murder
ತೆಲಂಗಾಣದಲ್ಲಿ ಭೀಕರ ಹತ್ಯಾಕಾಂಡ: ಜಾಮೀನಿನ ಮೇಲೆ ಬಂದ ಪೋಕ್ಸೋ ಆರೋಪಿಯಿಂದ ಪತ್ನಿ, ಮಕ್ಕಳು ಹಾಗೂ ಸಂತ್ರಸ್ತೆ ಸೇರಿ 6 ಮಂದಿ ಕೊಲೆ!
ಹೈದರಾಬಾದ್: ಪೋಕ್ಸೋ (POCSO) ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ನರಾಧಮನೊಬ್ಬ ಸೇಡಿನ ಜ್ವಾಲೆಗೆ ತುತ್ತಾಗಿ ತನ್ನ ಪತ್ನಿ, ಇಬ್ಬರು ಮಕ್ಕಳು ಹಾಗೂ ತನ್ನ ವಿರುದ್ಧ ದೂರು ನೀಡಿದ್ದ ಅಪ್ರಾಪ್ತ ಸಂತ್ರಸ್ತೆ ಸೇರಿದಂತೆ ಒಂದೇ ರಾತ್ರಿಯಲ್ಲಿ ಆರು ಜನರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.
ರಾಜ್‌ಕುಮಾರ್ (28) ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಹಂತಕ. ಘಟನೆಯ ನಂತರ ಈತ ತನ್ನ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ.
ಘಟನೆಯ ಹಿನ್ನೆಲೆ:
ಪೊಲೀಸರ ಮಾಹಿತಿಯ ಪ್ರಕಾರ, ಕಳೆದ ಮೇ 16 ರಂದು 17 ವರ್ಷದ ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಾಯಿ, ರಾಜ್‌ಕುಮಾರ್ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಶಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೇ 26 ರಂದು ಪೊಲೀಸರು ಈತನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದರು. ಆದರೆ, ಇತ್ತೀಚೆಗಷ್ಟೇ ಆತ 20,000 ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ. ಜೈಲಿನಿಂದ ಬಂದಾಗಿನಿಂದಲೂ ಆತ ದೂರು ನೀಡಿದ ಕುಟುಂಬದ ಮೇಲೆ ತೀವ್ರ ಕ್ರೋಧ ಹೊಂದಿದ್ದ ಎನ್ನಲಾಗಿದೆ.
ಕೃತ್ಯ ನಡೆದಿದ್ದು ಹೇಗೆ? (ಸರಣಿ ಕೊಲೆಗಳು):
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶುಕ್ರವಾರ ತಡರಾತ್ರಿ 11:30 ರಿಂದ 12 ಗಂಟೆಯ ಅವಧಿಯಲ್ಲಿ ಸುಮಾರು 6 ಕಿಲೋಮೀಟರ್ ವ್ಯಾಪ್ತಿಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಈ ಕೊಲೆಗಳು ನಡೆದಿವೆ.
ಮೊದಲ ದಾಳಿ (ಸ್ವಂತ ಕುಟುಂಬದ ಮೇಲೆ): ಆರೋಪಿ ರಾಜ್‌ಕುಮಾರ್ ಮೊದಲು ತನ್ನದೇ ನಿವಾಸದಲ್ಲಿ ಪತ್ನಿ ಸರಿತಾ (33), ಮಕ್ಕಳಾದ ಪರೀಕ್ಷಿತ್ (4) ಮತ್ತು ಧೈವಿಕ್ಷಿತ್ (2) ಅವರನ್ನು ಹರಿತವಾದ ಆಯುಧದಿಂದ ಕೊಚ್ಚಿ ಅತ್ಯಂತ ಕ್ರೂರವಾಗಿ ಕೊಂದಿದ್ದಾನೆ.
