Connect with us

complaint

ಮಂಗಳೂರಿನ ಜಿ.ಆರ್. ಮೆಡಿಕಲ್ ಕಾಲೇಜಿನ MBBS ಸೀಟು ರದ್ದತಿಗೆ KEAಗೆ ಮನವಿ: ‘ನವ ಭಾರತ ಶಿಕ್ಷಾ ಪ್ರತಿಷ್ಠಾನ’ ಒತ್ತಾಯ

Published

on

ಬೆಂಗಳೂರು: ಮಂಗಳೂರಿನ ‘ಜಿ.ಆರ್. ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್’ (GRMCHRC) ನಲ್ಲಿರುವ 150 MBBS ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕೌನ್ಸೆಲಿಂಗ್ ಸೀಟ್ ಮ್ಯಾಟ್ರಿಕ್ಸ್‌ನಿಂದ ತಕ್ಷಣವೇ ರದ್ದುಗೊಳಿಸಬೇಕು ಅಥವಾ ತಡೆಹಿಡಿಯಬೇಕು ಎಂದು ‘ನವ ಭಾರತ ಶಿಕ್ಷಾ ಪ್ರತಿಷ್ಠಾನ’ದ ರಾಜ್ಯ ಸಂಯೋಜಕ ಡಾ. ಗೋವಿಂದರಾಜು ಕೆ. ಅವರು KEA ಕಾರ್ಯನಿರ್ವಾಹಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಮುಖ ಆರೋಪಗಳು ಮತ್ತು ಮನವಿಯ ಮುಖ್ಯಾಂಶಗಳು:

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ: ಈ ಹಿಂದೆ ಕಾಲೇಜಿನಲ್ಲಿ ಮೂಲಸೌಕರ್ಯ, ಶೈಕ್ಷಣಿಕ ಸೌಲಭ್ಯ ಹಾಗೂ ಸೂಕ್ತ ಬೋಧಕರ ಕೊರತೆ ಇದ್ದ ಕಾರಣ ಹೈಕೋರ್ಟ್ ಮಧ್ಯಪ್ರವೇಶಿಸಿ, ವಿದ್ಯಾರ್ಥಿಗಳನ್ನು ಬೇರೆ ಕಾಲೇಜುಗಳಿಗೆ ವರ್ಗಾಯಿಸಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ನಷ್ಟ, ಮಾನಸಿಕ ಶ್ರಮ ಮತ್ತು ಆರ್ಥಿಕ ನಷ್ಟ ಉಂಟಾಗಿದೆ.

NMC ನಿಯಮಗಳ ಉಲ್ಲಂಘನೆ: ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಮಾರ್ಗದರ್ಶಿ ಸೂತ್ರಗಳನ್ನು ಕಾಲೇಜು ಉಲ್ಲಂಘಿಸಿದೆ. ಆಸ್ಪತ್ರೆಯಲ್ಲಿ ಹೊರರೋಗಿಗಳ (OPD) ಸಂಖ್ಯೆ, ಹಾಸಿಗೆಗಳ ಭರ್ತಿ (Bed Occupancy), ಶಸ್ತ್ರಚಿಕಿತ್ಸಾ ಕೊಠಡಿಗಳ (OT) ಕಾರ್ಯನಿರ್ವಹಣೆ ಮತ್ತು ಚಿಕಿತ್ಸಾ ಸೌಲಭ್ಯಗಳು NMC ಮಾನದಂಡಗಳಿಗೆ ತಕ್ಕಂತೆ ಇಲ್ಲದಿರುವುದು ಕಂಡುಬಂದಿದೆ.

ಬೋಧಕರ ಕೊರತೆ: ಕಾಲೇಜು ಅತ್ಯಂತ ಗ್ರಾಮೀಣ ಭಾಗದಲ್ಲಿದ್ದು, ಉತ್ತಮ ವೈದ್ಯರು ಹಾಗೂ ಬೋಧಕರನ್ನು ನಿಯಮಿತ ಪ್ರಮಾಣದಲ್ಲಿ ಉಳಿಸಿಕೊಳ್ಳಲು ಸಂಸ್ಥೆ ಸಂಪೂರ್ಣ ವಿಫಲವಾಗಿದೆ.

