BJP
ಅರುಣಾಚಲ ಪ್ರದೇಶ ಗಡಿ ವಿಚಾರ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ತೀವ್ರ ವಾಗ್ದಾಳಿ
ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ನಿರಂತರ ಮುಖಾಮುಖಿ ನಡೆಯುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಅವರು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಜೊತೆಗಿನ ಇತ್ತೀಚಿನ ಮುಖಾಮುಖಿಗಳ ಕುರಿತು ನೀಡಿರುವ ಹೇಳಿಕೆಗಳು ಈ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿವೆ.
ಪ್ರಮುಖ ನಾಯಕರ ಪ್ರತಿಕ್ರಿಯೆಗಳು ಹಾಗೂ ಆರೋಪಗಳು:
ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್ ಅಧ್ಯಕ್ಷ): ರಾಷ್ಟ್ರೀಯ ಭದ್ರತೆ ಮತ್ತು ಗಡಿ ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ. ಡೋಕ್ಲಾಂ ಮತ್ತು ಗಲ್ವಾನ್ ಸಂಘರ್ಷದ ಬಳಿಕವೂ ಅರುಣಾಚಲ ಪ್ರದೇಶದಲ್ಲಿ ಅತಿಕ್ರಮಣಗಳು ನಡೆಯುತ್ತಿರುವುದು ಆತಂಕಕಾರಿ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿದ್ದಾರೆ. ಅಲ್ಲದೆ, 2020ರ ಗಲ್ವಾನ್ ಘಟನೆಯ ನಂತರ ಚೀನಾದಿಂದ ಭಾರತಕ್ಕೆ ಆಗುವ ಆಮದು ಶೇ.102ರಷ್ಟು ಹಾಗೂ ವ್ಯಾಪಾರ ಕೊರತೆ ಶೇ.155ರಷ್ಟು (112.16 ಶತಕೋಟಿ ಡಾಲರ್ಗೆ) ಏರಿಕೆಯಾಗಿರುವುದನ್ನು ಪ್ರಶ್ನಿಸಿ, ‘ಮೇಕ್ ಇನ್ ಇಂಡಿಯಾ’ ಈಗ ‘ಇಂಪೋರ್ಟ್ ಫ್ರಂ ಚೀನಾ’ ಆಗಿದೆಯೇ ಎಂದು ವ್ಯಂಗ್ಯವಾಡಿದ್ದಾರೆ.
ಜೈರಾಮ್ ರಮೇಶ್ (ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ): ಚೀನಾಕ್ಕೆ ವಿವಿಧ ರೀತಿಯ ರಿಯಾಯಿತಿಗಳನ್ನು ನೀಡಲಾಗುತ್ತಿದ್ದರೂ, ಅರುಣಾಚಲ ಪ್ರದೇಶದಲ್ಲಿ ವರದಿಯಾಗಿರುವ ಮುಖಾಮುಖಿಗಳ ಬಗ್ಗೆ ಸರ್ಕಾರ ಮೌನ ವಹಿಸಿದೆ ಎಂದು ಆರೋಪಿಸಿದ್ದಾರೆ. ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಚೀನಾ ನಿರ್ಮಿಸುತ್ತಿರುವ ಬೃಹತ್ ಅಣೆಕಟ್ಟು ಯೋಜನೆಯು ಭಾರತದ ಪರಿಸರ ಮತ್ತು ಜಲ ಭದ್ರತೆಗೆ ಅಪಾಯ ತರಲಿದೆ ಎಂದು ಎಚ್ಚರಿಸಿದ್ದಾರೆ.
