Connect with us

CONGRESS

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಹೆಸರು ಮುನ್ನೆಲೆಗೆ: ಕಾರ್ಯಕರ್ತರ ವಲಯದಲ್ಲಿ ವ್ಯಾಪಕ ಬೆಂಬಲ!

Published

on

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಅಖಾಡದಲ್ಲಿ ಈಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಾದಿಯ ಕೌತುಕ ಮುಗಿಲು ಮುಟ್ಟಿದೆ. ಜುಲೈ 28ರಿಂದ ಆರಂಭಗೊಂಡಿರುವ ನೂತನ ಅಧ್ಯಕ್ಷರ ಆಯ್ಕೆಯ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಜಿಲ್ಲಾದ್ಯಂತ ತೀವ್ರ ಕಾವೇರಿದ ವಾತಾವರಣ ಸೃಷ್ಟಿಸಿದೆ. ಪ್ರಮುಖ ನಾಯಕರು ಪಟ್ಟಕ್ಕೇರಲು ಪೈಪೋಟಿ ನಡೆಸುತ್ತಿರುವ ಈ ಹೊತ್ತಿನಲ್ಲಿ, ಪಕ್ಷದ ನಿಷ್ಠಾವಂತ ನಾಯಕ, ಸಂಘಟನಾ ಚತುರ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರ ಹೆಸರು ಕರಾವಳಿ ರಾಜಕೀಯದಲ್ಲಿ ಸಿಂಹಪಾಲು ಪಡೆದುಕೊಂಡಿದೆ.

ತಳಮಟ್ಟದ ಪಕ್ಷ ಸಂಘಟನೆ, ಹೊಸ ಅಭಿವೃದ್ಧಿಶೀಲ ಚಿಂತನೆ ಹಾಗೂ ಯುವಪೀಳಿಗೆಗೆ ಪ್ರೋತ್ಸಾಹ ನೀಡಿ ಕಾರ್ಯಕರ್ತರೊಂದಿಗೆ ಕಾರ್ಯಕರ್ತನಾಗಿ ಬೆರೆಯುವ ಪಂಚಾಯತ್ ರಾಜ್ ಅನುಭವದ ಗಣಿ ಎಂದೇ ಗುರುತಿಸಿಕೊಂಡಿರುವ ಇವರ ಆಯ್ಕೆಗೆ ಜಿಲ್ಲೆಯಾದ್ಯಂತ ಕಾರ್ಯಕರ್ತರು ಮತ್ತು ನಾಯಕರಿಂದ ವ್ಯಾಪಕ ಅಭಿಮತ ವ್ಯಕ್ತವಾಗುತ್ತಿದೆ.

ತತ್ವ-ಸಿದ್ಧಾಂತಕ್ಕೆ ಬದ್ಧರಾದ ಹುಟ್ಟು ಕಾಂಗ್ರೆಸಿಗ

ಬಂಟ್ವಾಳ ತಾಲೂಕಿನ ಅತಿ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ಹೊಂದಿರುವ ಬಂಟ ಸಮುದಾಯದ ಪ್ರತಿಷ್ಠಿತ ‘ಕುಳಾಲು’ ಕುಟುಂಬದ ಹಿನ್ನೆಲೆ ಹೊಂದಿರುವ ಬಿ.ಎ. ಪದವೀಧರ ಸುಭಾಶ್ಚಂದ್ರ ಶೆಟ್ಟಿಯವರು ವಿದ್ಯಾರ್ಥಿ ದಶೆಯಲ್ಲೇ ಕಾಂಗ್ರೆಸ್ ಸಿದ್ಧಾಂತದಿಂದ ಪ್ರಭಾವಿತರಾದವರು. ಅಂದಿನ ಜನಪ್ರಿಯ ಶಾಸಕರಾಗಿದ್ದ ವಿನಯ ಕುಮಾರ್ ಸೊರಕೆ ಅವರ ಮೂಲಕ 1992ರಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸದಸ್ಯತ್ವ ಪಡೆಯುವ ಮೂಲಕ ರಾಜಕೀಯ ಪಯಣ ಆರಂಭಿಸಿದರು.