ಪ್ರಮುಖ ಆಗ್ರಹಗಳು:

ಸೀಟುಗಳ ರದ್ದು: ಸಂಸ್ಥೆಯು NMC ಯಿಂದ ಸಂಪೂರ್ಣ ಅನುಮತಿ ಪಡೆಯುವವರೆಗೆ KEA ನಡೆಸುವ NEET UG ಕೌನ್ಸೆಲಿಂಗ್‌ನಲ್ಲಿ GRMCHRC ಯ MBBS ಸೀಟುಗಳನ್ನು ಸೇರಿಸಬಾರದು.

ಉನ್ನತ ಮಟ್ಟದ ತನಿಖೆ: ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರು ಮತ್ತು ತಜ್ಞರನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಿ, ಕಾಲೇಜು ಮತ್ತು ಆಸ್ಪತ್ರೆಗೆ ದಿಢೀರ್ ಪರಿಶೀಲನೆ (Surprise Inspection) ನಡೆಸಬೇಕು.

ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮತ್ತು ರಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (RGUHS) ಪ್ರತಿಯನ್ನು ರವಾನಿಸಲಾಗಿದ್ದು, ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳ ಹಿತರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಪುತ್ತೂರು: ಕೆದಿಲ ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂ. ಅಕ್ರಮ ಆರೋಪ – CEO ಸೇರಿ ಇಬ್ಬರ ವಿರುದ್ಧ FIR

Published

on

ಪುತ್ತೂರು/ಬಂಟ್ವಾಳ: ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ (ರಿ) ಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ಸಂಘದ CEO ಸೇರಿದಂತೆ ಇಬ್ಬರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಸಂಘದ ಅಧ್ಯಕ್ಷ ಪದ್ಮನಾಭ ಭಟ್ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು (PCR) ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಪುತ್ತೂರು ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಆರೋಪಿಗಳು:

ಕೇಶವ ಗೌಡ ಕೆ (A1) – CEO, ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ, ಕೆದಿಲ

ಸಮೀರಾ ರಿಯಾಝ್ (A2) – ಮಂಗಳೂರು, ಕದ್ರಿ ನಿವಾಸಿ

BNS ಕಾಯ್ದೆ ಅಡಿ ಪ್ರಕರಣ: ಭಾರತೀಯ ನ್ಯಾಯ ಸಂಹಿತಾ (BNS) 2023 ರ ಕಲಂ 316(5), 318(4), 336(3), 340(2) r/w 3(5) – ಅಂದರೆ ನಂಬಿಕೆ ದ್ರೋಹ, ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಸಂಚು ರೂಪಿಸಿ ಅಪರಾಧ ಎಸಗಿದ ಆರೋಪದಡಿ FIR ದಾಖಲಾಗಿದೆ.

ದೂರಿನಲ್ಲಿ ಏನಿದೆ?

ದೂರಿನ ಪ್ರಕಾರ, 01/04/2024 ರಿಂದ 31/03/2026 ರ ಅವಧಿಯಲ್ಲಿ ಸಂಘದ ವಹಿವಾಟಿನಲ್ಲಿ ಅಕ್ರಮ ನಡೆದಿದೆ.

ಸಂಘದಲ್ಲಿ ಒಟ್ಟು ರೂ. 31,21,84,821/- ಮೊತ್ತದ ವಹಿವಾಟಿನಲ್ಲಿ ಲೋಪದೋಷಗಳು ಕಂಡುಬಂದಿವೆ ಎಂದು ಲೆಕ್ಕ ಪರಿಶೋಧನೆಯಲ್ಲಿ ತಿಳಿದು ಬಂದಿದೆ.

