Connect with us

DEATH

ವಯನಾಡಿನಲ್ಲಿ ಭೀಕರ ಭೂಕುಸಿತ: ಇಬ್ಬರು ಸಾವು, ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ!

Published

on

ಕಲ್ಪೆಟ್ಟಾ (ಕೇರಳ): ಕೇರಳದ ವಯನಾಡ್ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದೆ. ಸೋಮವಾರ ರಾತ್ರಿಯಿಂದ ಸುರಿಯುತ್ತಿರುವ ಎಡೆಬಿಡದ ಭಾರೀ ಮಳೆಗೆ ಮಂಗಳವಾರ (ಜುಲೈ 07) ಮುಂಜಾನೆ ಭೀಕರ ಭೂಕುಸಿತ (Landslide) ಉಂಟಾಗಿದ್ದು, ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹರಕು ಮುರಕಲಾಗಿರುವ ಮಣ್ಣಿನ ರಾಶಿಯ ಅಡಿಯಲ್ಲಿ ಹಲವು ಕಾರ್ಮಿಕರು ಸಿಲುಕಿರುವ ಭೀತಿ ಎದುರಾಗಿದೆ.

ಘಟನೆಯ ವಿವರ ಮತ್ತು ಕಾರಣ

ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯ ಕಲ್ಲಾಡಿ ಬಳಿಯ ಮೀನಾಕ್ಷಿ ಸೇತುವೆ ಹತ್ತಿರ ಈ ದುರಂತ ಸಂಭವಿಸಿದೆ. ವಯನಾಡ್ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 265 ಮಿ.ಮೀ ನಷ್ಟು ದಾಖಲೆ ಪ್ರಮಾಣದ ಮಳೆ ಸುರಿದಿದ್ದು, ಈ ಜಲಸ್ಫೋಟವೇ ಇಷ್ಟೊಂದು ದೊಡ್ಡ ಮಟ್ಟದ ಭೂಕುಸಿತಕ್ಕೆ ಪ್ರಮುಖ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಹಾನಿ, ನಲುಗಿದ ಸುರಂಗದ ಕಾರ್ಮಿಕರು

ಭೂಕುಸಿತದ ತೀವ್ರತೆಗೆ ಆ ಭಾಗದಲ್ಲಿದ್ದ ಪ್ರವಾಸಿ ಹೋಂಸ್ಟೇಗಳು ಹಾಗೂ ಆನಕ್ಕಂಪೊಯಿಲ್-ಮೇಪಾಡಿ ಸುರಂಗ ಮಾರ್ಗ ನಿರ್ಮಾಣದ ಕಾರ್ಮಿಕರು ತಂಗಿದ್ದ ತಾತ್ಕಾಲಿಕ ಶೆಡ್‌ಗಳ ಮೇಲೆ ಬೃಹತ್ ಪ್ರಮಾಣದ ಮಣ್ಣು ಕುಸಿದು ಬಿದ್ದಿದೆ. ಸುರಂಗ ಕಾಮಗಾರಿ ಪ್ರಗತಿಯಲ್ಲಿದ್ದರಿಂದ ಸ್ಥಳದಲ್ಲಿ ತಂಗಿದ್ದ ಹಲವು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗಿದೆ. ಅಲ್ಲದೆ, ಕಾರ್ಮಿಕರನ್ನು ಕರೆದೊಯ್ಯಲು ನಿಲ್ಲಿಸಲಾಗಿದ್ದ ಹಲವಾರು ವಾಹನಗಳು ಮಣ್ಣಿನ ಅಡಿ ಸಿಲುಕಿ ಸಂಪೂರ್ಣ ಜಖಂಗೊಂಡಿವೆ.

