Connect with us

Belthangady

ಶ್ರೀಧರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರವಾದ ಆರೋಪಗಳನ್ನು ತನಿಖೆ ನಡೆಸುವಂತೆ ಒತ್ತಾಯ- ದಲಿತ ಮುಖಂಡ ಶೇಖರ್‌ಲಾಯಿಲ ವಿಡಿಯೋ ವೈರಲ್

Published

on

ಬೆಳ್ತಂಗಡಿ: ಶಿಬಾಜೆಯ  ಎಸ್ಟೇಟ್ ನಲ್ಲಿ ನಡೆದ ಶ್ರೀಧರ್ ಮುಗೇರ ಕೊಲೆ ಪ್ರಕರಣವನ್ನು ಎಸ್ಐಟಿ ತನಿಖೆ ನಡೆಸಲು ಅವಕಾಶ ಕಲ್ಪಿಸಿರುವುದನ್ನು ಸ್ವಾಗತಾರ್ಹ , ಅದೇ ರೀತಿ ಕಳಿಯ ಗ್ರಾಮದಲ್ಲಿ ವರ್ಷಗಳ ಹಿಂದೆ ನಡೆದ ಶ್ರೀಧರ್ ಮುಗೇರರ ಅಸಹಜ ಸಾವಿನ ಬಗ್ಗೆಯೂ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂಬ ಆಗ್ರಹ ಪರಿಶಿಷ್ಟ ಜಾತಿ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಕೇಳಿ ಬಂತು.

ಬೆಳ್ತಂಗಡಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ರವರ ಅಧ್ಯಕ್ಷತೆಯಲ್ಲಿ ಫೆ 22 ರಂದು ನಡೆದ ಮಾಸಿಕ ಪರಿಶಿಷ್ಟ ಜಾತಿ/ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕರಾದ ಶೇಖರ್‌ ಲಾಯಿಲ ಶಿಬಾಜೆ ಶ್ರೀಧರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ ಐ ಟಿ ತನಿಖೆಯಲ್ಲಿ ಗಂಭೀರವಾದ ಆರೋಪಗಳನ್ನು ತನಿಖೆ ನಡೆಸುವಂತೆ ಒತ್ತಾಯಿಸಿದರು.


ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆಳ್ತಂಗಡಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ರವರ ಅಧ್ಯಕ್ಷತೆಯಲ್ಲಿ ಫೆ 22 ರಂದು ಮಾಸಿಕ ಪರಿಶಿಷ್ಟ ಜಾತಿ/ಪಂಗಡಗಳ ಕುಂದುಕೊರತೆಗಳ ಸಭೆ ನಡೆಯಿತು.ಈ ವೇಳೆ ಹಿರಿಯ ದಲಿತ ಮುಖಂಡ ಸಂಜೀವ ಆರ್ ಮಾತನಾಡಿ 2022 ರಲ್ಲಿ ನಡೆದ ಶಿಬಾಜೆಯ ಶ್ರೀಧರ್ ಮುಗೇರ ಕೊಲೆ ಪ್ರಕರಣದಲ್ಲಿ ಕೆಲವು ಬಲಾಢ್ಯರಿದ್ದು , ತನಿಖೆ ಹಾದಿ ತಪ್ಪಲು ಕಾರಣವಾಗಿತ್ತು. ಆ ಬಳಿಕ ದಲಿತ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿದ ಬಳಿಕ ರಾಜ್ಯ ಸರ್ಕಾರ ಸಿಐಡಿ ತನಿಖೆ ನಡೆಸಿದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಇದೀಗ ರಾಜ್ಯ ಹೈಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಎಸ್ಐಟಿ ತನಿಖೆ ನಡೆಸಲು ಆದೇಶಿಸಿರುವುದು ಸ್ವಾಗತಾರ್ಹ‌ ವಿಚಾರ.ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದ ಅವರು ವರ್ಷಗಳ ಹಿಂದೆ ಕಳಿಯ ಗ್ರಾಮದಲ್ಲಿ ಶ್ರೀಧರ್ ಮುಗೇರ ಎಂಬವರ ಮೃತದೇಹ ಸಂಶಯಾಸ್ಪದವಾಗಿ ಕೆರೆಯಲ್ಲಿ ಪತ್ತೆಯಾಗಿತ್ತು , ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದ್ದರೂ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇದಕ್ಕೆ ಧ್ವನಿಗೂಡಿಸಿದ ದಲಿತ ಮುಖಂಡ ಶೇಖರ್ ಲಾಯಿಲ, ಶಿಬಾಜೆ ಪ್ರಕರಣದ ಆರೋಪಿಗಳಿಗೆ ಪೋಲಿಸರು ರಕ್ಷಣೆ ನೀಡಿದ್ದಾರೆ ಎಂದು ಆರೋಪಿಸಿದ ಅವರು ಶಾಸಕರ ಪೋನ್ ಕರೆಗಳ ಬಗ್ಗೆ ಎಸ್ಐಟಿ ಪರಿಶೀಲಿಸಬೇಕು ಎಂದರು. ಈ ವೇಳೆ ಮಾತನಾಡಿದ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಬಿ.ಜಿ ಸುಬ್ಬಾಪುರ್ ಮಠ್ ಇದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದ್ದು , ವೈದ್ಯಕೀಯ ತಾಂತ್ರಿಕ ಪರೀಕ್ಷೆಯ ವರದಿಯ ಆಧಾರದಲ್ಲಿ ತನಿಖೆ ನಡೆಯುತ್ತಿದ್ದು , ತಿಂಗಳಲ್ಲಿ ತನಿಖೆಯಲ್ಲಿ ಪ್ರಗತಿ ಸಾಧಿಸಲಿದ್ದೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.