2025-26 ನೇ ಸಾಲಿನ ಸಾಲ ವಿತರಣೆಯನ್ನು ಪರಿಶೀಲಿಸಿದಾಗ ಸುಮಾರು ರೂ. 6,86,00,000/- ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

CEO ಕೇಶವ ಗೌಡ ಅವರು CoBank ಸಾಫ್ಟ್‌ವೇರ್‌ನಲ್ಲಿ ಸದಸ್ಯರ ಹೆಸರಿನಲ್ಲಿ ಇಲ್ಲದ ಸಾಲಗಳನ್ನು ಸೃಷ್ಟಿಸಿ, ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂಬುದು ಆರೋಪ.

ಯೋಗೀಶ್ ಆಚಾರ್ಯ ಎಂಬುವವರ ಮೂಲಕ ಪರಿಚಯವಾದ ಸಮೀರಾ ರಿಯಾಝ್ ಅವರ ಹೆಸರಿನಲ್ಲಿ ರೂ. 1,67,00,000/- ಹಾಗೂ ಒಟ್ಟು ರೂ. 7,26,00,000/- ವರೆಗೆ ಸಾಲ ಮಂಜೂರು ಮಾಡಿ, ನಂತರ ಅವರಿಂದ ರೂ. 6,96,00,000/- ವನ್ನು ಮರುಪಾವತಿಯ ಹೆಸರಿನಲ್ಲಿ ವಸೂಲಿ ಮಾಡಿ ಹೊಂದಾಣಿಕೆ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂಘದ ಆಡಳಿತ ಮಂಡಳಿ ಮತ್ತು ಸಾಲಗಾರರ ಸಭೆಯ ನಡಾವಳಿ ಪುಸ್ತಕದಲ್ಲಿ ತಿದ್ದುಪಡಿ ಮಾಡಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದೂ ಆರೋಪಿಸಲಾಗಿದೆ.

ಈ ಬಗ್ಗೆ ಸಂಘದ ಆಡಳಿತ ಮಂಡಳಿ ಪರಿಶೀಲನೆ ನಡೆಸಿ, ಬ್ಯಾಂಕಿನ ನಿರ್ದೇಶಕರಿಗೆ ದೂರು ನೀಡಿತ್ತು. ನಂತರ ಅಧ್ಯಕ್ಷರು ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣವನ್ನು ಪುತ್ತೂರು ನ್ಯಾಯಾಲಯಕ್ಕೆ 27/10/2026 ರಂದು ಸಂಜೆ 6:30 ಕ್ಕೆ ಹಾಜರುಪಡಿಸಲಾಗಿದ್ದು, ತನಿಖೆಯನ್ನು ASI ವಾಸು ನಾಯ್ಕ ಎಂ ಅವರು ನಡೆಸುತ್ತಿದ್ದಾರೆ. ಪಿಸಿ ಹೆಚ್.ಸಿ ಶಿವಕುಮಾರ್ ನಾಯ್ಕ್ (2278) ಅವರು FIR ಅನ್ನು ನ್ಯಾಯಾಲಯಕ್ಕೆ ತಲುಪಿಸಿದ್ದಾರೆ.

ಸಮೀರಾ ರಿಯಾಜ್ ಅವರು ಪ್ರತಿದಿನ ಕೇಶವ ಗೌಡ ಅವರಿಗೆ ಫೋನ್ ಕರೆ ಮಾಡಿ “ನನಗೆ ಹಣ ನೀಡಬೇಕು, ನೀಡದಿದ್ದರೆ ನಿನ್ನ ವಿರುದ್ಧ ಸುಳ್ಳು ಕಥೆ ಕಟ್ಟಿ ಮಾನ ಹರಾಜು ಹಾಕುತ್ತೇನೆ” ಎಂದು ಮಾನಸಿಕ ಕಿರುಕುಳ ಮತ್ತು ಬ್ಲಾಕ್‌ಮೇಲ್ ಮಾಡಿದ್ದಾರೆ. ಇದಕ್ಕೆ ಹೆದರಿ ಕೇಶವ ಗೌಡ ಅವರು ಹಂತ ಹಂತವಾಗಿ ಒಟ್ಟು ರೂ. 7,26,00,000/- ವನ್ನು ಸಮೀರಾ ರಿಯಾಜ್ ಅವರಿಗೆ ವರ್ಗಾಯಿಸಿರುವುದಾಗಿ ತಿಳಿಸಿದ್ದಾರೆ ಎಂದು FIR ನಲ್ಲಿ ಉಲ್ಲೇಖವಿದೆ.