ವಿಶೇಷವೆಂದರೆ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಭೂಸುಧಾರಣಾ ಕಾಯ್ದೆಯಿಂದ ತಮ್ಮ ಕುಟುಂಬದ ಆಸ್ತಿಯ ಭಾಗವನ್ನು ಕಳೆದುಕೊಂಡಿದ್ದರೂ, ಪಕ್ಷದ ಸಾಮಾಜಿಕ ನ್ಯಾಯ ಮತ್ತು ಬಡವರ ಪರವಾದ ತತ್ವಗಳಿಗೆ ಯಾವುದೇ ಅಸಮಾಧಾನವಿಲ್ಲದೆ ಬದ್ಧರಾಗಿ ಉಳಿದುಕೊಂಡ ಅಪರೂಪದ ಕಟಿಬದ್ಧತೆಗೆ ಈ ಕುಟುಂಬ ಮಾದರಿಯಾಗಿದೆ.

ಅಭಿವೃದ್ಧಿಯ ಹರಿಕಾರ – ಮಾದರಿ ಪಂಚಾಯತ್ ಆಡಳಿತ

ಅಭಿವೃದ್ಧಿಯಿಂದ ವಂಚಿತವಾಗಿದ್ದ ಕೊಳ್ನಾಡು-ಕುಳಾಲು ಪ್ರದೇಶದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜನರನ್ನು ಒಗ್ಗೂಡಿಸಿ ಶ್ರಮದಾನದ ಮೂಲಕ ರಸ್ತೆ ಹಾಗೂ ಕಾಲುದಾರಿಗಳನ್ನು ನಿರ್ಮಿಸಿ ಗ್ರಾಮೀಣ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದ ಹೆಗ್ಗಳಿಕೆ ಇವರದ್ದು.

ಸತತ 6 ಬಾರಿ ಜಯ: 1994ರಿಂದ 2025ರವರೆಗೆ ಸತತ 6 ಬಾರಿ ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದು, 2 ಬಾರಿ ಅಧ್ಯಕ್ಷರಾಗಿ, 2 ಬಾರಿ ಉಪಾಧ್ಯಕ್ಷರಾಗಿ ಆಡಳಿತದಲ್ಲಿ ಮಾದರಿ ನಾಯಕತ್ವ ಪ್ರದರ್ಶಿಸಿದ್ದಾರೆ.

ರಾಷ್ಟ್ರೀಯ/ರಾಜ್ಯ ಪ್ರಶಸ್ತಿಗಳ ಗರಿ: ಇವರ ಆಡಳಿತಾವಧಿಯಲ್ಲಿ ಕೊಳ್ನಾಡು ಪಂಚಾಯತ್‌ಗೆ ರಾಷ್ಟ್ರಪತಿಗಳು ಪ್ರದಾನ ಮಾಡುವ ರಾಷ್ಟ್ರೀಯ ನಿರ್ಮಲ ಪುರಸ್ಕಾರ, ರಾಜ್ಯ ಸರ್ಕಾರದ ‘ನಮ್ಮ ಗ್ರಾಮ ನಮ್ಮ ಯೋಜನೆ’ ಪ್ರಶಸ್ತಿ, 2 ಬಾರಿ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ ಅತ್ಯುತ್ತಮ ಪಂಚಾಯತ್ ಗೌರವ ಲಭಿಸಿದೆ. ಅಲ್ಲದೆ, ಸಾಲೆತ್ತೂರು ನವಪೇಟೆ ನಿರ್ಮಾಣಕ್ಕೂ ಇವರ ಕೊಡುಗೆ ಅಪಾರ.

