Connect with us

court

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ/ಎಸ್‌ಟಿ ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Published

on

ನವದೆಹಲಿ: ಜಾತಿ ನಿಂದನೆಯು ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ನಡೆದಿದ್ದರೆ ಮಾತ್ರ ಅದನ್ನು ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ’ ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಅತ್ಯಂತ ಪ್ರಮುಖ ತೀರ್ಪು ನೀಡಿದೆ.

ಉತ್ತರ ಪ್ರದೇಶದ ಶಾಲಾ ಮ್ಯಾನೇಜರ್‌ ಒಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ದ್ವಿಪೀಠವು ಈ ಸ್ಪಷ್ಟನೆ ನೀಡಿದ್ದು, ಕಾಯ್ದೆಯ ಸೆಕ್ಷನ್ 3(1)(r) ಮತ್ತು 3(1)(s) ಅಡಿಯಲ್ಲಿ ಮ್ಯಾನೇಜರ್ ವಿರುದ್ಧ ನಡೆಯುತ್ತಿದ್ದ ಕಾನೂನು ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.

ತೀರ್ಪಿನ ಪ್ರಮುಖ ಅಂಶಗಳು

ಸಾರ್ವಜನಿಕ ಸ್ಥಳದ ವ್ಯಾಖ್ಯಾನ: ಕಾಯ್ದೆಯ ಅಡಿಯಲ್ಲಿ ‘ಸಾರ್ವಜನಿಕ ವೀಕ್ಷಣೆಯ ವ್ಯಾಪ್ತಿಯಲ್ಲಿರುವ ಸ್ಥಳ’ ಎಂದರೆ, ಆರೋಪಿಯು ಆಡಿದ ಮಾತುಗಳನ್ನು ಸಾರ್ವಜನಿಕರು ನೋಡಲು ಅಥವಾ ಕೇಳಲು ಸಾಧ್ಯವಾಗುವ ತೆರೆದ ಸ್ಥಳವಾಗಿರಬೇಕು.

ನಾಲ್ಕು ಗೋಡೆಗಳ ಮಧ್ಯದ ಘಟನೆ ಅನ್ವಯಿಸಲ್ಲ: ಸಾರ್ವಜನಿಕರ ಉಪಸ್ಥಿತಿ ಇಲ್ಲದೆ, ಮುಚ್ಚಿದ ಕೊಠಡಿ ಅಥವಾ ನಾಲ್ಕು ಗೋಡೆಗಳ ಮಧ್ಯೆ ನಡೆದ ಘಟನೆಯನ್ನು ‘ಸಾರ್ವಜನಿಕ ವೀಕ್ಷಣೆಯ ಸ್ಥಳ’ ಎಂದು ಪರಿಗಣಿಸಲು ಸಾಧ್ಯವಿಲ್ಲ.

ನಿರ್ದಿಷ್ಟ ಆಧಾರಗಳ ಕೊರತೆ: ಪ್ರಸ್ತುತ ಪ್ರಕರಣದಲ್ಲಿ FIR ಹಾಗೂ ಪ್ರಾಸಿಕ್ಯೂಷನ್ ದಾಖಲೆಗಳು ಕೇವಲ ಗಲಾಟೆಯನ್ನು ದೃಢಪಡಿಸುತ್ತವೆಯೇ ಹೊರತು, ಮ್ಯಾನೇಜರ್ ನಿರ್ದಿಷ್ಟವಾಗಿ ಜಾತಿ ನಿಂದನೆ ಮಾಡಿದ್ದಾರೆ ಎಂಬುದಕ್ಕೆ ಸೂಕ್ತ ಪುರಾವೆಗಳಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ

2020ರ ಜನವರಿಯಲ್ಲಿ ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವೆ ಜಗಳವಾಗಿತ್ತು. ಇದನ್ನು ಪ್ರಶ್ನಿಸಲು ಹೋದ ವಿದ್ಯಾರ್ಥಿಯ ತಂದೆಯ ಮೇಲೆ ಶಾಲಾ ಮ್ಯಾನೇಜರ್ ಮತ್ತು ಸಿಬ್ಬಂದಿ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ FIR ದಾಖಲಿಸಲಾಗಿತ್ತು.