4. ನಕಲಿ ದಾಖಲೆ ಸೃಷ್ಟಿಯ ಆರೋಪ – ಅತ್ಯಂತ ಗಂಭೀರ ಅಂಶ:
ಪಿರ್ಯಾದಿದಾರರು ಮತ್ತು ಬ್ಯಾಂಕಿನ ನಿರ್ದೇಶಕರು ಬ್ಯಾಂಕಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ ಇನ್ನಷ್ಟು ಅಕ್ರಮಗಳು ಬಯಲಾಗಿವೆ ಎಂದು ದೂರಿನಲ್ಲಿ ಹೇಳಲಾಗಿದೆ.

ಕೇಶವ ಗೌಡ ಕೆ ಅವರು ಪಿರ್ಯಾದಿದಾರರ ಸಹಕಾರಿ ಸಂಘಕ್ಕೆ ಮೋಸ ಮತ್ತು ವಂಚನೆ ಮಾಡುವ ಉದ್ದೇಶದಿಂದ ಸಾಲಗಾರರ ಸಾಲದ ಅರ್ಜಿಗಳನ್ನು ನಕಲಿಯಾಗಿ ಸೃಷ್ಟಿಸಿ, ಮಂಜೂರಾತಿ ಮಾಡಿರುವ ಆಡಳಿತ ಮಂಡಳಿಯ ಸಭಾ ನಡಾವಳಿ ಪುಸ್ತಕದ ಹಾಳೆಗಳನ್ನು, ಸಾಲಗಾರರ ಅರ್ಜಿ ಮತ್ತು ಪೂರಕ ದಾಖಲೆಗಳನ್ನು ತಿದ್ದುಪಡಿ ಮಾಡಿ, ನಡಾವಳಿಗೆ ಅಧ್ಯಕ್ಷರು ಮತ್ತು ನಿರ್ದೇಶಕರು ಸಹಿ ಮಾಡಿದ ನಂತರ ತನ್ನ ಅನುಕೂಲಕ್ಕೆ ಹೆಚ್ಚುವರಿಯಾಗಿ ಪಿರ್ಯಾದಿದಾರರ ಅನುಮತಿ ಇಲ್ಲದೆ ಬರೆದು ನಕಲಿ ಸಹಿ ಮಾಡಿದ್ದಾರೆ.

ಸಾಲದ ಅರ್ಜಿಯಲ್ಲಿ ವಕೀಲರ ಲೀಗಲ್ ಒಪಿನಿಯನ್ ಪತ್ರವನ್ನು ನಕಲಿಯಾಗಿ ಸೃಷ್ಟಿಸಿ, ಹಳೆಯ ಲೀಗಲ್ ಒಪಿನಿಯನ್ ಪತ್ರಗಳನ್ನು ಹೊಸ ಸಾಲಗಾರರ ಅರ್ಜಿಗೆ ಇಟ್ಟು ವಕೀಲರ ನಕಲಿ ಸಹಿ ಹಾಕಿದ್ದಾರೆ.
ಸಂಘದ ಕಾನೂನಿನ ಪ್ರಕಾರ ಮಂಜೂರು ಮಾಡಿದ ಸಾಲಗಳನ್ನು ತದನಂತರ ತಿದ್ದುಪಡಿ ಮಾಡಿ ಫೋರ್ಜರಿ ಸಹಿಗಳನ್ನು ಹಾಕಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ.