ಪವನ್ ಖೇರಾ (ಕಾಂಗ್ರೆಸ್ ನಾಯಕ): ಚೀನಾದ ಭಯದಿಂದ ಕೇಂದ್ರ ಸರ್ಕಾರ ಭಾರತದ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. 2020ರ ಏಪ್ರಿಲ್ಗಿಂತ ಮೊದಲು ಭಾರತೀಯ ಸೇನೆ ಗಸ್ತು ತಿರುಗುತ್ತಿದ್ದ ಸ್ಥಳಗಳಿಗೆ ಈಗಲೂ ತೆರಳಲು ಸಾಧ್ಯವಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಜೇಬಿ ಮಾಥರ್ (ಕಾಂಗ್ರೆಸ್ ಸಂಸದೆ): ಗಡಿಯಲ್ಲಿ ಜುಲೈನಿಂದಲೇ ಇಂತಹ ಘಟನೆಗಳು ನಡೆಯುತ್ತಿದ್ದರೂ, ಅಕ್ಟೋಬರ್ ತಿಂಗಳಲ್ಲಿ ಐಟಿಬಿಪಿ ಮಹಾನಿರ್ದೇಶಕರು ಬಹಿರಂಗಪಡಿಸುವವರೆಗೆ ದೇಶಕ್ಕೆ ಈ ವಿಚಾರ ತಿಳಿಯದಿರಲು ಕಾರಣವೇನು ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ಚತುರ್ವೇದಿ (ಶಿವಸೇನೆ – ಯುಬಿಟಿ ಸಂಸದೆ): ಗಡಿ ಪರಿಸ್ಥಿತಿಯ ಕುರಿತು ರಾಜತಾಂತ್ರಿಕ ಹೇಳಿಕೆಗಳು ಮತ್ತು ವಾಸ್ತವ ಬೆಳವಣಿಗೆಗಳ ನಡುವಿನ ವ್ಯತ್ಯಾಸವನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದು, ಗೃಹ, ರಕ್ಷಣಾ ಹಾಗೂ ವಿದೇಶಾಂಗ ಸಚಿವರು ಈ ಕುರಿತು ಉತ್ತರ ನೀಡಬೇಕು ಎಂದಿದ್ದಾರೆ.
ಡಿ. ರಾಜಾ (ಸಿಪಿಐ ಪ್ರಧಾನ ಕಾರ್ಯದರ್ಶಿ): ರಾಜಕೀಯ ವಿರೋಧಿಗಳನ್ನು ಟೀಕಿಸುವ ಬದಲು ಪ್ರಧಾನಿ ಮೋದಿ ದೇಶದ ನೈಜ ಸಮಸ್ಯೆಗಳತ್ತ ಹಾಗೂ ಗಡಿ ಭದ್ರತೆಯ ಕಡೆಗೆ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಅಭಿಜೀತ್ ದೀಪ್ಕೆ (ಸಿಜೆಪಿ ಸಂಸ್ಥಾಪಕ): ಗಡಿಗಳನ್ನು ರಕ್ಷಿಸಬೇಕಾದ ಭದ್ರತಾ ಪಡೆಗಳನ್ನು ದೆಹಲಿಯಲ್ಲಿ ನಾಗರಿಕರ ಪ್ರತಿಭಟನೆಗಳನ್ನು ತಡೆಯಲು ಬಳಸಲಾಗುತ್ತಿದ್ದು, ಇದು ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಗಡಿ ಭದ್ರತೆ ಹಾಗೂ ಚೀನಾದೊಂದಿಗಿನ ರಾಜತಾಂತ್ರಿಕ ಸಂಬಂಧಗಳ ವಿಚಾರವಾಗಿ ಕೇಂದ್ರ ಸರ್ಕಾರದ ಮೌನ ಹಾಗೂ ನೀತಿಗಳ ವಿರುದ್ಧ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಸ್ಪಷ್ಟನೆಗೆ ಒತ್ತಾಯಿಸುತ್ತಿವೆ
BJP
ರಾಜ್ಯ ಬಿಜೆಪಿಯಲ್ಲಿ ‘ತ್ರಿಬಲ್ ಸರ್ಜರಿ’ಗೆ ಮುಹೂರ್ತ ಫಿಕ್ಸ್: ವಿಜಯೇಂದ್ರ ಔಟ್, ಸೋಮಣ್ಣ ಇನ್? ಬಿಎಸ್ ವೈಗೆ ಹೈಕಮಾಂಡ್ ಮಾಸ್ಟರ್ ಪ್ಲಾನ್ !