ತಕ್ಷಣ ಸ್ಪಂದಿಸಿದ ಸ್ಥಳೀಯರು – ಐವರ ರಕ್ಷಣೆ

ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಸಮಯಪ್ರಜ್ಞೆ ಮೆರೆದು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಧುಮುಕಿದ್ದಾರೆ. ಮಣ್ಣಿನಡಿ ಸಿಲುಕಿದ್ದ ಇಬ್ಬರನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಸದ್ಯ ಗಾಯಗೊಂಡಿರುವ ಐವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸ್ಥಳದಲ್ಲೇ ಬೀಡುಬಿಟ್ಟ ಸಚಿವರು, ಎನ್‌ಡಿಆರ್‌ಎಫ್ ನಿಯೋಜನೆ

ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಕಲ್ಪೆಟ್ಟಾದಿಂದ ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ. ಮೀನಾಂಗಡಿಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡ ಕೂಡ ಶೀಘ್ರದಲ್ಲೇ ಸ್ಥಳಕ್ಕೆ ತಲುಪಲಿದ್ದು, ಸುಧಾರಿತ ಉಪಕರಣಗಳೊಂದಿಗೆ ರಕ್ಷಣಾ ಕಾರ್ಯ ನಡೆಸಲಿದೆ.

ಕೇರಳ ಕೃಷಿ ಸಚಿವರಾದ ಟಿ. ಸಿದ್ದಿಕ್ ಹಾಗೂ ಜಿಲ್ಲಾಧಿಕಾರಿಗಳು ದುರಂತ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯದ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಅಧಿಕಾರಿಗಳ ಹೇಳಿಕೆ: “ಮಣ್ಣಿನಡಿ ಬೇರೆ ಯಾರಾದರೂ ಸಿಲುಕಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತೀವ್ರ ಹುಡುಕಾಟ ಮುಂದುವರಿಸಲಾಗಿದೆ. ಆದರೆ, ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯು ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಪಡಿಸುತ್ತಿದೆ.”

ರೆಡ್ ಅಲರ್ಟ್: ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ

ವಯನಾಡ್ ಜಿಲ್ಲೆಯಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಪರಿಸ್ಥಿತಿ ಗಂಭೀರವಾಗಿರುವುದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ಯಾವುದೇ ಕಾರಣಕ್ಕೂ ಗುಡ್ಡಗಾಡು ಪ್ರದೇಶಗಳಿಗೆ ಹಾಗೂ ಘಾಟಿ ರಸ್ತೆಗಳ ಕಡೆಗೆ ತೆರಳದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.




ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಬಂಟ್ವಾಳ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಣೆಯಲ್ಲಿ ದುರ್ಘಟನೆ; ಕೌಟುಂಬಿಕ ಕಲಹದ ಹಿನ್ನೆಲೆ ಮಕ್ಕಳನ್ನು ಬಾವಿಗೆ ಎಸೆದ ತಾಯಿ – ಒಂದು ಮಗು ಸಾವು, ಮತ್ತೊಂದು ಮಗು ಆಸ್ಪತ್ರೆಗೆ ದಾಖಲು

Published

on

ಬಂಟ್ವಾಳ: ದಿನಾಂಕ: 19.09.2026ರಂದು ಮಧ್ಯಾಹ್ನ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ಣೆ ಮೈರಕಟ್ಟೆಯಲ್ಲಿ ನಡೆದ ದೊಡ್ಡ ದುರಂತವೊಂದು ಬೆಳಕಿಗೆ ಬಂದಿದೆ. ಪೆರ್ಣೆಯಲ್ಲಿ ವಾಸ್ತವವಿರುವ ಸಿನಾನ್ (32) ಹಾಗೂ ನೂರುನ್ನಿಸಾ (28) ಎಂಬ ದಂಪತಿಗಳ ನಡುವೆ ಫೋನ್ ಕರೆಯಲ್ಲಿ ವೈವಾಹಿಕ ಕಲಹ ನಡೆದಿದ್ದು, ಈ ವೇಳೆ ಕೋಪಗೊಂಡ ಆರೋಪಿತೆ ನೂರುನ್ನಿಸಾ ಮನೆಯಲ್ಲಿದ್ದ ಆಕೆಯ ಸುಮಾರು ಮೂರುವರೆ ವರ್ಷದ ಮಗು ಹಾಗೂ ಗಂಡನ ತಂಗಿಯ ಮಗುವನ್ನು ಮನೆ ಸಮೀಪದ ಕುಡಿಯುವ ನೀರಿನ ಬಾವಿಗೆ ಎಸೆದಿರುವುದಾಗಿ ಎಸ್‌ಪಿ ಮಾಹಿತಿ ನೀಡಿದ್ದಾರೆ.

