Connect with us

health

ಬೆಳ್ಳಾರೆಯುವ ರಕ್ತ ನಿಧಿ ಉದ್ಘಾಟನೆ – ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಅಭೂತಪೂರ್ವ ಸ್ಪಂದನೆ

Published

on

ಸುಳ್ಯ | ಬೆಳ್ಳಾರೆ:
“ರಕ್ತದಾನ ಕೇವಲ ವೈದ್ಯಕೀಯ ಸೇವೆಯಲ್ಲ, ಅದು ಮಾನವೀಯ ಸಂಬಂಧಗಳನ್ನು ಬೆಸೆಯುವ ಮಹಾ ಸೇತುವೆ” ಎಂಬ ಸಂದೇಶದೊಂದಿಗೆ ಯುವ ರಕ್ತ ನಿಧಿ – ಬೆಳ್ಳಾರೆ ವತಿಯಿಂದ ಆಯೋಜಿಸಲಾದ ಉದ್ಘಾಟನಾ ಕಾರ್ಯಕ್ರಮ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರವು ದಿನಾಂಕ 11-01-2026, ಆದಿತ್ಯವಾರ ಬೆಳ್ಳಾರೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.


ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ನಡೆದ ಶಿಬಿರಕ್ಕೆ ಸುಮಾರು 120ಕ್ಕೂ ಅಧಿಕ ಯುವಕರು ರಕ್ತದಾನ ಮಾಡುವ ಮೂಲಕ ಅಪಾರ ಸ್ಪಂದನೆ ವ್ಯಕ್ತಪಡಿಸಿದರು. ಯುವಕರು, ವಿದ್ಯಾರ್ಥಿಗಳು, ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಮಾನವೀಯತೆಗೆ ಜೀವ ತುಂಬಿದರು.
ಪ್ರಾಸ್ತಾವಿಕ ಭಾಷಣದಲ್ಲಿ ಯುವ ರಕ್ತ ನಿಧಿಯ ಮುಖ್ಯಸ್ಥರಾದ ಆರ್.ಕೆ. ಭಟ್ (ಕುರುಂಬುಡೆಯಲು) ಅವರು ಯುವ ರಕ್ತ ನಿಧಿಯ ಉದ್ದೇಶ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮವನ್ನು ಶ್ರೀ ಭಾಸ್ಕರ್ ರಾವ್ IPS, ಉಪಾಧ್ಯಕ್ಷರು, ಭಾರತೀಯ ರೆಡ್ ಕ್ರಾಸ್ ಸೊಸೈಟಿ – ಕರ್ನಾಟಕ ಅವರು ಉದ್ಘಾಟಿಸಿ ಮಾತನಾಡಿ, “ಗ್ರಾಮ ಮಟ್ಟದಲ್ಲಿ ಬಲಿಷ್ಠ ರಕ್ತದಾನಿಗಳ ಜಾಲ ನಿರ್ಮಾಣವಾಗಬೇಕಾದ ಅಗತ್ಯವಿದೆ. ಇಂತಹ ಯುವ ರಕ್ತ ನಿಧಿಗಳು ಸಮಾಜದ ಆರೋಗ್ಯದ ರಕ್ಷಕರಾಗಿವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಅತಿಥಿಯಾಗಿ ಭಾಗವಹಿಸಿದ್ದ ಡಾ. ಮುರಳಿ ಮೋಹನ್ ಚೂಂತಾರು, ಸದಸ್ಯರು, ಭಾರತೀಯ ರೆಡ್ ಕ್ರಾಸ್ ಸೊಸೈಟಿ – ಕರ್ನಾಟಕ ಅವರು, “ರಕ್ತದಾನವು ಧರ್ಮ, ಜಾತಿ, ವರ್ಗಗಳ ಗಡಿಯನ್ನು ಮೀರಿ ಮನುಷ್ಯನನ್ನು ಮನುಷ್ಯನೊಂದಿಗೆ ಕಟ್ಟಿ ಹಾಕುವ ಮಹತ್ವದ ಸೇವೆ” ಎಂದರು.
ಡಾ. ಶರತ್ ಕುಮಾರ್ ರಾವ್ ಜೆ., ಹಿರಿಯ ರೋಗಶಾಸ್ತ್ರಜ್ಞರು, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಅವರು ರಕ್ತದಾನದ ಆರೋಗ್ಯ ಮಹತ್ವ, ಭದ್ರತೆ ಹಾಗೂ ಸಮಾಜಕ್ಕೆ ಅದರ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುಧಾಕರ ರೈ ಪಿ.ಬಿ., ಸಭಾಪತಿಗಳು, ಭಾರತೀಯ ರೆಡ್ ಕ್ರಾಸ್ ಸೊಸೈಟಿ – ಸುಳ್ಯ ತಾಲೂಕು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ನಮಿತಾ ರೈ, ಅಧ್ಯಕ್ಷರು, ಗ್ರಾಮ ಪಂಚಾಯತ್ – ಬೆಳ್ಳಾರೆ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅತಿಹೆಚ್ಚು ಬಾರಿ ರಕ್ತದಾನ ಮಾಡಿದ ಮೂವರು ವಿಶೇಷ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.


