Connect with us

CONGRESS

ಪುತ್ತೂರು ಪ್ರೆಸ್ ಕ್ಲಬ್ ಬಳಿ ಹಕೀಂ ಕೂರ್ನಡ್ಕ ವಿರುದ್ಧ ಶಾಸಕರ ಬೆಂಬಲಿಗರ ಆಕ್ರೋಶ: ಪೊಲೀಸರಿಂದ ರಕ್ಷಣೆ, ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ

Published

on

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ನಿರಂತರವಾಗಿ ನಿಂದನೆ ಹಾಗೂ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಹಕೀಂ ಕೂರ್ನಡ್ಕ ಎಂಬಾತನ ವಿರುದ್ಧ ಶಾಸಕರ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಪುತ್ತೂರು ಪ್ರೆಸ್‌ ಕ್ಲಬ್‌ ಬಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಘಟನೆಯ ವಿವರ: ಕಳೆದ ಎರಡು ವರ್ಷಗಳಿಂದ ಹಕೀಂ ಕೂರ್ನಡ್ಕ ಶಾಸಕರ ವಿರುದ್ಧ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಆತ ಸುದ್ದಿಗೋಷ್ಠಿ ನಡೆಸಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಸಂದೇಶ (ವಾಯ್ಸ್ ಮೆಸೇಜ್) ರವಾನಿಸುವ ಮೂಲಕ ಪಕ್ಷ ಮತ್ತು ಶಾಸಕರಿಗೆ ಮುಜುಗರ ಉಂಟುಮಾಡುತ್ತಿದ್ದ. ಆದರೆ, ಈತನಿಗೆ ಕಾಂಗ್ರೆಸ್‌ನಲ್ಲಿ ಯಾವುದೇ ಹುದ್ದೆ ಇಲ್ಲ ಹಾಗೂ ಈತ ಪಕ್ಷದ ಕಾರ್ಯಕರ್ತನಲ್ಲ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಈಗಾಗಲೇ ಸ್ಪಷ್ಟನೆ ನೀಡಿತ್ತು.

ಇಂದು ಮಧ್ಯಾಹ್ನ ಹಕೀಂ ಕೂರ್ನಡ್ಕ ಪುತ್ತೂರು ಪ್ರೆಸ್‌ ಕ್ಲಬ್‌ಗೆ ಆಗಮಿಸಿದ್ದ ವಿಷಯ ತಿಳಿಯುತ್ತಿದ್ದಂತೆ, ಅಲ್ಲಿಗೆ ಧಾವಿಸಿದ ಶಾಸಕರ ಬೆಂಬಲಿಗರು ಮತ್ತು ಕಾರ್ಯಕರ್ತರು ಆತನ ವಿರುದ್ಧ ಕೂಗಾಡಿದ್ದಾರೆ. ಸ್ಥಳಕ್ಕೆ ಸ್ವತಃ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಆಗಮಿಸಿ ತಮ್ಮ ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರೂ, ತಾಳ್ಮೆ ಕಳೆದುಕೊಂಡ ಬೆಂಬಲಿಗರು ಹಕೀಂ ವಿರುದ್ಧ ಆಕ್ರೋಶ ಹೊರಹಾಕಿದರು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಹಕೀಂ ತಕ್ಷಣವೇ ರಕ್ಷಣೆಗಾಗಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪುತ್ತೂರು ಪೊಲೀಸರು ಹಕೀಂನನ್ನು ತಮ್ಮ ಜೀಪ್‌ನಲ್ಲಿ ಸುರಕ್ಷಿತವಾಗಿ ಠಾಣೆಗೆ ಕರೆದೊಯ್ದಿದ್ದಾರೆ.