ಅಷ್ಟೇ ಅಲ್ಲ, ಸಭಾ ನಡಾವಳಿ ಪುಸ್ತಕದಲ್ಲಿ ದಿನಾಂಕಗಳನ್ನು, ಮೊತ್ತಗಳನ್ನು ತಿದ್ದುಪಡಿ ಮಾಡಿ, ಯಾವುದೇ ಇನಿಷಿಯಲ್ ಕೂಡ ಹಾಕದೇ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಪಿರ್ಯಾದಿದಾರರು ಸಹಿ ಮಾಡಿದ ನಂತರ ತಾವೇ ಹೆಚ್ಚುವರಿಯಾಗಿ ನಡಾವಳಿಗಳನ್ನು ಬರೆದಿರುವುದು ಕಂಡುಬಂದಿದೆ.

ಈ ಕೃತ್ಯವನ್ನು 2024 ರಿಂದಲೇ ಕೇಶವ ಗೌಡ ಅವರು ಸಮೀರಾ ರಿಯಾಜ್ ರವರಿಗೆ ಹಣ ನೀಡುವ ಉದ್ದೇಶದಿಂದ ಮಾಡುತ್ತಿರುವುದು ಕಂಡುಬಂದಿದೆ ಎಂದು FIR ನಲ್ಲಿ ವಿವರಿಸಲಾಗಿದೆ.

ಈ ಎಲ್ಲಾ ಕೃತ್ಯದಿಂದ ಪಿರ್ಯಾದಿದಾರರ ಸಂಘಕ್ಕೆ ರೂ. 6,86,00,000/- ವಂಚನೆಯಾಗಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿತ್ತು. ಪೊಲೀಸರು ಪ್ರಕರಣವನ್ನು Investigation ಹಂತಕ್ಕೆ ತೆಗೆದುಕೊಂಡಿದ್ದು, ತನಿಖೆ ಮುಂದುವರಿದಿದೆ.

Continue Reading

complaint

ವಿಟ್ಲ: ಪರವಾನಿಗೆ ಇಲ್ಲದೆ ವಸತಿ ಪ್ರದೇಶದಲ್ಲಿ ಹೋಟೆಲ್ ನಿರ್ಮಾಣ; ಪಟ್ಟಣ ಪಂಚಾಯತ್‌ನಿಂದ ಕಟ್ಟುನಿಟ್ಟಿನ ನೋಟೀಸ್ ಜಾರಿ! ಮುಂದುವರಿಯುತ್ತಿರುವ ಕಾಮಗಾರಿ ?

Published

on

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ಅನುಮತಿ ಪಡೆಯದೆ, ವಸತಿ ಉದ್ದೇಶದ ಜಮೀನಿನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಶೀಟ್ ಅಳವಡಿಸಿ ಹೋಟೆಲ್ ನಿರ್ಮಾಣ ಮಾಡುತ್ತಿರುವ ಅನಧಿಕೃತ ಕಾಮಗಾರಿಯ ವಿರುದ್ಧ ಪಟ್ಟಣ ಪಂಚಾಯತ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕಾಮಗಾರಿ ಮಾತ್ರ ಸದ್ದಿಲ್ಲದೆ ನಡೆಯುತ್ತಲೇ ಇದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಘಟನೆಯ ವಿವರ:

ವಿಟ್ಲದ ಅಡ್ಡದಬೀದಿ ನಿವಾಸಿ ಶ್ರೀ ಸಂತೋಷ್ ಕುಮಾರ್ ಅವರು ತಮ್ಮ ಮನೆಯ ಹತ್ತಿರ ವಸತಿ ಉದ್ದೇಶದ ಜಮೀನಿನಲ್ಲಿ ಶೀಟ್ ಅಳವಡಿಸಿ ಹೋಟೆಲ್ ಹಾಗೂ ವಾಣಿಜ್ಯ ಉದ್ದೇಶದ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇದರಿಂದ ಸದರಿ ಪ್ರದೇಶ ಕಲುಷಿತಗೊಳ್ಳುತ್ತಿದೆ ಎಂದು ಸ್ಥಳೀಯರಾದ ಶ್ರೀ ಅಬ್ದುಲ್ ರವರು 2026ರ ಆಗಸ್ಟ್ 04 ರಂದು ವಿಟ್ಲ ಪಟ್ಟಣ ಪಂಚಾಯತ್‌ಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಎಚ್ಚೆತ್ತ ಪಂಚಾಯತ್ ಆಡಳಿತವು, ತಮ್ಮ ಕಚೇರಿಯ ಕಿರಿಯ ಅಭಿಯಂತರರಿಂದ ಸ್ಥಳ ಪರಿಶೀಲನೆ ನಡೆಸಿ 2026ರ ಸೆಪ್ಟೆಂಬರ್ 01 ರಂದು ವರದಿ ಪಡೆದುಕೊಂಡಿದೆ.

