ಲೆಯವರು ಬಿಟ್ಟು ಈಗ ಕೇರಳದ ಭಟ್ರು ಕೂಡಾ ಪೂಜೆ ಮಾಡಲು ಶುರು ಮಾಡಿದ್ದು, ಇನ್ನೂ ಯಾವ ರಾಜ್ಯದವರು ಬರುತ್ತಾರೋ ಗೊತ್ತಿಲ್ಲ.

ಆನ್‌ಲೈನ್‌ನಲ್ಲೂ ಸುಬ್ರಹ್ಮಣ್ಯನ ಹೆಸರಿನಲ್ಲಿ ‘ಟ್ರೇಡಿಂಗ್’!

ಈ ದಲ್ಲಾಳಿಗಳು ಈಗ ಡಿಜಿಟಲ್ ರೂಪದಲ್ಲೂ ಭಕ್ತರಿಗೆ ಜಾಲ ಬೀಸುತ್ತಿದ್ದಾರೆ. “ದೇವಸ್ಥಾನಕ್ಕಿಂತ ಕಡಿಮೆ ವೆಚ್ಚ”, “ರಶ್ ಇರುವುದಿಲ್ಲ”, “ಉಚಿತ ಊಟ-ವಸತಿ” ಎಂಬ ಆಕರ್ಷಕ ಜಾಹೀರಾತುಗಳನ್ನು ನೀಡಿ ಆನ್‌ಲೈನ್ ಮೂಲಕ ಭಕ್ತರನ್ನು ಬುಕ್ ಮಾಡಲಾಗುತ್ತಿದೆ. ಕುಮಾರಧಾರ ನದಿಯ ದಾಟಿದ ತಕ್ಷಣ, “ಇಲ್ಲಿ ಎಲ್ಲಿ ಪೂಜೆ ಮಾಡಿದರೂ ದೇವರಿಗೆ ತಲುಪುತ್ತದೆ” ಎಂದು ಅಮಾಯಕ ಜನರನ್ನು ಮಂಗ ಮಾಡಲಾಗುತ್ತಿದೆ.

ಕಾನೂನಾತ್ಮಕ ತೊಡಕು: ಇವೆಲ್ಲವೂ ಖಾಸಗಿ ಜಾಗಗಳಲ್ಲಿ, ವೈಯಕ್ತಿಕ ನಂಬಿಕೆಯ ಹೆಸರಿನಲ್ಲಿ ನಡೆಯುತ್ತಿರುವುದರಿಂದ “ಧಾರ್ಮಿಕ ಸ್ವಾತಂತ್ರ್ಯ”ದ ಅಡಿಯಲ್ಲಿ ಪೊಲೀಸರಾಗಲಿ ಅಥವಾ ದೇವಸ್ಥಾನದ ಮಂಡಳಿಯಾಗಲಿ ತಕ್ಷಣ ಕ್ರಮ ಕೈಗೊಳ್ಳಲು ಕಾನೂನಾತ್ಮಕ ಅಡೆತಡೆಗಳಿವೆ.

ಒಟ್ಟಾಗಿ ಹೇಳುವುದಾದರೆ ಇದಕ್ಕೆ ಕಡಿವಾಣ ಬೀಳದೆ ಇದ್ದರೆ ಮುಂದೊಂದು ದಿನ ದೇವಸ್ಥಾನದಲ್ಲಿ ಪೂಜೆ ಮಾಡಿಸುವ ಭಕ್ತರ ಸಂಖ್ಯೆಯೆ ಇಲ್ಲದಿರಬಹುದು. ಮಾನ್ಯ ಧಾರ್ಮಿಕ ಖಾತೆಯ ಮಂತ್ರಿಗಳು ಇತ್ತ ಗಮನಹರಿಸಲೇ ಬೇಕು.