ಆದರೆ, ಬೆಳಿಗ್ಗೆ ಸ್ಥಳೀಯ ವಾಹಿನಿಗಳಲ್ಲಿ ಹಾಗೂ ಆರಂಭಿಕ ವರದಿಗಳಲ್ಲಿ ಮಕ್ಕಳು ಆಟವಾಡುತ್ತಾ ಆಕಸ್ಮಿಕವಾಗಿ ಬಾವಿಗೆ ಬಿದ್ದಿವೆ ಎಂದು ಪ್ರಸಾರವಾಗಿತ್ತು. ಪ್ರತ್ಯಕ್ಷದರ್ಶಿಗಳು ಹಾಗೂ ಆರಂಭಿಕ ಮಾಹಿತಿಯಂತೆ, ಪೆರ್ಣೆ ಮೈರಕಟ್ಟೆಯಲ್ಲಿ ಮಕ್ಕಳು ಬಾವಿಯ ಸಮೀಪವಿದ್ದ ವೇಳೆ ಆಲಿಯಾ (4) ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ರಕ್ಷಿಸಿ ಮೇಲಕ್ಕೆ ಕರೆತಂದಿದ್ದರು. ಬಳಿಕ ಮತ್ತೊಂದು ಮಗು ಕೂಡ ಬಾವಿಗೆ ಬಿದ್ದಿರುವ ಬಗ್ಗೆ ಆಲಿಯಾ ಮಾಹಿತಿ ನೀಡಿದ್ದಾಳೆ ಎನ್ನಲಾಗಿದ್ದು, ಸ್ಥಳೀಯರು ಪರಿಶೀಲಿಸಿದಾಗ ರಬೀಹ್ (2) ಬಾವಿಯಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದರೂ ರಬೀಹ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪ್ರಸಾರವಾಗಿತ್ತು.

ನೈಜ ಸತ್ಯ ಬಯಲುಗೊಳಿಸಿದ ಪೊಲೀಸರು:

ಸ್ಥಳೀಯ ಮಾದ್ಯಮಗಳಲ್ಲಿ ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಬಿತ್ತರವಾಗಿದ್ದರೂ, ಪೊಲೀಸ್ ತನಿಖೆಯಿಂದ ಅಸಲಿ ವಿಚಾರ ಹೊರಬಂದಿದೆ. ದಂಪತಿಗಳ ನಡುವಿನ ಫೋನ್ ಕರೆಯ ಕೌಟುಂಬಿಕ ಕಲಹದ ರಭಸದಲ್ಲಿ ಕೋಪಗೊಂಡ ಆರೋಪಿತೆ ನೂರುನ್ನಿಸಾ ತಾನೇ ಸ್ವತಃ ಮಕ್ಕಳನ್ನು ಬಾವಿಗೆ ಎಸೆದಿರುವುದು ಎಸ್‌ಪಿ ನೀಡಿರುವ ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ. ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಮಕ್ಕಳನ್ನು ಮೇಲಕ್ಕೆ ಎತ್ತಿದ1ರ ಪೈಕಿ ಗಂಡನ ತಂಗಿಯ ಮಗು (ರಬೀಹ್ – 3) ಮೃತಪಟ್ಟಿದ್ದು, ಆರೋಪಿತೆಯ ಮಗು (ಆಲಿಯಾ – 4) ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 121/2026 ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿತೆ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Continue Reading

DEATH

ಬೆಳಗಾವಿ: ಆಸ್ತಿಗಾಗಿ ಆಕ್ರೋಶ; ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ತಂದೆ-ಮಗಳ ಬರ್ಬರ ಹತ್ಯೆ

Published

on

ಬೆಳಗಾವಿ: ಆಸ್ತಿ ದಾಖಲೆಗಳನ್ನು ಪಡೆದುಕೊಳ್ಳಲು ಗ್ರಾಮ ಪಂಚಾಯಿತಿಗೆ ಬಂದಿದ್ದ ಮಾಜಿ ಯೋಧ ಹಾಗೂ ಅವರ ಪುತ್ರಿಯನ್ನು ಸಂಬಂಧಿಕರೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.