ಶಾಸಕರು ಹಾಗೂ ಪಕ್ಷದ ಮುಖಂಡರ ಕುರಿತು ನಿಂದನೆ ಮಾಡಿರುವ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಈ ಸಂದರ್ಭದಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಕುರಿತು ಶಾಸಕ ಅಶೋಕ್ ಕುಮಾರ್ ರೈ ಮಾತು: ಈ ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, “ನಾವು ಕಚೇರಿಯಲ್ಲಿದ್ದಾಗ ಕಾರ್ಯಕರ್ತರು ಇಂದಿರಾ ಕ್ಯಾಂಟೀನ್ ಕಡೆಗೆ ಊಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹಕೀಂ ಕೂರ್ನಡ್ಕ ಎಂಬಾತ ಪ್ರೆಸ್‌ ಕ್ಲಬ್ ಬಳಿ ಬಂದು ಶಾಸಕರ ಜಾತಕವನ್ನು ಪ್ರೆಸ್‌ನಲ್ಲಿ ಜಾಹೀರಾತು ಮಾಡುತ್ತೇನೆ, ಬುದ್ಧಿ ಕಲಿಸುತ್ತೇನೆ ಎಂದು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾನೆ. ಅಲ್ಲದೆ ಶಾಸಕರ ತಂದೆ-ತಾಯಿ, ಹೆಂಡತಿ ಹಾಗೂ ಮಹಿಳಾ ಕಾರ್ಯಕರ್ತರ ವಿರುದ್ಧವೂ ಕೀಳುಮಟ್ಟದ ಮಾತುಗಳನ್ನು ಆಡಿ ನಿಂದಿಸಿದ್ದಾನೆ” ಎಂದು ತಿಳಿಸಿದರು.

“ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಹಾಗೂ ಮಹಿಳಾ ಮುಖಂಡರು ಆತನನ್ನು ಪ್ರಶ್ನಿಸಲು ಬಂದಿದ್ದರು. ನಾನು ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲು ತೆರಳುತ್ತಿದ್ದಾಗ ಈ ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಬಂದು ಎಲ್ಲರನ್ನೂ ಸಮಾಧಾನಪಡಿಸಿ ವಾಪಸ್ ಕಳುಹಿಸಿದ್ದೇನೆ.

ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬುದು ನಮ್ಮ ಉದ್ದೇಶ. ಪೊಲೀಸರು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಯಾರೂ ಕೂಡ ಪ್ರಚೋದನಾಕಾರಿ ಹೇಳಿಕೆ ನೀಡಬಾರದು” ಎಂದು ಶಾಸಕರು ಮನವಿ ಮಾಡಿದರು.

ಇದೇ ವೇಳೆ ಸ್ಥಳದಲ್ಲಿದ್ದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರೂ ಕೂಡ ಹಕೀಂ ಕೂರ್ನಡ್ಕ ತಮ್ಮ ವಿರುದ್ಧ ಜಾಲತಾಣಗಳಲ್ಲಿ ಕೀಳುಮಟ್ಟದ ಸಂದೇಶ ಕಳುಹಿಸಿ ನಿಂದನೆ ಮಾಡಿದ್ದಾರೆ ಎಂದು ಮಾಧ್ಯಮಗಳ ಎದುರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

CONGRESS

ಮಂಗಳೂರು ಹಳೆ ಬಂದರು ಪ್ರದೇಶಕ್ಕೆ ಸಿಎಂ ಭೇಟಿ: ಮೀನುಗಾರಿಕೆ ವ್ಯವಹಾರ ಸ್ಥಗಿತಗೊಳಿಸಿದ್ದಕ್ಕೆ ಆಕ್ರೋಶ, ತನಿಖೆಗೆ ಆದೇಶ

