Connect with us

Article

ಸ್ವಾತಂತ್ರ್ಯದ 80 ವರ್ಷ: ಐತಿಹಾಸಿಕ ಪಯಣದ ಸ್ಮರಣೆ ಮತ್ತು ಸಾಲು ಸಾಲು ಸವಾಲುಗಳ ಸತ್ಯದರ್ಶನ

Published

on

ವಿಶೇಷ ಲೇಖನ

✍️ ಜ್ಯೋತಿಪ್ರಕಾಶ್‌ ಪುಣಚ, ಪ್ರಧಾನ ಸಂಪಾದಕರು, ದೀವಟಿಗೆ ಡಿಜಿಟಲ್‌ ಮೀಡಿಯಾ-9448441282

ಬ್ರಿಟಿಷರ ಶತಮಾನಗಳ ದಾಸ್ಯದ ಸಂಕೋಲೆಯನ್ನು ಕಳಚಿ ಭಾರತವು ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿ ಇಂದಿಗೆ ಬರೋಬ್ಬರಿ 80 ವರ್ಷಗಳು ಸಂದಿವೆ. 1947ರ ಆಗಸ್ಟ್ 15ರಂದು ಲಭಿಸಿದ ಈ ಸ್ವಾತಂತ್ರ್ಯವು ಲಕ್ಷಾಂತರ ದೇಶಭಕ್ತರ ತ್ಯಾಗ, ಬಲಿದಾನ ಮತ್ತು ಸುದೀರ್ಘ ಹೋರಾಟದ ಫಲವಾಗಿದೆ. 1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತೀಯ ರಾಜ್ಯಾಂಗ ರಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು, “ಮಧ್ಯರಾತ್ರಿಯ ಗಂಟೆ ಬಾರಿಸುತ್ತಲೇ ಜಗತ್ತು ನಿದ್ರಿಸುತ್ತಿರುವ ವೇಳೆಯಲ್ಲಿ ಭಾರತವು ಎಚ್ಚೆತ್ತು ಜೀವ ತಳೆಯುವುದು, ಸ್ವತಂತ್ರವಾಗುವುದು. ಇತಿಹಾಸದಲ್ಲಿ ಎಂದಾದರೊಮ್ಮೆ ಬರುವ ಮಹತ್ವದ ಘಳಿಗೆಯದು. ಅಂಥ ಘಳಿಗೆಯಲ್ಲಿ ಹಳತಿನಿಂದ ಹೊಸತಿಗೆ ನಾವು ಪಾದಾರ್ಪಣ ಮಾಡುತ್ತೇವೆ” ಎಂದು ಹೊಸ ಯುಗದ ಆವಿರ್ಭವವನ್ನು ಬಣ್ಣಿಸಿದ್ದರು. ಶ್ರೀ ಅರವಿಂದರು ಹೇಳಿದಂತೆ, ಮಾನವ ಕುಲದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಭವಿಷ್ಯವನ್ನು ರೂಪಿಸುವ ಮಹತ್ಸಾಮರ್ಥ್ಯ ಹೊಂದಿರುವ ಶಕ್ತಿ ಸಂಪನ್ನ ರಾಷ್ಟ್ರದ ಪದಾರ್ಪಣೆಗೆ ಈ ದಿನ ಸಾಕ್ಷಿಯಾಯಿತು.

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವು ಅತ್ಯಂತ ರೋಮಾಂಚಕಾರಿ ಹಾಗೂ ಅನನ್ಯವಾದದ್ದು. 1757ರ ಪ್ಲಾಸೀ ಕದನದಲ್ಲಿ ವಿಜಯ ಸಾಧಿಸಿ ಬಂಗಾಳದಲ್ಲಿ ಬೇರೂರಿದ ಬ್ರಿಟಿಷರು, ತಮ್ಮ ಒಡೆದು ಆಳುವ ನೀತಿ ಹಾಗೂ ಶೋಷಣೆಯ ಮೂಲಕ ಇಡೀ ಭಾರತವನ್ನು ದಾಸ್ಯದ ಕೂಪಕ್ಕೆ ತಳ್ಳಿದರು. ಇದರ ವಿರುದ್ಧ 1857ರಲ್ಲಿ ಸಿಡಿದುಬಿದ್ದ ಸಿಪಾಯಿ ದಂಗೆಯನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ಪರಿಗಣಿಸಲಾಯಿತು. ತದನಂತರ 1885ರ ಡಿಸೆಂಬರ್ 28ರಂದು ಸ್ಥಾಪನೆಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹೋರಾಟಕ್ಕೆ ಸುಸಂಘಟಿತ ರೂಪ ನೀಡಿತು. ಬಾಲಗಂಗಾಧರ ತಿಲಕರು “ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು” ಎಂದು ಸಿಂಹಗರ್ಜನೆಗೈದರೆ, ಕಾಂಗ್ರೆಸ್‌ನಲ್ಲಿ ಸೌಮ್ಯವಾದಿ ಮತ್ತು ತೀವ್ರವಾದಿ ಎಂಬ ಎರಡು ವೈಚಾರಿಕ ಧಾರೆಯ ಹೋರಾಟಗಳು ಮುನ್ನೆಲೆಗೆ ಬಂದವು.