ಬೆಂಗಳೂರು: 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿರುವಾಗಲೇ, ರಾಜ್ಯ ಬಿಜೆಪಿಯಲ್ಲಿ ಮಹತ್ವದ ಸಾಂಸ್ಥಿಕ ಹಾಗೂ ನಾಯಕತ್ವ ಬದಲಾವಣೆಗಳಿಗೆ ಹೈಕಮಾಂಡ್ ವೇದಿಕೆ ಸಜ್ಜುಗೊಳಿಸಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ರಾಜಕೀಯ ಚರ್ಚೆಗಳ ಪ್ರಕಾರ, ನವೆಂಬರ್ ಮಾಸಾಂತ್ಯದೊಳಗೆ ರಾಜ್ಯ ಬಿಜೆಪಿಯಲ್ಲಿ ಮೂರು ಪ್ರಮುಖ ‘ಮೇಜರ್ ಸರ್ಜರಿ’ಗಳು ನಡೆಯುವುದು ಬಹುತೇಕ ಖಚಿತವಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದ ಸುತ್ತಲೇ ಸುತ್ತುತ್ತಿರುವ ಈ ಬೆಳವಣಿಗೆಯಲ್ಲಿ, ಅವರ ಒಬ್ಬ ಪುತ್ರ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದರೆ, ಇನ್ನೊಬ್ಬ ಪುತ್ರನಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವ ಸಾಧ್ಯತೆ ದಟ್ಟವಾಗಿದೆ. ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಸುದೃಢಗೊಳಿಸುವುದು ಹಾಗೂ ಪಕ್ಷದ ಭಿನ್ನಮತೀಯರನ್ನು ತಣ್ಣಗಾಗಿಸಿ ಮುಂಬರುವ ಸವಾಲುಗಳಿಗೆ ಪಕ್ಷವನ್ನು ಸಜ್ಜುಗೊಳಿಸುವುದು ಹೈಕಮಾಂಡ್ನ ಮುಖ್ಯ ಉದ್ದೇಶವಾಗಿದೆ.
ರಾಜ್ಯ ಬಿಜೆಪಿಯಲ್ಲಿ ಸಂಭವಿಸಲಿರುವ ಆ 3 ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ:
1. ಬಿ.ವೈ. ವಿಜಯೇಂದ್ರ ಔಟ್ – ವಿ. ಸೋಮಣ್ಣಗೆ ರಾಜ್ಯ ಬಿಜೆಪಿ ಸಾರಥ್ಯ?
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ 3 ವರ್ಷಗಳ ಅವಧಿ ನವೆಂಬರ್ 10ಕ್ಕೆ ಮುಕ್ತಾಯಗೊಳ್ಳಲಿದೆ. ಪಕ್ಷದಿಂದ ಉಚ್ಚಾಟಿತರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷಕ್ಕೆ ವಾಪಸ್ ಬರಲು “ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು” ಎಂಬ ಷರತ್ತು ವಿಧಿಸಿದ್ದರು. ಈ ಷರತ್ತಿಗೆ ವಿಜಯೇಂದ್ರ ಕೂಡ ಸಮ್ಮತಿ ಸೂಚಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ, ಪ್ರಸ್ತುತ ಕೇಂದ್ರ ರೈಲ್ವೇ ರಾಜ್ಯ ಸಚಿವರಾಗಿರುವ ವಿ. ಸೋಮಣ್ಣ ಅವರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲು ಹೈಕಮಾಂಡ್ ಫೈನಲ್ ಮಾಡಿದೆ ಎನ್ನಲಾಗುತ್ತಿದೆ. ಸೋಮಣ್ಣ ಅವರ ನೇಮಕಕ್ಕೆ ಯತ್ನಾಳ್ ಸೇರಿದಂತೆ ಬಿಜೆಪಿಯ ಯಾವುದೇ ಭಿನ್ನಮತೀಯ ನಾಯಕರ ತಕರಾರಿಲ್ಲದಿರುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.
2. ವಿಧಾನಸಭೆ ವಿಪಕ್ಷ ನಾಯಕ ಬದಲು: ಸುನಿಲ್ ಕುಮಾರ್ ಮುಂಚೂಣಿಗೆ!
