Connect with us

complaint

ಮಂಡ್ಯ: ಕರ್ತವ್ಯನಿರತ ಮಹಿಳಾ PSIಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಶಾಸಕ ಸುರೇಶ್‌ಗೌಡ ಪುತ್ರಿ ಐಶ್ವರ್ಯ!

Published

on

ಮಂಡ್ಯ: ಜನಪ್ರತಿನಿಧಿಗಳ ಹಾಗೂ ಅವರ ಕುಟುಂಬಸ್ಥರ ದರ್ಪಕ್ಕೆ ಮತ್ತೊಂದು ಕಪ್ಪು ಚುಕ್ಕೆ ಬಿದ್ದಿದೆ. ದೇವಸ್ಥಾನದಲ್ಲಿ ಗರ್ಭಗುಡಿ ಪ್ರವೇಶಿಸುವ ವಿಚಾರಕ್ಕೆ ಸಂಬಂಧಿಸಿದಂತೆ, ಕರ್ತವ್ಯನಿರತ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (PSI) ಮೇಲೆ ಶಾಸಕರ ಪುತ್ರಿಯೊಬ್ಬರು ಹಲ್ಲೆ ನಡೆಸಿ, ಕಪಾಳಮೋಕ್ಷ ಮಾಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ನಡೆದಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದ್ದು, ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ ಏನು?

ಬುಧವಾರ (ಆ.12) ‘ಭೀಮನ ಅಮಾವಾಸ್ಯೆ’ ಹಿನ್ನೆಲೆಯಲ್ಲಿ ಆರತಿ ಉಕ್ಕಡದ ಪ್ರಸಿದ್ಧ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಶಾಸಕ ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ಕೂಡ ಆಗಮಿಸಿದ್ದು, ತಮ್ಮ ರಾಜಕೀಯ ಪ್ರಭಾವ ಬಳಸಿ ನೇರವಾಗಿ ‘ವಿಐಪಿ’ ಸಾಲಿನಲ್ಲಿ ಪ್ರವೇಶ ಪಡೆದಿದ್ದರು.

ಬಳಿಕ, ನಿಯಮಗಳನ್ನು ಮೀರಿ ನೇರವಾಗಿ ದೇವರ ಗರ್ಭಗುಡಿಯೊಳಗೆ ಪ್ರವೇಶಿಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಯೇ ಭದ್ರತಾ ಕರ್ತವ್ಯದಲ್ಲಿದ್ದ ಕ್ಯಾತನಹಳ್ಳಿ ಪೊಲೀಸ್ ಠಾಣೆಯ ಮಹಿಳಾ ಪಿಎಸ್‌ಐ ಸವಿತಾ, “ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ ಈಗ ಗರ್ಭಗುಡಿಯೊಳಗೆ ಹೋಗಲು ಅವಕಾಶವಿಲ್ಲ” ಎಂದು ಅವರನ್ನು ತಡೆದಿದ್ದಾರೆ.

ಮಾತುಕತೆ ವಿಕೋಪಕ್ಕೆ – ಸಾರ್ವಜನಿಕರ ಎದುರಲ್ಲೇ ಹಲ್ಲೆ!

ಇದೇ ವೇಳೆ, ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಲ್ ಇನ್ಸ್‌ಪೆಕ್ಟರ್ (CI) ಲಕ್ಷ್ಮಿ ಅವರು ಗರ್ಭಗುಡಿಯ ಕಡೆಗೆ ತೆರಳಿದ್ದನ್ನು ಕಂಡ ಐಶ್ವರ್ಯ, “ಅವರನ್ನು ಹೇಗೆ ಬಿಟ್ಟಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿದ ಪಿಎಸ್‌ಐ ಸವಿತಾ, “ಅವರು ನಮ್ಮ ಸರ್ಕಲ್ ಇನ್ಸ್‌ಪೆಕ್ಟರ್, ಅವರು ಡ್ಯೂಟಿಯಲ್ಲಿದ್ದಾರೆ” ಎಂದು ವಿವರಿಸಿದ್ದಾರೆ.