ಸಹಕಾರಿ ಕ್ಷೇತ್ರದಲ್ಲಿ ಸಾಧನೆ: ವಿಟ್ಲಪಡ್ನೂರು ಪ್ರಾಥಮಿಕ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂಸ್ಥೆಯನ್ನು ರೂ. 1.5 ಕೋಟಿ ವಾರ್ಷಿಕ ಲಾಭದತ್ತ ಕೊಂಡೊಯ್ದು, ನೂತನ ಕೇಂದ್ರ ಕಛೇರಿ ನಿರ್ಮಿಸಿ ಜಿಲ್ಲಾ ಡಿಸಿಸಿ ಬ್ಯಾಂಕಿನಿಂದ ಸತತ ನಾಲ್ಕು ಬಾರಿ ‘ಸಾಧನ ಪ್ರಶಸ್ತಿ’ ಗಳಿಸಿದ್ದಾರೆ.

ಸಂಘಟನಾ ಚಾತುರ್ಯ ಮತ್ತು ಸಮಾಜಸೇವೆ

ಜಿಲ್ಲಾ ಯುವ ಕಾಂಗ್ರೆಸ್ ಜಂಟಿ ಕಾರ್ಯದರ್ಶಿಯಾಗಿ, ವಿಟ್ಲ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್‌ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಇವರು, ವಿಟ್ಲ, ಪುತ್ತೂರು ಮತ್ತು ಕಡಬ ಬ್ಲಾಕ್‌ಗಳ ಉಸ್ತುವಾರಿಯಾಗಿ ಚುನಾವಣೆಗಳಲ್ಲಿ ಪಕ್ಷವನ್ನು ಬಲಪಡಿಸಿದ್ದಾರೆ. ಪ್ರಸ್ತುತ ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಂಯೋಜಕರಾಗಿ ಹಾಗೂ ತರಬೇತುದಾರರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.

‘ಗ್ರಾಮ ಸ್ವರಾಜ್ ಪ್ರತಿಷ್ಠಾನ’ದ ಅಧ್ಯಕ್ಷರಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 9,000ಕ್ಕೂ ಅಧಿಕ ಜನಪ್ರತಿನಿಧಿಗಳು ಮತ್ತು ಸಿಬ್ಬಂದಿಗಳಿಗಾಗಿ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಮಹೋತ್ಸವಗಳನ್ನು ಸಂಘಟಿಸಿ ತಮ್ಮ ಅಸಾಧಾರಣ ಸಂಘಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

35 ವರ್ಷಗಳ ಸುದೀರ್ಘ ಪಯಣ: ಅರ್ಹತೆಗೆ ಮನ್ನಣೆ ನೀಡಲು ಕಾರ್ಯಕರ್ತರ ಆಗ್ರಹ

ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದರೂ, ಹಲವು ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಯಾವುದೇ ಕನಿಷ್ಠ ಗ್ರಾಮ ಮಟ್ಟದ ನಾಮನಿರ್ದೇಶನ ಹುದ್ದೆಯನ್ನೂ ಬಯಸದೆ ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಈ ಸುದೀರ್ಘ ಪಕ್ಷನಿಷ್ಠೆ, ಸಂಘಟನಾ ಅನುಭವ ಹಾಗೂ ಜನಸೇವೆಯ ಬದ್ಧತೆಯನ್ನು ಗುರುತಿಸಿ, ಕೆಪಿಸಿಸಿ ನಾಯಕರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರನ್ನು ನೇಮಕ ಮಾಡಬೇಕು. ಇದು ಗ್ರಾಮೀಣ ಮಟ್ಟದಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ನೀಡಲಿದ್ದು, ಕಾರ್ಯಕರ್ತರ ನಿಜವಾದ ಶಕ್ತಿಗೆ ಸಿಗುವ ಗೌರವವಾಗಿದೆ ಎಂಬ ಧ್ವನಿ ಜಿಲ್ಲೆಯಾದ್ಯಂತ ಬಲವಾಗಿ ಕೇಳಿಬರುತ್ತಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

CONGRESS

ಮಂಗಳೂರು ಹಳೆ ಬಂದರು ಪ್ರದೇಶಕ್ಕೆ ಸಿಎಂ ಭೇಟಿ: ಮೀನುಗಾರಿಕೆ ವ್ಯವಹಾರ ಸ್ಥಗಿತಗೊಳಿಸಿದ್ದಕ್ಕೆ ಆಕ್ರೋಶ, ತನಿಖೆಗೆ ಆದೇಶ