1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಮರಳಿದ ಮಹಾತ್ಮ ಗಾಂಧೀಜಿಯವರ ಆಗಮನದೊಂದಿಗೆ ಸ್ವಾತಂತ್ರ್ಯ ಚಳವಳಿ ನೂತನ ಮೈಲಿಗಲ್ಲು ನೆಟ್ಟಿತು. ಗಾಂಧೀಜಿಯವರ ಅಹಿಂಸಾತ್ಮಕ ಸತ್ಯಾಗ್ರಹ, 1920ರ ಅಸಹಕಾರ ಚಳವಳಿ, ವಿದೇಶಿ ವಸ್ತು ಬಹಿಷ್ಕಾರ ಹಾಗೂ ಅಪೂರ್ವವೆನಿಸಿದ ಉಪ್ಪಿನ ಸತ್ಯಾಗ್ರಹಗಳು ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನೇ ಅಲ್ಲಾಡಿಸಿದವು. ಅಂತಿಮವಾಗಿ 1942ರಲ್ಲಿ ಗಾಂಧೀಜಿ ಕರೆ ನೀಡಿದ ‘ಕ್ವಿಟ್ ಇಂಡಿಯಾ’ (ಭಾರತ ಬಿಟ್ಟು ತೊಲಗಿ) ಆಂದೋಲನವು ಇಡೀ ದೇಶದಲ್ಲಿ ಕಿಚ್ಚು ಹೊತ್ತಿಸಿತು. ಎರಡನೇ ಮಹಾಯುದ್ಧದ ನಂತರ ಬ್ರಿಟನ್‌ನಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದು, ವೈಸ್‌ರಾಯ್ ಸರ್ ಮೌಂಟ್‌ಬ್ಯಾಟನ್ ಅವರ ಮಧ್ಯಸ್ಥಿಕೆಯಲ್ಲಿ ಸಂಧಾನಗಳು ನಡೆದರೂ, ಮತೀಯ ಸಂಘರ್ಷಗಳ ಕಾರಣದಿಂದಾಗಿ ಗಾಂಧೀಜಿಯವರ ಇಚ್ಛೆಗೆ ವಿರುದ್ಧವಾಗಿ ದೇಶವು ಭಾರತ ಮತ್ತು ಪಾಕಿಸ್ತಾನ ಎಂದು ಇಬ್ಭಾಗವಾಗಿ ಸ್ವಾತಂತ್ರ್ಯವನ್ನು ಪಡೆಯಿತು.

ಇಂದು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದೆ, ದೇಶದೆಲ್ಲೆಡೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಕಳೆಗಟ್ಟಿದೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬೆಳೆದು ನಿಂತಿದೆ ನಿಜ; ಆದರೆ “ನಾವು ಎಷ್ಟರ ಮಟ್ಟಿಗೆ ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ?” ಎಂಬ ಪ್ರಕ್ರಿಯಾತ್ಮಕ ಪ್ರಶ್ನೆ ಇಂದಿಗೂ ಸಮಾಜವನ್ನು ಕಾಡುತ್ತಲೇ ಇದೆ. ಬಡವರಿಗೊಂದು ನ್ಯಾಯ, ಉಳ್ಳವರಿಗೊಂದು ನ್ಯಾಯ ಎನ್ನುವ ತಾರತಮ್ಯದ ನೀತಿ ಸಮಾಜದಲ್ಲಿ ಆಗಾಗ ಗೋಚರಿಸುತ್ತಲೇ ಇದೆ. ಬಡಜನರಿಗೆ ನ್ಯಾಯವೆಂಬುದು ಇಂದಿಗೂ ಮರೀಚಿಕೆಯಾಗಿಯೇ ಉಳಿದಿದ್ದು, ಅಸ್ಪೃಶ್ಯತೆ, ದಬ್ಬಾಳಿಕೆ, ಶೋಷಣೆ ಮತ್ತು ಜೀತಪದ್ಧತಿಯಂತಹ ಕಳಂಕಗಳು ಪೂರ್ಣಪ್ರಮಾಣದಲ್ಲಿ ತೊಲಗಿಲ್ಲ.