ಆದರೆ, ಘಟನೆ ನಡೆದಿದೆ ಎನ್ನಲಾದ ಕೊಠಡಿಯು ಮುಚ್ಚಲ್ಪಟ್ಟಿದ್ದು, ಯಾವುದೇ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ ಹಾಗೂ ಸಾಕ್ಷಿಗಳು ನಿಂದನೆಯನ್ನು ಕೇಳಿಲ್ಲ ಎಂದು ಮ್ಯಾನೇಜರ್ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಅರ್ಜಿ ವಜಾಗೊಳಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಎಸ್‌ಸಿ/ಎಸ್‌ಟಿ ಕಾಯ್ದೆಯಡಿಯ ಪ್ರಕ್ರಿಯೆಗಳನ್ನು ರದ್ದುಗೊಳಿಸಿದ್ದು, ಪ್ರಕರಣದ ಇತರ ಸಾಧಾರಣ ಆರೋಪಗಳಿಗೆ ಸಂಬಂಧಿಸಿದ ಕಾನೂನು ವಿಚಾರಣೆಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

court

ವಕೀಲರ ರಕ್ಷಣೆಗಾಗಿ ಆಗ್ರಹ: ನಾಳೆ (ನವೆಂಬರ್ 3) ರಾಜ್ಯಾದ್ಯಂತ ನ್ಯಾಯಾಲಯ ಕಲಾಪಗಳಿಂದ ವಕೀಲರು ದೂರ ಉಳಿಯಲು ಕರೆ.

Published

on

​ಬೆಂಗಳೂರು: ವಕೀಲರ ಮೇಲೆ ನಡೆಯುತ್ತಿರುವ ಸರಣಿ ಹಲ್ಲೆಗಳು ಮತ್ತು ಕೊಲೆಗಳನ್ನು ಖಂಡಿಸಿ ಹಾಗೂ ಕಟ್ಟುನಿಟ್ಟಿನ ‘ವಕೀಲರ ರಕ್ಷಣಾ ಕಾಯ್ದೆ’ (Advocates Protection Act) ಜಾರಿಗೆ ಒತ್ತಾಯಿಸಿ, ದಿ ವಕೀಲರ ಅಸೋಸಿಯೇಷನ್ ಬೆಂಗಳೂರು (The Advocates’ Association, Bengaluru) ವತಿಯಿಂದ ನಾಳೆ ಅಂದರೆ ನವೆಂಬರ್ 3, 2026ರ ಮಂಗಳವಾರ ರಾಜ್ಯಾದ್ಯಂತ ನ್ಯಾಯಾಲಯ ಕಲಾಪಗಳಿಂದ ವಕೀಲರು ಸಂಪೂರ್ಣವಾಗಿ ದೂರ ಉಳಿದು (Abstain from work) ಪ್ರತಿಭಟಿಸಲು ಕರೆ ನೀಡಲಾಗಿದೆ.


​ಇತ್ತೀಚೆಗೆ ವೈಟ್‌ಫೀಲ್ಡ್‌ನ ವಕೀಲರಾದ ಮಂಜುನಾಥ್ ಮತ್ತು ಅನ್ನಪೂರ್ಣೇಶ್ವರಿ ನಗರದ ಶ್ರೀರಾಮ್ ಅವರ ಬರ್ಬರ ಕೊಲೆ ಹಾಗೂ ಗೌರಿಬಿದನೂರಿನ ವಕೀಲ ವೆಂಕಟರಮಣ ಸನ್ನಕಿ ಅವರ ಮೇಲಿನ ಹತ್ಯೆ ಯತ್ನದ ಘಟನೆಗಳನ್ನು ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದೆ. ವಕೀಲರಿಗೆ ವೃತ್ತಿಯಲ್ಲಿ ಸೂಕ್ತ ಭದ್ರತೆ ಇಲ್ಲದಿರುವುದನ್ನು ವಿರೋಧಿಸಿ ಮತ್ತು ವಕೀಲರ ರಕ್ಷಣಾ ಕಾಯ್ದೆಯನ್ನು ಬಲಪಡಿಸುವಂತೆ ಒತ್ತಾಯಿಸಿ ಅಕ್ಟೋಬರ್ 29ರಂದು ನಡೆದ ಸರ್ವಸಭೆಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
​ಈ ಹಿನ್ನೆಲೆಯಲ್ಲಿ, ನವೆಂಬರ್ 3ರಂದು ಮಂಗಳವಾರದಂದು ಕರ್ತವ್ಯದಿಂದ ದೂರ ಉಳಿಯುವಂತೆ ನಿರ್ಧರಿಸಲಾಗಿದ್ದು, ರಾಜ್ಯದ ಎಲ್ಲಾ ವಕೀಲರ ಸಂಘಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಪ್ರವೀಣ್ ಗೌಡ, ಉಪಾಧ್ಯಕ್ಷ ಗಿರೀಶ್ ಕುಮಾರ್ ಸಿ.ಎಸ್. ಹಾಗೂ ಖಚಾಂಚಿ ಶ್ವೇತಾ ರವಿಶಂಕರ್ ಮನವಿ ಮಾಡಿದ್ದಾರೆ