ಮಾಜಿ ಯೋಧ ರುದ್ರಪ್ಪ ಕುಂದರಗಿ (67) ಮತ್ತು ಅವರ ಪುತ್ರಿ ಶಶಿಕಲಾ ಕುಂದರಗಿ (26) ಹತ್ಯೆಗೀಡಾದ ದುರ್ದೈವಿಗಳು. ಈ ಭೀಕರ ದಾಳಿಯಲ್ಲಿ ರುದ್ರಪ್ಪ ಅವರ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಹಿನ್ನೆಲೆ:

ಮೃತರಾದ ರುದ್ರಪ್ಪ ಹಾಗೂ ಅವರ ಅಣ್ಣತಮ್ಮಂದಿರ ನಡುವೆ 38 ಗುಂಟೆ ಆಸ್ತಿಗೆ ಸಂಬಂಧಿಸಿದಂತೆ ದೀರ್ಘಕಾಲದಿಂದ ವ್ಯಾಜ್ಯವಿತ್ತು ಎನ್ನಲಾಗಿದೆ. ಈ ಆಸ್ತಿಯನ್ನು ಮೂವರಿಗೆ ಹಂಚಿಕೆ ಮಾಡುವಂತೆ ನ್ಯಾಯಾಲಯವೂ ಆದೇಶ ನೀಡಿತ್ತು. ಆದರೆ, ರುದ್ರಪ್ಪ ಅವರಿಗೆ ಸೇರಿದ್ದ ಜಮೀನನ್ನು ಅವರು ಈಗಾಗಲೇ ಮಾರಿಕೊಂಡಿದ್ದು, ಉಳಿದ ಜಮೀನಿನಲ್ಲೂ ತಮಗೆ ಪಾಲು ಬೇಕು ಎಂದು ಸಹೋದರರು ಪಟ್ಟು ಹಿಡಿದಿದ್ದರು. ರುದ್ರಪ್ಪ ಅವರ ಹೆಸರಿನಲ್ಲಿ ಆಸ್ತಿ ಮುಂದುವರಿದಿರುವ ವಿಚಾರವೇ ಈ ಮಾರಣಾಹೋಮಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

ಪಂಚಾಯಿತಿ ಒಳಗಡೆಯೇ ಕೃತ್ಯ:

ಧಾರವಾಡದಿಂದ ಬಾಡಿಗೆ ಕಾರಿನಲ್ಲಿ ಗ್ರಾಮಕ್ಕೆ ಬಂದಿದ್ದ ರುದ್ರಪ್ಪ, ಆಸ್ತಿ ಪಾಲುದಾರಿಕೆ ಹಾಗೂ ದಾಖಲೆಗಳನ್ನು ಪಡೆದುಕೊಳ್ಳಲು ಅವರಾದಿ ಗ್ರಾಮ ಪಂಚಾಯಿತಿಗೆ ತೆರಳಿದ್ದರು. ರುದ್ರಪ್ಪ ಪಂಚಾಯಿತಿಗೆ ಬಂದಿರುವ ಸುದ್ಧಿ ತಿಳಿದು ಸ್ಥಳಕ್ಕೆ ಆಗಮಿಸಿದ ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಸಂಗಪ್ಪ ಅವರ ಪುತ್ರ ಮಡಿವಾಳಪ್ಪ ಕುಂದರಗಿ ಏಕಾಏಕಿ ದಾಳಿ ನಡೆಸಿದ್ದಾರೆ.

