Bantawala
ಪೆರುವಾಯಿಯಲ್ಲಿ ತೀವ್ರಗೊಂಡ ಪ್ರತಿಭಟನೆ: ಅಧಿಕಾರಿಗಳಿಗೆ ದಿಗ್ಬಂಧನ, ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆ
ವಿಟ್ಲ: ಪೆರುವಾಯಿ ಜಂಕ್ಷನ್ ವ್ಯಾಪ್ತಿಯ ಪೇರಡ್ಕ ಮತ್ತು ಮಾಣಿಲ ಸಂಪರ್ಕ ಸೇತುವೆಗಳ ಪುನರ್ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಸವಾರರು ಇಂದು ಪೆರುವಾಯಿಯಲ್ಲಿ ಬೃಹತ್ ರಸ್ತೆ ತಡೆ ಮತ್ತು ಶಾಂತಿಯುತ ಪ್ರತಿಭಟನೆ ನಡೆಸಿದರು.
ಅಪಾಯದ ಅಂಚಿನಲ್ಲಿರುವ ಈ ಸೇತುವೆಗಳು ಹಾಗೂ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ಈ ಸಂದರ್ಭದಲ್ಲಿ ನಡೆಯಿತು.

ಜೀವಭಯದಲ್ಲಿ ಸಾರ್ವಜನಿಕರ ಸಂಚಾರ
ಪೆರುವಾಯಿ ಜಂಕ್ಷನ್ ಬಳಿಯಿಂದ ಕೇವಲ 500 ಮೀಟರ್ ದೂರದಲ್ಲಿರುವ, ಕರ್ನಾಟಕ ಮತ್ತು ಕೇರಳವನ್ನು ಸಂಪರ್ಕಿಸುವ ಪೇರಡ್ಕ ಸೇತುವೆ ಹಾಗೂ ಪೆರುವಾಯಿ ಜಂಕ್ಷನ್‌ನಿಂದ 150 ಮೀಟರ್ ದೂರದಲ್ಲಿರುವ ಪೆರುವಾಯಿ – ಮಾಣಿಲ ರಸ್ತೆಯ ಸೇತುವೆ ಈ ಭಾಗದ ಜನರ ಪ್ರಮುಖ ಜೀವನಾಡಿಯಾಗಿದೆ. ಪ್ರತಿದಿನ ಸಾವಿರಾರು ವಾಹನಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಕೃಷಿಕರು ಈ ಮಾರ್ಗವನ್ನೇ ಅವಲಂಬಿಸಿದ್ದಾರೆ.
ಆದರೆ, ದಶಕಗಳ ಹಿಂದೆ ನಿರ್ಮಾಣಗೊಂಡ ಈ ಕಿರಿದಾದ ಸೇತುವೆಗಳು ಇಂದು ಸಂಪೂರ್ಣ ಸಾಮರ್ಥ್ಯ ಕಳೆದುಕೊಂಡಿವೆ. ಭಾರೀ ವಾಹನಗಳ ಸಂಚಾರ ಹೆಚ್ಚಾಗಿದ್ದರೂ ಸೇತುವೆಗಳ ಅಗಲ ಮಾತ್ರ ಅಂದಿನಂತೆಯೇ ಇದೆ. ಮಳೆಗಾಲದಲ್ಲಿ ಪೇರಡ್ಕ ಸೇತುವೆಯ ಮೇಲೆಯೇ ನೀರು ಹರಿಯುತ್ತಿದ್ದು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ದುಸ್ಥಿತಿ ಇದೆ.
ಕಳೆದ 3 ವರ್ಷಗಳಲ್ಲಿ 10ಕ್ಕೂ ಹೆಚ್ಚು ಅಪಘಾತಗಳು: ಇತ್ತೀಚೆಗಷ್ಟೇ ಕೋಳಿ ಸಾಗಾಟದ ವಾಹನ ಹಾಗೂ ಐವರು ಯುವಕರಿದ್ದ ಆಲ್ಟೊ ಕಾರು ಸೇತುವೆಯಿಂದ ಕೆಳಗೆ ಬಿದ್ದಿದ್ದವು. ಅಪಾಯಕಾರಿ ತಿರುವಿನಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹಲವು ವಾಹನಗಳು ನಜ್ಜುಗುಜ್ಜಾಗಿವೆ. ದೊಡ್ಡ ದುರಂತ ಸಂಭವಿಸುವ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಧಿಕಾರಿಗಳಿಗೆ ಮುತ್ತಿಗೆ – ತರಾಟೆ
ಪ್ರತಿಭಟನೆಯ ತೀವ್ರತೆ ಅರಿತು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಬಂಟ್ವಾಳ ವಿಭಾಗದ ಇಂಜಿನಿಯರ್ ತಾರಾನಾಥ್ ಮತ್ತು ಮಂಗಳೂರು ವಿಭಾಗದ ಇಂಜಿನಿಯರ್ ವೇಣುಗೋಪಾಲ್ ಅವರನ್ನು ಪ್ರತಿಭಟನಾಕಾರರು ಮುತ್ತಿಗೆ ಹಾಕಿ, ತೀವ್ರ ತರಾಟೆಗೆ ತೆಗೆದುಕೊಂಡರು.
