Connect with us

court

ಪತಿ ಆತ್ಮಹತ್ಯೆ ಪ್ರಕರಣ: ಪತ್ನಿಯ ದುಷ್ಪ್ರೇರಣೆ ಸಾಬೀತು, ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಕೆ!

Published

on

ಪುತ್ತೂರು: ಉದ್ಯಮಿ ಸುದೀಪ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದ್ದಾರೆ. ಆತ್ಮಹತ್ಯೆಗೆ ಪತ್ನಿ ಸೌಮ್ಯ ಶೆಟ್ಟಿ ಅವರ ದುಷ್ಪ್ರೇರಣೆಯೇ ಕಾರಣ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ತಿಳಿಸಲಾಗಿದೆ.

ಘಟನೆಯ ಹಿನ್ನೆಲೆ:

ಕಡಬ ತಾಲೂಕಿನ ನೆಲ್ಯಾಡಿ ನಿವಾಸಿಯಾಗಿದ್ದು, ಬೆಳ್ತಂಗಡಿಯಲ್ಲಿ ಉದ್ಯಮಿಯಾಗಿದ್ದ ಸುದೀಪ್ ಶೆಟ್ಟಿ ಮತ್ತು ಕಾರ್ಕಳ ಬಂಗ್ರೇಗುಡ್ಡೆಯ ಸೌಮ್ಯ ಶೆಟ್ಟಿ ಅವರು ಕಳೆದ ಫೆಬ್ರವರಿ 17ರಂದು ಪುತ್ತೂರಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿತ ವಿವಾಹವಾಗಿದ್ದರು. ತದನಂತರ ಮಾರ್ಚ್ 19ರಂದು ಕುಕ್ಕುಂದೂರು ದೇವಸ್ಥಾನದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಆದರೆ, ಮದುವೆಯಾಗಿ ತಿಂಗಳೊಳಗೇ ಮಾರ್ಚ್ 22ರಂದು ಸುದೀಪ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಸುದೀಪ್ ಸಾವನ್ನಪ್ಪಿದ್ದರು. ಈ ಘಟನೆ ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.

ತಂದೆಯ ಗಂಭೀರ ಆರೋಪ:

ಸುದೀಪ್ ತಂದೆ ದಾಮೋದರ್ ಶೆಟ್ಟಿ ಅವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದರು. ದಾಮೋದರ್ ಶೆಟ್ಟಿ ಅವರು ತಮ್ಮ ಸೊಸೆ ಸೌಮ್ಯ ಶೆಟ್ಟಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, “ಸೌಮ್ಯ ತನ್ನ ಮಗನಿಗೆ ವಿಷವುಣಿಸಿ ಕೊಲೆಗೈದಿದ್ದಾಳೆ. ಆತ ವಿಷ ಸೇವಿಸಿದ ವಿಷಯವನ್ನು ಏಳು ದಿನಗಳ ಕಾಲ ಮುಚ್ಚಿಟ್ಟು, ಸರಿಯಾದ ಚಿಕಿತ್ಸೆ ಸಿಗದಂತೆ ಮಾಡಿದ್ದಾಳೆ. ಸೌಮ್ಯ ಈ ಹಿಂದೆಯೂ ಹಲವರಿಗೆ ವಂಚಿಸಿರುವ ಕುರಿತು ಪೊಲೀಸರಿಗೆ ತಿಳಿದಿದೆ. ಸೌಮ್ಯ ಮಾನಸಿಕ ಕಿರುಕುಳ ನೀಡಿ ಸುದೀಪ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಪತಿಗೆ ಮಾನಸಿಕ, ದೈಹಿಕ ಹಿಂಸೆ:

ಮಾರ್ಚ್ 17ರಂದು ಸಂಬಂಧಿಕರ ಮನೆಯ ಪೂಜಾ ಕಾರ್ಯಕ್ರಮಕ್ಕೆ ತೆರಳುವಾಗ ಕಾರ್‌ನಲ್ಲೇ ಸೌಮ್ಯ ಶೆಟ್ಟಿ ಜಗಳವಾಡಿದ್ದಾಳೆ. ಸುದೀಪ್ ಜೊತೆ ಜಗಳಕ್ಕಿಳಿದ ಸೌಮ್ಯ, ಸುದೀಪ್ ತಾಯಿಗೂ ಬೈದು ಕಾರಿನಿಂದ ಇಳಿಸಿದ್ದಾಳೆ ಎಂದು ದಾಮೋದರ್ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಸೌಮ್ಯ ಶೆಟ್ಟಿಗೆ ಈ ಹಿಂದೆ ಎರಡು ಮದುವೆಗಳಾಗಿದ್ದು, ಆ ಬಳಿಕ ಮತ್ತೊಬ್ಬನ ಜೊತೆಯಲ್ಲಿದ್ದಳು. ಈ ವಿಚಾರವನ್ನು ಮುಚ್ಚಿಟ್ಟು ಸುದೀಪ್‌ನನ್ನು ಮದುವೆಯಾಗಿದ್ದಳು. ಈಚೆಗಷ್ಟೇ ಪೊಲೀಸರು ಸೌಮ್ಯ ಶೆಟ್ಟಿಗೆ ಸೇರಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದರು.

ಪೊಲೀಸ್ ತನಿಖೆ ಮತ್ತು ಬಂಧನ:

ಪ್ರಕರಣದ ತನಿಖೆ ಕೈಗೊಂಡ ಕಾರ್ಕಳ ನಗರ ಠಾಣೆ ಪೊಲೀಸರು ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದರು. ಏಪ್ರಿಲ್ 11ರಂದು ಸೌಮ್ಯಳನ್ನು ಉಡುಪಿಯಲ್ಲಿ ಬಂಧಿಸಲಾಗಿತ್ತು. ಆಕೆಗೆ ಉಡುಪಿ ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ, ಆಕೆಯನ್ನು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿರಿಸಲಾಗಿದೆ. ಇದೀಗ ಜೂನ್ 9ರಂದು ಕಾರ್ಕಳ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದ್ದು, ಸೌಮ್ಯ ಶೆಟ್ಟಿ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ವರದಿ ನೀಡಿದ್ದಾರೆ.




ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

court

ಯುವತಿಗೆ ವಂಚನೆ ಪ್ರಕರಣ: ರಾಜಿ ಸಂಧಾನಕ್ಕೆ ವೇದಿಕೆ ನೀಡಿದ ಹೈಕೋರ್ಟ್; ಜೂನ್ 19ಕ್ಕೆ ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಲು ಸೂಚನೆ

Published

on

ಬೆಂಗಳೂರು / ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈಕೋರ್ಟ್ ಮಹತ್ತರವಾದ ಆದೇಶವೊಂದನ್ನು ನೀಡಿದ್ದು, ವಿವಾದವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಪ್ರಸ್ತಾವನೆಯನ್ನು ಪುರಸ್ಕರಿಸಿದೆ. ಅಲ್ಲದೆ, ಜೂನ್ 19ರಂದು ಸಂತ್ರಸ್ತೆ, ಆರೋಪಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ವ್ಯಕ್ತಿಗಳು ಕಡ್ಡಾಯವಾಗಿ ಮಧ್ಯಸ್ಥಿಕೆ ಕೇಂದ್ರಕ್ಕೆ (Mediation Centre) ಹಾಜರಾಗುವಂತೆ ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ:

ಬಿಜೆಪಿ ಮುಖಂಡ ಪಿ.ಜಿ. ಜಗನ್ನಿವಾಸ ರಾವ್ ಅವರ ಮಗ ಕೃಷ್ಣ ಜಿ. ರಾವ್, ಯುವತಿಯೊಬ್ಬಳನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಇದರ ಪರಿಣಾಮವಾಗಿ ಯುವತಿ ಗರ್ಭಿಣಿಯಾಗಿದ್ದು, ಆ ಬಳಿಕ ಆತ ಮದುವೆಯಾಗಲು ನಿರಾಕರಿಸಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ನಂತರದ ಬೆಳವಣಿಗೆಯಲ್ಲಿ ಸಂತ್ರಸ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಈಗ ವರ್ಷವಾಗುತ್ತಾ ಬಂದಿದೆ.