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಅವಧಿಯೂ ನವೆಂಬರ್ 17ಕ್ಕೆ 3 ವರ್ಷ ಪೂರೈಸಲಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ನಿರಂತರ ಹೋರಾಟ ನಡೆಸುತ್ತಿದ್ದರೂ, ಪಕ್ಷದ ಒಳಗಿನ ನಾಯಕರೇ ಅವರ ವಿರುದ್ಧ “ಹೊಂದಾಣಿಕೆ ರಾಜಕೀಯ”ದ ಆರೋಪಗಳನ್ನು ಮಾಡುತ್ತಿದ್ದರು.
ಹೀಗಾಗಿ, ಕರಾವಳಿ ಭಾಗದ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರನ್ನು ನೂತನ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲು ವರಿಷ್ಠರು ಒಲವು ತೋರಿದ್ದಾರೆ. ಕಳೆದ ಶಾಸನಸಭೆ ಅಧಿವೇಶನದಲ್ಲಿ ಸರ್ಕಾರದ ಲೋಪದೋಷಗಳನ್ನು ಯಶಸ್ವಿಯಾಗಿ ಎತ್ತಿಹಿಡಿದು ಗಮನಸೆಳೆದಿದ್ದ ಸುನಿಲ್ ಕುಮಾರ್ ಅವರಿಗೆ ಈ ಜವಾಬ್ದಾರಿ ಸಿಗುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ.
3. ಬಿ.ವೈ. ರಾಘವೇಂದ್ರಗೆ ಕೇಂದ್ರ ಸಚಿವ ಸ್ಥಾನ?
ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸುವುದರಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಬೇಸರವಾಗದಂತೆ ನೋಡಿಕೊಳ್ಳಲು ಹೈಕಮಾಂಡ್ ಹೊಸ ಪ್ರಪೋಸಲ್ ಒಂದನ್ನು ಮುಂದಿಟ್ಟಿದೆ.
ಇದರ ಪ್ರಕಾರ, ಕೇಂದ್ರ ಸಚಿವ ಸ್ಥಾನದಲ್ಲಿದ್ದ ವಿ. ಸೋಮಣ್ಣ ರಾಜ್ಯ ರಾಜಕಾರಣಕ್ಕೆ (ರಾಜ್ಯಾಧ್ಯಕ್ಷರಾಗಿ) ಮರಳಿದರೆ, ತೆರವಾಗುವ ‘ಕರ್ನಾಟಕ ಕೋಟಾ’ದ ಕೇಂದ್ರ ಸಚಿವ ಸ್ಥಾನವನ್ನು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಮೂರು ಬಾರಿ ಸಂಸದರಾಗಿ ಸತತವಾಗಿ ಗೆದ್ದು ಬಂದಿರುವ ರಾಘವೇಂದ್ರ ಅವರಿಗೆ ಈ ಮೂಲಕ ಸೂಕ್ತ ಸ್ಥಾನಮಾನ ಕಲ್ಪಿಸಲು ಯಡಿಯೂರಪ್ಪ ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಕುಮಾರ್ ಬಂಗಾರಪ್ಪ ಹೇಳಿಕೆಯಿಂದ ಹೆಚ್ಚಿದ ಕಾವು
ವಿಜಯೇಂದ್ರ ಅವರ ಸ್ಥಾನಕ್ಕೆ ಹೊಸಬರ ಆಯ್ಕೆಯಾಗುವುದು ಶೇ. 99ರಷ್ಟು ಪಕ್ಕಾ ಎಂದು ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ನೀಡಿದ ಹೇಳಿಕೆ ಈ ಎಲ್ಲಾ ಊಹಾಪೋಹಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಈ ಮೂರು ಮೇಜರ್ ಸರ್ಜರಿಗಳ ಮೂಲಕ ಯತ್ನಾಳ್ ಹಾಗೂ ಈಶ್ವರಪ್ಪ ಅವರಂತಹ ಹಿರಿಯ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತಂದು, ಭಿನ್ನಮತ ಶಮನಗೊಳಿಸಿ 2028ರ ಚುನಾವಣೆಗೆ ಈಗಿನಿಂದಲೇ ಕಮಲ ಪಡೆಯನ್ನು ಸಜ್ಜುಗೊಳಿಸಲು ಕೇಂದ್ರ ನಾಯಕತ್ವ ಗ್ರೀನ್ ಸಿಗ್ನಲ್ ನೀಡಿದೆ.