ಆದರೆ ಇದರಿಂದ ಸಮಾಧಾನಗೊಳ್ಳದ ಐಶ್ವರ್ಯ, “ನನಗೂ ಒಳಗಡೆ ಹೋಗಲು ಬಿಡು, ನಾನು ಹೋಗಲೇಬೇಕು” ಎಂದು ಪಟ್ಟು ಹಿಡಿದು ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಕೋಪಗೊಂಡ ಐಶ್ವರ್ಯ, ಭಕ್ತಾದಿಗಳ ಸಮ್ಮುಖದಲ್ಲೇ ಕರ್ತವ್ಯನಿರತ ಪಿಎಸ್‌ಐ ಸವಿತಾ ಅವರ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಕರಣ ದಾಖಲು: ಸಾರ್ವಜನಿಕರ ತೀವ್ರ ಆಕ್ರೋಶ

ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಐಶ್ವರ್ಯ ವಿರುದ್ಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾನೂನು ಪ್ರಕಾರ ಎಫ್‌ಐಆರ್ (FIR) ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸಾರ್ವಜನಿಕರ ಕಿಡಿಕಾರಿಕೆ:

ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ಹಾಗೂ ಅವರ ಕುಟುಂಬಸ್ಥರ ದೌರ್ಜನ್ಯ ಮಿತಿಮೀರುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ರಕ್ಷಣಾ ಸಿಬ್ಬಂದಿಯ ಮೇಲೆಯೇ ಈ ರೀತಿ ದರ್ಪ ತೋರುತ್ತಿರುವುದು ದುರದೃಷ್ಟಕರ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೇ ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

complaint

ಪುತ್ತೂರು ಚಲೋ: ದ್ವೇಷ ಭಾಷಣ, ಪೊಲೀಸ್ ನಿಂದನೆ ಆರೋಪ; ಶ್ರೀಕಾಂತ್ ಶೆಟ್ಟಿ, ಸಂಘಟಕರ ವಿರುದ್ಧ ದೂರು

Published

on

ಪುತ್ತೂರು: ಇತ್ತೀಚೆಗೆ ನಡೆದ ‘ಪುತ್ತೂರು ಚಲೋ’ ಕಾರ್ಯಕ್ರಮದಲ್ಲಿ ದ್ವೇಷಪೂರಿತ ಘೋಷಣೆ ಕೂಗಿದ ಕಾರ್ಯಕರ್ತರು, ಪ್ರಚೋದನಾಕಾರಿ ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹಾಗೂ ಕಾರ್ಯಕ್ರಮದ ಸಂಘಟಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಪುತ್ತೂರು ಮಾನವ ಬಂಧುತ್ವ ವೇದಿಕೆಯ ಪ್ರಧಾನ ಸಂಚಾಲಕ ಅಮಳ ರಾಮಚಂದ್ರ ಅವರು ಈ ದೂರನ್ನು ಸಲ್ಲಿಸಿದ್ದು, ಪುತ್ತೂರು ನಗರ ಪೊಲೀಸರು ದೂರು ಸ್ವೀಕರಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ದೂರಿನಲ್ಲೇನಿದೆ? ಆಗಸ್ಟ್ 31ರಂದು ದರ್ಬೆಯ ಜಿರಾಕ್ಸ್ ಅಂಗಡಿಯ ಗಲಾಟೆಯನ್ನು ಮುಂದಿಟ್ಟುಕೊಂಡು ನಡೆಸಲಾದ ‘ಪುತ್ತೂರು ಚಲೋ’ ಮೆರವಣಿಗೆಯಲ್ಲಿ ಕೆಲವು ಕಾರ್ಯಕರ್ತರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು “ಪಾಕಿಸ್ತಾನದ ನಾಯಿಗಳು”, “ಬಾಂಗ್ಲಾದೇಶದ ಕನ್ನಿಗಳು” ಎಂಬ ದ್ವೇಷಪೂರಿತ ಘೋಷಣೆಗಳನ್ನು ಕೂಗಿದ್ದಾರೆ. ಸಂಘಟಕರ ಕುಮ್ಮಕ್ಕಿನಿಂದ ಸಮಾಜದಲ್ಲಿ ಕೋಮು ವೈಮನಸ್ಯ ಮೂಡಿಸಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಲ್ಲದೆ, ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಪೊಲೀಸ್ ಇಲಾಖೆ ಹಾಗೂ ಗೃಹ ಸಚಿವರ ವಿರುದ್ಧ ಅತ್ಯಂತ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. “ಪೊಲೀಸ್ ಇಲಾಖೆಯಲ್ಲಿ ಗಂಡಸುತನ ಇರುವ ಯಾವ ಅಧಿಕಾರಿಯೂ ಇಲ್ಲ, ಹಿಂದೂ ಸಂಘಟನೆಗಳನ್ನು ದಮನ ಮಾಡಲು ಪೊಲೀಸರು ಕಾಂಟ್ರಾಕ್ಟ್ ಪಡೆದಿದ್ದಾರೆ. ಪೊಲೀಸರು ವರದಕ್ಷಿಣೆ, ಉಯಿಲು ತಕರಾರು ಕೇಸ್‌ಗಳಲ್ಲಿ ಬೆದರಿಸಿ ಡೀಲ್ ಕುದುರಿಸುತ್ತಿದ್ದಾರೆ ಮತ್ತು ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ರೌಡಿಶೀಟ್ ತೆರೆಯುವ ಪೊಲೀಸರು ನಾಲಾಯಕ್ ನಪುಂಸಕರು” ಎಂದು ನಿಂದಿಸಿ, ಸಾರ್ವಜನಿಕರಲ್ಲಿ ಇಲಾಖೆಯ ಬಗ್ಗೆ ಕೀಳು ಅಭಿಪ್ರಾಯ ಮೂಡಿಸಲು ಯತ್ನಿಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.