ಈ ಸಂಬಂಧ ಆರೋಪಿ ಕೃಷ್ಣ ಜಿ. ರಾವ್ ವಿರುದ್ಧ ಬಿಎನ್‌ಎಸ್ (BNS) ಕಾಯ್ದೆಯಡಿ ಕಲಂ 64(2)(ಎಂ) ಮತ್ತು 69 ಅಡಿಯಲ್ಲಿ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಿದ್ದರು. ಸದ್ಯ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ:

ತನ್ನ ವಿರುದ್ಧ ದಾಖಲಾಗಿರುವ ಪ್ರಕರಣದ ಮುಂದಿನ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಕೃಷ್ಣ ಜಿ. ರಾವ್, ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಅರ್ಜಿಯ ವಿಚಾರಣೆ ನಡೆಸಿ, ಪ್ರಕರಣದ ಮುಂದಿನ ವಿಚಾರಣೆಗೆ ಶರತ್ತುಬದ್ಧ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತ್ತು.

ನ್ಯಾಯಾಲಯದ ಗಂಭೀರ ಅವಲೋಕನ ಮತ್ತು ಶರತ್ತು:

ವಿಚಾರಣೆ ವೇಳೆ ನ್ಯಾಯಪೀಠವು, “ಒಂದು ವೇಳೆ ಈ ಪ್ರಕರಣವು ಕೇವಲ ಇಬ್ಬರ ನಡುವಿನ ಒಮ್ಮತದ ಸಂಬಂಧವಾಗಿದ್ದು, ಮಗು ಜನಿಸುವ ಹಂತಕ್ಕೆ ತಲುಪದೆ ಇದ್ದಿದ್ದರೆ ಹಾಗೂ ತಾಯಿ-ಮಗು ಸಂಕಷ್ಟಕ್ಕೆ ಸಿಲುಕದೆ ಇದ್ದಿದ್ದರೆ ಕೋರ್ಟ್ ಸಂಪೂರ್ಣ ತಡೆಯಾಜ್ಞೆ ನೀಡುತ್ತಿತ್ತು. ಆದರೆ ಇಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಸಂತ್ರಸ್ತೆಯ ಪೋಷಕರು ಮಗುವನ್ನು ನೋಡಿಕೊಳ್ಳುವ ಸ್ಥಿತಿಯಲ್ಲಿಲ್ಲ. ಅರ್ಜಿದಾರನ ಕೃತ್ಯಗಳಿಂದಾಗಿ ತಾಯಿ-ಮಗು ಇಂದು ಸಂಕಷ್ಟದಲ್ಲಿದ್ದಾರೆ” ಎಂದು ಗಂಭೀರವಾಗಿ ಅವಲೋಕಿಸಿದೆ.

ಆದ್ದರಿಂದ, ಪ್ರಕರಣ ಇತ್ಯರ್ಥವಾಗುವವರೆಗೆ ಸಂತ್ರಸ್ತೆ ಮತ್ತು ಮಗುವಿನ ಅಗತ್ಯಗಳನ್ನು ಪೂರೈಸಲು ಪ್ರತಿ ತಿಂಗಳು 75 ಸಾವಿರ ರೂ. ಪಾವತಿಸಬೇಕು ಎಂಬ ಶರತ್ತನ್ನು ನ್ಯಾಯಾಲಯ ವಿಧಿಸಿದೆ.

ಪ್ರಸ್ತುತ ಆದೇಶ ಮತ್ತು ಮುಂದಿನ ನಡೆ:

ಹಣ ಪಾವತಿಗೆ ಗಡುವು: ಹೈಕೋರ್ಟ್‌ನ ಹಿಂದಿನ ಆದೇಶದಂತೆ ಮೊದಲ ತಿಂಗಳ 75 ಸಾವಿರ ರೂಪಾಯಿಗಳನ್ನು ಕೋರ್ಟ್‌ನಲ್ಲಿ ಠೇವಣಿ ಇಡಲಾಗಿದ್ದು, ಈ ಹಣವನ್ನು ತಕ್ಷಣವೇ ಸಂತ್ರಸ್ತೆಗೆ ಪಾವತಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಎರಡನೇ ತಿಂಗಳ 75 ಸಾವಿರ ರೂ.ಗಳನ್ನು ಮುಂದಿನ ನಾಲ್ಕು ದಿನಗಳ ಒಳಗಾಗಿ ಪಾವತಿಸುವಂತೆ ಆರೋಪಿಗೆ ಸೂಚಿಸಿ, ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಲಾಗಿದೆ.