Continue Reading

Bantawala

ಫರಂಗಿಪೇಟೆ ಸ್ಟುಡಿಯೋ ಮಾಲೀಕರ ಮೇಲೆ ಕೊಲೆಯತ್ನ ಪ್ರಕರಣ: ನಾಲ್ವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ, ದಂಡ

Published

on

ಮಂಗಳೂರು: ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಸ್ಟುಡಿಯೋ ಮಾಲೀಕರೊಬ್ಬರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಒಟ್ಟು ₹88,000 ದಂಡ ವಿಧಿಸಿ ತೀರ್ಪು ನೀಡಿದೆ.

ಮಹಮ್ಮದ್ ಸೈಫುದಿನ್, ಮಹಮ್ಮದ್ ಅರ್ಷಾದ್, ಅಬ್ದುಲ್ ರಹಿಮಾನ್ ಅಲಿಯಾಸ್ ಮುನ್ನಿ ಹಾಗೂ ಮಹಮ್ಮದ್ ಸವಾದ್ ಶಿಕ್ಷೆಗೆ ಗುರಿಯಾದ ಆರೋಪಿಗಳು.

ಘಟನೆಯ ವಿವರ:

2020ರ ಅಕ್ಟೋಬರ್ 28ರಂದು ಸಂಜೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಈ ಘಟನೆ ನಡೆದಿತ್ತು. ಸ್ಥಳೀಯ ಸ್ಟುಡಿಯೋ ಮಾಲೀಕ ದಿನೇಶ್ ಅವರು ತಮ್ಮ ಅಂಗಡಿಯಲ್ಲಿದ್ದ ವೇಳೆ, ಪೂರ್ವದ್ವೇಷದ ಹಿನ್ನೆಲೆಯಲ್ಲಿ ಅಲ್ಲಿಗೆ ಬಂದ ಆರೋಪಿಗಳು ಕತ್ತಿಯಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2020ರ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ (IPC) ಕಲಂ 307 (ಕೊಲೆಯತ್ನ), 324, 326, 504, 506 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಮತ್ತು ನ್ಯಾಯಾಲಯದ ತೀರ್ಪು:

ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಬಂಟ್ವಾಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ (PSI) ಪ್ರಸನ್ನ ಎಂ.ಎಸ್. ಅವರು ನಾಲ್ವರನ್ನೂ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಆರೋಪಿಗಳ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ 2026ರ ಅಕ್ಟೋಬರ್ 28ರಂದು ತೀರ್ಪು ಪ್ರಕಟಿಸಿದ್ದು, ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ₹88 ಸಾವಿರ ದಂಡ ವಿಧಿಸಿದ್ದಾರೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ನಾಯಕ್ ಅವರು ವಾದ ಮಂಡಿಸಿದ್ದರು.

Continue Reading

BJP

ಸುಪ್ರೀಂ ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಪ್ರಶಾಂತ್ ಭೂಷಣ್ ಆಗ್ರಹ

Published

on

ಹೊಸದೆಹಲಿ: ಸುಪ್ರೀಂ ಕೋರ್ಟ್‌ಗೆ ಸುಳ್ಳು ಅಫಿಡವಿಟ್ ಸಲ್ಲಿಸಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಆಗ್ರಹಿಸಿದ್ದಾರೆ.

