Connect with us

INCIDENT

ಸಾಮಾಜಿಕ ಜಾಲತಾಣ ವಾಗ್ವಾದಕ್ಕೆ ತೆರೆ: ಪುತ್ತೂರು ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ

Published

on

ಪುತ್ತೂರು: ಕೆಲವು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ತೀವ್ರ ವಾಗ್ವಾದ ಹಾಗೂ ಆರೋಪ-ಪ್ರತ್ಯಾರೋಪಗಳ ಸರಣಿಯು ಕೊನೆಗೆ ಶ್ರೀ ಕ್ಷೇತ್ರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಶಮನಗೊಂಡಿದೆ.

‘ಅರುಣ್ ಕುಮಾರ್ ಪುತ್ತಿಲ ಫ್ಯಾನ್ಸ್ ಕ್ಲಬ್’ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾಗಿದ್ದ ಪೋಸ್ಟ್‌ ಒಂದಕ್ಕೆ ಪ್ರವೀಣ್ ಆಚಾರ್ಯ ಎಂಬ ಖಾತೆಯಿಂದ ಹಲವು ಆರೋಪಗಳನ್ನು ಮಾಡಲಾಗಿತ್ತು. ಪುತ್ತಿಲ ಪರಿವಾರದ ಪ್ರಮುಖರೊಬ್ಬರಿಗೆ ಸಂಬಂಧಿಸಿದ ಡಬ್ಬಿ, ರಸೀದಿ ಹಾಗೂ ಹಣದ ವ್ಯವಹಾರದ ವಿಚಾರಗಳು ಈ ಚರ್ಚೆಗೆ ಕಾರಣವಾಗಿದ್ದವು. ಈ ವಿಷಯವು ಬೆಳೆದು ಪುತ್ತಿಲ ಪರಿವಾರದ ಮನೀಶ್ ಕುಲಾಲ್ ಹಾಗೂ ಬೆಳ್ಳಾರೆಯ ಶ್ರೀರಾಮ ಸೇನೆಯ ಮಾಜಿ ಸಂಚಾಲಕ ಉದಯ ಪಾಟಾಳಿ ನಡುವೆ ವಾಕ್ಸಮರಕ್ಕೆ ತಿರುಗಿ, ಕೊನೆಗೆ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡುವ ಹಂತಕ್ಕೆ ತಲುಪಿತ್ತು. ಎರಡೂ ಕಡೆಯವರು ಆ. 20ರಂದು ಸಮಯ ನಿಗದಿಪಡಿಸಿಕೊಂಡಿದ್ದರು.

ಅರ್ಚಕರ ಸಮ್ಮುಖದಲ್ಲಿ ಪ್ರಾರ್ಥನೆ: ನಿಗದಿತ ಸಮಯದಂತೆ ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಎರಡೂ ತಂಡಗಳ ಪ್ರಮುಖರಿಗೆ ಅರ್ಚಕ ವಿ.ಎಸ್. ಭಟ್ ಅವರು ಮಾರ್ಗದರ್ಶನ ನೀಡಿ, “ವಿವಾದವನ್ನು ಮತ್ತಷ್ಟು ಬೆಳೆಸುವುದು ಬೇಡ. ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ದೇವರೆ ನೋಡಿಕೊಳ್ಳಲಿ” ಎಂದು ಸೂಚಿಸಿ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಹಾಗೂ ಉದಯ್ ಪಾಟಾಳಿ ಪಿ ಬೆಳ್ಳಾರೆ ಅವರ ಸಮ್ಮುಖದಲ್ಲಿ ಈ ಪ್ರಾರ್ಥನೆ ನಡೆಯಿತು. ಈ ಸಂದರ್ಭದಲ್ಲಿ ಮನೀಶ್ ಕುಲಾಲ್, ಅನಿಲ್ ತೆಂಕಿಲ, ದೀಕ್ಷಿತ್ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರಾರ್ಥನೆಯ ಬಳಿಕ ದೇವಸ್ಥಾನದ ಆವರಣದ ಹೊರಭಾಗದಲ್ಲಿ ಕೆಲ ಕಾಲ ಮಾತಿನ ಚಕಮಕಿ ನಡೆದ ವಿಡಿಯೋ ಕೂಡ ವೈರಲ್ ಆಗಿದೆ.