ಗ್ರಾಮ ಪಂಚಾಯಿತಿ ಕಚೇರಿಯ ಒಳಗಡೆಯೇ ಕೊಡಲಿ, ಕುಡಗೋಲು ಸೇರಿದಂತೆ ಮಾರಕಾಸ್ತ್ರಗಳಿಂದ ರುದ್ರಪ್ಪ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ತಂದೆಯನ್ನು ರಕ್ಷಿಸಲು ಮುಂದಾದ ಪುತ್ರಿ ಶಶಿಕಲಾ ಅವರ ಮೇಲೂ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಇಬ್ಬರನ್ನೂ ನಿರ್ದಯವಾಗಿ ಹತ್ಯೆ ಮಾಡಿದ್ದಾರೆ.

ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪಂಚಾಯಿತಿ ಕಚೇರಿಯಲ್ಲೇ ನಡೆದ ಈ ಜೋಡಿ ಹತ್ಯೆಯು ಇಡೀ ಗ್ರಾಮದಲ್ಲಿ ತೀವ್ರ ಆತಂಕ ಹಾಗೂ ಶೋಕಮೂಡಿಸಿದೆ.

ಇಬ್ಬರ ಆಸ್ತಿಯಲ್ಲೂ ಪಾಲು ಕೇಳಿದ್ದಕ್ಕೆ ಕುಪಿತಗೊಂಡಿದ್ದ ಇಬ್ಬರು ಸಹೋದರರು, ಇಂದು ಜಮೀನು ದಾಖಲು ಮಾಡಲು ಗ್ರಾಮ ಪಂಚಾಯತ್​ಗೆ ರುದ್ರಪ್ಪ ಬಂದಿದ್ದರು. ಈ ವೇಳೆಯೇ ದಾಳಿ ಮಾಡಿ ತಂದೆ-ಮಗಳನ್ನು ಕೊಲೆ ಮಾಡಿದ್ದಾರೆ. ಬಳಿಕ ಆರೋಪಿಗಳು ಅಲ್ಲಿಂದ ಪರಾರಿ ಆಗಿದ್ದಾರೆ ಅಂತಾ ಸ್ಥಳೀಯರು ಹೇಳಿದ್ದಾರೆ.

ತಂದೆ-ಮಗಳ ಕೊಲೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತದೇಹಗಳನ್ನು ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಜೋಡಿ ಕೊಲೆಯಿಂದ ಅವರಾದಿ ಗ್ರಾಮದಲ್ಲಿ ಜನರು ಬೆಚ್ಚಿಬಿದ್ದಿದ್ದಾರೆ. ಸ್ಥಳದಲ್ಲಿ ನೂರಾರು ಜನರು ಜಮಾವಣೆಗೊಂಡಿದ್ದಾರೆ.

Continue Reading

Bantawala

ವಿಟ್ಲ ಕಸಬಾ ಗ್ರಾಮದ ಕೈಂತಿಲ ನಿವಾಸಿ, ಮಾಜಿ ಎಪಿಎಂಸಿ ಅಧ್ಯಕ್ಷ ಸಂಕಪ್ಪ ಗೌಡ ನಿಧನ

Published

on

ವಿಟ್ಲ: ವಿಟ್ಲ ಕಸಬಾ ಗ್ರಾಮದ ಕೈಂತಿಲ ನಿವಾಸಿ, ಮಾಜಿ ಎಪಿಎಂಸಿ ಅಧ್ಯಕ್ಷರೂ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರೂ ಆಗಿರುವ ಸಂಕಪ್ಪ ಗೌಡ (67) ಅವರು ಇಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಅವರು ಕಳೆದ ಕೆಲವು ದಿನಗಳಿಂದ ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಭಾರತೀಯ ಜನತಾ ಪಕ್ಷದ (BJP) ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಅವರು, ಸಾರ್ವಜನಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಪರ ಕಾಳಜಿಯೊಂದಿಗೆ ಸೇವೆ ಸಲ್ಲಿಸಿದ್ದರು. ಅವರ ಅಗಲಿಕೆಯಿಂದ ಪಕ್ಷಕ್ಕೆ ಹಾಗೂ ಸ್ಥಳೀಯ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Continue Reading

Trending

Copyright © 2025 Deevatige

error: Content is protected !!