Published

on

ಮಂಗಳೂರು, ಸೆ. 19: ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕಾ ಧಕ್ಕೆ ಹಳೆ ಬಂದರು ಪ್ರದೇಶಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕಮಾರ್ ಅವರು, ತಮ್ಮ ಭೇಟಿಯ ವೇಳೆ ಮೀನುಗಾರಿಕಾ ವ್ಯವಹಾರ ಹಾಗೂ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಈ ಬಗ್ಗೆ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಅಧಿಕಾರಿಗಳೇ ಅಥವಾ ಪೊಲೀಸರೇ ಚಟುವಟಿಕೆಗಳನ್ನು ನಿಲ್ಲಿಸಿದ್ದರೆ ಅವರನ್ನು ಇಂದೇ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು. ರಾಜ್ಯ ಹಾಗೂ ಹೊರರಾಜ್ಯಗಳಿಂದ ಬರುವ ಮೀನುಗಾರರು ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ವ್ಯವಹಾರಗಳು ಎಂದಿನಂತೆ ಸುಗಮವಾಗಿ ನಡೆಯಬೇಕು ಎಂದು ಸಿಎಂ ತಿಳಿಸಿದರು. ಮೀನುಗಾರಿಕೆಯು ಆರ್ಥಿಕತೆಯ ದೊಡ್ಡ ಶಕ್ತಿಯಾಗಿದ್ದು, ಧಕ್ಕೆಯಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು, ಸುರಕ್ಷತೆ ಒದಗಿಸುವುದು ಹಾಗೂ ಸಣ್ಣ ದೋಣಿ ಮೀನುಗಾರರಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ಅಳಿವೆ ಬಾಗಿಲಿಗೆ ಹೂಳೆತ್ತದೆ ಇರುವುದು ಅಪಾಯಕಾರಿಯಾಗಿದೆ ಎಂಬ ಮೀನುಗಾರರ ಅಳಲಿಗೆ ಸ್ಪಂದಿಸಿ, ಡ್ರೆಜಿಂಗ್ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದ ತಾಂತ್ರಿಕ ಸಮಿತಿಯ ಸಲಹೆ ಪಡೆದು ಶೀಘ್ರವೇ ಸರ್ಕಾರವೇ ಸ್ವಂತ ಡ್ರೆಜಿಂಗ್ ಯಂತ್ರ ಖರೀದಿಸುವುದೋ ಅಥವಾ ಲೀಸ್‌ಗೆ ಪಡೆಯುವುದೋ ಎಂಬ ಬಗ್ಗೆ ತೀರ್ಮಾನಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಕರಾವಳಿಯ ಅಭಿವೃದ್ಧಿಗೆ ಹೊಸ ಪಥದ ಚಿಂತನೆ ನಡೆಸಲಾಗಿದ್ದು, ಹೂಡಿಕೆದಾರರನ್ನು ಆಕರ್ಷಿಸಲು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ಕಸ್ತೂರಿ ರಂಗನ್ ವರದಿ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಜನಸಾಮಾನ್ಯರ ಬದುಕು ನಮಗೆ ಮುಖ್ಯವಾಗಿದ್ದು, ಹಿಂದೆಯೂ ನಾವು ಈ ವರದಿಯನ್ನು ತಿರಸ್ಕರಿಸಿದ್ದೇವೆ ಎಂದರು. ಕಾನೂನು ಚೌಕಟ್ಟಿನಲ್ಲಿ ಜನರಿಗೆ ಆಗುವ ಅನ್ಯಾಯ ತಪ್ಪಿಸಲು ವಾಸ್ತವ ಅಂಶಗಳನ್ನು ಅರಿಯಲು ಜನರ ಬಳಿಗೆ ಬಂದಿರುವುದಾಗಿ ತಿಳಿಸಿದರು. ಸಚಿವ ಸಂಪುಟದ ಅನುಮೋದನೆ ಕುರಿತು ಬಿಜೆಪಿ ಟೀಕೆಗಳಿಗೆ ಉತ್ತರಿಸಿ, “ನಾವು ನುಡಿದಂತೆ ನಡೆಯುತ್ತೇವೆ, ಅದೇ ನಮ್ಮ ಶಕ್ತಿ” ಎಂದು ಸ್ಪಷ್ಟಪಡಿಸಿದರು. ಈ ಭೇಟಿಯ ವೇಳೆ ಸಚಿವ ಯು.ಟಿ. ಖಾದರ್, ವಿವಿಧ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಮೀನುಗಾರಿಕಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