ಪರ್ಸನಲ್ ಮ್ಯಾಟರ್ – ಮನೀಶ್ ಕುಲಾಲ್ ಸ್ಪಷ್ಟನೆ: ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಮನೀಶ್ ಕುಲಾಲ್, “ಇದು ಸಂಪೂರ್ಣ ನಮ್ಮ ವೈಯಕ್ತಿಕ ವಿಷಯ. ಫೇಸ್‌ಬುಕ್‌ನಲ್ಲಿ ಉಂಟಾಗಿದ್ದ ಗೊಂದಲವನ್ನು ಅಲ್ಲಿಗೆ ಮುಗಿಸಿದ್ದೇವೆ. ಇದನ್ನು ದೊಡ್ಡ ವಿಷಯ ಮಾಡುವುದು ಬೇಡ,” ಎಂದು ತಿಳಿಸಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

crime

ಕುಕ್ಕೆ ಸುಬ್ರಹ್ಮಣ್ಯ: ನದಿಗೆ ಹಾರಿದ ಮಹಿಳೆಗೆ ಮೊಸಳೆ ಕಚ್ಚಿದ್ದೇ ಜೀವದಾನ!

Published

on

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಮೊಸಳೆ ದಾಳಿಯಿಂದ ಭಯಗೊಂಡು ಚೀರಾಟ – ಸ್ಥಳೀಯರ ಸಮಯಪ್ರಜ್ಞೆಯಿಂದ ಸುರಕ್ಷಿತ ರಕ್ಷಣೆ

ಮಂಗಳೂರು: ಕೌಟುಂಬಿಕ ಮನಸ್ತಾಪದಿಂದ ಬೇಸತ್ತು ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರು ಮೊಸಳೆಯ ದಾಳಿಯಿಂದಾಗಿ ಜೀವ ಉಳಿಸಿಕೊಂಡಿರುವ ಅಚ್ಚರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸೇತುವೆ ಬಳಿ ನವೆಂಬರ್ 4ರ ತಡರಾತ್ರಿ ನಡೆದಿದೆ.

ಉಡುಪಿ ಮೂಲದ ಮಹಿಳೆಯೊಬ್ಬರು ಕೌಟುಂಬಿಕ ವಿಚಾರಗಳಿಂದ ಮನನೊಂದು ನವೆಂಬರ್ 4ರ ತಡರಾತ್ರಿ ಕುಮಾರಧಾರ ಸೇತುವೆಯ ಮೇಲಿನಿಂದ ನದಿಗೆ ಹಾರಿದ್ದಾರೆ. ಆದರೆ, ನೀರಿಗೆ ಧುಮುಕಿದ ತಕ್ಷಣವೇ ನದಿಯಲ್ಲಿದ್ದ ಮೊಸಳೆಯೊಂದು ಮಹಿಳೆಗೆ ಕಚ್ಚಿದೆ ಎನ್ನಲಾಗಿದೆ. ಮೊಸಳೆಯ ದಾಳಿಯಿಂದ ತೀವ್ರ ಭಯ ಹಾಗೂ ನೋವಿನಿಂದ ಕಂಗಾಲಾದ ಮಹಿಳೆ ನದಿಯ ಮಧ್ಯದಲ್ಲೇ ಜೋರಾಗಿ ಚೀರಾಡಲು ಆರಂಭಿಸಿದ್ದಾರೆ.

ಮಹಿಳೆಯ ಕಿರುಚಾಟ ಕೇಳಿದ ಸೇತುವೆ ಸಮೀಪದ ವಸತಿಗೃಹದ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣ ಟಾರ್ಚ್‌ ಹಿಡಿದು ನದಿಯ ದಂಡೆಯತ್ತ ಧಾವಿಸಿದ್ದಾರೆ. ಮಹಿಳೆಯ ನಿರಂತರ ಚೀರಾಟ ಹಾಗೂ ಜನರ ಆಗಮನದಿಂದ ಗಾಬರಿಗೊಂಡ ಮೊಸಳೆ ಆಕೆಯನ್ನು ಬಿಟ್ಟು ನೀರಿನಲ್ಲಿ ಮರೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಮಹಿಳೆಯನ್ನು ಸುರಕ್ಷಿತವಾಗಿ ನೀರಿನಿಂದ ಹೊರತೆಗೆದು ದಂಡೆಗೆ ಕರೆತಂದಿದ್ದಾರೆ.

ವಿಶೇಷವೆಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ನದಿಗೆ ಹಾರಿದ್ದ ಮಹಿಳೆ ಮೊಸಳೆಯ ದಾಳಿಯಿಂದ ಭಯಭೀತರಾಗಿ ಚೀರಾಡಿದ್ದೇ ಸ್ಥಳೀಯರ ಗಮನ ಸೆಳೆಯಲು ಕಾರಣವಾಗಿದೆ. ಹೀಗಾಗಿ ಮೊಸಳೆಯ ದಾಳಿಯೇ ಆಕೆಯ ಜೀವ ಉಳಿಸಲು ಪರೋಕ್ಷವಾಗಿ ಕಾರಣವಾಯಿತು ಎಂಬ ಅಚ್ಚರಿ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

ಘಟನೆಯ ಮಾಹಿತಿ ಪಡೆದ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೌಟುಂಬಿಕ ಮನಸ್ತಾಪದಿಂದ ಬೇಸತ್ತು ಉಡುಪಿಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ನದಿಗೆ ಹಾರಿರುವುದಾಗಿ ಮಹಿಳೆ ತಿಳಿಸಿದ್ದಾರೆ.