ಭಕ್ತರಿಗೆ ನಮ್ಮ ಮನವಿ ಮತ್ತು ಜಾಗೃತಿ:

ಭಕ್ತರೇ, ನಿಮ್ಮ ಕಷ್ಟ ನಿವಾರಣೆಗೆ ಹಾಗೂ ದೇವರಿಗೆ ಸಲ್ಲಿಸುವ ಸೇವೆ ಸಾರ್ಥಕವಾಗಬೇಕಾದರೆ ಎಚ್ಚರಿಕೆಯಿಂದ ಇರಿ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವಾಗ ಕೇವಲ ದೇವಸ್ಥಾನದ ಅಧಿಕೃತ ಕೌಂಟರ್‌ಗಳು ಅಥವಾ ಅಧಿಕೃತ ವೆಬ್‌ಸೈಟ್ ಮೂಲಕವೇ ಪೂಜೆಗಳನ್ನು ಕಾಯ್ದಿರಿಸಿ.

ಮಧ್ಯವರ್ತಿಗಳ, ದಲ್ಲಾಳಿಗಳ ಹಾಗೂ ಕಡಿಮೆ ವೆಚ್ಚದ ಆಮಿಷ ಒಡ್ಡುವ ಆನ್‌ಲೈನ್ ವಂಚಕರ ಮಾತುಗಳಿಗೆ ಮರುಳಾಗಬೇಡಿ.

ಗ್ಯಾರೇಜ್, ಪಾರ್ಕಿಂಗ್ ಸ್ಲಾಟ್‌ಗಳಲ್ಲಿ ನಡೆಯುವ ಪೂಜೆಗಳಿಂದ ದೇವರಿಗೂ ಪ್ರೀತಿಯಾಗುವುದಿಲ್ಲ, ನಿಮಗೂ ಫಲ ಸಿಗುವುದಿಲ್ಲ; ಕೇವಲ ವಂಚಕರ ಕಿಸೆ ತುಂಬುತ್ತದೆ ಅಷ್ಟೇ.

    “ಬೋಧಿಸುವ ಸ್ಥಳದಲ್ಲಿ ಬೋಳಿಸುವವರಿದ್ದಾರೆ, ನಿಮ್ಮ ಭಕ್ತಿ ನಿಮ್ಮ ಎಚ್ಚರಿಕೆಯಲ್ಲಿರಲಿ.”

    Continue Reading

    Belthangady

    ಕಾರಿನೊಳಗೆ ಸಿಲುಕಿಕೊಂಡ ಮಗು; ಸಮಯಪ್ರಜ್ಞೆ ಮೆರೆದು ಗ್ಲಾಸ್ ಒಡೆದು ರಕ್ಷಿಸಿದ ಸಾರ್ವಜನಿಕರು

    Published

    on

    ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕ ಜಂಕ್ಷನ್ ಬಳಿ ಚಾಲಕನ ಅಜಾಗರೂಕತೆಯಿಂದಾಗಿ ಕಾರಿನ ಡೋರ್ ಆಟೋಮೆಟಿಕ್ ಲಾಕ್ ಆಗಿ, ಮಗುವೊಂದು ಕಾರಿನೊಳಗೆ ಸಿಲುಕಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮೇ 25ರಂದು ಸೋಮವಾರ ನಡೆದಿದೆ.

    ಘಟನೆಯ ವಿವರ: ಮದ್ದಡ್ಕದ ಕುವೆಟ್ಟು ನಿವಾಸಿಯೊಬ್ಬರು ತಮ್ಮ ಮಗುವಿನೊಂದಿಗೆ ಕಾರಿನಲ್ಲಿ ಬಂದಿದ್ದು, ರಸ್ತೆ ಬದಿಯ ಅಂಗಡಿಯೊಂದರ ಬಳಿ ಕಾರನ್ನು ನಿಲ್ಲಿಸಿದ್ದರು. ಚಾಲಕನು ಕಾರಿನ ಕೀ ಮತ್ತು ಮಗುವನ್ನು ಒಳಗಡೆಯೇ ಬಿಟ್ಟು, ಇಂಜಿನ್ ಆಫ್ ಮಾಡಿ ಹೊರಗೆ ಇಳಿದು ಅಂಗಡಿಗೆ ತೆರಳಿದ್ದಾರೆ. ಆದರೆ, ಅವರು ಇಳಿದ ತಕ್ಷಣ ಕಾರಿನ ಸೆಂಟ್ರಲ್ ಲಾಕಿಂಗ್ ಸಿಸ್ಟಮ್‌ನಿಂದಾಗಿ ಡೋರ್‌ಗಳು ಆಟೋಮೆಟಿಕ್ ಆಗಿ ಲಾಕ್ ಆಗಿವೆ.