ಶ್ರೀಕಾಂತ್ ಶೆಟ್ಟಿ ಅವರು ಈ ಹಿಂದೆಯೂ ಇಂತಹ ಪ್ರಚೋದನಾಕಾರಿ ಭಾಷಣಗಳ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ತಂದಿರುವ ಹಿನ್ನೆಲೆ ಹೊಂದಿದ್ದಾರೆ. ಆದ್ದರಿಂದ ದ್ವೇಷ ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ, ಪ್ರಚೋದನಾಕಾರಿ ಘೋಷಣೆ ಕೂಗಿದ ಕಾರ್ಯಕರ್ತರು ಹಾಗೂ ಸಂಘಟಕರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆ ಹಾಗೂ ಐಪಿಸಿ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅಮಳ ರಾಮಚಂದ್ರ ಆಗ್ರಹಿಸಿದ್ದಾರೆ

Continue Reading

complaint

ಮಂಗಳೂರಿನ ಜಿ.ಆರ್. ಮೆಡಿಕಲ್ ಕಾಲೇಜಿನ MBBS ಸೀಟು ರದ್ದತಿಗೆ KEAಗೆ ಮನವಿ: ‘ನವ ಭಾರತ ಶಿಕ್ಷಾ ಪ್ರತಿಷ್ಠಾನ’ ಒತ್ತಾಯ

Published

on

ಬೆಂಗಳೂರು: ಮಂಗಳೂರಿನ ‘ಜಿ.ಆರ್. ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್’ (GRMCHRC) ನಲ್ಲಿರುವ 150 MBBS ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕೌನ್ಸೆಲಿಂಗ್ ಸೀಟ್ ಮ್ಯಾಟ್ರಿಕ್ಸ್‌ನಿಂದ ತಕ್ಷಣವೇ ರದ್ದುಗೊಳಿಸಬೇಕು ಅಥವಾ ತಡೆಹಿಡಿಯಬೇಕು ಎಂದು ‘ನವ ಭಾರತ ಶಿಕ್ಷಾ ಪ್ರತಿಷ್ಠಾನ’ದ ರಾಜ್ಯ ಸಂಯೋಜಕ ಡಾ. ಗೋವಿಂದರಾಜು ಕೆ. ಅವರು KEA ಕಾರ್ಯನಿರ್ವಾಹಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಮುಖ ಆರೋಪಗಳು ಮತ್ತು ಮನವಿಯ ಮುಖ್ಯಾಂಶಗಳು:

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ: ಈ ಹಿಂದೆ ಕಾಲೇಜಿನಲ್ಲಿ ಮೂಲಸೌಕರ್ಯ, ಶೈಕ್ಷಣಿಕ ಸೌಲಭ್ಯ ಹಾಗೂ ಸೂಕ್ತ ಬೋಧಕರ ಕೊರತೆ ಇದ್ದ ಕಾರಣ ಹೈಕೋರ್ಟ್ ಮಧ್ಯಪ್ರವೇಶಿಸಿ, ವಿದ್ಯಾರ್ಥಿಗಳನ್ನು ಬೇರೆ ಕಾಲೇಜುಗಳಿಗೆ ವರ್ಗಾಯಿಸಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ನಷ್ಟ, ಮಾನಸಿಕ ಶ್ರಮ ಮತ್ತು ಆರ್ಥಿಕ ನಷ್ಟ ಉಂಟಾಗಿದೆ.

NMC ನಿಯಮಗಳ ಉಲ್ಲಂಘನೆ: ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಮಾರ್ಗದರ್ಶಿ ಸೂತ್ರಗಳನ್ನು ಕಾಲೇಜು ಉಲ್ಲಂಘಿಸಿದೆ. ಆಸ್ಪತ್ರೆಯಲ್ಲಿ ಹೊರರೋಗಿಗಳ (OPD) ಸಂಖ್ಯೆ, ಹಾಸಿಗೆಗಳ ಭರ್ತಿ (Bed Occupancy), ಶಸ್ತ್ರಚಿಕಿತ್ಸಾ ಕೊಠಡಿಗಳ (OT) ಕಾರ್ಯನಿರ್ವಹಣೆ ಮತ್ತು ಚಿಕಿತ್ಸಾ ಸೌಲಭ್ಯಗಳು NMC ಮಾನದಂಡಗಳಿಗೆ ತಕ್ಕಂತೆ ಇಲ್ಲದಿರುವುದು ಕಂಡುಬಂದಿದೆ.

ಬೋಧಕರ ಕೊರತೆ: ಕಾಲೇಜು ಅತ್ಯಂತ ಗ್ರಾಮೀಣ ಭಾಗದಲ್ಲಿದ್ದು, ಉತ್ತಮ ವೈದ್ಯರು ಹಾಗೂ ಬೋಧಕರನ್ನು ನಿಯಮಿತ ಪ್ರಮಾಣದಲ್ಲಿ ಉಳಿಸಿಕೊಳ್ಳಲು ಸಂಸ್ಥೆ ಸಂಪೂರ್ಣ ವಿಫಲವಾಗಿದೆ.

ಪ್ರಮುಖ ಆಗ್ರಹಗಳು:

ಸೀಟುಗಳ ರದ್ದು: ಸಂಸ್ಥೆಯು NMC ಯಿಂದ ಸಂಪೂರ್ಣ ಅನುಮತಿ ಪಡೆಯುವವರೆಗೆ KEA ನಡೆಸುವ NEET UG ಕೌನ್ಸೆಲಿಂಗ್‌ನಲ್ಲಿ GRMCHRC ಯ MBBS ಸೀಟುಗಳನ್ನು ಸೇರಿಸಬಾರದು.

ಉನ್ನತ ಮಟ್ಟದ ತನಿಖೆ: ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರು ಮತ್ತು ತಜ್ಞರನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಿ, ಕಾಲೇಜು ಮತ್ತು ಆಸ್ಪತ್ರೆಗೆ ದಿಢೀರ್ ಪರಿಶೀಲನೆ (Surprise Inspection) ನಡೆಸಬೇಕು.

ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮತ್ತು ರಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (RGUHS) ಪ್ರತಿಯನ್ನು ರವಾನಿಸಲಾಗಿದ್ದು, ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳ ಹಿತರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ

Continue Reading

Bantawala

ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಅವ್ಯವಸ್ಥೆ: ಮಣ್ಣಿನೊಳಗೆ ಹೂತುಹಾಕುವ ಕಳ್ಳ ವ್ಯವಹಾರ ಬಯಲು!