ಕೆಲ ದಿನಗಳ ಹಿಂದೆ ನೀಡಿದ್ದ ಗಡುವಿಗೆ ಕೇವಲ ಒಂದು ಲೋಡ್ ಕೆಂಪು ಕಲ್ಲುಗಳನ್ನು ತಂದು ಸುರಿದಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಇದು ಸುರಕ್ಷತಾ ಕ್ರಮವಲ್ಲ, ಜನರ ಕಣ್ಣಿಗೆ ಮಣ್ಣೆರಚುವ ತಂತ್ರ” ಎಂದು ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇಂಜಿನಿಯರ್‌ಗಳಿಂದ ಭರವಸೆ
ಪ್ರತಿಭಟನಾಕಾರರ ತೀವ್ರ ಪ್ರತಿರೋಧದ ಬಳಿಕ ಮಾತನಾಡಿದ ಜಿಲ್ಲಾ ಪಂಚಾಯತ್ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ವೇಣುಗೋಪಾಲ್, “ಒಂದು ವಾರದಲ್ಲಿ ತಡೆಬೇಲಿ ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗುವುದು. 15 ದಿನಗಳ ಒಳಗಾಗಿ ತಡೆಗೋಡೆ ಕಾಮಗಾರಿಯನ್ನು ಆರಂಭಿಸುತ್ತೇವೆ” ಎಂದು ಭರವಸೆ ನೀಡಿದರು.
ಲೋಕೋಪಯೋಗಿ ಇಲಾಖೆಯ (PWD) ಇಂಜಿನಿಯರ್ ಅವಿನಾಶ್ ಮಾತನಾಡಿ, ಈಗಾಗಲೇ ಹೊಸ ಸೇತುವೆಯ ನಿರ್ಮಾಣಕ್ಕೆ ಹಾಗೂ ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಹಂತದಲ್ಲಿ ಮಂಜೂರಾತಿ ದೊರೆತ ತಕ್ಷಣ ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಪ್ರಮುಖ ಬೇಡಿಕೆಗಳು:
ಪೇರಡ್ಕ ಸೇತುವೆ ಸ್ಥಳದಲ್ಲಿ ಅಪಾಯಕಾರಿ ತಿರುವುಗಳನ್ನು ತೆರವುಗೊಳಿಸಿ, ವಿಶಾಲವಾದ ಹಾಗೂ ನೇರ ಸಂಪರ್ಕ ರಸ್ತೆಯೊಂದಿಗೆ ನೂತನ ಸೇತುವೆ ನಿರ್ಮಿಸಬೇಕು.
ಪೆರುವಾಯಿ–ಮಾಣಿಲ ಸಂಪರ್ಕ ಸೇತುವೆಯನ್ನು ತೆರವುಗೊಳಿಸಿ, ಆಧುನಿಕ ವಿನ್ಯಾಸದೊಂದಿಗೆ ವಿಶಾಲ ಮತ್ತು ಸುರಕ್ಷಿತ ನೂತನ ಸೇತುವೆಯಾಗಿ ಪುನರ್‌ನಿರ್ಮಿಸಬೇಕು.
ಪೆರುವಾಯಿಯಿಂದ ಬಾಳಶೆಟ್ಟಿ ಮೂಲೆ ಮೂಲಕ ಕನ್ಯಾನ ತನಕದ ರಸ್ತೆಯನ್ನು ಲೋಕೋಪಯೋಗಿ ಇಲಾಖೆ (PWD) ವ್ಯಾಪ್ತಿಗೆ ಹಸ್ತಾಂತರಿಸಿ, ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು.