ಇನ್ನೊಂದೆಡೆ, ನಿರುದ್ಯೋಗದ ಭೀತಿಯಿಂದ ಯುವಜನತೆ ಹತಾಶೆಯತ್ತ ತಳ್ಳಲ್ಪಡುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ರಾಜಕೀಯ ಡೊಂಬರಾಟಗಳು ನಡೆಯುತ್ತಿವೆ. ಸಂವಿಧಾನದ ಮೂಲ ಆಶಯಗಳನ್ನು ಹಾಗೂ ಸರ್ಕಾರದ ಲೋಪಗಳನ್ನು ಪ್ರಶ್ನಿಸುವವರನ್ನು ತಕ್ಷಣವೇ ದೇಶದ್ರೋಹಿಗಳೆಂದು ಬಿಂಬಿಸುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ದೇಶದ ತನಿಖಾ ಸಂಸ್ಥೆಗಳು ರಾಜಕೀಯ ಕಪಿಮುಷ್ಠಿಯಲ್ಲಿ ನಲುಗಿ ಹೋಗುತ್ತಿವೆ ಎಂಬ ಗಂಭೀರ ಆತಂಕ ವ್ಯಕ್ತವಾಗುತ್ತಿದೆ. ಅಮಾನವೀಯ ಅಪರಾಧ ಎಸಗುವ ಕೃತ್ಯಗಳಿಗೆ ತಕ್ಷಣದ ಕಠಿನಾತಿಕಠಿಣ ಶಿಕ್ಷೆ ವಿಧಿಸುವಲ್ಲಿ ವಿಫಲವಾಗುತ್ತಿರುವುದು ನಾಗರಿಕ ಸಮಾಜವನ್ನು ಕಂಗೆಡಿಸಿದೆ.

1962ರ ಚೀನಾ ಆಕ್ರಮಣ ಹಾಗೂ 1948, 1965, 1971ರ ಭಾರತ-ಪಾಕ್ ಯುದ್ಧಗಳ ಇತಿಹಾಸ ನೆನಪಿಸುವಂತೆ, ಗಡಿಯಲ್ಲಿ ಸೈನಿಕರು ಕಾಯುವಂತೆಯೇ ದೇಶದ ಒಳಗಿನ ಪ್ರಜೆಯೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಯಬೇಕಿದೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಅನಭಿಷಿಕ್ತ ಪ್ರಭುವಿದ್ದಂತೆ. ಸ್ವಾರ್ಥಪರ ಸೇವೆಯನ್ನು ಸಲ್ಲಿಸುವುದು ಮಾತೃದ್ರೋಹಕ್ಕೆ ಸಮಾನ. ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ದೇಶಭಕ್ತರನ್ನು ಹಾಗೂ ರಾಷ್ಟ್ರಪಿತ ಗಾಂಧೀಜಿಯವರನ್ನು ಸ್ಮರಿಸುತ್ತಾ, ದೇಶದ ಸ್ವಾಭಿಮಾನ, ರಾಜಕೀಯ ಹಾಗೂ ಸಾಮಾಜಿಕ ಸುಧಾರಣೆಗೆ ಶ್ರಮಿಸುವುದೇ ಈ ದಿನ ನಾವು ನಾಡಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Article

ಮಾನಸಿಕ ಅಸ್ವಸ್ಥ ಅನಾಥ ವ್ಯಕ್ತಿಯ ರಕ್ಷಿಸಿದ ಕುಂಬಳೆ ಪೊಲೀಸರು.ಶ್ರೀ ಸಾಯಿ ನಿಕೇತನ ಸೇವಾಶ್ರಮಕ್ಕೆ ದಾಖಲು.