Published

on

ಮಂಗಳೂರು, ಸೆ. 19: ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕಾ ಧಕ್ಕೆ ಹಳೆ ಬಂದರು ಪ್ರದೇಶಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕಮಾರ್ ಅವರು, ತಮ್ಮ ಭೇಟಿಯ ವೇಳೆ ಮೀನುಗಾರಿಕಾ ವ್ಯವಹಾರ ಹಾಗೂ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಈ ಬಗ್ಗೆ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಅಧಿಕಾರಿಗಳೇ ಅಥವಾ ಪೊಲೀಸರೇ ಚಟುವಟಿಕೆಗಳನ್ನು ನಿಲ್ಲಿಸಿದ್ದರೆ ಅವರನ್ನು ಇಂದೇ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು. ರಾಜ್ಯ ಹಾಗೂ ಹೊರರಾಜ್ಯಗಳಿಂದ ಬರುವ ಮೀನುಗಾರರು ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ವ್ಯವಹಾರಗಳು ಎಂದಿನಂತೆ ಸುಗಮವಾಗಿ ನಡೆಯಬೇಕು ಎಂದು ಸಿಎಂ ತಿಳಿಸಿದರು. ಮೀನುಗಾರಿಕೆಯು ಆರ್ಥಿಕತೆಯ ದೊಡ್ಡ ಶಕ್ತಿಯಾಗಿದ್ದು, ಧಕ್ಕೆಯಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು, ಸುರಕ್ಷತೆ ಒದಗಿಸುವುದು ಹಾಗೂ ಸಣ್ಣ ದೋಣಿ ಮೀನುಗಾರರಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ಅಳಿವೆ ಬಾಗಿಲಿಗೆ ಹೂಳೆತ್ತದೆ ಇರುವುದು ಅಪಾಯಕಾರಿಯಾಗಿದೆ ಎಂಬ ಮೀನುಗಾರರ ಅಳಲಿಗೆ ಸ್ಪಂದಿಸಿ, ಡ್ರೆಜಿಂಗ್ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದ ತಾಂತ್ರಿಕ ಸಮಿತಿಯ ಸಲಹೆ ಪಡೆದು ಶೀಘ್ರವೇ ಸರ್ಕಾರವೇ ಸ್ವಂತ ಡ್ರೆಜಿಂಗ್ ಯಂತ್ರ ಖರೀದಿಸುವುದೋ ಅಥವಾ ಲೀಸ್‌ಗೆ ಪಡೆಯುವುದೋ ಎಂಬ ಬಗ್ಗೆ ತೀರ್ಮಾನಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಕರಾವಳಿಯ ಅಭಿವೃದ್ಧಿಗೆ ಹೊಸ ಪಥದ ಚಿಂತನೆ ನಡೆಸಲಾಗಿದ್ದು, ಹೂಡಿಕೆದಾರರನ್ನು ಆಕರ್ಷಿಸಲು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ಕಸ್ತೂರಿ ರಂಗನ್ ವರದಿ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಜನಸಾಮಾನ್ಯರ ಬದುಕು ನಮಗೆ ಮುಖ್ಯವಾಗಿದ್ದು, ಹಿಂದೆಯೂ ನಾವು ಈ ವರದಿಯನ್ನು ತಿರಸ್ಕರಿಸಿದ್ದೇವೆ ಎಂದರು. ಕಾನೂನು ಚೌಕಟ್ಟಿನಲ್ಲಿ ಜನರಿಗೆ ಆಗುವ ಅನ್ಯಾಯ ತಪ್ಪಿಸಲು ವಾಸ್ತವ ಅಂಶಗಳನ್ನು ಅರಿಯಲು ಜನರ ಬಳಿಗೆ ಬಂದಿರುವುದಾಗಿ ತಿಳಿಸಿದರು. ಸಚಿವ ಸಂಪುಟದ ಅನುಮೋದನೆ ಕುರಿತು ಬಿಜೆಪಿ ಟೀಕೆಗಳಿಗೆ ಉತ್ತರಿಸಿ, “ನಾವು ನುಡಿದಂತೆ ನಡೆಯುತ್ತೇವೆ, ಅದೇ ನಮ್ಮ ಶಕ್ತಿ” ಎಂದು ಸ್ಪಷ್ಟಪಡಿಸಿದರು. ಈ ಭೇಟಿಯ ವೇಳೆ ಸಚಿವ ಯು.ಟಿ. ಖಾದರ್, ವಿವಿಧ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಮೀನುಗಾರಿಕಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