ಹತ್ತು ವರ್ಷಗಳ ಹಿಂದೆ ಬಾಕಿ ಉಳಿದಿದ್ದ ಓಣಿಬಾಗಿಲಿನಿಂದ ಪಕಳಕುಂಜ ತನಕದ ರಸ್ತೆಯನ್ನು ತಕ್ಷಣವೇ ಅಗಲೀಕರಣಗೊಳಿಸಬೇಕು.
ವಾಹನ ಸಂಚಾರ ಬಂದ್ ಮಾಡುವ ಎಚ್ಚರಿಕೆ
“ನಾವು ಇಲಾಖಾಧಿಕಾರಿಗಳಲ್ಲಿ ಹಾಗೂ ಜನಪ್ರತಿನಿಧಿಗಳಲ್ಲಿ ಭಿಕ್ಷೆ ಬೇಡುತ್ತಿಲ್ಲ, ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ” ಎಂದು ಹೋರಾಟಗಾರರು ಸ್ಪಷ್ಟಪಡಿಸಿದರು. 10 ವರ್ಷಗಳ ಹಿಂದೆ ಇದೇ ತಂಡವು ಮುಳಿಯ ಎಂಬಲ್ಲಿ ಭಾರಿ ಮಟ್ಟದ ರಸ್ತೆ ತಡೆ ನಡೆಸಿ ಯಶಸ್ಸು ಸಾಧಿಸಿತ್ತು ಎಂಬುದನ್ನು ನೆನಪಿಸಿದ ಅವರು, ಈ ಬಾರಿ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ಸಂಪೂರ್ಣವಾಗಿ ವಾಹನ ಸಂಚಾರವನ್ನು ಬಂದ್ ಮಾಡಿ ತೀವ್ರ ಸ್ವರೂಪದ ಪ್ರಜಾಪ್ರಭುತ್ವದ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ನೇತೃತ್ವ: ಈ ಹೋರಾಟದ ಸಾಮೂಹಿಕ ನಾಯಕತ್ವವನ್ನು ಯತೀಶ್ ಪೆರುವಾಯಿ, ಗೋಪಾಲಕೃಷ್ಣ ಶೆಟ್ಟಿ ಸೇನೆರಪಾಲು, ಮೋಕ್ಷಿತ್ ಪೆರುವಾಯಿ, ಮಂಜುನಾಥ ಆಚಾರ್ಯ ಅಶ್ವಥನಗರ,ಪ್ರಭಾಕರ ಶೆಟ್ಟಿ ಕಳಾಯ್ತಿಮಾರ್,ವಿನೀತ್ ಶೆಟ್ಟಿ ಕಾನ, ಅಶೋಕ್ ಮಾಣಿಲ,ಎಂ ಮಹಾಬಲ ಭಟ್ ಮುರುವ, ವಿಷ್ಣು ಕನ್ನಡಗುಳಿ,ಪ್ರಕಾಶ್ಚಂದ್ರ ಶೆಟ್ಟಿ ಎ ಕೆ ನಿಲಯ,ಶೇಖರ ಪೂಜಾರಿ ಕುಂಬಳಕೋಡಿ,ರಾಘವ ಮಾಸ್ಟರ್ ಬೆರಿಪದವು,ಗಿರೀಶ್ ಪಾಟಾಳಿ,ಮನೋಜ್ ಆಚಾರ್ಯ ಪೆರುವಾಯಿ, ಸವಿತಾ ಆಚಾರ್ಯ ಅಶ್ವಥನಗರ, ಸೂರ್ಯ ಪ್ರಭಾ ಎ ಕೆ ನಿಲಯ ವಹಿಸಿದ್ದರು.



accident
ಬ್ರೇಕಿಂಗ್ ನ್ಯೂಸ್: ಕಾರ್ಕಳ – ಮೂಡುಬಿದ್ರೆ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ; ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಪ್ರಾಣಾಪಾಯದಿಂದ ಪಾರು
ಕಾರ್ಕಳ: ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಹಾಗೂ ಅವರ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರ್ಕಳದಿಂದ ಮೂಡುಬಿದ್ರೆಯತ್ತ ವೇಗವಾಗಿ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ (KA 70 A 0099) ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿದೆ.

ಘಟನೆಯ ವಿವರ ಹಾಗೂ ರಕ್ಷಣಾ ಕಾರ್ಯ: ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಜುಗಳು ಪುಡಿಯಾಗಿವೆ. ಕಾರಿನ ಒಳಗೆ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಸಹ, ಡಿಕ್ಕಿಯ ತೀವ್ರತೆಯಿಂದಾಗಿ ಮುಂಭಾಗದಲ್ಲಿ ಕುಳಿತಿದ್ದ ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಒಳಗೆ ಸಿಲುಕಿಕೊಂಡಿದ್ದರು. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಧಾವಿಸಿ ಬಂದು, ಅತ್ಯಂತ ಪ್ರಯಾಸಪಟ್ಟು ಅವರನ್ನ ಕಾರಿನಿಂದ ಹೊರತೆಗೆದಿದ್ದಾರೆ.