Published

on

​ಕುಂಬಳೆ: ರಾತ್ರಿ ಹೊತ್ತು ಕುಂಬಳೆ ಬಸ್ ನಿಲ್ದಾಣ ಸಮೀಪದ ಮುಖ್ಯ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳೊಂದಿಗೆ ರಸ್ತೆಯಲ್ಲಿ ಮಲಗಿಕೊಂಡಿದ್ದ ಅನಾಥ ವ್ಯಕ್ತಿಯೊಬ್ಬರನ್ನು ರಕ್ಷಿಸಲಾಗಿದೆ.​ ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಸ್ಪಂದಿಸಿದ ಕುಂಬಳೆ ಪೊಲೀಸ್ ಠಾಣೆಯ ಎಸ್‌ಐ ಅನೂಪ್‌ ಹಾಗೂ ಅವರ ತಂಡದವರು ಮಾನವೀಯತೆಯ ಆಧಾರದ ಮೇಲೆ ಆ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ನಂತರ ಅದೇ ರಾತ್ರಿ ದೈಗೋಳಿಯ ಶ್ರೀ ಸಾಯಿ ನಿಕೇತನ ಸೇವಾಶ್ರಮಕ್ಕೆ ಆತನನ್ನು ಸುರಕ್ಷಿತವಾಗಿ ದಾಖಲಿಸಲಾಗಿದೆ. ಪ್ರಸ್ತುತ ಆಶ್ರಮದಲ್ಲಿ ಅವರಿಗೆ ಅಗತ್ಯವಿರುವ ಆರೈಕೆ, ವಸತಿ ಮತ್ತು ಆರೋಗ್ಯಾಧಾರಿತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ವ್ಯಕ್ತಿಯ ವಿವರಗಳು.

​ಹೆಸರು: ಗುರುವಾಯೂರಪ್ಪ ​ತಂದೆಯ ಹೆಸರು: ಸುಬ್ರಹ್ಮಣ್ಯ ​ಊರು: ಕಾಸರಗೋಡು, ಮಲ್ಲ ​ಸಂಪರ್ಕ ಮಾಹಿತಿ:​ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದಿದ್ದರೆ, ಅಥವಾ ಅವರ ಕುಟುಂಬಸ್ಥರು, ಸಂಬಂಧಿಕರು ಮತ್ತು ಸ್ನೇಹಿತರು ಕಂಡುಬಂದಲ್ಲಿ ದಯವಿಟ್ಟು ಕೆಳಗಿನ ಫೋನ್ ಸಂಖ್ಯೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ.​

📞 ಸಂಪರ್ಕ ಸಂಖ್ಯೆ: 94486 26500 ​

ಆಪತ್ತಿನಲ್ಲಿದ್ದ ವ್ಯಕ್ತಿಯನ್ನು ತಕ್ಷಣ ರಕ್ಷಿಸಿ ಆಶ್ರಮಕ್ಕೆ ತಲುಪಿಸಿದ ಕುಂಬಳೆ ಪೊಲೀಸ್ ಇಲಾಖೆಯ ಕರ್ತವ್ಯ ಪ್ರಜ್ಞೆ ಹಾಗೂ ಮಾನವೀಯ ಕಾರ್ಯಕ್ಕೆ ಸಾಯಿ ನಿಕೇತನ ಸೇವಾಶ್ರಮದ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಗಿದೆ.

Continue Reading

Article

20 ವರ್ಷಗಳ ‘ನರಕಯಾತನೆ’ಗೆ ಕೊನೆಗೂ ಮುಕ್ತಿ! ಕುದುರೆಮುಖ ದಟ್ಟ ಕಾಡಿನಿಂದ ಹೊರಬಂದ ಮೂವರು ವೃದ್ಧರು