BJP
ಸುಪ್ರೀಂ ಕೋರ್ಟ್ಗೆ ಸುಳ್ಳು ಮಾಹಿತಿ ನೀಡಿದ ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಪ್ರಶಾಂತ್ ಭೂಷಣ್ ಆಗ್ರಹ
ಹೊಸದೆಹಲಿ: ಸುಪ್ರೀಂ ಕೋರ್ಟ್ಗೆ ಸುಳ್ಳು ಅಫಿಡವಿಟ್ ಸಲ್ಲಿಸಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಆಗ್ರಹಿಸಿದ್ದಾರೆ.
ಚುನಾವಣಾ ಆಯೋಗ (ಇಸಿ) ಕೈಗೊಂಡ ಎಲ್ಲಾ ನಿರ್ಧಾರಗಳಿಗೂ ಸಂಪೂರ್ಣ ಆಯೋಗದ (ಮೂವರೂ ಆಯುಕ್ತರ) ಅನುಮೋದನೆ ಇತ್ತು ಎಂದು ಸುಪ್ರೀಂ ಕೋರ್ಟ್ಗೆ ನೀಡಿರುವ ಪ್ರಮಾಣಪತ್ರ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಎಂದು ಅವರು ಆರೋಪಿಸಿದ್ದಾರೆ.
‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಉಲ್ಲೇಖಿಸಿ ಆರೋಪ
“ಅಫಿಡವಿಟ್ನಲ್ಲಿ ಚುನಾವಣಾ ಆಯೋಗ ಹೇಳಿರುವುದು ಸಂಪೂರ್ಣ ಅಸತ್ಯ. ‘ದಿ ಇಂಡಿಯನ್ ಎಕ್ಸ್ಪ್ರೆಸ್’ ದಿನಪತ್ರಿಕೆ ಬಹಿರಂಗಪಡಿಸಿರುವ ವರದಿಯ ಪ್ರಕಾರ, ಇತರ ಚುನಾವಣಾ ಆಯುಕ್ತರು ದಾಖಲಿಸಿರುವ ಭಿನ್ನಾಭಿಪ್ರಾಯದ ಟಿಪ್ಪಣಿಗಳು ಹಾಗೂ ಅವರು ಕ್ಯಾಬಿನೆಟ್ ಕಾರ್ಯದರ್ಶಿಗೆ ಸಲ್ಲಿಸಿರುವ ದೂರುಗಳೇ ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ” ಎಂದು ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ಚುನಾವಣಾ ಆಯೋಗದ ಸಮರ್ಥನೆ
ಸಾಮಾಜಿಕ ಕಾರ್ಯಕರ್ತ ರಾಕೇಶ್ ಕುಮಾರ್ ಸಿಂಗ್ ಅವರು ಚುನಾವಣಾ ಆಯೋಗದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸೋಮವಾರ (ಅಕ್ಟೋಬರ್ 26) ಉತ್ತರಿಸಿದ ಆಯೋಗವು, “ಎಲ್ಲಾ ನಿರ್ಧಾರಗಳನ್ನು ಮುಖ್ಯ ಚುನಾವಣಾ ಆಯುಕ್ತರು ಸೇರಿದಂತೆ ಮೂವರು ಆಯುಕ್ತರ ಒಮ್ಮತದ ತೀರ್ಮಾನದಿಂದಲೇ ತೆಗೆದುಕೊಳ್ಳಲಾಗಿದೆ” ಎಂದು ಪ್ರಮಾಣಪತ್ರ ಸಲ್ಲಿಸಿತ್ತು.