ಅಪ್ರಾಪ್ತ ವಯಸ್ಸಿನ ಮಕ್ಕಳು, ದ್ವಿಚಕ್ರ ಸೇರಿದಂತೆ ವಾಹನಗಳನ್ನು ಅಡ್ಡಾದಿಡ್ಡಿಯಾಗಿ , ಅತಿವೇಗವಾಗಿ ಚಲಾಯಿಸುತ್ತಿದ್ದರೂ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ.ನಂಬರ್ ಪ್ಲೇಟ್ ಧರಿಸದೇ ಕೆಲವರು ಬೈಕ್ ಚಲಾಯಿಸುತ್ತಿರುವುದು ಕಂಡುಬರುತಿದ್ದು ಇದು ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದ ಶೇಖರ್ ಲಾಯಿಲ ಒಂದೆರಡು ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಿದರೆ ಕಡಿವಾಣ ಬೀಳಬಹುದು ಎಂದ ಅವರು ಲಾಯಿಲ ಗ್ರಾಮದ ದರ್ಪಿಂಜೆ ಸೇತುವೆ ಸುತ್ತಮುತ್ತ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು , ಇದೀಗ ಇಲ್ಲಿ ಲಾಯಿಲ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆರವರು ಮುತುವರ್ಜಿಯಿಂದ ಸಿಸಿ ಕ್ಯಾಮರಾ ಅಳವಡಿಸಿದ್ದು , ಅದರ ಸಹಾಯದಿಂದ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿರುವವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬೆಳ್ತಂಗಡಿ ಬಸ್ ನಿಲ್ದಾಣ ಸೇರಿದಂತೆ ಕೆಲವು ಕಡೆಗಳಲ್ಲಿ ಮಾನಸಿಕ ಅಸ್ವಸ್ಥರು ಓಡಾಟ ನಡೆಸುತ್ತಿರುವುದಲ್ಲದೇ ಕೆಲವೊಮ್ಮೆ ತೀರಾ ಕೆಟ್ಟ ರೀತಿಯಲ್ಲಿ ವರ್ತಿಸುತಿದ್ದಾರೆ.ಇದರಿಂದ ಮಹಿಳೆಯರು, ವಿದ್ಯಾರ್ಥಿಗಳು ತೀರಾ ಮುಜುಗರಕ್ಕೀಡಾಗುತಿದ್ದಾರೆ ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದರು. ಇನ್ನೋರ್ವ ಮುಖಂಡ ಶೀನ ಪಿಲ್ಯ ಮಾತನಾಡಿ ಪಿಲ್ಯ ಮಾರಿಗುಡಿ ಬಳಿ ವ್ಯಾಪಕ ಅಪಘಾತಗಳು ಸಂಭವಿಸುತ್ತಿದ್ದು , ಇಲ್ಲಿ ಬ್ಯಾರಿಕೇಡ್ ಅಳವಡಿಸಬೇಕು ಎಂದು ಒತ್ತಾಯಿಸಿದರು. ನಾರಾವಿಯ ಕೃಷ್ಣಪ್ಪ ರವರು ಮಾತನಾಡಿ ಇತ್ತೀಚಿಗೆ ನಾರಾವಿಯಲ್ಲಿ ದಲಿತ ವ್ಯಕ್ತಿಯೊಬ್ಬರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಕ್ಕಳ ಎದುರಿನಲ್ಲಿಯೇ ಹಲ್ಲೆ ನಡೆಸಿದ ಘಟನೆ ಬಗ್ಗೆ ಪ್ರಸ್ತಾಪಿಸಿ , ಪೋಲಿಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನಿನಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಚೆನ್ನಕೇಶವ , ವೆಂಕಪ್ಪ ನಾಯ್ಕ ಉಪ್ಪಿನಂಗಡಿ , ರಾಮಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಸಭೆಯಲ್ಲಿ ಬೆಳ್ತಂಗಡಿ ಪೋಲಿಸ್ ಉಪ ವಿಭಾಗ ವ್ಯಾಪ್ತಿಯ ಠಾಣೆಗಳ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಗಳು ಉಪಸ್ಥಿತರಿದ್ದರು. ಡಿವೈಎಸ್ಪಿ ಕಛೇರಿಯ ಮನೋಹರ್ ಹಿಂದಿನ ಸಭೆಯ ನಡಾವಳಿಗಳನ್ನು ಸಭೆಯ ಮುಂದಿಟ್ಟರು.
ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ್ ಧನ್ಯವಾದವಿತ್ತರು.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಬೆಳ್ತಂಗಡಿ: ಗುರುವಾಯನಕೆರೆ ಬಳಿ ಪತ್ತೆಯಾದ ಮೃತದೇಹದ ಗುರುತು ಪತ್ತೆ – ಯತೀಶ್ ಗೌಡ ಕೊಲೆ ಶಂಕೆ, ಮೂವರು ವಶಕ್ಕೆ