Published

on

ದಟ್ಟ ಅರಣ್ಯ, ಕಾಡುಪ್ರಾಣಿಗಳ ನಿರಂತರ ಭಯ, ಮೂಲಭೂತ ಸೌಕರ್ಯಗಳಿಲ್ಲದೆ ಕುಸಿದು ಬೀಳುವ ಹಂತದಲ್ಲಿದ್ದ ಪುಟ್ಟ ಮನೆ… ಹೀಗೆ ಬರೋಬ್ಬರಿ 20 ವರ್ಷಗಳ ಕಾಲ ಅರಣ್ಯದೊಳಗೆ ನರಕಯಾತನೆ ಅನುಭವಿಸುತ್ತಿದ್ದ ಮೂವರು ವೃದ್ಧರಿಗೆ ಕೊನೆಗೂ ಅರಣ್ಯದ ಸಂಕಷ್ಟದಿಂದ ಮುಕ್ತಿ ದೊರೆತಿದೆ. ರಾಜ್ಯ ಸರ್ಕಾರ ಸ್ಪಂದಿಸಿದ್ದು, ಮೂವರಿಗೂ ತಲಾ 9 ಲಕ್ಷ ರೂಪಾಯಿ ಪರಿಹಾರ ನೀಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.

ಹಿನ್ನೆಲೆ ಏನು?

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುನ್ನಿಹಳ್ಳ ಗ್ರಾಮದಲ್ಲಿ ಈ ವೃದ್ಧರು ಬದುಕು ಸಾಗಿಸುತ್ತಿದ್ದರು. 2003-04ರಲ್ಲಿ ಕುದುರೆಮುಖ ಅರಣ್ಯ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನ ಎಂದು ಸರ್ಕಾರ ಘೋಷಿಸಿದಾಗ, ಅಲ್ಲಿದ್ದ ಗ್ರಾಮಸ್ಥರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಆದರೆ, ಸೂಕ್ತ ದಾಖಲೆಗಳ ಕೊರತೆಯಿಂದಾಗಿ 73 ವರ್ಷದ ಶ್ಯಾಮಲಾ ದೇವಿ, 75 ವರ್ಷದ ನಾಗರತ್ನ ಮತ್ತು 58 ವರ್ಷದ ದೇವರಾಜ್ ಅವರು ಕಾಡಿನೊಳಗೇ ಉಳಿದುಕೊಳ್ಳುವಂತಾಯಿತು.

ಕಾಡಿನಲ್ಲೇ ಕಳೆದವು 20 ಭೀಕರ ವರ್ಷಗಳು

ಗ್ರಾಮಸ್ಥರೆಲ್ಲಾ ತೆರಳಿದ ಮೇಲೆ ಈ ಮೂವರು ವೃದ್ಧರು ಕುಸಿಯುವ ಹಂತದಲ್ಲಿದ್ದ ಮನೆಯಲ್ಲೇ ದಿನದೂಡುತ್ತಿದ್ದರು. ಕಾಡುಪ್ರಾಣಿಗಳ ಹಾವಳಿಯ ನಡುವೆಯೇ ಜೀವ ಕೈಯಲ್ಲಿಡಿದು ಬದುಕಬೇಕಿತ್ತು. ತಮ್ಮ ಸಣ್ಣಪುಟ್ಟ ಕೆಲಸಗಳಿಗೆ ಅಥವಾ ಆಡಳಿತ ಕಚೇರಿಗಳನ್ನು ತಲುಪಲು ನೂರಾರು ಕಿಲೋಮೀಟರ್ ದೂರ ಪಯಣಿಸಬೇಕಾದ ಅನಿವಾರ್ಯತೆ ಇವರಿಗಿತ್ತು. ತಮ್ಮ ಸಂಕಷ್ಟವನ್ನು ಕೇಳುವವರಿಲ್ಲದೆ ಈ ಹಿರಿಯರು ದಶಕಗಳ ಕಾಲ ಕಣ್ಣೀರಿಟ್ಟಿದ್ದರು.

ಮಾದ್ಯಮ ವರದಿಗೆ ಸ್ಪಂದಿಸಿದ ಸರ್ಕಾರ!

ಈ ವೃದ್ಧರ ಕಣ್ಣೀರಿನ ಕಥೆ ಮತ್ತು ಅರಣ್ಯರೋಧನದ ಕುರಿತು ಸುದ್ದಿವಾಹಿನಿ ವಿಶೇಷ ವರದಿ ಪ್ರಸಾರ ಮಾಡಿ ಸರ್ಕಾರದ ಗಮನ ಸೆಳೆದಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ತಕ್ಷಣವೇ ಕಾರ್ಯಪ್ರವೃತ್ತರಾದ ರಾಜ್ಯ ಸರ್ಕಾರದ ಅಧಿಕಾರಿಗಳು ಪರಿ ಪರಿಶೀಲನೆ ನಡೆಸಿದರು.