ಅಲ್ಲದೆ, “ಆಯುಕ್ತರು ವ್ಯಕ್ತಪಡಿಸುವ ಅವಲೋಕನಗಳು, ಸಲಹೆಗಳು ಮತ್ತು ಪ್ರಶ್ನೆಗಳು ಅವರ ವೈಯಕ್ತಿಕ ಅಭಿಪ್ರಾಯಗಳಷ್ಟೇ ಹೊರತು, ಅವು ಆಯೋಗದ ಅಂತಿಮ ನಿರ್ಧಾರಗಳಲ್ಲ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಕಾನೂನುಬದ್ಧವಾಗಿದ್ದು, ಅರ್ಜಿದಾರರ ಆರೋಪಗಳು ತಪ್ಪು ತಿಳುವಳಿಕೆಯಿಂದ ಕೂಡಿವೆ” ಎಂದು ಆಯೋಗ ವಾದಿಸಿತ್ತು.
10 ತಿಂಗಳಲ್ಲಿ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದ ಆಯುಕ್ತರು
ಆದರೆ, ಮಾಧ್ಯಮ ವರದಿಗಳ ಪ್ರಕಾರ, ಕಳೆದ 10 ತಿಂಗಳುಗಳಲ್ಲಿ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ತಮಗೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡದೆ ಆಯೋಗದ ಹೆಸರಿನಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆಕ್ಷೇಪಿಸಿ ಸುಮಾರು 14 ಬಾರಿ ಆಕ್ಷೇಪಣಾ ಟಿಪ್ಪಣಿಗಳನ್ನು ದಾಖಲಿಸಿದ್ದಾರೆ. ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಪ್ರಶಾಂತ್ ಭೂಷಣ್ ಅವರು ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
arrest
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್: ದೆಹಲಿ ಮೂಲದ ರಾಹುಲ್ ಪಾಂಡೆ ವಶಕ್ಕೆ, ಕಾಂಗ್ರೆಸ್ ನಾಯಕಿ ಶರಣು; ಸಂತ್ರಸ್ತೆ ಹೇಳಿಕೆ ದಾಖಲಿಸಿದ ಸಿಸಿಬಿ
ಬೆಂಗಳೂರು: ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಹೈ ಪ್ರೊಫೈಲ್ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳು ನಡೆದಿವೆ.
ಸಂತ್ರಸ್ತೆಯ ಹೇಳಿಕೆ ದಾಖಲು, ಪ್ರಮುಖ ಆರೋಪಿ ವಶಕ್ಕೆ:
ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಸಿಸಿಬಿ ಪೊಲೀಸರು ಕೇರಳದ ಕ್ಯಾಲಿಕಟ್ ತರಳಿ ಸಂತ್ರಸ್ತ ಮಹಿಳೆಯ ಹೇಳಿಕೆಯನ್ನು ಪಡೆದಿದ್ದಾರೆ. 2011ರಲ್ಲಿ ಮಹಿಳೆಯನ್ನು ಲೈಂಗಿಕವಾಗಿ ದುರುಪಯೋಗ ಮಾಡಲಾಗಿದೆ ಎಂದು ಸ್ಟಿಂಗ್ ವಿಡಿಯೋದಲ್ಲಿ ಹೇಳಿದ್ದರಿಂದ, ಆಕೆಯನ್ನು ವಿಚಾರಣೆ ನಡೆಸಿ ವಿಡಿಯೋ ಸಂಬಂಧಿಸಿ ವಿಸ್ತೃತ ಹೇಳಿಕೆ ಪಡೆಯಲಾಗಿದೆ. 2011ರಲ್ಲಿ ಘಟನೆ ಏನಾಗಿತ್ತು ಮತ್ತು 2023ರಲ್ಲಿ ವಿಡಿಯೋ ಮಾಡಿರುವ ಉದ್ದೇಶವೇನು, ಯಾವ ಜಾಗದಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ವೈರಲ್ ಆಗಿದ್ದ 2.5 ನಿಮಿಷದ ವಿಡಿಯೋದಲ್ಲಿ ಸಂತ್ರಸ್ತೆಯನ್ನು ಸಂದರ್ಶನ ಮಾಡುವಂತಿತ್ತು, ಆಕೆಯ ಮುಖವನ್ನು ಬ್ಲರ್ ಮಾಡಲಾಗಿತ್ತು.