Published

on

ಬೆಳ್ತಂಗಡಿ, ದಕ್ಷಿಣ ಕನ್ನಡ: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಸಮೀಪದ ಅಲಾದಿಕೊಟ್ಟಿಗೆ ಎಂಬಲ್ಲಿ ಜೂನ್ 1ರಂದು ಬೆಳಿಗ್ಗೆ ಪತ್ತೆಯಾಗಿದ್ದ ಅಪರಿಚಿತ ಮೃತದೇಹದ ಗುರುತು ಪತ್ತೆಯಾಗಿದ್ದು, ಇದು ಕೊಲೆ ಎಂದು ಶಂಕಿಸಲಾಗಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ, ದಿ. ಕೂಸಪ್ಪ ಗೌಡ ಮತ್ತು ಪದ್ಮಾವತಿ ದಂಪತಿಯ ದ್ವಿತೀಯ ಪುತ್ರ ಯತೀಶ್ ಗೌಡ (33) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಯತೀಶ್, ಕಳೆದ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದು, ನಾಪತ್ತೆಯಾಗಿದ್ದರು.

ಘಟನೆಯ ಹಿನ್ನೆಲೆ ಮತ್ತು ದೂರು:

ಜೂನ್ 1ರಂದು ಬೆಳಿಗ್ಗೆ ಗುರುವಾಯನಕೆರೆಯ ಶ್ರೀದೇವಿ ಹಾರ್ಡ್‌ವೇರ್ ಬಳಿ ಅಪರಿಚಿತ ಮೃತದೇಹ ಇರುವ ಬಗ್ಗೆ ಭಾವಚಿತ್ರ ಸಹಿತ ಮಾಹಿತಿ ವಾಟ್ಸಾಪ್‌ ಮೂಲಕ ಮೃತರ ಸಹೋದರ ನಿತಿನ್ (34) ಅವರಿಗೆ ತಲುಪಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ನಿತಿನ್, ಮೃತದೇಹವನ್ನು ತನ್ನ ಸಹೋದರ ಯತೀಶ್ ಗೌಡ ಎಂದು ಗುರುತಿಸಿದ್ದಾರೆ.