ಬಿಕರಿ ದಾಖಲೆಗಳ ಕೊರತೆಯಿದ್ದರೂ ಮಾನವೀಯತೆಯ ಆಧಾರದ ಮೇಲೆ ಹಾಗೂ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಮೂವರಿಗೂ ತಲಾ 9 ಲಕ್ಷ ರೂಪಾಯಿ ಪರಿಹಾರ ಧನ ಮಂಜೂರು ಮಾಡಿ, ಕಾಡಿನಿಂದ ಹೊರಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಕೊನೆಗೂ ಮೊಗದಲ್ಲಿ ನಗು!

20 ವರ್ಷಗಳ ಸುದೀರ್ಘ ಹೋರಾಟ ಮತ್ತು ಕಷ್ಟದ ನಂತರ ಕೊನೆಗೂ ಪರಿಹಾರ ಹಾಗೂ ಸುರಕ್ಷಿತ ಆಸರೆ ಸಿಕ್ಕಿರುವುದಕ್ಕೆ ವೃದ್ಧರು ಹರ್ಷ ವ್ಯಕ್ತಪಡಿಸಿದ್ದಾರೆ. ಇಳಿ ವಯಸ್ಸಿನಲ್ಲಿ ನೆಮ್ಮದಿಯ ಜೀವನ ನಡೆಸಲು ದಾರಿ ಮಾಡಿಕೊಟ್ಟ ಸರ್ಕಾರ ಹಾಗೂ ತಮ್ಮ ಧ್ವನಿಯಾದ ಮಾಧ್ಯಮಕ್ಕೆ ವೃದ್ಧರು ಧನ್ಯವಾದ ಅರ್ಪಿಸಿದ್ದಾರೆ.

Continue Reading

Article

ಕರಾವಳಿ ರಾಜಕೀಯದ ಹೊಸ ಸಂಚಲನ – ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಯಾರು ? ಆಡಿಯೋ ವಿವಾದ ಮತ್ತು ಪರಿವಾರದ ಹಿನ್ನೆಲೆ

Published

on

ಕಲ್ಲಡ್ಕ ಪ್ರಭಾಕರ ಭಟ್‌ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಕೆಲದಿನಗಳ ಹಿಂದೆ ಸೌಜನ್ಯ ಮನೆ ಮತ್ತು ತಿಮರೋಡಿ ಮನೆಗೆ ಭೇಟಿ ನೀಡಿ ಸೌಜನ್ಯ ಹೋರಾಟಕ್ಕೆ ಧ್ವನಿಯೆತ್ತಿ ಬೆಂಬಲ ಘೋಷಿಸಿದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ
ಮಂಗಳೂರು: ಕರ್ನಾಟಕದ ಕರಾವಳಿ ರಾಜಕೀಯ ವಲಯದಲ್ಲಿ ಇತ್ತೀಚೆಗೆ ಸಂಘ ಪರಿವಾರದ ಪ್ರಮುಖ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ವೈರಲ್ ಆಡಿಯೋ ಒಂದು ತೀವ್ರ ಚರ್ಚೆಗೆ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಬಿರುಸಿಗೆ ಕಾರಣವಾಗಿದೆ. ಬಂಟ್ವಾಳದಲ್ಲಿ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಬಂಧಿಸಿರುವುದನ್ನು ವಿರೋಧಿಸಿ ವಿಎಚ್‌ಪಿ ಮತ್ತು ಬಜರಂಗದಳದಿಂದ ನಡೆದ ಪ್ರತಿಭಟನಾ ಸಭೆಯು ಈ ಎಲ್ಲಾ ಬೆಳವಣಿಗೆಗಳಿಗೆ ನಾಂದಿ ಹಾಡಿತು. ಈ ಹಿನ್ನೆಲೆಯಲ್ಲಿ, ಕರಾವಳಿ ರಾಜಕೀಯದ ಪ್ರಮುಖ ಮುಖಂಡರಾಗಿರುವ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ರಾಜಕೀಯ ಮತ್ತು ಸಾಂಸ್ಥಿಕ ಹಿನ್ನೆಲೆ ಏನು, ಈ ವಿವಾದ ಸೃಷ್ಟಿಯಾಗಲು ಕಾರಣವಾದ ಅಂಶಗಳೇನು ಮತ್ತು ಪಕ್ಷದ ಹಿತದೃಷ್ಟಿಯಿಂದ ಅವರು ಎತ್ತಿರುವ ಗಂಭೀರ ಪ್ರಶ್ನೆಗಳೇನು ? ಅವರು ಪ್ರಶ್ನಿಸಲು ಸಮರ್ಥರೇ ? ಪಕ್ಷದಲ್ಲಿ ಅವರು ಏನು ? ಎಂಬ ಸಂಪೂರ್ಣ ನೋಟ ಇಲ್ಲಿದೆ.