ಎರಡನೇ ದಾಳಿ (ದೂರುದಾರರ ಮನೆ): ಅಲ್ಲಿಂದ ನೇರವಾಗಿ ಸಂತ್ರಸ್ತ ಬಾಲಕಿಯ ಮನೆಗೆ ನುಗ್ಗಿದ ಆತ, ಬಾಲಕಿಯನ್ನು ಬಲವಂತವಾಗಿ ಅಪಹರಿಸಲು ಯತ್ನಿಸಿದ್ದಾನೆ. ಇದನ್ನು ತಡೆಯಲು ಬಂದ ಬಾಲಕಿಯ ತಾಯಿ (45) ಮತ್ತು ಅಜ್ಜಿ (65) ಅವರನ್ನು ಚಾಕುವಿನಿಂದ ಇರಿದು ಸ್ಥಳದಲ್ಲೇ ಕೊಂದಿದ್ದಾನೆ.
ಸಂತ್ರಸ್ತೆಯ ಕೊಲೆ: ತಾಯಿ ಮತ್ತು ಅಜ್ಜಿಯನ್ನು ಕೊಂದ ಬಳಿಕ, 17 ವರ್ಷದ ಅಪ್ರಾಪ್ತ ಬಾಲಕಿಯನ್ನು ದೈವಲಗುಡದ ಹೊರವಲಯದ ಅಖಿಲ್ ಸಾಗರ್ ಕೆರೆಯ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು, ಅಲ್ಲಿ ಆಕೆಯ ಗಂಟಲು ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಬಾಲಕಿಯ ಶವದ ಮೇಲೆ ಲೈಂಗಿಕ ದೌರ್ಜನ್ಯದ ಕುರುಹುಗಳು ಪತ್ತೆಯಾಗಿದ್ದು, ಕೊಲೆಗೂ ಮುನ್ನ ಅತ್ಯಾಚಾರ ಎಸಗಲಾಗಿದೆಯೇ ಎಂಬ ಬಗ್ಗೆ ವೈದ್ಯಕೀಯ ವರದಿ ಬರಬೇಕಿದೆ.
ತಂದೆಗೆ ಕರೆ ಮಾಡಿ ತಪ್ಪೊಪ್ಪಿಗೆ, ಹಂತಕನಿಗಾಗಿ ಹುಡುಕಾಟ:
ಆರು ಕೊಲೆಗಳನ್ನು ಮಾಡಿದ ಬಳಿಕ ಆರೋಪಿ ರಾಜ್‌ಕುಮಾರ್ ತನ್ನ ತಂದೆ ಅರುಣ್ ಕುಮಾರ್‌ಗೆ ಫೋನ್ ಮಾಡಿ, “ನಾನು ಎರಡೂ ಕುಟುಂಬಗಳನ್ನು ಮುಗಿಸಿದ್ದೇನೆ, ಈಗ ನಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಗಾಬರಿಗೊಂಡ ತಂದೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ:
ಘಟನಾ ಸ್ಥಳಕ್ಕೆ ಫ್ಯೂಚರ್ ಸಿಟಿ ಪೊಲೀಸ್ ಕಮಿಷನರ್ ತರುಣ್ ಜೋಶಿ, ಚೆವೆಲ್ಲಾ ಡಿಸಿಪಿ ಯೋಗೇಶ್ ಗೌತಮ್ ಮತ್ತು ಇತರೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಕ್ಲೂಸ್ ಟೀಮ್ (Clues Team) ಸ್ಥಳಕ್ಕೆ ಆಗಮಿಸಿ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ಎಲ್ಲಾ ಆರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ತಲೆಮರೆಸಿಕೊಂಡಿರುವ ಹಂತಕ ರಾಜ್‌ಕುಮಾರ್ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದು, ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ. ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಮುಂದುವರಿದಿದೆ.
accident
ಬಂಟ್ವಾಳ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಣೆಯಲ್ಲಿ ದುರ್ಘಟನೆ; ಕೌಟುಂಬಿಕ ಕಲಹದ ಹಿನ್ನೆಲೆ ಮಕ್ಕಳನ್ನು ಬಾವಿಗೆ ಎಸೆದ ತಾಯಿ – ಒಂದು ಮಗು ಸಾವು, ಮತ್ತೊಂದು ಮಗು ಆಸ್ಪತ್ರೆಗೆ ದಾಖಲು
ಬಂಟ್ವಾಳ: ದಿನಾಂಕ: 19.09.2026ರಂದು ಮಧ್ಯಾಹ್ನ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ಣೆ ಮೈರಕಟ್ಟೆಯಲ್ಲಿ ನಡೆದ ದೊಡ್ಡ ದುರಂತವೊಂದು ಬೆಳಕಿಗೆ ಬಂದಿದೆ. ಪೆರ್ಣೆಯಲ್ಲಿ ವಾಸ್ತವವಿರುವ ಸಿನಾನ್ (32) ಹಾಗೂ ನೂರುನ್ನಿಸಾ (28) ಎಂಬ ದಂಪತಿಗಳ ನಡುವೆ ಫೋನ್ ಕರೆಯಲ್ಲಿ ವೈವಾಹಿಕ ಕಲಹ ನಡೆದಿದ್ದು, ಈ ವೇಳೆ ಕೋಪಗೊಂಡ ಆರೋಪಿತೆ ನೂರುನ್ನಿಸಾ ಮನೆಯಲ್ಲಿದ್ದ ಆಕೆಯ ಸುಮಾರು ಮೂರುವರೆ ವರ್ಷದ ಮಗು ಹಾಗೂ ಗಂಡನ ತಂಗಿಯ ಮಗುವನ್ನು ಮನೆ ಸಮೀಪದ ಕುಡಿಯುವ ನೀರಿನ ಬಾವಿಗೆ ಎಸೆದಿರುವುದಾಗಿ ಎಸ್‌ಪಿ ಮಾಹಿತಿ ನೀಡಿದ್ದಾರೆ.

ಆದರೆ, ಬೆಳಿಗ್ಗೆ ಸ್ಥಳೀಯ ವಾಹಿನಿಗಳಲ್ಲಿ ಹಾಗೂ ಆರಂಭಿಕ ವರದಿಗಳಲ್ಲಿ ಮಕ್ಕಳು ಆಟವಾಡುತ್ತಾ ಆಕಸ್ಮಿಕವಾಗಿ ಬಾವಿಗೆ ಬಿದ್ದಿವೆ ಎಂದು ಪ್ರಸಾರವಾಗಿತ್ತು. ಪ್ರತ್ಯಕ್ಷದರ್ಶಿಗಳು ಹಾಗೂ ಆರಂಭಿಕ ಮಾಹಿತಿಯಂತೆ, ಪೆರ್ಣೆ ಮೈರಕಟ್ಟೆಯಲ್ಲಿ ಮಕ್ಕಳು ಬಾವಿಯ ಸಮೀಪವಿದ್ದ ವೇಳೆ ಆಲಿಯಾ (4) ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ರಕ್ಷಿಸಿ ಮೇಲಕ್ಕೆ ಕರೆತಂದಿದ್ದರು. ಬಳಿಕ ಮತ್ತೊಂದು ಮಗು ಕೂಡ ಬಾವಿಗೆ ಬಿದ್ದಿರುವ ಬಗ್ಗೆ ಆಲಿಯಾ ಮಾಹಿತಿ ನೀಡಿದ್ದಾಳೆ ಎನ್ನಲಾಗಿದ್ದು, ಸ್ಥಳೀಯರು ಪರಿಶೀಲಿಸಿದಾಗ ರಬೀಹ್ (2) ಬಾವಿಯಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದರೂ ರಬೀಹ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪ್ರಸಾರವಾಗಿತ್ತು.