ಆಸ್ಪತ್ರೆಗೆ ದಾಖಲು: ಅಪಘಾತದಲ್ಲಿ ಗಾಯಗೊಂಡಿರುವ ರಮಾನಾಥ ರೈ ಹಾಗೂ ಕಾರು ಚಾಲಕರನ್ನು ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಬಸ್ ಹಾಗೂ ಕಾರಿನಲ್ಲಿದ್ದ ಇತರೆ ಕೆಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ.
ರಮಾನಾಥ ರೈಯವರು ಒಡಿಯೂರಿನಲ್ಲಿ ನಡೆದ ಒಡಿಯೂರು ಶ್ರೀ ವಿಕಾಸವಾಹಿನಿ ಸಂಭ್ರಮ ಹಾಗೂ ನೇರಳಕಟ್ಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಂಗಳೂರಿನ ಕಾರ್ಯಕ್ರಮದ ಮುಗಿಸಿ ಕಾರ್ಕಳದ ಮತ್ತೊಂದು ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Bantawala
ಪುಣಚದಲ್ಲಿ ಇನ್‌ಸ್ಟಾಗ್ರಾಂ ಪರಿಚಯ, ನಗ್ನ ಫೋಟೋ ಬ್ಲ್ಯಾಕ್‌ಮೇಲ್ ಜಾಲ; 10 ಪವನ್ ಚಿನ್ನ ದೋಚಿ ಯುವತಿಗೆ ವಂಚನೆ!
ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಲ್ಲಿ ನಡೆದ ಈ ಘಟನೆಯು ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಎಷ್ಟು ಅಪಾಯಕಾರಿಯಾಗಬಹುದು ಎಂಬುದಕ್ಕೆ ಒಂದು ಕಣ್ಣಾಡಿಸುವ ಉದಾಹರಣೆಯಾಗಿದೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ವಂಚಕನೊಬ್ಬ, ಯುವತಿಯೊಬ್ಬಳ ನಗ್ನ ಫೋಟೋಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಿ 10 ಪವನ್‌ಗೂ ಅಧಿಕ ಚಿನ್ನಾಭರಣವನ್ನು ದೋಚಿರುವ ಕೃತ್ಯ ಆತಂಕಕಾರಿಯಾಗಿದೆ. ಅಪರಿಚಿತರೊಂದಿಗೆ ಜಾಲತಾಣಗಳಲ್ಲಿ ಸ್ನೇಹ ಬೆಳೆಸುವ ಮುನ್ನ ಯುವಜನತೆ, ವಿಶೇಷವಾಗಿ ಯುವತಿಯರು ಎಷ್ಟು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಈ ಘಟನೆ ನಮಗೆ ಕಲಿಸುತ್ತದೆ.
ಕಳೆದ ಜುಲೈ ತಿಂಗಳಲ್ಲಿ ಯುವತಿಯ ಇನ್‌ಸ್ಟಾಗ್ರಾಂ ಖಾತೆಗೆ ಸುಪ್ರೀತ ಗೌಡ ಎಂಬ ಹೆಸರಿನ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಸ್ವೀಕರಿಸಿದ ಯುವತಿಯಿಂದ ಆರೋಪಿಯು ವಾಟ್ಸಾಪ್ ನಂಬರ್ ಪಡೆದುಕೊಂಡು ಮೆಸೇಜ್ ಮಾಡಲು ಪ್ರಾರಂಭಿಸಿದ್ದ ಎನ್ನಲಾಗಿದೆ. ಮೆಸೇಜ್ ಮಾಡುತ್ತಲೇ ನಂತರ ಹೇಗೋ ಮಾಡಿ ಯುವತಿಯ ನಗ್ನ ಪೋಟೋವನ್ನು ತನ್ನಲ್ಲಿಟ್ಟುಕೊಂಡು ಆಕೆಯನ್ನು ಬೆದರಿಸಲು ಆರಂಭಿಸಿದ್ದಾನೆ.
ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಸುಪ್ರೀತ್ ಗೌಡ, ತನ್ನ ಇನ್ನೊಬ್ಬ ಗೆಳೆಯನೊಂದಿಗೆ ಸೇರಿಕೊಂಡು ಯುವತಿಯಿಂದ ಹಣ ಪೀಕಿಸಲು ಯುವತಿಯನ್ನು ಬ್ಲಾಕ್ ಮೈಲ್ ಮಾಡಲು ಆರಂಭಿಸಿದ್ದಾನೆ. ನನ್ನಲ್ಲಿ ಹಣ ಇಲ್ಲ ಎಂದಾಗ ಆಕೆಯ ಬಳಿ ಇರುವ ಚಿನ್ನಾಭರಣವನ್ನು ನೀಡುವಂತೆ “ನಿನ್ನ ಬಳಿ ಇರುವ ಚಿನ್ನವನ್ನು ಕೊಡಬೇಕು, ಇಲ್ಲವಾದಲ್ಲಿ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮಾನ ತೆಗೆಯುತ್ತೇನೆ” ಎಂದು ಬೆದರಿಕೆ ಹಾಕಿದ್ದನೆನ್ನಲಾಗಿದೆ.
ಘಟನೆಯ ಸಂಪೂರ್ಣ ವಿವರ:
ಪರಿಚಯ ಮತ್ತು ಸ್ನೇಹ: ಪುಣಚ ಗ್ರಾಮದ 20 ವರ್ಷದ ಯುವತಿಯೊಬ್ಬರ ಇನ್‌ಸ್ಟಾಗ್ರಾಂ ಖಾತೆಗೆ ಕಳೆದ ಜುಲೈ ತಿಂಗಳಲ್ಲಿ ‘ಸುಪ್ರೀತ್ ಗೌಡ’ ಎಂಬ ಹೆಸರಿನ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಇದನ್ನು ಸ್ವೀಕರಿಸಿದ ಬಳಿಕ, ಆರೋಪಿಯು ಆಕೆಯ ವಾಟ್ಸಾಪ್ ನಂಬರ್ ಪಡೆದುಕೊಂಡು ನಿರಂತರವಾಗಿ ಚಾಟ್ ಮಾಡಲು ಆರಂಭಿಸಿದ್ದಾನೆ. ಹೀಗೆ ಚಾಟಿಂಗ್ ಮುಂದುವರಿಸಿದ ಆರೋಪಿ, ಹೇಗೋ ಮಾಡಿ ಯುವತಿಯ ನಗ್ನ (ಖಾಸಗಿ) ಫೋಟೋವನ್ನು ತನ್ನ ಮೊಬೈಲ್‌ನಲ್ಲಿ ಸಂಗ್ರಹಿಸಿಕೊಂಡಿದ್ದಾನೆ. ಬಳಿಕ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಆಕೆಗೆ ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದಾನೆ.
ಚಿನ್ನಾಭರಣ ದೋಚಿದ ಕೃತ್ಯ: “ನಿನ್ನ ಬಳಿ ಇರುವ ಚಿನ್ನವನ್ನು ಕೊಡಬೇಕು, ಇಲ್ಲವಾದಲ್ಲಿ ನಿನ್ನ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ಮಾನ ತೆಗೆಯುತ್ತೇನೆ” ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ. ಆರೋಪಿಯ ಬೆದರಿಕೆಗೆ ತೀವ್ರವಾಗಿ ಭಯಭೀತರಾದ ಯುವತಿ, ಆತ ಹೇಳಿದಂತೆ ಮಾಡಲು ಮುಂದಾಗಿದ್ದಾರೆ.
ಮನೆ ಸಮೀಪವೇ ನಡೆದ ಕೃತ್ಯ: ಕಳೆದ ಆಗಸ್ಟ್ 18ರಂದು ಸುಪ್ರೀತ್ ಗೌಡ ತನ್ನ ಗೆಳೆಯನನ್ನು ಪುಣಚ ಗ್ರಾಮದಲ್ಲಿರುವ ಯುವತಿಯ ಮನೆ ಸಮೀಪಕ್ಕೆ ಬೈಕಿನಲ್ಲಿ ಕಳುಹಿಸಿದ್ದನು. ಯುವತಿಯು ಅನಿವಾರ್ಯವಾಗಿ ತನ್ನಲ್ಲಿದ್ದ 10 ಪವನ್‌ಗೂ ಅಧಿಕ (80 ಗ್ರಾಂ ಗೂ ಹೆಚ್ಚು) ಚಿನ್ನಾಭರಣಗಳನ್ನು ಆತನ ಗೆಳೆಯನಿಗೆ ಹಸ್ತಾಂತರಿಸಿದ್ದಾಳೆ. ಅಲ್ಲದೆ, ತನ್ನ ಫೋಟೋಗಳನ್ನು ವೈರಲ್ ಮಾಡದಂತೆ ಕಣ್ಣೀರಿನಿಂದ ವಿನಂತಿಸಿಕೊಂಡಿದ್ದಾಳೆ.