ಈ ವಿವಾದದ ಕೇಂದ್ರಬಿಂದುವಾಗಿರುವ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರು ಪಕ್ಷ ಹಾಗೂ ಸಂಘ ಪರಿವಾರಕ್ಕಾಗಿ ಮೂರು ದಶಕಗಳಿಗೂ ಅಧಿಕ ಕಾಲದಿಂದ ಪ್ರಾಮಾಣಿಕವಾಗಿ ಶ್ರಮಿಸಿರುವ ಧೀಮಂತ ವ್ಯಕ್ತಿಯಾಗಿದ್ದಾರೆ. 1989ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಶಾಖಾ ಶಿಕ್ಷಕರಾಗಿ ತಮ್ಮ ಸಾರ್ವಜನಿಕ ಬದುಕನ್ನು ಆರಂಭಿಸಿದ ಇವರು, 1990ರ ಅಯೋಧ್ಯೆ ರಾಮಜನ್ಮ ಭೂಮಿ ಮುಕ್ತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತರ ಪ್ರದೇಶದಲ್ಲಿ 15 ದಿನಗಳ ಕಾಲ ಜೈಲು ವಾಸವನ್ನೂ ಅನುಭವಿಸಿದ್ದಾರೆ. 1991-92ರಲ್ಲಿ ಕುರ್ನಾಡು ಮಂಡಲದಲ್ಲಿ ಸಂಘದ ವಿಸ್ತಾರಕನಾಗಿ, 1992ರ ಅಯೋಧ್ಯೆ ಕರಸೇವೆಯಲ್ಲಿ, ಮತ್ತು 1992-93ರಲ್ಲಿ ಹಿಂದೂ ಜಾಗರಣಾ ವೇದಿಕೆಯ ಗೋಳ್ತಮಜಲು ಮಂಡಲ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ 1993-94ರಲ್ಲಿ ಬಾಳ್ತಿಲ ಗ್ರಾಮ ಬಿಜೆಪಿ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರಾಗಿಯೂ, 2022ರಿಂದ 3 ವರ್ಷಗಳ ಕಾಲ ಕೇಂದ್ರ ಸರಕಾರದ ದಿಶಾ ಸಮಿತಿಯ ಸದಸ್ಯರಾಗಿಯೂ ಜನ ಸೇವೆಗೈದಿದ್ದಾರೆ.

ಮಾಜಿ ಶಾಸಕ ರುಕ್ಮಯ ಪೂಜಾರಿ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾಗಿದ್ದ ರಾಧಕೃಷ್ಣ ಅಡ್ಯಂತಾಯರು, ದಿವಂಗತ ಕಲ್ಲಡ್ಕ ರಾಮಪ್ಪ ಪೂಜಾರಿ ಏಳ್ತಿಮಾರ್‌, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಸೇರಿದಂತೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರವರೆಗಿನ ಎಲ್ಲರ ನೇತೃತ್ವದಲ್ಲಿ ಎಲ್ಲಾ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಸಂಚಾಲಕರಾಗಿ ದೀರ್ಘಕಾಲದಿಂದ ಗುರುತಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಅವರ ಅನುಯಾಯಿಯಾಗಿರುವ ಇವರು, ನೇರ ನಡೆನುಡಿಗೆ ಹೆಸರಾಗಿದ್ದಾರೆ.