Published

on

ಬಂಟ್ವಾಳ/ಉಳ್ಳಾಲ: ಉಳ್ಳಾಲ ವಿಧಾನಸಭಾ ಕ್ಷೇತ್ರದ ಸಜಿಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಘಟಕವು ನಿರ್ವಹಣೆಯಿಲ್ಲದೆ ಭಾರಿ ಅವ್ಯವಸ್ಥೆಯ ಗಂಟಾಗಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯಿಂದ ತರಲಾಗುವ ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವಾಗಿ ಬೇರ್ಪಡಿಸಿ ಸಂಸ್ಕರಿಸಬೇಕಾದ ಸಂಸ್ಥೆ, ಯಾವುದೇ ನಿಯಮ ಪಾಲಿಸದೆ ಎಲ್ಲೆಂದರಲ್ಲಿ ಲೋಡುಗಟ್ಟಲೆ ಕಸವನ್ನು ರಾಶಿ ಹಾಕಿ ಪರಿಸರವನ್ನು ದುರ್ನಾತಮಯಗೊಳಿಸಿದೆ.

ನರಕಸದೃಶ ವಾತಾವರಣ, ಜಲಮೂಲ ಕಲಿಷಿತ: ತ್ಯಾಜ್ಯದ ರಾಶಿಯಿಂದಾಗಿ ಸುತ್ತಮುತ್ತಲಿನ ಪರಿಸರದಲ್ಲಿ ತೀವ್ರ ದುರ್ನಾತ ಬೀರುತ್ತಿದ್ದು, ಮಂಚಿ ಹಾಗೂ ಕುಕ್ಕಾಜೆ-ಸಜಿಪ ಸಂಪರ್ಕ ರಸ್ತೆಯಲ್ಲಿ ಸಂಚರಿಸುವುದೇ ನರಕಸದೃಶವಾಗಿದೆ. ಹಕ್ಕಿಗಳು, ನಾಯಿ-ನರಿಗಳು ತ್ಯಾಜ್ಯವನ್ನು ಹೆಕ್ಕಿ ತಂದು ಸ್ಥಳೀಯ ನಾಗರಿಕರ ಕುಡಿಯುವ ನೀರಿನ ಬಾವಿ ಹಾಗೂ ಟ್ಯಾಂಕ್‌ಗಳಿಗೆ ಎಸೆಯುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

https://deevatigenews.com/wp-content/uploads/2026/08/WhatsApp-Video-2026-08-19-at-16.06.21-1.mp4

ಹಿಟಾಚಿ ಮೂಲಕ ತ್ಯಾಜ್ಯ ಹೂತುಹಾಕುವ ಕಳ್ಳ ವ್ಯವಹಾರ! ಲಕ್ಷಾಂತರ ರೂಪಾಯಿ ಸರ್ಕಾರಿ ಅನುದಾನ ವೆಚ್ಚ ಮಾಡಿ ನಿರ್ಮಿಸಿದ ಈ ಘಟಕದಲ್ಲಿ ತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಬದಲಿಗೆ, ಹಿಟಾಚಿ ಯಂತ್ರ ಬಳಸಿ ಭಾರಿ ಗಾತ್ರದ ಗುಂಡಿ ತೋಡಿ ಕಸವನ್ನು ಮಣ್ಣಿನ ಅಡಿಯಲ್ಲಿ ಹೂತುಹಾಕಲಾಗುತ್ತಿದೆ. ಸ್ಥಳೀಯರು ನೀಡಿದ ದೂರಿನನ್ವಯ ಸಾಮಾಜಿಕ ಕಾರ್ಯಕರ್ತ ಸಮದ್ ಕೈಕಂಬ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ, ಪುರಸಭಾ ಅಧಿಕಾರಿಗಳ ಈ ಬೇಜವಾಬ್ದಾರಿ ಹಾಗೂ ವೈಫಲ್ಯ ಬಹಿರಂಗಗೊಂಡಿದೆ.

ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆ: ಸರ್ಕಾರದ ಹಣ ಪೋಲು ಮಾಡಿ, ಪರಿಸರ ನಾಶಕ್ಕೆ ಕಾರಣರಾಗಿರುವ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಸಮದ್ ಕೈಕಂಬ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ

Continue Reading

Trending

Copyright © 2025 Deevatige

error: Content is protected !!