ಪಂಚಾಯತ್‌ನಿಂದ ಎಚ್ಚರಿಕೆ ಹಾಗೂ ಸೂಚನೆ:

ವರದಿಯ ಆಧಾರದ ಮೇಲೆ ಶ್ರೀ ಸಂತೋಷ್ ಕುಮಾರ್ ಅವರಿಗೆ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಯು ನೋಟೀಸ್ ಜಾರಿ ಮಾಡಿದ್ದು, ಕೂಡಲೇ ಶೀಟ್ ಅಳವಡಿಸುವ ಹಾಗೂ ನಿರ್ಮಾಣ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಆದರೆ ಪಟ್ಟಣ ಪಂಚಾಯತ್‌ ಕೃಪಾಕಟಾಕ್ಷದಲ್ಲಿ ಕಾಮಗಾರಿ ನಡೆಯುತ್ತಲೇ ಇದೆ ಎಂದು ದೂರುದಾರರು ಆಕ್ರೋಶಿತರಾಗಿದ್ದಾರೆ.

ಯಾವುದೇ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಲು ನಿಯಮಾನುಸಾರ ಸೂಕ್ತ ದಾಖಲೆಗಳೊಂದಿಗೆ ಕಚೇರಿಯಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು. ತಪ್ಪಿದಲ್ಲಿ, 1964ರ ಪುರಸಭಾ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟೀಸ್‌ನಲ್ಲಿ ಕಟ್ಟು ನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ.

Continue Reading

complaint

ಸಿದ್ದರಾಮಯ್ಯಗೆ ಬಿಗ್ ರಿಲೀಫ್: ವೈರಲ್ ಸ್ಟಿಂಗ್ ವಿಡಿಯೋ ಸ್ಕ್ರಿಪ್ಟೆಡ್ ಎಂದು ಒಪ್ಪಿಕೊಂಡ ಮಹಿಳೆ!

Published

on

ಬೆಂಗಳೂರು / ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ವೈರಲ್ ಸ್ಟಿಂಗ್ ಆಪರೇಷನ್ ವಿಡಿಯೋ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆಯೇ ಇದು ಸೃಷ್ಟಿಕರ್ತರು ಬರೆದುಕೊಟ್ಟ ಸ್ಕ್ರಿಪ್ಟ್ ಎಂದು ಒಪ್ಪಿಕೊಂಡಿದ್ದು, ಸಿದ್ದರಾಮಯ್ಯಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಪೊಲೀಸರ ಮುಂದೆ ಸಂತ್ರಸ್ತೆ ನೀಡಿದ ಹೇಳಿಕೆಯಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಕ್ಕಿದೆ. ಸದ್ಯ ನ್ಯಾಯಾಲಯದಲ್ಲಿ ಸಂತ್ರಸ್ತೆ ನೀಡುವ ಹೇಳಿಕೆ ಮೇಲೆ ಇಡೀ ಪ್ರಕರಣ ನಿಂತಿದೆ. ಆ ಹೇಳಿಕೆ ಬಂದ ನಂತರವೇ ಅದು ಅಧಿಕೃತವಾಗಲಿದೆ.
ಪೊಲೀಸರು ಸಂತ್ರಸ್ತೆಯ ಬಳಿ ಹೇಳಿಕೆ ಪಡೆದಾಗ ಆಕೆ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾಳೆ.