ಮನೆಮಂದಿಗೆ ಮಾಹಿತಿ ಮತ್ತು ವಂಚನೆ ಬಯಲು:
ಆರೋಪಿಯ ಅತಿಯಾಸೆಗೆ ಅಂತ್ಯವಿರಲಿಲ್ಲ. ಚಿನ್ನ ಕೊಟ್ಟ ಬಳಿಕವೂ ಮತ್ತೆ ಮತ್ತೆ ಚಿನ್ನ ನೀಡುವಂತೆ ಆತ ಯುವತಿಗೆ ಪೀಡಿಸಲು ಪ್ರಾರಂಭಿಸಿದನು. ಇದರಿಂದ ಮಾನಸಿಕವಾಗಿ ನೊಂದ ಯುವತಿಯು ಕೊನೆಗೆ ಧೈರ್ಯ ಮಾಡಿ ಮನೆಯವರ ಬಳಿ ಸಂಪೂರ್ಣ ವಿಷಯವನ್ನು ತಿಳಿಸಿಬಿಟ್ಟಿದ್ದಾಳೆ.
ಯುವತಿಯ ಮನೆಯವರು ಆರೋಪಿಯ ಮೊಬೈಲ್ ನಂಬರ್‌ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಾಗ, ಆತ “ನಾನು ನಿಮ್ಮಿಂದ ಪಡೆದ ಚಿನ್ನವನ್ನು ವಾಪಸ್ ಕೊಡುತ್ತೇನೆ, ಗಡಿಬಿಡಿ ಮಾಡಬೇಡಿ” ಎಂದು ನಂಬಿಸಿದ್ದಾನೆ. ಮನೆಯವರೂ ಸಹ ಚಿನ್ನ ವಾಪಸ್ ಸಿಕ್ಕರೆ ಸಾಕು ಎಂದು ಸುಮ್ಮನಾಗಿದ್ದರು. ಆದರೆ, ಕೆಲ ದಿನಗಳ ಬಳಿಕ ಆರೋಪಿ ತನ್ನ ಮೊಬೈಲ್ ನಂಬರ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ಸಂಪೂರ್ಣವಾಗಿ ತಲೆಮರೆಸಿಕೊಂಡಿದ್ದಾನೆ. ಕೊನೆಗೆ ಮೋಸಹೋಗಿರುವುದನ್ನು ಅರಿತ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಆತಂಕಗಳು:
ಈ ಕೃತ್ಯದ ಹಿಂದೆ ಸುಪ್ರೀತ್ ಗೌಡನಲ್ಲದೆ ಒಂದು ದೊಡ್ಡ ವಂಚಕರ ಜಾಲವೇ (Cyber Gang) ಕೆಲಸ ಮಾಡುತ್ತಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈ ಜಾಲವು ಇಂತಹದೇ ನೂರಾರು ಅಮಾಯಕ ಯುವತಿಯರ ಬದುಕನ್ನು ನರಕ ಸದೃಶ್ಯವನ್ನಾಗಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆರೋಪಿ ಅಥವಾ ಆತನ ಗೆಳೆಯ ಚಿನ್ನಾಭರಣಗಳನ್ನು ಪಡೆಯಲು ನೇರವಾಗಿ ಮನೆ ಸಮೀಪವೇ ಬಂದಿದ್ದರಿಂದ, ಆತನನ್ನು ಸುಲಭವಾಗಿ ಖೆಡ್ಡಾಕ್ಕೆ ಬೀಳಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಬಹುದಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅಪರಿಚಿತರೊಂದಿಗೆ ವ್ಯವಹರಿಸುವಾಗ ಯುವಜನತೆ ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಈ ಘಟನೆಯೇ ಕನ್ನಡಿಯಾಗಿದೆ.