ಕಡ್ಡಾಯ ಹಾಜರಾತಿ: ವಿವಾದವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ನ್ಯಾಯಾಲಯ, ಜೂನ್ 19ರಂದು ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಕಡ್ಡಾಯವಾಗಿ ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಲು ತಿಳಿಸಿದೆ. ಅಲ್ಲಿ ನಡೆಯುವ ಸಂಧಾನ ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಪ್ರಕ್ರಿಯೆಗಳು ನಿರ್ಧಾರವಾಗಲಿವೆ.

ಮಾಧ್ಯಮಗಳಿಗೆ ನಿರ್ಬಂಧ: ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ, ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ಹೋಗಬಾರದು ಎಂದು ನ್ಯಾಯಪೀಠವು ಈ ಹಿಂದೆಯೇ ನಿರ್ಬಂಧ ವಿಧಿಸಿದೆ.




Continue Reading

court

ಅಶ್ಲೀಲ ಫೋಟೋ ವೈರಲ್ ಬೆದರಿಕೆ: ₹2.77 ಕೋಟಿ ವಸೂಲಿ ಆರೋಪ, ಇಬ್ಬರ ಬಂಧನ

Published

on

ಮಂಗಳೂರು : ಅಶ್ಲೀಲ ಫೋಟೋ ಮತ್ತು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ, ಕೊಲೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಹೆದರಿಸಿ ಒಟ್ಟು ₹2.77 ಕೋಟಿ ಹಣ ವಸೂಲಿ ಮಾಡಿರುವ ಆರೋಪದಡಿ ಇಬ್ಬರ ವಿರುದ್ಧ ದೂರು ದಾಖಲಾಗಿದೆ.

ದೂರಿನ ಪ್ರಕಾರ, ನವಭಾರತ್ ಸರ್ಕಲ್‌ನ ಬ್ರಹ್ಮ ಸಮಾಜ ಕಟ್ಟಡದ ಮೊದಲ ಮಹಡಿಯಲ್ಲಿ ಗುತ್ತಿಗೆ ಕಂಪನಿ ನಡೆಸುತ್ತಿದ್ದ ಶೇಖರ್ ಎಂಬವರ ಬಳಿ ಕೆಲಸ ಮಾಡುತ್ತಿದ್ದ ಜಿತೇಶ್ ಹಾಗೂ ನಿಝಾಮ್ @ ಇಬ್ರಾಹಿಂ ಎಂಬವರು ಈ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.