ಸನ್ಮಾನಿತರಾದವರು:
ಡಾ. ಮುರಳಿ ಮೋಹನ್ ಚೂಂತಾರು, ಪಿ.ಬಿ. ಸುಧಾಕರ ರೈ ಹಾಗೂ ಪ್ರತೀಕ್ ಬೆಳ್ಳಾರೆ.
ಶಿಬಿರದ ವಿಶೇಷತೆಯೆಂದರೆ, ಪ್ರಥಮ ಬಾರಿಗೆ ರಕ್ತದಾನ ಮಾಡಿದ ಯುವಕರನ್ನು ವಿಶೇಷವಾಗಿ ಗುರುತಿಸಿ ಪ್ರೋತ್ಸಾಹಿಸಿದುದು, ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಯುವರನ್ನು ರಕ್ತದಾನಕ್ಕೆ ಪ್ರೇರೇಪಿಸುವಂತಾಯಿತು.
ಗ್ರಾಮ ಪಂಚಾಯತ್, ವಿವಿಧ ಸಂಘ–ಸಂಸ್ಥೆಗಳು, ಸಾಮಾಜಿಕ, ಧಾರ್ಮಿಕ ಹಾಗೂ ವೃತ್ತಿಪರ ಸಂಘಟನೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿ,
“ನಮ್ಮ ಗ್ರಾಮದ ರಕ್ತದ ಅವಶ್ಯಕತೆ ನಮ್ಮಿಂದಲೇ ಪೂರೈಕೆಯಾಗಲಿ” ಎಂಬ ಆಶಯವನ್ನು ಸಾಕಾರಗೊಳಿಸಿದವು.


ಕಾರ್ಯಕ್ರಮದಲ್ಲಿ ಪ್ರಮುಖರಾದ ಸುರೇಶ್ ಕುಮಾರ್ ಶೆಟ್ಟಿ (ಪನ್ನೆ), ಶ್ರೀರಾಮ ಪಾಟಜೆ, ಪ್ರಸಾದ್ ಸೇಮಿತ ಬೆಳ್ಳಾರೆ, ದಿಲೀಪ್ ಗಟ್ಟಿಗಾರು, ಶೈಲೇಶ್ ನೆಟ್ಟಾರು, ವಿನಯ್ ಭಾರದ್ವಾಜ್, ಸುಬ್ರಹ್ಮಣ್ಯ ಜೋಶಿ, ಆರಿಫ್ ಬೆಳ್ಳಾರೆ, ಗಿರಿಧರ ರೈ ಪನ್ನೆ, ಭಾಸ್ಕರ ನೆಟ್ಟಾರು, ನವೀನ್ ರೈ ತಂಬಿನಮಕ್ಕಿ, ಚಂದ್ರಶೇಖರ ರೈ ಬಜನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಬೆಳ್ಳಾರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯರಾದ ಪದ್ಮನಾಭ ಶೆಟ್ಟಿ ಪರುವಾಜೆ, ವನಿತಾ ಸಾರಕೆರೆ, ನಾರಾಯಣ ಕೊಂಡೆಪಾಡಿ, ವೇದಿತ್ ರೈ, ವಸಂತ ಪಡಪು, ಲೋಕೇಶ್ ಬೆಳ್ಳಾರೆ ಮೊದಲಾದವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಪ್ರದೀಪ್ ಕುಮಾರ್ ರೈ ಪನ್ನೆ ಅವರು ನಡೆಸಿದ್ದು, ವಂದನಾರ್ಪಣೆಯನ್ನು ನಿಸ್ಮಿತಾ ಬೆಳ್ಳಾರೆ ಸಲ್ಲಿಸಿದರು.