ಯುವಜನತೆ ಮತ್ತು ಪೋಷಕರಿಗೆ ಪ್ರಮುಖ ಜಾಗೃತಿ ಸಂದೇಶ ಹಾಗೂ ಎಚ್ಚರಿಕೆಗಳು:
ಅಪರಿಚಿತರ ಸ್ನೇಹಕ್ಕೆ ಮುಕ್ತ ಆಹ್ವಾನ ಬೇಡ: ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವೇ ಇಲ್ಲದ ವ್ಯಕ್ತಿಗಳು ಕಳುಹಿಸುವ ‘ಫ್ರೆಂಡ್ ರಿಕ್ವೆಸ್ಟ್’ಗಳನ್ನು ಯಾವುದೇ ಕಾರಣಕ್ಕೂ ಕುರುಡಾಗಿ ಸ್ವೀಕರಿಸಬೇಡಿ. ಸುಂದರ ಪ್ರೊಫೈಲ್ ಚಿತ್ರಗಳು ಅಥವಾ ನಕಲಿ ಖಾತೆಗಳ ಹಿಂದೆ ವಂಚಕರೇ ಇರುತ್ತಾರೆ ಎಂಬುದನ್ನು ಮರೆಯದಿರಿ.
ವೈಯಕ್ತಿಕ ಫೋಟೋ/ಮಾಹಿತಿಗಳನ್ನು ಹಂಚಿಕೊಳ್ಳಬೇಡಿ: ವಾಟ್ಸಾಪ್ ಅಥವಾ ಇತರೆ ಚಾಟಿಂಗ್ ಆಪ್‌ಗಳಿಗೆ ಬಂದ ಕೂಡಲೇ ನಿಮ್ಮ ವೈಯಕ್ತಿಕ ಫೋಟೋಗಳು, ನಂಬರ್‌ಗಳು ಅಥವಾ ಖಾಸಗಿ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸೈಬರ್ ವಂಚಕರು ಇಂತಹವುಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಾರೆ.
ಬೆದರಿಕೆಗೆ ಹೆದರಿ ಕುಳಿತುಕೊಳ್ಳಬೇಡಿ (ಬ್ಲ್ಯಾಕ್‌ಮೇಲ್‌ಗೆ ಮಣಿಯಬೇಡಿ): ಯಾರಾದರೂ ನಿಮ್ಮ ಫೋಟೋಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಿದರೆ, ಹಣ ಅಥವಾ ಒಡವೆಗಳನ್ನು ಕೇಳಿದರೆ, ಭಯಪಟ್ಟುಕೊಂಡು ಅವರ ಮಾತುಗಳಿಗೆ ತಲೆಬಾಗಬೇಡಿ. ವಂಚಕರು ಹಣ ನೀಡಿದರೂ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಲೇ ಇರುತ್ತಾರೆ.
ಕುಟುಂಬದವರೊಂದಿಗೆ ಮುಕ್ತವಾಗಿ ಮಾತನಾಡಿ: ಯಾವುದೇ ಸಮಸ್ಯೆಯುಂಟಾದರೂ ಮುಚ್ಚಿಡದೆ ತಕ್ಷಣವೇ ತಂದೆ-ತಾಯಿ ಅಥವಾ ವಿಶ್ವಾಸಾರ್ಹ ಹಿರಿಯರ ಬಳಿ ವಿಷಯವನ್ನು ಹಂಚಿಕೊಳ್ಳಿ. ನಿಮ್ಮ ಮಾನ-ಮರ್ಯಾದೆಗೆ ಹೆದರಿಕೊಂಡು ಮೌನವಾಗಿರುವುದು ವಂಚಕರಿಗೆ ಮತ್ತಷ್ಟು ಧೈರ್ಯ ತುಂಬುತ್ತದೆ.
ಕೂಡಲೇ ಸೈಬರ್ ಕ್ರೈಮ್ ಅಥವಾ ಪೊಲೀಸರನ್ನು ಸಂಪರ್ಕಿಸಿ: ಅಪರಿಚಿತರಿಂದ ಯಾವುದೇ ರೀತಿಯ ಬೆದರಿಕೆ, ಕಿರುಕುಳ ಅಥವಾ ವಂಚನೆ ಎದುರಾದ ತಕ್ಷಣವೇ ಯಾವುದೇಂಜಿಕೆಗೆ ಒಳಗಾಗದೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸೈಬರ್ ಕ್ರೈಮ್‌ಗೆ ದೂರು ನೀಡಿ.