ನೈಜ ಸತ್ಯ ಬಯಲುಗೊಳಿಸಿದ ಪೊಲೀಸರು:
ಸ್ಥಳೀಯ ಮಾದ್ಯಮಗಳಲ್ಲಿ ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಬಿತ್ತರವಾಗಿದ್ದರೂ, ಪೊಲೀಸ್ ತನಿಖೆಯಿಂದ ಅಸಲಿ ವಿಚಾರ ಹೊರಬಂದಿದೆ. ದಂಪತಿಗಳ ನಡುವಿನ ಫೋನ್ ಕರೆಯ ಕೌಟುಂಬಿಕ ಕಲಹದ ರಭಸದಲ್ಲಿ ಕೋಪಗೊಂಡ ಆರೋಪಿತೆ ನೂರುನ್ನಿಸಾ ತಾನೇ ಸ್ವತಃ ಮಕ್ಕಳನ್ನು ಬಾವಿಗೆ ಎಸೆದಿರುವುದು ಎಸ್‌ಪಿ ನೀಡಿರುವ ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ. ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಮಕ್ಕಳನ್ನು ಮೇಲಕ್ಕೆ ಎತ್ತಿದ1ರ ಪೈಕಿ ಗಂಡನ ತಂಗಿಯ ಮಗು (ರಬೀಹ್ – 3) ಮೃತಪಟ್ಟಿದ್ದು, ಆರೋಪಿತೆಯ ಮಗು (ಆಲಿಯಾ – 4) ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 121/2026 ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿತೆ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
DEATH
ಬೆಳಗಾವಿ: ಆಸ್ತಿಗಾಗಿ ಆಕ್ರೋಶ; ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ತಂದೆ-ಮಗಳ ಬರ್ಬರ ಹತ್ಯೆ
ಬೆಳಗಾವಿ: ಆಸ್ತಿ ದಾಖಲೆಗಳನ್ನು ಪಡೆದುಕೊಳ್ಳಲು ಗ್ರಾಮ ಪಂಚಾಯಿತಿಗೆ ಬಂದಿದ್ದ ಮಾಜಿ ಯೋಧ ಹಾಗೂ ಅವರ ಪುತ್ರಿಯನ್ನು ಸಂಬಂಧಿಕರೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.
ಮಾಜಿ ಯೋಧ ರುದ್ರಪ್ಪ ಕುಂದರಗಿ (67) ಮತ್ತು ಅವರ ಪುತ್ರಿ ಶಶಿಕಲಾ ಕುಂದರಗಿ (26) ಹತ್ಯೆಗೀಡಾದ ದುರ್ದೈವಿಗಳು. ಈ ಭೀಕರ ದಾಳಿಯಲ್ಲಿ ರುದ್ರಪ್ಪ ಅವರ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಹಿನ್ನೆಲೆ:
ಮೃತರಾದ ರುದ್ರಪ್ಪ ಹಾಗೂ ಅವರ ಅಣ್ಣತಮ್ಮಂದಿರ ನಡುವೆ 38 ಗುಂಟೆ ಆಸ್ತಿಗೆ ಸಂಬಂಧಿಸಿದಂತೆ ದೀರ್ಘಕಾಲದಿಂದ ವ್ಯಾಜ್ಯವಿತ್ತು ಎನ್ನಲಾಗಿದೆ. ಈ ಆಸ್ತಿಯನ್ನು ಮೂವರಿಗೆ ಹಂಚಿಕೆ ಮಾಡುವಂತೆ ನ್ಯಾಯಾಲಯವೂ ಆದೇಶ ನೀಡಿತ್ತು. ಆದರೆ, ರುದ್ರಪ್ಪ ಅವರಿಗೆ ಸೇರಿದ್ದ ಜಮೀನನ್ನು ಅವರು ಈಗಾಗಲೇ ಮಾರಿಕೊಂಡಿದ್ದು, ಉಳಿದ ಜಮೀನಿನಲ್ಲೂ ತಮಗೆ ಪಾಲು ಬೇಕು ಎಂದು ಸಹೋದರರು ಪಟ್ಟು ಹಿಡಿದಿದ್ದರು. ರುದ್ರಪ್ಪ ಅವರ ಹೆಸರಿನಲ್ಲಿ ಆಸ್ತಿ ಮುಂದುವರಿದಿರುವ ವಿಚಾರವೇ ಈ ಮಾರಣಾಹೋಮಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಪಂಚಾಯಿತಿ ಒಳಗಡೆಯೇ ಕೃತ್ಯ:
ಧಾರವಾಡದಿಂದ ಬಾಡಿಗೆ ಕಾರಿನಲ್ಲಿ ಗ್ರಾಮಕ್ಕೆ ಬಂದಿದ್ದ ರುದ್ರಪ್ಪ, ಆಸ್ತಿ ಪಾಲುದಾರಿಕೆ ಹಾಗೂ ದಾಖಲೆಗಳನ್ನು ಪಡೆದುಕೊಳ್ಳಲು ಅವರಾದಿ ಗ್ರಾಮ ಪಂಚಾಯಿತಿಗೆ ತೆರಳಿದ್ದರು. ರುದ್ರಪ್ಪ ಪಂಚಾಯಿತಿಗೆ ಬಂದಿರುವ ಸುದ್ಧಿ ತಿಳಿದು ಸ್ಥಳಕ್ಕೆ ಆಗಮಿಸಿದ ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಸಂಗಪ್ಪ ಅವರ ಪುತ್ರ ಮಡಿವಾಳಪ್ಪ ಕುಂದರಗಿ ಏಕಾಏಕಿ ದಾಳಿ ನಡೆಸಿದ್ದಾರೆ.
ಗ್ರಾಮ ಪಂಚಾಯಿತಿ ಕಚೇರಿಯ ಒಳಗಡೆಯೇ ಕೊಡಲಿ, ಕುಡಗೋಲು ಸೇರಿದಂತೆ ಮಾರಕಾಸ್ತ್ರಗಳಿಂದ ರುದ್ರಪ್ಪ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ತಂದೆಯನ್ನು ರಕ್ಷಿಸಲು ಮುಂದಾದ ಪುತ್ರಿ ಶಶಿಕಲಾ ಅವರ ಮೇಲೂ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಇಬ್ಬರನ್ನೂ ನಿರ್ದಯವಾಗಿ ಹತ್ಯೆ ಮಾಡಿದ್ದಾರೆ.
ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪಂಚಾಯಿತಿ ಕಚೇರಿಯಲ್ಲೇ ನಡೆದ ಈ ಜೋಡಿ ಹತ್ಯೆಯು ಇಡೀ ಗ್ರಾಮದಲ್ಲಿ ತೀವ್ರ ಆತಂಕ ಹಾಗೂ ಶೋಕಮೂಡಿಸಿದೆ.
ಇಬ್ಬರ ಆಸ್ತಿಯಲ್ಲೂ ಪಾಲು ಕೇಳಿದ್ದಕ್ಕೆ ಕುಪಿತಗೊಂಡಿದ್ದ ಇಬ್ಬರು ಸಹೋದರರು, ಇಂದು ಜಮೀನು ದಾಖಲು ಮಾಡಲು ಗ್ರಾಮ ಪಂಚಾಯತ್ಗೆ ರುದ್ರಪ್ಪ ಬಂದಿದ್ದರು. ಈ ವೇಳೆಯೇ ದಾಳಿ ಮಾಡಿ ತಂದೆ-ಮಗಳನ್ನು ಕೊಲೆ ಮಾಡಿದ್ದಾರೆ. ಬಳಿಕ ಆರೋಪಿಗಳು ಅಲ್ಲಿಂದ ಪರಾರಿ ಆಗಿದ್ದಾರೆ ಅಂತಾ ಸ್ಥಳೀಯರು ಹೇಳಿದ್ದಾರೆ.
ತಂದೆ-ಮಗಳ ಕೊಲೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತದೇಹಗಳನ್ನು ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಜೋಡಿ ಕೊಲೆಯಿಂದ ಅವರಾದಿ ಗ್ರಾಮದಲ್ಲಿ ಜನರು ಬೆಚ್ಚಿಬಿದ್ದಿದ್ದಾರೆ. ಸ್ಥಳದಲ್ಲಿ ನೂರಾರು ಜನರು ಜಮಾವಣೆಗೊಂಡಿದ್ದಾರೆ.