ಈ ವಿವಾದ ಪ್ರಸ್ತಾವವಾಗಲು ಮತ್ತು ಕಲ್ಲಡ್ಕ ಅವರ ಆಡಿಯೋ ವೈರಲ್ ಆಗಲು ಬಂಟ್ವಾಳದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನಡೆದ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಬೆಳವಣಿಗೆಗಳೇ ಪ್ರಮುಖ ಕಾರಣವಾಗಿವೆ. ಸದರಿ ಸಭೆಯಲ್ಲಿ ಭಾಗವಹಿಸಿದ್ದ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಅವರು, “ಕರಾವಳಿ ತೀರದವರು ಅವಲಕ್ಕಿ ಪ್ರಿಯರು. ನಮ್ಮ ಬಾಯಲ್ಲಿ ಅವಲಕ್ಕಿ ಇಟ್ಟಂತೆ ನಮ್ಮ ಶಾಸಕರು ಮತ್ತು ಸಂಸದರೂ ಬಾಯಲ್ಲಿ ಅವಲಕ್ಕಿ ತುಂಬಿಕೊಂಡಿದ್ದಾರೆ” ಎಂದು ಸ್ಥಳೀಯ ಜನಪ್ರತಿನಿಧಿಗಳನ್ನು ಕಟುವಾಗಿ ಟೀಕಿಸಿದ್ದರು. ಕರಾವಳಿ ಭಾಗದ ನಾಯಕರ ವಿರುದ್ಧ ಹೊರಗಿನಿಂದ ಬಂದು ಪಾಠ ಮಾಡುವುದನ್ನು ಖಂಡಿಸಿದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಇಷ್ಟು ವರ್ಷಗಳಿಂದ ಸಂಘಪರಿವಾರಕ್ಕಾಗಿ ದುಡಿದ ನಳಿನ್ ಕುಮಾರ್ ಕಟೀಲ್, ಸತ್ಯಜಿತ್ ಹಾಗೂ ಅರುಣ್ ಕುಮಾರ್ ಪುತ್ತಿಲರಂತಹ ನಾಯಕರನ್ನು ಕಡೆಗಣಿಸುತ್ತಿರುವುದನ್ನು ಪ್ರಶ್ನಿಸಿದ್ದರು. ಮುಂದುವರಿದು, ಕಲ್ಲಡ್ಕ ಪ್ರಭಾಕರ ಭಟ್‌ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗುವಂತೆ ಅಗ್ರಹ ಮಾಡಿದ ಬೆನ್ನಲ್ಲೇ ಕೆಲದಿನಗಳ ಹಿಂದೆ ಧರ್ಮಸ್ಥಳದ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಅವರ ಮನೆ ಹಾಗೂ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ದಿಢೀರ್ ಭೇಟಿ ನೀಡಿ ನ್ಯಾಯದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಈ ಎಲ್ಲಾ ಬೆಳವಣಿಗೆಗಳ ಮುಂದುವರಿದ ಭಾಗವಾಗಿ, ಪಕ್ಷದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರು ವೈರಲ್ ಆಗಿರುವ ಆಡಿಯೋ ಮೂಲಕ ಕಠಿಣ ಸಂದೇಶವನ್ನು ರವಾನಿಸಿದ್ದಾರೆ. ಕರಾವಳಿ ನಾಯಕರನ್ನು ಹಗುರವಾಗಿ ಮಾತನಾಡಿರುವ ಬಗ್ಗೆ ನನಗೆ ನೋವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಆಂತರಿಕ ವಿಚಾರಗಳಲ್ಲಿ ಏನೇ ಸಮಸ್ಯೆಗಳಿದ್ದರೂ ಮುಖಂಡರ ಮೂಲಕ ಬಗೆಹರಿಸಿ ಪಕ್ಷಕ್ಕೆ ಯಾವುದೇ ರೀತಿಯ ಡ್ಯಾಮೇಜ್ ಆಗದಂತೆ ನೋಡಿಕೊಂಡಿರುವ ಕಲ್ಲಡ್ಕ ಅವರ ಈ ನೇರ ಎಚ್ಚರಿಕೆಯು, ಕರಾವಳಿ ಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕುವ ಮತ್ತು ಹೊರಗಿನವರ ಹಸ್ತಕ್ಷೇಪವನ್ನು ಸಹಿಸದ ಆಕ್ರೋಶದ ಪ್ರತಿಬಿಂಬವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!