ಒಟ್ಟಾರೆ, ಈ ಕಾರ್ಯಕ್ರಮವು ರಕ್ತದಾನದ ಮೂಲಕ ಮಾನವೀಯತೆಯನ್ನು ಬಲಪಡಿಸಿ, ಸಮಾಜದಲ್ಲಿ ಧನಾತ್ಮಕ ಬದಲಾವಣೆಗೆ ದಾರಿ ತೋರಿದ ಬೆಳ್ಳಾರೆಯ ಇತಿಹಾಸದ ನೆನಪಿನ ಘಟನೆಯಾಗಿ ಉಳಿಯಿತು.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

crime

ಕುಕ್ಕೆ ಸುಬ್ರಹ್ಮಣ್ಯ: ನದಿಗೆ ಹಾರಿದ ಮಹಿಳೆಗೆ ಮೊಸಳೆ ಕಚ್ಚಿದ್ದೇ ಜೀವದಾನ!

Published

on

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಮೊಸಳೆ ದಾಳಿಯಿಂದ ಭಯಗೊಂಡು ಚೀರಾಟ – ಸ್ಥಳೀಯರ ಸಮಯಪ್ರಜ್ಞೆಯಿಂದ ಸುರಕ್ಷಿತ ರಕ್ಷಣೆ

ಮಂಗಳೂರು: ಕೌಟುಂಬಿಕ ಮನಸ್ತಾಪದಿಂದ ಬೇಸತ್ತು ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರು ಮೊಸಳೆಯ ದಾಳಿಯಿಂದಾಗಿ ಜೀವ ಉಳಿಸಿಕೊಂಡಿರುವ ಅಚ್ಚರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸೇತುವೆ ಬಳಿ ನವೆಂಬರ್ 4ರ ತಡರಾತ್ರಿ ನಡೆದಿದೆ.

ಉಡುಪಿ ಮೂಲದ ಮಹಿಳೆಯೊಬ್ಬರು ಕೌಟುಂಬಿಕ ವಿಚಾರಗಳಿಂದ ಮನನೊಂದು ನವೆಂಬರ್ 4ರ ತಡರಾತ್ರಿ ಕುಮಾರಧಾರ ಸೇತುವೆಯ ಮೇಲಿನಿಂದ ನದಿಗೆ ಹಾರಿದ್ದಾರೆ. ಆದರೆ, ನೀರಿಗೆ ಧುಮುಕಿದ ತಕ್ಷಣವೇ ನದಿಯಲ್ಲಿದ್ದ ಮೊಸಳೆಯೊಂದು ಮಹಿಳೆಗೆ ಕಚ್ಚಿದೆ ಎನ್ನಲಾಗಿದೆ. ಮೊಸಳೆಯ ದಾಳಿಯಿಂದ ತೀವ್ರ ಭಯ ಹಾಗೂ ನೋವಿನಿಂದ ಕಂಗಾಲಾದ ಮಹಿಳೆ ನದಿಯ ಮಧ್ಯದಲ್ಲೇ ಜೋರಾಗಿ ಚೀರಾಡಲು ಆರಂಭಿಸಿದ್ದಾರೆ.

ಮಹಿಳೆಯ ಕಿರುಚಾಟ ಕೇಳಿದ ಸೇತುವೆ ಸಮೀಪದ ವಸತಿಗೃಹದ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣ ಟಾರ್ಚ್‌ ಹಿಡಿದು ನದಿಯ ದಂಡೆಯತ್ತ ಧಾವಿಸಿದ್ದಾರೆ. ಮಹಿಳೆಯ ನಿರಂತರ ಚೀರಾಟ ಹಾಗೂ ಜನರ ಆಗಮನದಿಂದ ಗಾಬರಿಗೊಂಡ ಮೊಸಳೆ ಆಕೆಯನ್ನು ಬಿಟ್ಟು ನೀರಿನಲ್ಲಿ ಮರೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಮಹಿಳೆಯನ್ನು ಸುರಕ್ಷಿತವಾಗಿ ನೀರಿನಿಂದ ಹೊರತೆಗೆದು ದಂಡೆಗೆ ಕರೆತಂದಿದ್ದಾರೆ.

ವಿಶೇಷವೆಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ನದಿಗೆ ಹಾರಿದ್ದ ಮಹಿಳೆ ಮೊಸಳೆಯ ದಾಳಿಯಿಂದ ಭಯಭೀತರಾಗಿ ಚೀರಾಡಿದ್ದೇ ಸ್ಥಳೀಯರ ಗಮನ ಸೆಳೆಯಲು ಕಾರಣವಾಗಿದೆ. ಹೀಗಾಗಿ ಮೊಸಳೆಯ ದಾಳಿಯೇ ಆಕೆಯ ಜೀವ ಉಳಿಸಲು ಪರೋಕ್ಷವಾಗಿ ಕಾರಣವಾಯಿತು ಎಂಬ ಅಚ್ಚರಿ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

ಘಟನೆಯ ಮಾಹಿತಿ ಪಡೆದ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೌಟುಂಬಿಕ ಮನಸ್ತಾಪದಿಂದ ಬೇಸತ್ತು ಉಡುಪಿಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ನದಿಗೆ ಹಾರಿರುವುದಾಗಿ ಮಹಿಳೆ ತಿಳಿಸಿದ್ದಾರೆ.

ಬಳಿಕ ಪೊಲೀಸರು ಉಡುಪಿಯಲ್ಲಿದ್ದ ಮಹಿಳೆಯ ಕುಟುಂಬಸ್ಥರನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಮಹಿಳೆಗೆ ಸೂಕ್ತ ಸಮಾಲೋಚನೆ ಹಾಗೂ ಕೌನ್ಸೆಲಿಂಗ್ ವ್ಯವಸ್ಥೆ ಕಲ್ಪಿಸಿ, ಕುಟುಂಬಸ್ಥರೊಂದಿಗೆ ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ.

ಸಾವಿನ ದವಡೆಯಿಂದ ಪಾರಾದ ಮಹಿಳೆ! ಮೊಸಳೆಯ ದಾಳಿ, ಮಹಿಳೆಯ ಚೀರಾಟ, ಸ್ಥಳೀಯರ ಸಮಯಪ್ರಜ್ಞೆ ಹಾಗೂ ಪೊಲೀಸರ ಮಧ್ಯಸ್ಥಿಕೆಯಿಂದಾಗಿ ಕೊನೆಗೂ ಮಹಿಳೆಯ ಜೀವ ಉಳಿದಿದೆ.

Continue Reading

Bantawala

ವಿಟ್ಲದ ಖ್ಯಾತ ವೈದ್ಯ ಡಾ. ವಿ.ಕೆ. ಹೆಗ್ಡೆ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Published

on

ವಿಟ್ಲದ ಖ್ಯಾತ ವೈದ್ಯ, ಪುಷ್ಪಾಕ್ ಹೆಲ್ತ್ ಸೆಂಟರ್ ಸಂಸ್ಥಾಪಕ *ಡಾ. ವಿ.ಕೆ. ಹೆಗ್ಡೆ* ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.1987 ರಿಂದ ವಿಟ್ಲದಲ್ಲಿ ನಿರಂತರವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಾ ಬಂದಿರುವ ಡಾ. ವಿ.ಕೆ. ಹೆಗ್ಡೆ ಅವರ ವೃತ್ತಿಪರ ಪಯಣವು ಗ್ರಾಮೀಣ ಪ್ರದೇಶದಲ್ಲಿ ದೀರ್ಘಕಾಲದ ಪ್ರಾಥಮಿಕ ಆರೋಗ್ಯ ಸೇವೆಯ ನಿರಂತರ ಅಧ್ಯಾಯವಾಗಿದೆ.ವೈದ್ಯಕೀಯ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಪರಿಗಣಿಸದೆ, ಜನರ ಆರೋಗ್ಯದ ಅಗತ್ಯಗಳಿಗೆ ಸ್ಪಂದಿಸುವ ಮಾನವೀಯ ಸೇವೆಯಾಗಿ ಅವರು ಅಳವಡಿಸಿಕೊಂಡಿದ್ದಾರೆ. ಗ್ರಾಮೀಣ ಹಾಗೂ ಅರೆನಗರ ಪ್ರದೇಶದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ, ವೈಯಕ್ತಿಕ ವೈದ್ಯಕೀಯ ಕಾಳಜಿ ಮತ್ತು ಮಾನವೀಯ ಸ್ಪಂದನೆಯನ್ನು ನೀಡುತ್ತಾ ಬಂದಿದ್ದಾರೆ.ವೈದ್ಯಕೀಯ ವೃತ್ತಿಯ ಜೊತೆಗೆ ರೋಟರಿ ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿಯೂ ದೀರ್ಘಕಾಲದ ಕೊಡುಗೆ ನೀಡಿದ್ದಾರೆ.ವಿಶೇಷವಾಗಿ ಕೋವಿಡ್-19 ಮಹಾಮಾರಿಯ ಸಂಕಷ್ಟದ ಅವಧಿಯಲ್ಲಿ ವೈದ್ಯಕೀಯ ಸೇವೆಯ ನಿರಂತರತೆಯನ್ನು ಕಾಪಾಡಿ, ಅಗತ್ಯವಿರುವ ರೋಗಿಗಳಿಗೆ ಸಲಹೆ, ಚಿಕಿತ್ಸೆ, ಮಾರ್ಗದರ್ಶನ ಮತ್ತು ಸೂಕ್ತ ರೆಫರಲ್ ನೆರವು ನೀಡಿದ ಅವರ ಸೇವಾ ಬದ್ಧತೆಯು ಈ ನಾಮನಿರ್ದೇಶನದ ಪ್ರಮುಖ ಅಂಶವಾಗಿದೆ.