ಜಿತೇಶ್ 2024ರ ಜೂನ್ ತಿಂಗಳಲ್ಲಿ ಶೇಖರ್ ಅವರ ಮೊಬೈಲ್‌ಗೆ ಕರೆ ಮಾಡಿ, ಅವರೊಂದಿಗೆ ಇರುವ ಅಶ್ಲೀಲ ಫೋಟೋ ಹಾಗೂ ವಿಡಿಯೋ ತನ್ನ ಬಳಿ ಇರುವುದಾಗಿ ಹೇಳಿ, ಅದನ್ನು ವೈರಲ್ ಮಾಡುವುದಾಗಿ ಹಾಗೂ ಅವರ ಪತ್ನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದಕ್ಕಾಗಿ ₹35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಕದ್ರಿಯ ಬೃಂದಾವನ ಹೋಟೆಲ್‌ನಲ್ಲಿ ಭೇಟಿಯಾಗಿ, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಭಯಗೊಂಡ ಶೇಖರ್ ಅವರು ಎಸ್‌ಬಿಐ ಕಾಪಿಕಾಡ್ ಶಾಖೆಯ ಖಾತೆಯಿಂದ ₹10 ಲಕ್ಷ ಮೊತ್ತದ ಎರಡು ಚೆಕ್ ಹಾಗೂ ₹15 ಲಕ್ಷದ ಒಂದು ಚೆಕ್ ನೀಡಿದ್ದು, ಜಿತೇಶ್ ₹20 ಲಕ್ಷ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಂತರ 2024ರ ಮೇ ತಿಂಗಳಲ್ಲಿ ಶೇಖರ್ ಅವರ ಮೇರಿಹಿಲ್ ನಿವಾಸಕ್ಕೆ ಬಂದ ಜಿತೇಶ್ ಹೆಚ್ಚಿನ ಹಣಕ್ಕಾಗಿ ಒತ್ತಡ ಹೇರಿದಾಗ, ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಿಝಾಮ್‌ಗೆ ವಿಷಯ ತಿಳಿಸಲಾಗಿದೆ. ನಿಝಾಮ್ ಜಿತೇಶ್‌ನನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಆ ಬಳಿಕ ನಿಝಾಮ್, ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ ಬರೆದಿರುವ ಆತ್ಮಹತ್ಯೆ ಪತ್ರದಲ್ಲಿ ಶೇಖರ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿ, ಕೊಲೆ ಪ್ರಕರಣದಲ್ಲಿ ಸಿಲುಕಿಸಿ 10 ವರ್ಷ ಜೈಲು ಶಿಕ್ಷೆಯಾಗುವಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಇದೇ ನೆಪದಲ್ಲಿ 2024ರ ಜೂನ್‌ನಿಂದ 2026ರ ಜನವರಿವರೆಗೆ ಒಟ್ಟು ₹2.57 ಕೋಟಿ ಹಣವನ್ನು ಪಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದಾದ ಬಳಿಕ ಜಿತೇಶ್ ಜೀವಂತವಾಗಿಯೇ ಮಂಗಳೂರಿನಲ್ಲಿ ಕಂಡುಬಂದಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ನಿಝಾಮ್ ಮತ್ತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅಲ್ಲದೆ, ಜೂನ್ 1, 2026ರಂದು ಜಿತೇಶ್ ಪುನಃ ಕರೆ ಮಾಡಿ ಅಶ್ಲೀಲ ಫೋಟೋ ಮತ್ತು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ₹10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆ, ಅಶ್ಲೀಲ ಫೋಟೋ ವೈರಲ್ ಮಾಡುವುದಾಗಿ ಹಾಗೂ ಸುಳ್ಳು ಆತ್ಮಹತ್ಯೆ ನಾಟಕವಾಡಿ ಕೊಲೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ₹2.77 ಕೋಟಿ ಹಣ ವಸೂಲಿ ಮಾಡಿರುವುದಾಗಿ ಆರೋಪಿಸಿ, ಜಿತೇಶ್ ಮತ್ತು ನಿಝಾಮ್ @ ಇಬ್ರಾಹಿಂ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶೇಖರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್ ಕ್ರಮ:

ಭಾರತೀಯ ನ್ಯಾಯ ಸಂಹಿತೆ (BNS), 2023 ರ ಸೆಕ್ಷನ್ 308(5) (ವಂಚನೆ) ಮತ್ತು 351(2) (ಅಪರಾಧಿಕ ಬೆದರಿಕೆ) ಅಡಿಯಲ್ಲಿ ಉರ್ವಾ ಪೊಲೀಸರು ಅಪರಾಧ ಸಂಖ್ಯೆ 0059/2026 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಡ್ ಕಾನ್ಸ್ಟೆಬಲ್ ಪರಶುರಾಮ ನಂದ್ಯಾಲ್ (HC 614) ಅವರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳಾದ ಜಿತೇಶ್ ಮತ್ತು ನಿಝಾಮ್ ಎಂಬಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸ್ ತಂಡ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆ ಬಳಿಕ ಮತ್ತಷ್ಟು ಹೆಚ್ಚಿನ ವಿಚಾರಣೆಗಾಗಿ ಕೇಳಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಗಳಿಬ್ಬರನ್ನು ಪೊಲೀಸ್ ಕಷ್ಟಡಿಗೆ ನೀಡಿದೆ.
ಹನಿಟ್ರ್ಯಾಪ್ ಜಾಲದ ಸೂತ್ರಧಾರ ಬಂಧಿತ ನಿಝಾಮ್ ರಾಜಕೀಯವಾಗಿ ಸಾಕಷ್ಟು ಪ್ರಭಾವಶಾಲಿಯಾಗಿದ್ದರೂ ಮಂಗಳೂರು ಪೊಲೀಸರ ದಿಟ್ಟ ಕಾರ್ಯಾಚರಣೆ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.