CONGRESS

ಮಂಗಳೂರು ಸಚಿವ ಸಂಪುಟ ಸಭೆ: ವಿವಿಧ ಸಂಘಟನೆಗಳ ಪ್ರತಿಭಟನೆ ಮತ್ತು ಬಿಗಿ ಭದ್ರತೆ

Published

on

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಶುಕ್ರವಾರ (ಸೆಪ್ಟೆಂಬರ್ 18) ಆಯೋಜಿಸಲಾದ ವಿಶೇಷ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಸಚಿವರು ಆಗಮಿಸಿದ ವೇಳೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ವಿವಿಧ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿದವು. ಅಬ್ದುಲ್ ರಹೀಮಾನ್ ಕೊಲೆ ಆರೋಪಿಗಳಿಗೆ ಜಾಮೀನು ಮಂಜೂರಾಗಿರುವುದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣವೆಂದು ಆರೋಪಿಸಿ ಎಸ್.ಡಿ.ಪಿ.ಐ. ಕಾರ್ಯಕರ್ತರು ಮಂಗಳೂರಿನ ರಾವ್ & ರಾವ್ ಸರ್ಕಲ್ ಬಳಿ ಕಪ್ಪುಪತಾಕೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಹಲವು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

ಅದೇ ರೀತಿ, ಜೈಲ್ ಜಾಮರ್ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವಕೀಲರನ್ನು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹೊರಟ ಸಿ.ಪಿ.ಐ.ಎಂ. ಕಾರ್ಯಕರ್ತರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. ಇದರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ತುಳು ಸಂಘಟನೆಯವರು ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವಂತೆ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ, ಸಿಎಂ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದ ‌ ಸಹೋದ್ಯೋಗಿಗಳೊಂದಿಗೆ ಕದ್ರಿ ಶ್ರೀ ಮಂಜುನಾಥ ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಡೀಲ್‌ನಲ್ಲಿರುವ ಪ್ರಜ್ಞಾಸೌಧದ ಎರಡನೇ ಮಹಡಿಯ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಒಟ್ಟು 33 ಮಂದಿ ಸಚಿವರಿಗೆ ಮತ್ತು ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಆಯಾ ಸಭಾಂಗಣದಲ್ಲೇ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಿಗದಿತ ಸಮಯಕ್ಕಿಂತ ಸಭೆ ಸ್ವಲ್ಪ ವಿಳಂಬವಾಗಿ ಆರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Continue Reading

CONGRESS

ಮಂಗಳೂರಿನಲ್ಲಿ ಐತಿಹಾಸಿಕ ರಾಜ್ಯ ವಿಶೇಷ ಸಚಿವ ಸಂಪುಟ ಸಭೆ: ಸಿಎಂ ಹಾಗೂ ಸಚಿವರ ಭೇಟಿ ಮತ್ತು ಕಾರ್ಯಕ್ರಮಗಳ ವರದಿ

Published

on

ಮಂಗಳೂರು: ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ರಾಜ್ಯ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟ ಸಚಿವರು ಆಗಮಿಸಿದ್ದು, ನಗರದಲ್ಲಿ ಬಿರುಸಿನ ರಾಜಕೀಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಆರಂಭವಾಗಿವೆ.

ಕದ್ರಿ ದೇವಸ್ಥಾನ ಭೇಟಿ ಮತ್ತು ಗಾಂಧೀಜಿ ಸ್ಮರಣೆ

ಪ್ರವಾಸದ ಮೊದಲ ದಿನವಾದ ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿಗಳು ಐತಿಹಾಸಿಕ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, 1934ರಲ್ಲಿ ಮಹಾತ್ಮ ಗಾಂಧೀಜಿಯವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಳಿದುಕೊಂಡಿದ್ದ ಐತಿಹಾಸಿಕ ಮನೆಯ ಸಮೀಪವಿರುವ ಗಾಂಧಿ ಸ್ಕ್ವೇರ್ ಕೆಫೆಗೆ ತೆರಳಿದರು.