ಬಳಿಕ ಪೊಲೀಸರು ಉಡುಪಿಯಲ್ಲಿದ್ದ ಮಹಿಳೆಯ ಕುಟುಂಬಸ್ಥರನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಮಹಿಳೆಗೆ ಸೂಕ್ತ ಸಮಾಲೋಚನೆ ಹಾಗೂ ಕೌನ್ಸೆಲಿಂಗ್ ವ್ಯವಸ್ಥೆ ಕಲ್ಪಿಸಿ, ಕುಟುಂಬಸ್ಥರೊಂದಿಗೆ ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ.

ಸಾವಿನ ದವಡೆಯಿಂದ ಪಾರಾದ ಮಹಿಳೆ! ಮೊಸಳೆಯ ದಾಳಿ, ಮಹಿಳೆಯ ಚೀರಾಟ, ಸ್ಥಳೀಯರ ಸಮಯಪ್ರಜ್ಞೆ ಹಾಗೂ ಪೊಲೀಸರ ಮಧ್ಯಸ್ಥಿಕೆಯಿಂದಾಗಿ ಕೊನೆಗೂ ಮಹಿಳೆಯ ಜೀವ ಉಳಿದಿದೆ.

Continue Reading

AWARNESS

ಗೋಕರ್ಣ ಬೀಚಿನಲ್ಲಿ ರಜೆಯ ಮೋಜು..ಬೆಂಗಳೂರಿನ ಮೂವರು ಟೆಕ್ಕಿಗಳ ದುರ್ಮರಣ..

Published

on

ಉತ್ತರ ಕನ್ನಡ :
ಗೋಕರ್ಣದ ದುಬ್ಬಣಶಶಿ (ಡಬ್ಬನಶಶಿ) ಕಡಲತೀರದಲ್ಲಿ ಭಾನುವಾರ ಸಂಭವಿಸಿದ ಭೀಕರ ದುರಂತದಲ್ಲಿ ಬೆಂಗಳೂರು ಮೂಲದ ಖಾಸಗಿ ಕಂಪನಿಯ ಮೂವರು ಪ್ರವಾಸಿಗರು ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಮೃತರ ವಿವರ:
ಮೃತರನ್ನು ಬೆಂಗಳೂರಿನ ಬೆಳ್ಳಂದೂರಿನ ‘ಅಲೋರಿಕಾ’ ಕಂಪನಿಯ ಉದ್ಯೋಗಿಗಳಾದ ಶೋಭಾ ದಾಸ್ (22) (ಮೂಲತಃ ಜಾರ್ಖಂಡ್), ಮಹಮ್ಮದ್ ಅಕ್ರಮ್ (27) ಮತ್ತು ಸಮುದ್ರದಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ವಿಶ್ವೇಶ್ ಎ.ಕೆ. (24) ಎಂದು ಗುರುತಿಸಲಾಗಿದೆ. ಸೋಮವಾರದ ಹುಡುಕಾಟದ ಬಳಿಕ ವಿಶ್ವೇಶ್ ಅವರ ಮೃತದೇಹವೂ ಪತ್ತೆಯಾಗಿದೆ.

ಘಟನೆ ನಡೆದ ಹಿನ್ನೆಲೆ.
ಕಂಪನಿಯಿಂದ ಸಿಕ್ಕ ಬೋನಸ್ ಪಾರ್ಟಿ ಆಚರಿಸಲು ಈ ತಂಡ ಗೋಕರ್ಣಕ್ಕೆ ಪ್ರವಾಸ ಬಂದಿತ್ತು. ಭಾನುವಾರ ಬೆಳಿಗ್ಗೆ ಸುಮಾರು 7:30 ರ ಸುಮಾರಿಗೆ ತಂಡದ ಐವರು ಸದಸ್ಯರು ಸಮುದ್ರದಲ್ಲಿ ಈಜಲು ಇಳಿದಾಗ ಏಕಾಏಕಿ ಅಪ್ಪಳಿಸಿದ ಬಲವಾದ ಅಲೆಗಳ ಸುಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ.