“ಪೊಲೀಸರ ಮುಂದೆ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಹಿಂದೆ ವಿಡಿಯೋದಲ್ಲಿ ನಾನು ಹೇಳಿದ ಹೇಳಿಕೆಗಳೆಲ್ಲವೂ ಹೇಳಿಕೊಟ್ಟ ಸ್ಕ್ರಿಪ್ಟ್ ಆಗಿದೆ. ನಾನು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಯೇ ಇಲ್ಲ. ವಿಡಿಯೋ ಮಾಡಿದವರ ಅಣತಿಯಂತೆ ನಾನು ಹೇಳಿಕೆ ನೀಡಿದ್ದೇನೆ. ನನಗೆ ಸಿದ್ದರಾಮಯ್ಯ ಅವರಿಂದ ಯಾವುದೇ ತೊಂದರೆಯಾಗಿಲ್ಲ.”

ಈ ಹೇಳಿಕೆಯಿಂದಾಗಿ ಪೊಲೀಸ್ ತನಿಖೆಯಲ್ಲಿ ಸದ್ಯ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಕ್ಕಂತಾಗಿದೆ.
ಈ ಪ್ರಕರಣದಲ್ಲಿ ಅತ್ಯಂತ ಮಹತ್ವದ ಕಾನೂನು ಅಂಶವೆಂದರೆ – ಒಂದು ವೇಳೆ ಸ್ಟಿಂಗ್ ಆಪರೇಷನ್ ನಲ್ಲಿ ಸಂತ್ರಸ್ತೆ ಹಿಂದೆ ಯಾವ ರೀತಿ ಹೇಳಿಕೆ ನೀಡಿದ್ದಾರೋ, ಅದೇ ಹೇಳಿಕೆಯನ್ನು ಪೊಲೀಸರ ಮುಂದೆ ನೀಡುತ್ತಿದ್ದರೆ, ಆಗ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಾಗಬೇಕಿತ್ತು.

ಆದರೆ ಸಂತ್ರಸ್ತೆ ಪೊಲೀಸರ ಮುಂದೆ ಆ ಹಳೆಯ ಹೇಳಿಕೆಗಳನ್ನು ತಳ್ಳಿಹಾಕಿ, ಅದೆಲ್ಲ ಸ್ಕ್ರಿಪ್ಟೆಡ್ ಎಂದು ಹೇಳಿರುವುದರಿಂದ ಸದ್ಯಕ್ಕೆ ಪ್ರಕರಣ ದುರ್ಬಲವಾಗಿದೆ.
ಸಂತ್ರಸ್ತೆ ನ್ಯಾಯಾಲಯದಲ್ಲಿ ಇನ್ನೂ ಹೇಳಿಕೆ ನೀಡಿಲ್ಲ. ಪೊಲೀಸರ ಮುಂದೆ ನೀಡಿದ ಹೇಳಿಕೆ ಸದ್ಯ ಸಿದ್ದರಾಮಯ್ಯಗೆ ರಿಲೀಫ್ ತಂದಿದೆ. ಮುಂದೆ ನ್ಯಾಯಾಲಯದಲ್ಲಿ ಸಂತ್ರಸ್ತೆ ಯಾವ ಹೇಳಿಕೆ ನೀಡುತ್ತಾಳೋ, ಅದರ ಮೇಲೆ ಈ ಪ್ರಕರಣ ಅಧಿಕೃತವಾಗಿ ನಿಂತಿದೆ. ಆಕೆಯ ಕೋರ್ಟ್ ಹೇಳಿಕೆಯೇ ಫೈನಲ್ ಮತ್ತು ಅಧಿಕೃತವಾಗಲಿದೆ.