ಸಿಸಿಟಿವಿ ತನಿಖೆ ಮತ್ತು ಕೊಲೆ ಶಂಕೆ:

ಮೃತದೇಹದ ಮೇಲೆ ಹಲ್ಲೆಯ ಗುರುತುಗಳಿದ್ದ ಹಿನ್ನೆಲೆಯಲ್ಲಿ, ದೂರುದಾರರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಜೂನ್ 1ರ ಬೆಳಿಗ್ಗಿನ ಸಮಯ ಮೂವರು ವ್ಯಕ್ತಿಗಳು ಯತೀಶ್ ಅವರ ಮೇಲೆ ಹಲ್ಲೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಗಳ ತೀವ್ರ ಹಲ್ಲೆಯಿಂದಾಗಿಯೇ ಯತೀಶ್ ಮೃತಪಟ್ಟಿರುವುದಾಗಿ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್ ಕಾರ್ಯಾಚರಣೆ, ಮೂವರ ವಶಕ್ಕೆ:

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಿತಿನ್ ನೀಡಿದ ದೂರಿನನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ : 65/2026, ಕಲಂ: 115(2), 103 ಜೊತೆಗೆ 3(5) ಬಿ.ಎನ್.ಎಸ್ (BNS) ರಂತೆ ಕೊಲೆ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ:

ಯಶೋಧರ (35) – ನಿವಾಸಿ: ಮಿತ್ತಬಾಗಿಲು, ಬೆಳ್ತಂಗಡಿ

ಮೋಹನ್ (30) – ನಿವಾಸಿ: ಚಾರ್ವಾಕ, ಕಡಬ

ಇಬ್ರಾಹಿಂ (54) – ನಿವಾಸಿ: ಪದಂಗಡಿ, ಬೆಳ್ತಂಗಡಿ

ವಶಕ್ಕೆ ಪಡೆದಿರುವ ಮೂವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕೊಲೆಗೆ ನಿಖರವಾದ ಕಾರಣ ಮತ್ತು ಹಲ್ಲೆಯ ಹಿಂದಿನ ಸತ್ಯಾಸತ್ಯತೆಗಳನ್ನು ಪತ್ತೆಹಚ್ಚಲು ಬೆಳ್ತಂಗಡಿ ಪೊಲೀಸರು ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Continue Reading

accident

ಬೆಳ್ತಂಗಡಿ – ಪುತ್ತೂರು ಭಾಗದಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು : ಇಬ್ಬರು ಬಲಿ

Published

on

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಪುತ್ತೂರು ಭಾಗಗಳಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ತಲಾ ಓರ್ವರು ಮೃತಪಟ್ಟ ದುರ್ಘಟನೆಗಳು ವರದಿಯಾಗಿವೆ.

ಮುಂಡಾಜೆ: ಬೈಕ್-ಕಾರು ಭೀಕರ ಅಪಘಾತ; ಚಿಕಿತ್ಸೆ ಫಲಿಸದೆ ಯುವಕ ಸಾವು


ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೋಮಂತಡ್ಕ ಅಗರಿ ಕ್ರಾಸ್ ಬಳಿ ಭಾನುವಾರ ನಡೆದ ಬೈಕ್ ಹಾಗೂ ಕಾರಿನ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ, ಸೋಮವಾರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾರ್ಯತಡ್ಕ ನಿವಾಸಿ ಗಣೇಶ್ (36) ಮೃತಪಟ್ಟ ದುರ್ದೈವಿ.

ಘಟನೆಯ ವಿವರ:

ಭಾನುವಾರ ಉಜಿರೆ ಕಡೆಯಿಂದ ಕಕ್ಕಿಂಜೆ ಕಡೆಗೆ ಗಣೇಶ್ ಅವರು ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಚಾರ್ಮಾಡಿ ಕಡೆಯಿಂದ ಬರುತ್ತಿದ್ದ ಕಾರಿನ ಬಲಭಾಗದ ಸೈಡ್ ಮಿರರ್‌ಗೆ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ.

ಮೃತ ಗಣೇಶ್ ಅವರು ಅವಿವಾಹಿತರಾಗಿದ್ದು, ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸಂತಾಪ:

ಮೃತ ಗಣೇಶ್ ಅವರು ಕಾರ್ಯತಡ್ಕದಲ್ಲಿ ‘ಗಣೇಶ್ ಸ್ಟುಡಿಯೋ’ ನಡೆಸುತ್ತಿದ್ದು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (SKPA) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಬೆಳ್ತಂಗಡಿ ವಲಯದ ಸಕ್ರಿಯ ಸದಸ್ಯರಾಗಿದ್ದರು. ಯುವ ಛಾಯಾಗ್ರಾಹಕನ ಅಕಾಲಿಕ ನಿಧನಕ್ಕೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ತೀವ್ರ ಸಂತಾಪ ವ್ಯಕ್ತಪಡಿಸಿದೆ.‌