ರಕ್ಷಣೆ ಮತ್ತು ಚಿಕಿತ್ಸೆ:
ಘಟನೆಯನ್ನು ಗಮನಿಸಿದ ರೆಸಾರ್ಟ್‌ನ ಜೀವರಕ್ಷಕ (ಲೈಫ್‌ಗಾರ್ಡ್) ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ತಕ್ಷಣ ಕಾರ್ಯಾಚರಣೆ ನಡೆಸಿ ನಾಲ್ವರನ್ನು ದಡಕ್ಕೆ ತಂದಿದ್ದರು. ಆದರೆ ಶೋಭಾ ದಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟರೆ, ಮಹಮ್ಮದ್ ಅಕ್ರಮ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದರು.

ಬದುಕುಳಿದವರು.
ಇದೇ ಘಟನೆಯಲ್ಲಿ ಸಿಲುಕಿದ್ದ ನಿಶಾಂತ್ ಡಿ.ವಿ. (26) ಮತ್ತು ಮಹಮದ್ ಖಾಸಿಂ ಎಂಬ ಇಬ್ಬರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Continue Reading

BANGALORE

ಪ್ರವಾಸಕ್ಕೆಂದು ಹೊರಟ ಸ್ನೇಹಿತರ ಗುಂಪು ಶವವಾಗಿ ವಾಪಸ್..ಉತ್ತರಾಖಂಡ ಹೆಲಿಕಾಪ್ಟರ್ ಪತನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ದುರಂತ ಅಂತ್ಯ

Published

on

ಬೆಂಗಳೂರು: ಉತ್ತರಾಖಂಡದ ಜೋಶಿಮಠ ಸಮೀಪ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಬೆಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್ ಸೇರಿದಂತೆ ಐವರು ಕನ್ನಡಿಗರು ಹಾಗೂ ಪೈಲಟ್ ಸೇರಿ ಒಟ್ಟು ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ.ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳ ದರ್ಶನಕ್ಕಾಗಿ ಬೆಂಗಳೂರಿನಿಂದ ಪ್ರವಾಸ ಕೈಗೊಂಡಿದ್ದ ಸ್ನೇಹಿತರ ಗುಂಪು ಈ ದುರಂತಕ್ಕೆ ಬಲಿಯಾಗಿದೆ. ಮೃತರನ್ನು ಸಿಸಿಬಿ ಇನ್‌ಸ್ಪೆಕ್ಟರ್ ಅರುಣ್ ಸಾಲಂಕೆ, ಹೆಚ್.ಎಸ್. ನಾಗರಾಜ್, ಪ್ರತಾಪ್, ಸುಧೀರ್ ಕೆ., ಶಂಕರೇಗೌಡ ಹಾಗೂ ಹೆಲಿಕಾಪ್ಟರ್ ಪೈಲಟ್ ಹಿಮಾಂಶು ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಧಾರ್ಮಿಕ ಪ್ರವಾಸಕ್ಕೆ ತೆರಳಿದ್ದ ಈ ಸ್ನೇಹಿತರ ತಂಡ ಕೇದಾರನಾಥ ಮತ್ತು ಬದರಿನಾಥ ದರ್ಶನ ಪೂರೈಸಿ, ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಕ್ಕೆ ಟ್ರಾನ್ಸ್ ಭಾರತ್ ಏವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿತ್ತು. ಮಧ್ಯಾಹ್ನ 1:14 ಕ್ಕೆ ಬದರಿನಾಥದಿಂದ ಟೇಕಾಫ್ ಆದ ಹೆಲಿಕಾಪ್ಟರ್, ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ರೇಡಾರ್ ಸಂಪರ್ಕ ಕಳೆದುಕೊಂಡಿದೆ. ಅಲ್ಲದೆ ಹೆಲಿಕಾಪ್ಟರ್‌ನ ಟ್ರ್ಯಾಕಿಂಗ್ ವ್ಯವಸ್ಥೆಯೂ ಸ್ಥಗಿತಗೊಂಡು, ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.ಅಪಘಾತದ ಕುರಿತು ಮಾಹಿತಿ ಪಡೆದ ಉತ್ತರಾಖಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತರ ಗುರುತು ಪತ್ತೆಹಚ್ಚಿದ್ದು, ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದಾರೆ. ಪ್ರವಾಸದ ಸಂಭ್ರಮದಲ್ಲಿದ್ದ ಸ್ನೇಹಿತರ ದುರಂತ ಸಾವು ಅವರ ಕುಟುಂಬಸ್ಥರು ಹಾಗೂ ಆಪ್ತರ ವಲಯದಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.

ತನಿಖೆಗೆ ಆದೇಶ – ಹಾರಾಟ ಸ್ಥಗಿತ:

ಘಟನೆ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಎಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ತಿಳಿಸಿದೆ. ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!