ಚುನಾವಣಾ ಆಯೋಗ (ಇಸಿ) ಕೈಗೊಂಡ ಎಲ್ಲಾ ನಿರ್ಧಾರಗಳಿಗೂ ಸಂಪೂರ್ಣ ಆಯೋಗದ (ಮೂವರೂ ಆಯುಕ್ತರ) ಅನುಮೋದನೆ ಇತ್ತು ಎಂದು ಸುಪ್ರೀಂ ಕೋರ್ಟ್‌ಗೆ ನೀಡಿರುವ ಪ್ರಮಾಣಪತ್ರ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಎಂದು ಅವರು ಆರೋಪಿಸಿದ್ದಾರೆ.

‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಉಲ್ಲೇಖಿಸಿ ಆರೋಪ

“ಅಫಿಡವಿಟ್‌ನಲ್ಲಿ ಚುನಾವಣಾ ಆಯೋಗ ಹೇಳಿರುವುದು ಸಂಪೂರ್ಣ ಅಸತ್ಯ. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ದಿನಪತ್ರಿಕೆ ಬಹಿರಂಗಪಡಿಸಿರುವ ವರದಿಯ ಪ್ರಕಾರ, ಇತರ ಚುನಾವಣಾ ಆಯುಕ್ತರು ದಾಖಲಿಸಿರುವ ಭಿನ್ನಾಭಿಪ್ರಾಯದ ಟಿಪ್ಪಣಿಗಳು ಹಾಗೂ ಅವರು ಕ್ಯಾಬಿನೆಟ್ ಕಾರ್ಯದರ್ಶಿಗೆ ಸಲ್ಲಿಸಿರುವ ದೂರುಗಳೇ ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ” ಎಂದು ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಆಯೋಗದ ಸಮರ್ಥನೆ

ಸಾಮಾಜಿಕ ಕಾರ್ಯಕರ್ತ ರಾಕೇಶ್ ಕುಮಾರ್ ಸಿಂಗ್ ಅವರು ಚುನಾವಣಾ ಆಯೋಗದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸೋಮವಾರ (ಅಕ್ಟೋಬರ್ 26) ಉತ್ತರಿಸಿದ ಆಯೋಗವು, “ಎಲ್ಲಾ ನಿರ್ಧಾರಗಳನ್ನು ಮುಖ್ಯ ಚುನಾವಣಾ ಆಯುಕ್ತರು ಸೇರಿದಂತೆ ಮೂವರು ಆಯುಕ್ತರ ಒಮ್ಮತದ ತೀರ್ಮಾನದಿಂದಲೇ ತೆಗೆದುಕೊಳ್ಳಲಾಗಿದೆ” ಎಂದು ಪ್ರಮಾಣಪತ್ರ ಸಲ್ಲಿಸಿತ್ತು.

ಅಲ್ಲದೆ, “ಆಯುಕ್ತರು ವ್ಯಕ್ತಪಡಿಸುವ ಅವಲೋಕನಗಳು, ಸಲಹೆಗಳು ಮತ್ತು ಪ್ರಶ್ನೆಗಳು ಅವರ ವೈಯಕ್ತಿಕ ಅಭಿಪ್ರಾಯಗಳಷ್ಟೇ ಹೊರತು, ಅವು ಆಯೋಗದ ಅಂತಿಮ ನಿರ್ಧಾರಗಳಲ್ಲ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಕಾನೂನುಬದ್ಧವಾಗಿದ್ದು, ಅರ್ಜಿದಾರರ ಆರೋಪಗಳು ತಪ್ಪು ತಿಳುವಳಿಕೆಯಿಂದ ಕೂಡಿವೆ” ಎಂದು ಆಯೋಗ ವಾದಿಸಿತ್ತು.

10 ತಿಂಗಳಲ್ಲಿ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದ ಆಯುಕ್ತರು

ಆದರೆ, ಮಾಧ್ಯಮ ವರದಿಗಳ ಪ್ರಕಾರ, ಕಳೆದ 10 ತಿಂಗಳುಗಳಲ್ಲಿ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ತಮಗೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡದೆ ಆಯೋಗದ ಹೆಸರಿನಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆಕ್ಷೇಪಿಸಿ ಸುಮಾರು 14 ಬಾರಿ ಆಕ್ಷೇಪಣಾ ಟಿಪ್ಪಣಿಗಳನ್ನು ದಾಖಲಿಸಿದ್ದಾರೆ. ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಪ್ರಶಾಂತ್ ಭೂಷಣ್ ಅವರು ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!