Continue Reading

Belthangady

ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ ವಜಾ: ಧರ್ಮಾಧಿಕಾರಿಗಳ ವಿರುದ್ಧ ಎಐ (AI) ಬಳಕೆ:ಜಾಲತಾಣಗಳಿಗೆ ಬಿಸಿ; ಹೈಕೋರ್ಟ್ ಮಹತ್ವದ ತೀರ್ಪು

Published

on

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಬುಧವಾರ ಎರಡು ಪ್ರತ್ಯೇಕ ಮತ್ತು ಮಹತ್ವದ ಪ್ರಕರಣಗಳಲ್ಲಿ ಮಹತ್ವದ ಆದೇಶಗಳನ್ನು ಹೊರಡಿಸಿದೆ. ಗಡೀಪಾರು ಆದೇಶ ಪ್ರಶ್ನಿಸಿದ್ದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ಇನ್ನೊಂದೆಡೆ ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಎಐ (AI) ತಂತ್ರಜ್ಞಾನ ದುರ್ಬಳಕೆ ತಡೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಸಾಮಾಜಿಕ ಜಾಲತಾಣಗಳಿಗೆ ನೋಟಿಸ್ ಜಾರಿ ಮಾಡಿದೆ.

ತಿಮರೋಡಿ ಅರ್ಜಿ ವಜಾ: ಮೇಲ್ಮನವಿಗೆ ಹೈಕೋರ್ಟ್ ಸೂಚನೆ

ತಮ್ಮ ವಿರುದ್ಧ ಹೊರಡಿಸಲಾಗಿದ್ದ ಗಡೀಪಾರು ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ಕಾನೂನು ಪ್ರಕ್ರಿಯೆಯ ಪ್ರಕಾರ, ಗಡೀಪಾರು ಆದೇಶದ ವಿರುದ್ಧ ಸರ್ಕಾರದ ಗೃಹ ಕಾರ್ಯದರ್ಶಿಯವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅದನ್ನು ಬಿಟ್ಟು ನೇರವಾಗಿ ರಿಟ್ ಅರ್ಜಿ ಸಲ್ಲಿಸುವುದು ಊರ್ಜಿತವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದರೆ, ತಿಮರೋಡಿ ಅವರಿಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡುವ ದೃಷ್ಟಿಯಿಂದ, ಮುಂದಿನ ಎರಡು ವಾರಗಳ ಕಾಲ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಧರ್ಮಾಧಿಕಾರಿಗಳ ವಿರುದ್ಧ ಎಐ ದುರುಪಯೋಗ: ಜಾಲತಾಣಗಳಿಗೆ ಬಿಸಿ

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ಧ ಕೃತಕ ಬುದ್ಧಿಮತ್ತೆ (Artificial Intelligence) ಬಳಸಿ ಮಾನಹಾನಿಕರ ಕಂಟೆಂಟ್ ಸೃಷ್ಟಿಸುತ್ತಿರುವುದನ್ನು ತಡೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯೂ ಇದೇ ವೇಳೆ ನಡೆಯಿತು.

ಧರ್ಮಸ್ಥಳದ ಪರ ವಕೀಲ ಎಸ್. ರಾಜಶೇಖರ್ ಮಂಡಿಸಿದ ವಾದವನ್ನು ಆಲಿಸಿದ ಹೈಕೋರ್ಟ್, ಈ ಕುರಿತು ತುರ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಗೂಗಲ್, ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಂ) ಮತ್ತು ವಾಟ್ಸಾಪ್ ವೇದಿಕೆಗಳಿಗೆ ನೋಟಿಸ್ ಜಾರಿಗೊಳಿಸಿದೆ. ಎಐ ಬಳಸಿ ಫೋಟೋ ಹಾಗೂ ಸುಳ್ಳು ಮಾಹಿತಿ ಹಂಚುವುದನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಜಾಲತಾಣ ಸಂಸ್ಥೆಗಳ ಜವಾಬ್ದಾರಿಯನ್ನು ಈ ನೋಟಿಸ್ ಪ್ರಶ್ನಿಸಿದೆ.

Continue Reading

Trending

Copyright © 2025 Deevatige

error: Content is protected !!