ಈ ಹಿನ್ನೆಲೆಯಲ್ಲಿ ಕೃಪಾ ಆಳ್ವ ಮತ್ತು ರಾಕೇಶ್ ಶೆಟ್ಟಿ ವಿರುದ್ಧದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಲಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?
2023 ರಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ಈ ಸ್ಟಿಂಗ್ ವಿಡಿಯೋ, 2011 ರಲ್ಲಿ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿದ್ದಾಗಿನ ಘಟನೆಗೆ ಸಂಬಂಧಿಸಿದ್ದು ಎಂದು ಕೆಲವು ಸ್ಥಳೀಯ ಚಾನೆಲ್‌ಗಳಲ್ಲಿ ಪ್ರಸಾರವಾಗಿತ್ತು.

ಸಿದ್ದರಾಮಯ್ಯ ಆರೋಪ ಏನು?
ಮೈಸೂರಿನಲ್ಲಿ ಅಕ್ಟೋಬರ್ 23 ರಂದು ಮಾತನಾಡಿದ ಸಿದ್ದರಾಮಯ್ಯ, ಇದೊಂದು 100% ಸುಳ್ಳು ಮತ್ತು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದ ಷಡ್ಯಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇದು ಸುಳ್ಳು ಪ್ರಕರಣ. ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ಮಾಡಲಾಗಿದೆ. ಆದ್ದರಿಂದ ಸತ್ಯ ಹೊರಬರಬೇಕು ಎಂದು ನಾನೇ ದೂರು ನೀಡಿದ್ದೇನೆ. ಜನರಿಗೆ ಸತ್ಯ ಗೊತ್ತಾಗಬೇಕು, ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗಬೇಕು. ನಾನು 8 ವರ್ಷ ಮುಖ್ಯಮಂತ್ರಿಯಾಗಿದ್ದೆ, ಆಗ ಇಂತಹ ಘಟನೆ ನಡೆದಿರಲಿಲ್ಲ. ಈಗ ನನ್ನ ಬಳಿ ಅಧಿಕಾರ ಇಲ್ಲದಾಗ ಇಂತಹ ಷಡ್ಯಂತ್ರ ನಡೆದಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿಡಿಯೋದಲ್ಲಿ ಕಾಣಿಸಿಕೊಂಡವರು ದಕ್ಷಿಣ ಕನ್ನಡ ಮೂಲದ ಕೃಪಾ ಆಳ್ವ ಮತ್ತು ರಾಕೇಶ್ ಶೆಟ್ಟಿ ಎಂದು ಅವರು ಹೆಸರಿಸಿದ್ದಾರೆ. “ರಾಕೇಶ್ ಶೆಟ್ಟಿ ಅವರೇ ಇದನ್ನು ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯಾವುದೇ ಸತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಕೋರ್ಟ್ ನಿಂದ ರಿಲೀಫ್:
ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್, 42 ಮಾಧ್ಯಮ ಸಂಸ್ಥೆಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಈ ವಿಡಿಯೋ ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅವರ ಮಾನಹಾನಿ ಮತ್ತು ಘನತೆಗೆ ಧಕ್ಕೆ ತರುವ ಅಪಾಯ ಇರುವುದರಿಂದ ಈ ಆದೇಶ ನೀಡಲಾಗಿದೆ.

ಪೊಲೀಸ್ ದೂರು ಮತ್ತು ರಾಜಕೀಯ ಬೆಳವಣಿಗೆ:
ಸಿದ್ದರಾಮಯ್ಯ ಅವರು ಅಕ್ಟೋಬರ್ 6 ರಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಈ ಮಧ್ಯೆ, ಕೆಪಿಸಿಸಿ ವಕ್ತಾರೆ ಆಗಿರುವ ಕೃಪಾ ಆಳ್ವಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ವರದಿಯಾಗಿದೆ. ಸಿದ್ದರಾಮಯ್ಯ ಪುತ್ರ, ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಇದು ಸ್ಟಿಂಗ್ ಅಲ್ಲ, ವ್ಯಕ್ತಿಯ ಇಮೇಜ್ ಹಾಳು ಮಾಡುವ ಪಿತೂರಿ ಎಂದು ಹೇಳಿದ್ದಾರೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!