    ಕಾರಿನ ಕೀ ಒಳಗಡೆಯೇ ಇದ್ದಿದ್ದರಿಂದ ಹೊರಗಿನಿಂದ ಬಾಗಿಲು ತೆರೆಯಲು ಸಾಧ್ಯವಾಗದೆ ಚಾಲಕ ಗಾಬರಿಗೊಂಡಿದ್ದಾರೆ. ಇದೇ ವೇಳೆ ಕಾರಿನ ಒಳಗಿದ್ದ ಮಗು ಗಾಬರಿಗೊಂಡು ಜೋರಾಗಿ ಅಳಲು ಪ್ರಾರಂಭಿಸಿದೆ. ಬಿಸಿಲಿನ ಬೇಗೆಯೂ ಹೆಚ್ಚಿದ್ದರಿಂದ ಕಾರಿನೊಳಗೆ ಉಸಿರಾಟದ ತೊಂದರೆಯಾಗುವ ಭೀತಿ ಎದುರಾಗಿತ್ತು.

    ಸಾರ್ವಜನಿಕರ ಸಮಯಪ್ರಜ್ಞೆ: ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಮತ್ತು ಅಂಗಡಿ ಮುಂಗಟ್ಟುಗಳ ಮಾಲೀಕರು ಕಾರಿನ ಬಳಿ ಧಾವಿಸಿ ಬಂದಿದ್ದಾರೆ. ಕಂಪನಿಕೀ ಇಲ್ಲದೆ ಬಾಗಿಲು ತೆರೆಯಲು ಕಂಬಿ, ಸ್ಕ್ರೂಡ್ರೈವರ್ ಬಳಸಿ ವಿವಿಧ ರೀತಿಯಲ್ಲಿ ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಮಗುವಿನ ಅಳು ಹೆಚ್ಚಾಗುತ್ತಿರುವುದನ್ನು ಮತ್ತು ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಾರ್ವಜನಿಕರು ಸಮಯಪ್ರಜ್ಞೆ ಮೆರೆದಿದ್ದಾರೆ.

    ಮಗುವಿಗೆ ಯಾವುದೇ ಗಾಯವಾಗದಂತೆ ಎಚ್ಚರಿಕೆ ವಹಿಸಿ, ಕಾರಿನ ಹಿಂಬದಿಯ ಕಿಟಕಿಯ ಗ್ಲಾಸ್ (ಗಾಜು) ಅನ್ನು ಬಲವಾಗಿ ಒಡೆದಿದ್ದಾರೆ. ತದನಂತರ ಒಳಗಡೆಯಿದ್ದ ಬಾಗಿಲಿನ ಲಾಕ್ ಅನ್ನು ತೆಗೆದು ಮಗುವನ್ನು ಯಶಸ್ವಿಯಾಗಿ ಹೊರಗೆ ತಂದು ರಕ್ಷಿಸಿದ್ದಾರೆ. ಸಾರ್ವಜನಿಕರ ಈ ತ್ವರಿತ ನಿರ್ಧಾರ ಮತ್ತು ಸಮಯಪ್ರಜ್ಞೆಗೆ ಸ್ಥಳೀಯರು ಹಾಗೂ ಮಗುವಿನ ಪೋಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    Continue Reading

    Trending

    Copyright © 2025 Deevatige

    error: Content is protected !!