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯ ಕೆಂಜಳ ತಿರುವಿನಲ್ಲಿ ಭೀಕರ ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು, 7 ಮಂದಿಗೆ ಗಾಯ

ಕಡಬ: ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಂಜಳದ ಅಪಾಯಕಾರಿ ತಿರುವಿನಲ್ಲಿ ಮೇ 25ರಂದು ಸಂಜೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಟೆಂಪೋ ಟ್ರಾವೆಲರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಬೆಂಗಳೂರಿನತ್ತ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಹಾಗೂ ಧರ್ಮಸ್ಥಳದ ಕಡೆಯಿಂದ ಸುಬ್ರಹ್ಮಣ್ಯದತ್ತ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಡುವೆ ಈ ಅಪಘಾತ ನಡೆದಿದೆ. ಬೆಂಗಳೂರು ದೇವನಹಳ್ಳಿ ಕೋಟೆ ನಿವಾಸಿ ಸಂಜು ವಿ. ಅವರು ಚಲಾಯಿಸುತ್ತಿದ್ದ ಟೆಂಪೋ ಟ್ರಾವೆಲರ್ (ಕೆಎ 43 ಎ 6435) ನಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಶೇಟ್ ಮಲ್ಲಿಕಾ ಮದ್ರಾಸ್ ಅವರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಕೆಂಜಳದ ಅಪಾಯಕಾರಿ ತಿರುವಿನಲ್ಲಿ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ.

ಮೃತರು ಮತ್ತು ಗಾಯಾಳುಗಳ ವಿವರ: ಅಪಘಾತದ ತೀವ್ರತೆಗೆ ಟೆಂಪೋ ಟ್ರಾವೆಲರ್‌ನಲ್ಲಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಕೆರೆಸಂದ್ರಮನೆ ನಿವಾಸಿ ಅಂಜನಮ್ಮ (47) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಅಪಘಾತದಲ್ಲಿ 5 ವರ್ಷದ ಬಾಲಕಿ ನಯಾನಿಕಾ ತೀವ್ರವಾಗಿ ಗಾಯಗೊಂಡಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳಿದಂತೆ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ನರಸಿಂಹಯ್ಯ, ವಿ. ಮಂಜುನಾಥ್, ವಿ. ಗಂಗಾಧರ್, ಪವಿತ್ರಾ, ಸಿರಿಪ್ರಿಯಾ ಹಾಗೂ ರತ್ನಮ್ಮ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಟೆಂಪೋದಲ್ಲಿದ್ದ ಲೋಕೇಶ್ ದೇವನಹಳ್ಳಿ, ಪವನ್ ಸೋಮನಹಳ್ಳಿ ಕನಕಪುರ, ಕವಿತಾ ಸಿ.ಎಂ., ಜೀವನ್, ಆಶಾ, ಪ್ರೀತಮ್ ಹಾಗೂ ಶಿವ ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Continue Reading

Belthangady

ಕಾರಿನೊಳಗೆ ಸಿಲುಕಿಕೊಂಡ ಮಗು; ಸಮಯಪ್ರಜ್ಞೆ ಮೆರೆದು ಗ್ಲಾಸ್ ಒಡೆದು ರಕ್ಷಿಸಿದ ಸಾರ್ವಜನಿಕರು

Published

on

ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕ ಜಂಕ್ಷನ್ ಬಳಿ ಚಾಲಕನ ಅಜಾಗರೂಕತೆಯಿಂದಾಗಿ ಕಾರಿನ ಡೋರ್ ಆಟೋಮೆಟಿಕ್ ಲಾಕ್ ಆಗಿ, ಮಗುವೊಂದು ಕಾರಿನೊಳಗೆ ಸಿಲುಕಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮೇ 25ರಂದು ಸೋಮವಾರ ನಡೆದಿದೆ.