ಯುವ ಕಂಟೆಂಟ್‌ ಕ್ರಿಯೇಟರ್ಸ್‌ ಜೊತೆ ಉಪಾಹಾರ ಹಾಗೂ ಸಂವಾದ

ಮಂಗಳೂರಿನ ಯುವ ಸೋಶಿಯಲ್ ಮೀಡಿಯಾ ಕಂಟೆಂಟ್‌ ಕ್ರಿಯೇಟರ್‌ಗಳೊಂದಿಗೆ ಕೆಫೆಯಲ್ಲಿ ಸಾಂಪ್ರದಾಯಿಕ ಉಪಾಹಾರ ಸವಿಯುತ್ತಾ ಸಿಎಂ ಸಂವಾದ ನಡೆಸಿದರು. ಮಂಗಳೂರು ಬನ್ಸ್, ದೋಸೆ ಸೇರಿದಂತೆ ಕರಾವಳಿಯ ವಿಶಿಷ್ಟ ಉಪಾಹಾರಗಳನ್ನು ಸವಿದ ಅವರು, “ಇಲ್ಲಿಗೆ ಬಂದಿರುವುದು ಬಹಳ ಸಂತೋಷ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

ಜನರ ಬದುಕು ಮುಖ್ಯ – ಸಿಎಂ ಸ್ಪಷ್ಟನೆ

ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, “ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲೆಲ್ಲಿ ಕರೆದುಕೊಂಡು ಹೋಗುತ್ತಾರೋ ಅಲ್ಲಿಗೆ ಹೋಗುತ್ತೇನೆ. ಯಾರೂ ಗಾಬರಿಯಾಗಬೇಕಿಲ್ಲ; ನಮಗೆ ಜನರ ಬದುಕು ಮುಖ್ಯವೇ ಹೊರತು ಭಾವನೆಗಳ ಮೇಲೆ ರಾಜಕೀಯ ಮಾಡುವವರಲ್ಲ. ಎಲ್ಲರ ಚಿಂತನೆಯನ್ನೊಳಗೊಂಡು ನಮ್ಮ ಸರ್ಕಾರ ಕೆಲಸ ಮಾಡಲಿದೆ” ಎಂದು ಸ್ಪಷ್ಟಪಡಿಸಿದರು.

ಸಂಪುಟ ಸಭೆಗೆ ಭರ್ಜರಿ ಸ್ವಾಗತ ಮತ್ತು ಸಿದ್ಧತೆ

ಸಚಿವ ಸಂಪುಟ ಸಭೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಭವ್ಯ ಸ್ವಾಗತಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಪಂಪ್‌ವೆಲ್‌ನಿಂದ ಪಡೀಲ್ ವರೆಗೆ ಚೆಂಡೆ ಬ್ಯಾಂಡ್‌ಗಳು ಹಾಗೂ ವಿವಿಧ ವೇಷಧಾರಿಗಳ ಸಾಂಸ್ಕೃತಿಕ ತಂಡಗಳು ರಸ್ತೆಯುದ್ದಕ್ಕೂ ಗಮನ ಸೆಳೆದವು. ಡಿಸಿ ಕಚೇರಿ ಮುಂದೆ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದು, ಮುಖ್ಯಮಂತ್ರಿಗಳನ್ನು ಕಣ್ತುಂಬಿಕೊಳ್ಳಲು ರಸ್ತೆ ಬದಿ ಕಾದು ನಿಂತಿದ್ದಾರೆ.

Continue Reading

Trending

Copyright © 2025 Deevatige

error: Content is protected !!