Bantawala
ಸೌಜನ್ಯ ಮನೆಗೆ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಭೇಟಿ: ನ್ಯಾಯ ಹೋರಾಟಕ್ಕೆ ಮತ್ತೆ ಹೊಸ ಸಂಚಲನ ?
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿರುವ, 13 ವರ್ಷಗಳ ಹಿಂದೆ ಅತ್ಯಾಚಾರ ಮತ್ತು ಭೀಕರ ಕೊಲೆಗೀಡಾಗಿದ್ದ ಉಜಿರೆ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಕು. ಸೌಜನ್ಯ ಅವರ ಮನೆಗೆ ಆರ್‌ಎಸ್‌ಎಸ್ ಹಿರಿಯ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಬುಧವಾರ (ಆ.26) ದಿಢೀರ್ ಭೇಟಿ ನೀಡಿದ್ದಾರೆ.
ಧರ್ಮಸ್ಥಳ ಗ್ರಾಮದ ಪಾಂಗಾಳದಲ್ಲಿರುವ ಸೌಜನ್ಯ ಅವರ ಮನೆಯಲ್ಲಿ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರೊಂದಿಗೆ ಡಾ. ಪ್ರಭಾಕರ ಭಟ್ ಅವರು ಸುದೀರ್ಘ ಮಾತುಕತೆ ನಡೆಸಿದರೆನ್ನಲಾಗಿದೆ. ಮಗಳ ಅಗಲಿಕೆಯಿಂದ ಕಂಗಾಲಾಗಿ, ನ್ಯಾಯಕ್ಕಾಗಿ ಸುದೀರ್ಘ ವರ್ಷಗಳಿಂದ ಸತತ ಹೋರಾಟ ನಡೆಸುತ್ತಿರುವ ಕುಟುಂಬಕ್ಕೆ ಈ ಭೇಟಿ ಸಾಂತ್ವನ ನೀಡುವ ಜೊತೆಗೆ, ತನಿಖೆಯ ದಿಕ್ಕಿನಲ್ಲಿ ಹಾಗೂ ಸಾಮಾಜಿಕ ವಲಯದಲ್ಲಿ ಹೊಸ ಸಂಚಲನ ಮೂಡಿಸಬಹುದೇ ? ಎಂದು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

ಮಾತುಕತೆಯ ನಿಖರ ವಿವರಗಳು ತಕ್ಷಣಕ್ಕೆ ತಿಳಿದುಬಂದಿಲ್ಲವಾದರೂ, ಸೌಜನ್ಯ ಸಾವಿಗೆ ನ್ಯಾಯ ದೊರಕಿಸಿಕೊಡುವ ಹೋರಾಟದ ವಿಚಾರವಾಗಿ ಹಾಗೂ ಕುಟುಂಬಕ್ಕೆ ಬೆಂಬಲ ನೀಡುವ ಕುರಿತು ಚರ್ಚೆ ನಡೆದಿರಬಹುದೇ ? ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ.
ಈ ಸಂದರ್ಭದಲ್ಲಿ ಉದ್ಯಮಿ ಸದಾನಂದ ನಾವರ, ಪ್ರಮುಖರಾದ ಪುರಂದರ, ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯ ಸಹೋದರ ಮೋಹನ್ ಶೆಟ್ಟಿ ಉಜಿರೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಸುದೀರ್ಘ ಕಾಲದಿಂದ ರಾಜ್ಯಾದ್ಯಂತ ಕಾವು ಕಾಯ್ದುಕೊಂಡಿರುವ ಸೌಜನ್ಯ ಪ್ರಕರಣದಲ್ಲಿ ಆರ್‌ಎಸ್‌ಎಸ್‌ನ ಪ್ರಭಾವಿ ನಾಯಕರ ಈ ಭೇಟಿಯು ಮುಂಬರುವ ದಿನಗಳಲ್ಲಿ ಯಾವ ರೀತಿಯ ಹೊಸ ತಿರುವು ಪಡೆಯಲಿದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