ಘಟನೆಯ ವಿವರ: ಮದ್ದಡ್ಕದ ಕುವೆಟ್ಟು ನಿವಾಸಿಯೊಬ್ಬರು ತಮ್ಮ ಮಗುವಿನೊಂದಿಗೆ ಕಾರಿನಲ್ಲಿ ಬಂದಿದ್ದು, ರಸ್ತೆ ಬದಿಯ ಅಂಗಡಿಯೊಂದರ ಬಳಿ ಕಾರನ್ನು ನಿಲ್ಲಿಸಿದ್ದರು. ಚಾಲಕನು ಕಾರಿನ ಕೀ ಮತ್ತು ಮಗುವನ್ನು ಒಳಗಡೆಯೇ ಬಿಟ್ಟು, ಇಂಜಿನ್ ಆಫ್ ಮಾಡಿ ಹೊರಗೆ ಇಳಿದು ಅಂಗಡಿಗೆ ತೆರಳಿದ್ದಾರೆ. ಆದರೆ, ಅವರು ಇಳಿದ ತಕ್ಷಣ ಕಾರಿನ ಸೆಂಟ್ರಲ್ ಲಾಕಿಂಗ್ ಸಿಸ್ಟಮ್‌ನಿಂದಾಗಿ ಡೋರ್‌ಗಳು ಆಟೋಮೆಟಿಕ್ ಆಗಿ ಲಾಕ್ ಆಗಿವೆ.

ಕಾರಿನ ಕೀ ಒಳಗಡೆಯೇ ಇದ್ದಿದ್ದರಿಂದ ಹೊರಗಿನಿಂದ ಬಾಗಿಲು ತೆರೆಯಲು ಸಾಧ್ಯವಾಗದೆ ಚಾಲಕ ಗಾಬರಿಗೊಂಡಿದ್ದಾರೆ. ಇದೇ ವೇಳೆ ಕಾರಿನ ಒಳಗಿದ್ದ ಮಗು ಗಾಬರಿಗೊಂಡು ಜೋರಾಗಿ ಅಳಲು ಪ್ರಾರಂಭಿಸಿದೆ. ಬಿಸಿಲಿನ ಬೇಗೆಯೂ ಹೆಚ್ಚಿದ್ದರಿಂದ ಕಾರಿನೊಳಗೆ ಉಸಿರಾಟದ ತೊಂದರೆಯಾಗುವ ಭೀತಿ ಎದುರಾಗಿತ್ತು.

ಸಾರ್ವಜನಿಕರ ಸಮಯಪ್ರಜ್ಞೆ: ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಮತ್ತು ಅಂಗಡಿ ಮುಂಗಟ್ಟುಗಳ ಮಾಲೀಕರು ಕಾರಿನ ಬಳಿ ಧಾವಿಸಿ ಬಂದಿದ್ದಾರೆ. ಕಂಪನಿಕೀ ಇಲ್ಲದೆ ಬಾಗಿಲು ತೆರೆಯಲು ಕಂಬಿ, ಸ್ಕ್ರೂಡ್ರೈವರ್ ಬಳಸಿ ವಿವಿಧ ರೀತಿಯಲ್ಲಿ ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಮಗುವಿನ ಅಳು ಹೆಚ್ಚಾಗುತ್ತಿರುವುದನ್ನು ಮತ್ತು ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಾರ್ವಜನಿಕರು ಸಮಯಪ್ರಜ್ಞೆ ಮೆರೆದಿದ್ದಾರೆ.

ಮಗುವಿಗೆ ಯಾವುದೇ ಗಾಯವಾಗದಂತೆ ಎಚ್ಚರಿಕೆ ವಹಿಸಿ, ಕಾರಿನ ಹಿಂಬದಿಯ ಕಿಟಕಿಯ ಗ್ಲಾಸ್ (ಗಾಜು) ಅನ್ನು ಬಲವಾಗಿ ಒಡೆದಿದ್ದಾರೆ. ತದನಂತರ ಒಳಗಡೆಯಿದ್ದ ಬಾಗಿಲಿನ ಲಾಕ್ ಅನ್ನು ತೆಗೆದು ಮಗುವನ್ನು ಯಶಸ್ವಿಯಾಗಿ ಹೊರಗೆ ತಂದು ರಕ್ಷಿಸಿದ್ದಾರೆ. ಸಾರ್ವಜನಿಕರ ಈ ತ್ವರಿತ ನಿರ್ಧಾರ ಮತ್ತು ಸಮಯಪ್ರಜ್ಞೆಗೆ ಸ್ಥಳೀಯರು ಹಾಗೂ ಮಗುವಿನ ಪೋಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Continue Reading

Trending

Copyright © 2025 Deevatige

error: Content is protected !!