ಇದೇ ವೇಳೆ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ದೆಹಲಿ ಮೂಲದ ರಾಹುಲ್ ಪಾಂಡೆ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಡಿಯೋ ಚಿತ್ರೀಕರಣಕ್ಕೆ ಬಳಸಿದ್ದ ಕ್ಯಾಮೆರಾವನ್ನು ಈತ ಒದಗಿಸಿದ್ದ ಎನ್ನಲಾಗುತ್ತಿದೆ. ಈಗಾಗಲೇ ವಿಡಿಯೋದಲ್ಲಿದ್ದ ಪವರ್ ಟಿವಿಯ ರಾಕೇಶ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ.
ಟ್ವಿಸ್ಟ್ – ಕಾಂಗ್ರೆಸ್ ನಾಯಕಿಯೇ ಶರಣು, ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ:
ಈ ಸ್ಟಿಂಗ್ ಆಪರೇಷನ್ ಹಿಂದೆ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಮತ್ತು ರಾಕೇಶ್ ಶೆಟ್ಟಿ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್ ಮೇಲ್ ಮಾಡಲು ಮತ್ತು ಅವರ ಹೆಸರನ್ನು ಕೆಡಿಸಲು ಸ್ಟಿಂಗ್ ಆಪರೇಷನ್ ಮಾಡಿದ್ದರಲ್ಲಿ ಕಾಂಗ್ರೆಸ್ ನವರ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡಿ, ಅವರ ವರ್ಚಸ್ಸನ್ನು ಹಾಳು ಮಾಡಿ ಬ್ಲ್ಯಾಕ್ ಮೇಲ್ ಮಾಡುವ ಪ್ರಯತ್ನ ನಡೆದಿದೆ. ಸಿದ್ದರಾಮಯ್ಯ ಹೆಸರು ಕೆಡಿಸಲು ಸ್ಟಿಂಗ್ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಯತೀಂದ್ರ ಹೇಳಿದ್ದಾರೆ.
ಈ ಆರೋಪದ ಬೆನ್ನಲ್ಲೇ ಮಂಗಳೂರಿನ ಕಾಂಗ್ರೆಸ್ ಮಹಿಳಾ ನಾಯಕಿ ಬೆಂಗಳೂರಿನ ಸಿಸಿಬಿ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಮಾಹಿತಿಯ ಪ್ರಕಾರ, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಪುತ್ತೂರು ಟಿಕೆಟ್ ಗಾಗಿ ಆಕಾಂಕ್ಷಿಯಾಗಿದ್ದರು ಎಂಬ ಮಾಹಿತಿ ಇದೆ. ಹಾಗಾಗಿ, ರಾಜಕೀಯ ಲಾಭಕ್ಕಾಗಿ ಮತ್ತು ಸಿದ್ದರಾಮಯ್ಯ ಹೆಸರನ್ನು ಕೆಡಿಸಲು ಈ ರೀತಿಯ ಕೃತ್ಯಕ್ಕೆ ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಯತೀಂದ್ರ ಹೇಳಿದ್ದಾರೆ.
ಈ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ವಿವಾದ ಸೃಷ್ಟಿಸಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಇದರ ನಡುವೆಯೇ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಗೆ ಪಕ್ಷದ ಕಡೆಯಿಂದ ನೋಟಿಸ್ ನೀಡಲಾಗಿದೆ. ಪೊಲೀಸರು ಕೂಡ ಅವರ ಹೇಳಿಕೆಯನ್ನು ಪಡೆಯುವ ಸಾಧ್ಯತೆಯಿದೆ.
ಸದ್ಯ ಯತೀಂದ್ರ ಅವರು ತಂದೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪತ್ರಕರ್ತ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಯಾರೇ ಇದ್ದರೂ ಅರೆಸ್ಟ್ ಮಾಡಲು ತಂದೆ ಹೇಳಿದ್ದಾರೆ. ನಮ್ಮ ಸರ್ಕಾರದ ತನಿಖೆ ಮೇಲೆ ನಂಬಿಕೆ ಇದೆ, ತನಿಖೆ ಸರಿಯಾಗಿ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