Continue Reading

Bantawala

ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ನಿಧನ: ಶಾಲೆಯಿಂದ ಸಂತಾಪ

Published

on

ವಿಟ್ಲ: ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ, ಒಕ್ಕೆತ್ತೂರು ಕೊಣಾಜೆ ನಿವಾಸಿ ಯುಮುನಾ (59) ಅವರು ಇಂದು ಮಧ್ಯಾಹ್ನ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ನಿಧನ: ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ಒಕ್ಕೆತ್ತೂರು ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ನಿಯುಕ್ತಿಗೊಂಡಿದ್ದ ಯಮುನಾ ಅವರು, ತದನಂತರ ಅನಾರೋಗ್ಯದಿಂದ ಬಳಲುತ್ತಿದ್ದರು. ಹಲವು ಸಮಯಗಳಿಂದ ಅನಾರೋಗ್ಯದ ನಿಮಿತ್ತ ಕರ್ತವ್ಯಕ್ಕೆ ಗೈರುಹಾಜರಾಗಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸೇವಾ ವಿವರ: ಉತ್ತಮ ಶಿಕ್ಷಕಿಯಾಗಿ ಹೆಸರಾಗಿದ್ದ ಇವರು ಈ ಹಿಂದೆ ಕಡಂಬು, ಅನಿಲಕಟ್ಟೆ ಸರಕಾರಿ ಶಾಲೆಗಳಲ್ಲಿ ಹಾಗೂ ವಿಟ್ಲದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿಂದ 2026ರ ಎಪ್ರಿಲ್ 19 ರಂದು ಒಕ್ಕೆತ್ತೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ವರ್ಗಾವಣೆಗೊಂಡು ಬಂದಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಅವರಿಗೆ ಪೂರ್ಣಾವಧಿಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿರಲಿಲ್ಲ.

ಪರಿವಾರ ಹಾಗೂ ಗಣ್ಯರ ಸಂತಾಪ: ಮೃತರು ಪತಿ, ನಿವೃತ್ತ ಶಿಕ್ಷಕರಾದ ದಾಮೋದರ ಮಾಸ್ಟ್ರು, ಇಬ್ಬರು ಪ್ರತಿಭಾನ್ವಿತ ಮಕ್ಕಳು ಮತ್ತು ಅಪಾರ ಬಂಧು-ಬಳಗ, ವಿದ್ಯಾರ್ಥಿವೃಂದ ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ. ಶಿಕ್ಷಕಿಯ ನಿಧನಕ್ಕೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ C. H. ಮಹಮ್ಮದ್‌ ಹಾರೀಸ್‌ ಮತ್ತು ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಶಾಲೆಗೆ ಮಧ್ಯಾಹ್ನದ ಬಳಿಕ ರಜೆ ಮತ್ತು ಅಂತಿಮ ಸಂಸ್ಕಾರ: ಶಿಕ್ಷಕಿಯ ಅಂತಿಮ ಕಾರ್ಯಕ್ರಮದ ನಿಮಿತ್ತ ಪ್ರಭಾರ ಮುಖ್ಯ ಶಿಕ್ಷಕರಾದ ಜಯಪ್ರಕಾಶ್‌ ಅವರು ಮಧ್ಯಾಹ್ನದ ನಂತರ ಶಾಲೆಗೆ ರಜೆ ಘೋಷಿಸಿದ್ದರು. ಮೃತರ ಅಂತಿಮ ಸಂಸ್ಕಾರವು ಅವರ ತಾಯಿ ಮನೆಯಾದ ಮೂಡಬಿದ್ರೆಯಲ್ಲಿ ನಡೆಯಲಿದ್ದು, ಪಾರ್ಥಿವ ಶರೀರವನ್ನು ಅಲ್ಲಿಗೆ ರವಾನಿಸಲಾಗಿದೆ. ಶಾಲಾ ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯವರು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ತೆರಳಿದ್ದಾರೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!