ಸಾಮಾಜಿಕ ಜಾಲತಾಣಗಳು ಮನರಂಜನೆಗೆ ಇರಬೇಕೇ ಹೊರತು, ನಮ್ಮ ಬದುಕನ್ನು ನರಕ ಮಾಡಿಕೊಳ್ಳಲು ಅಲ್ಲ. ಸ್ವಲ್ಪ ಎಚ್ಚರಿಕೆ ವಹಿಸಿದರೆ ಇಂತಹ ಸೈಬರ್ ಕಳ್ಳರ ಬಲೆಗೆ ಬೀಳುವುದನ್ನು ಸಂಪೂರ್ಣವಾಗಿ ತಪ್ಪಿಸಬಹುದು. ಜಾಗರೂಕರಾಗಿರಿ, ಸುರಕ್ಷಿತವಾಗಿರಿ!
Bantawala
ಬಂಟ್ವಾಳ: ಪೋಕ್ಸೋ ಪ್ರಕರಣ ಸಾಬೀತು – ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶ
ಮಂಗಳೂರು: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಗಂಭೀರ ಸ್ವರೂಪದ ಪೋಕ್ಸೋ ಪ್ರಕರಣದಲ್ಲಿ ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದ್ದು, ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (FTSC-2) ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಬೆಳ್ತಂಗಡಿ ಗುರುವಾಯನಕೆರೆ ನಿವಾಸಿ ಅಬ್ದುಲ್ ಲತಿಫ್ ಶಿಕ್ಷೆಗೊಳಗಾದ ಅಪರಾಧಿ. ಈ ಪ್ರಕರಣದಲ್ಲಿ ಒಟ್ಟು ಮೂವರ ವಿರುದ್ಧ ಆರೋಪವಿದ್ದು, ಪ್ರಮುಖ ಆರೋಪಿಯ ದೋಷವು ನ್ಯಾಯಾಲಯದಲ್ಲಿ ಸಾಬೀತಾಗಿದೆ.
ಪ್ರಕರಣದ ಹಿನ್ನೆಲೆ ಮತ್ತು ತನಿಖೆ:
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಧಿಸೂಚನೆ ಸಂಖ್ಯೆ 141/2025 ರ ಅಡಿಯಲ್ಲಿ ಪೋಕ್ಸೋ ಕಾಯ್ದೆ-2012ರ ಕಲಂ: 4, 6, 8, 12, 19(1)(b), 21 ಹಾಗೂ BNS-2023ರ ಕಲಂ: 64(2)(f), 75 r/w 3(5) ಅಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಗಂಭೀರತೆಯನ್ನು ಅರಿತುಕೊಂಡ ಬಂಟ್ವಾಳ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಹಾಗೂ ತನಿಖಾಧಿಕಾರಿ ಅನಂತ ಪದ್ಮನಾಭ ಅವರು ಕೂಲಂಕಷವಾಗಿ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು:
ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ (FTSC-2) ನಡೆದ ವಿಚಾರಣೆಯ ಸಂದರ್ಭದಲ್ಲಿ, ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಸಹನಾದೇವಿ ಬೋಳೂರು ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿ, ಸಾಕ್ಷಿಗಳನ್ನು ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಮಾನ್ಯ ನ್ಯಾಯಾಧೀಶರಾದ ಶ್ರೀ ಮಾನು ಕೆ.ಎಸ್. ಅವರು, ಆರೋಪಿ ಅಬ್ದುಲ್ ಲತಿಫ್‌ನ ಕೃತ್ಯವು ಸಾಬೀತಾಗಿರುವ ಹಿನ್ನೆಲೆಯಲ್ಲಿ ದಿನಾಂಕ 19.09.2026 ರಂದು ಈ ಕೆಳಗಿನ ಶಿಕ್ಷೆಯನ್ನು ಪ್ರಕಟಿಸಿ ಆದೇಶಿಸಿದ್ದಾರೆ:
- ಕಾರಾಗೃಹ ವಾಸ: 20 ವರ್ಷಗಳ ಕಠಿಣ ಕಾರಾಗೃಹ ವಾಸ.
- ದಂಡದ ಮೊತ್ತ: ರೂ. 80,000/- (ಎಂಭತ್ತು ಸಾವಿರ ರೂಪಾಯಿಗಳು).
ತ್ವರಿತ ತನಿಖೆ ಮತ್ತು ಸಮರ್ಥ ವಾದ ಮಂಡನೆಯ ಮೂಲಕ ಅಪರಾಧಿಗೆ ತಕ್ಕ ಶಿಕ್ಷೆ ದೊರೆಯುವಂತೆ ಮಾಡಿದ ತನಿಖಾಧಿಕಾರಿಗಳು ಹಾಗೂ ಸರ್ಕಾರಿ ಅಭಿಯೋಜಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala9 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