CONGRESS

ಮಂಗಳೂರು ಸಚಿವ ಸಂಪುಟ ಸಭೆ: ವಿವಿಧ ಸಂಘಟನೆಗಳ ಪ್ರತಿಭಟನೆ ಮತ್ತು ಬಿಗಿ ಭದ್ರತೆ

Published

on

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಶುಕ್ರವಾರ (ಸೆಪ್ಟೆಂಬರ್ 18) ಆಯೋಜಿಸಲಾದ ವಿಶೇಷ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಸಚಿವರು ಆಗಮಿಸಿದ ವೇಳೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ವಿವಿಧ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿದವು. ಅಬ್ದುಲ್ ರಹೀಮಾನ್ ಕೊಲೆ ಆರೋಪಿಗಳಿಗೆ ಜಾಮೀನು ಮಂಜೂರಾಗಿರುವುದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣವೆಂದು ಆರೋಪಿಸಿ ಎಸ್.ಡಿ.ಪಿ.ಐ. ಕಾರ್ಯಕರ್ತರು ಮಂಗಳೂರಿನ ರಾವ್ & ರಾವ್ ಸರ್ಕಲ್ ಬಳಿ ಕಪ್ಪುಪತಾಕೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಹಲವು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

ಅದೇ ರೀತಿ, ಜೈಲ್ ಜಾಮರ್ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವಕೀಲರನ್ನು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹೊರಟ ಸಿ.ಪಿ.ಐ.ಎಂ. ಕಾರ್ಯಕರ್ತರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. ಇದರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ತುಳು ಸಂಘಟನೆಯವರು ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವಂತೆ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ, ಸಿಎಂ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದ ‌ ಸಹೋದ್ಯೋಗಿಗಳೊಂದಿಗೆ ಕದ್ರಿ ಶ್ರೀ ಮಂಜುನಾಥ ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಡೀಲ್‌ನಲ್ಲಿರುವ ಪ್ರಜ್ಞಾಸೌಧದ ಎರಡನೇ ಮಹಡಿಯ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಒಟ್ಟು 33 ಮಂದಿ ಸಚಿವರಿಗೆ ಮತ್ತು ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಆಯಾ ಸಭಾಂಗಣದಲ್ಲೇ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಿಗದಿತ ಸಮಯಕ್ಕಿಂತ ಸಭೆ ಸ್ವಲ್ಪ ವಿಳಂಬವಾಗಿ ಆರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Continue Reading

CONGRESS

ಮಂಗಳೂರಿನಲ್ಲಿ ಐತಿಹಾಸಿಕ ರಾಜ್ಯ ವಿಶೇಷ ಸಚಿವ ಸಂಪುಟ ಸಭೆ: ಸಿಎಂ ಹಾಗೂ ಸಚಿವರ ಭೇಟಿ ಮತ್ತು ಕಾರ್ಯಕ್ರಮಗಳ ವರದಿ

Published

on

ಮಂಗಳೂರು: ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ರಾಜ್ಯ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟ ಸಚಿವರು ಆಗಮಿಸಿದ್ದು, ನಗರದಲ್ಲಿ ಬಿರುಸಿನ ರಾಜಕೀಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಆರಂಭವಾಗಿವೆ.

ಕದ್ರಿ ದೇವಸ್ಥಾನ ಭೇಟಿ ಮತ್ತು ಗಾಂಧೀಜಿ ಸ್ಮರಣೆ

ಪ್ರವಾಸದ ಮೊದಲ ದಿನವಾದ ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿಗಳು ಐತಿಹಾಸಿಕ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, 1934ರಲ್ಲಿ ಮಹಾತ್ಮ ಗಾಂಧೀಜಿಯವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಳಿದುಕೊಂಡಿದ್ದ ಐತಿಹಾಸಿಕ ಮನೆಯ ಸಮೀಪವಿರುವ ಗಾಂಧಿ ಸ್ಕ್ವೇರ್ ಕೆಫೆಗೆ ತೆರಳಿದರು.

ಯುವ ಕಂಟೆಂಟ್‌ ಕ್ರಿಯೇಟರ್ಸ್‌ ಜೊತೆ ಉಪಾಹಾರ ಹಾಗೂ ಸಂವಾದ

ಮಂಗಳೂರಿನ ಯುವ ಸೋಶಿಯಲ್ ಮೀಡಿಯಾ ಕಂಟೆಂಟ್‌ ಕ್ರಿಯೇಟರ್‌ಗಳೊಂದಿಗೆ ಕೆಫೆಯಲ್ಲಿ ಸಾಂಪ್ರದಾಯಿಕ ಉಪಾಹಾರ ಸವಿಯುತ್ತಾ ಸಿಎಂ ಸಂವಾದ ನಡೆಸಿದರು. ಮಂಗಳೂರು ಬನ್ಸ್, ದೋಸೆ ಸೇರಿದಂತೆ ಕರಾವಳಿಯ ವಿಶಿಷ್ಟ ಉಪಾಹಾರಗಳನ್ನು ಸವಿದ ಅವರು, “ಇಲ್ಲಿಗೆ ಬಂದಿರುವುದು ಬಹಳ ಸಂತೋಷ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

ಜನರ ಬದುಕು ಮುಖ್ಯ – ಸಿಎಂ ಸ್ಪಷ್ಟನೆ

ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, “ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲೆಲ್ಲಿ ಕರೆದುಕೊಂಡು ಹೋಗುತ್ತಾರೋ ಅಲ್ಲಿಗೆ ಹೋಗುತ್ತೇನೆ. ಯಾರೂ ಗಾಬರಿಯಾಗಬೇಕಿಲ್ಲ; ನಮಗೆ ಜನರ ಬದುಕು ಮುಖ್ಯವೇ ಹೊರತು ಭಾವನೆಗಳ ಮೇಲೆ ರಾಜಕೀಯ ಮಾಡುವವರಲ್ಲ. ಎಲ್ಲರ ಚಿಂತನೆಯನ್ನೊಳಗೊಂಡು ನಮ್ಮ ಸರ್ಕಾರ ಕೆಲಸ ಮಾಡಲಿದೆ” ಎಂದು ಸ್ಪಷ್ಟಪಡಿಸಿದರು.

ಸಂಪುಟ ಸಭೆಗೆ ಭರ್ಜರಿ ಸ್ವಾಗತ ಮತ್ತು ಸಿದ್ಧತೆ

ಸಚಿವ ಸಂಪುಟ ಸಭೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಭವ್ಯ ಸ್ವಾಗತಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಪಂಪ್‌ವೆಲ್‌ನಿಂದ ಪಡೀಲ್ ವರೆಗೆ ಚೆಂಡೆ ಬ್ಯಾಂಡ್‌ಗಳು ಹಾಗೂ ವಿವಿಧ ವೇಷಧಾರಿಗಳ ಸಾಂಸ್ಕೃತಿಕ ತಂಡಗಳು ರಸ್ತೆಯುದ್ದಕ್ಕೂ ಗಮನ ಸೆಳೆದವು. ಡಿಸಿ ಕಚೇರಿ ಮುಂದೆ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದು, ಮುಖ್ಯಮಂತ್ರಿಗಳನ್ನು ಕಣ್ತುಂಬಿಕೊಳ್ಳಲು ರಸ್ತೆ ಬದಿ ಕಾದು ನಿಂತಿದ್ದಾರೆ.

Continue Reading

Trending

Copyright © 2025 Deevatige

error: Content is protected !!