Belthangady
ಪೌರ ಕಾರ್ಮಿಕರ ತಮ್ಮ ಸಂವಿಧಾನಬದ್ಧ ಹಕ್ಕುಗಳಿಗೆ ಸಂಘಟಿತ ಹೋರಾಟದಅಗತ್ಯವಿದೆ – ಎಸ್.ಪಿ ಆನಂದ
ಬೆಳ್ತಂಗಡಿ : ನಗರ , ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಪೌರ ಕಾರ್ಮಿಕರು ತಮ್ಮ ಸಂವಿಧಾನಬದ್ಧ ಹಕ್ಕುಗಳಿಗೆ , ಪೌರ ಕಾರ್ಮಿಕರ ಮೇಲಿನ ದೌರ್ಜನ್ಯದ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದು ಪೌರ ಕಾರ್ಮಿಕರ ಸಂಘದ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ , ಹಿರಿಯ ದಲಿತ ಮುಖಂಡ ಎಸ್.ಪಿ ಆನಂದ ಹೇಳಿದರು.

ಅವರು ಬೆಳ್ತಂಗಡಿ ನಗರದ ಮಂಜುನಾಥ ಕಲಾ ಭವನದ ಪಿನಾಕಿ ಸಭಾಂಗಣದಲ್ಲಿ ಆದಿತ್ಯವಾರ ಪಟ್ಟಣ / ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಜಂಟಿ ಸಮಾವೇಶವನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಬೆಳ್ತಂಗಡಿಯಲ್ಲಿ ಪಟ್ಟಣ ಮತ್ತು ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಜಂಟಿ ಸಮಾವೇಶ ನಡೆದಿದೆ. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಾದ್ಯಂತ ಸಂಘಟನೆ ವಿಸ್ತರಿಸಲಾಗುವುದು ಎಂದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಪೌರ ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಲಾಗುತ್ತಿದೆ , ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿ ಕನಿಷ್ಠ ವೇತನ ನೀಡದೆ ದುಡಿಸುತ್ತಿರುವುದು ಅಪರಾಧವಾಗಿದೆ. ಪೌರ ಕಾರ್ಮಿಕರ ಶ್ರಮದ ಪ್ರತಿಫಲ ಸಂಜೀವಿನಿ ಒಕ್ಕೂಟ ಮತ್ತು ಅಧಿಕಾರಿಗಳ ಪಾಲಗುತ್ತಿರುವುದು ದುರಂತ. ಸ್ವಚ್ಚತಾ ಕಾರ್ಯಕ್ಕೆ ಸಂಬಂಧಿಸಿದ ಪ್ರಶಸ್ತಿಗಳು ಪೌರ ಕಾರ್ಮಿಕರಿಗೆ ಸಲ್ಲಬೇಕು ಎಂದರು. ಮಹಿಳೆ , ಪುರುಷರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದ ಅವರು ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರನ್ನು ತಕ್ಷಣ ಖಾಯಂಗೊಳಿಸಲು ಒತ್ತಾಯಿಸಿ ಸದ್ಯದಲ್ಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಹೋರಾಟ ನಡೆಸಲಾಗುತ್ತದೆ ಎಂದರು.

ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. ಸಂಜೀವಿನಿ ಒಕ್ಕೂಟ ಬೇಡ , ನೇರ ಪಾವತಿಯಾಗಬೇಕು. ಅಧಿಕಾರಿಗಳು , ಜನಪ್ರತಿನಿಧಿಗಳು ನಡೆಸುವ ದೌರ್ಜನ್ಯಗಳು , ಕಡಿಮೆ ವೇತನ , ವೇತನ ತಾರತಮ್ಯ , ವಾರದಲ್ಲಿ 2-3 ದಿನ ಕೆಲಸ , ಕಾನೂನುಬದ್ಧ ಸವಲತ್ತುಗಳ ನಿರಾಕರಣೆ ಮೊದಲಾದ ಸಮಸ್ಯೆಗಳ ಬಗ್ಗೆ ಮಾತನಾಡಿದರು .

ಸ್ವಚ್ಚತಾ ವಾಹನ ಚಾಲಕ ಸಂಘದ ದ.ಕ ಜಿಲ್ಲಾಧ್ಯಕ್ಷ ವರುಣ್ ಮಾತನಾಡಿ ತಮ್ಮ ಹಕ್ಕುಗಳ ರಕ್ಷಣೆಗಾಗಿ ಮತ್ತು ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳನ್ನು ಪಡೆಯಲು ಸಂಘಟಿತರಾಗಬೇಕು. ಈಗಾಗಲೇ ಜಿಲ್ಲೆಯಲ್ಲಿ 600 ಪೌರ ಕಾರ್ಮಿಕರನ್ನು ಖಾಯಂ ಮಾಡಲಾಗಿದೆ ಇದು ಸಂಘಟನೆಯ ಹೋರಾಟದ ಫಲವಾಗಿದೆ ಎಂದರು.

ವೇದಿಕೆಯಲ್ಲಿ ಪೌರ ಕಾರ್ಮಿಕ ಸಂಘದ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಚಂದ್ರ ಬೋವಿ , ಜತೆ ಕಾರ್ಯದರ್ಶಿ ಸುರೇಶ್ ಕೆ ಅರಳಿ , ಗ್ರಾಮ ಪಂಚಾಯತ್ ಸ್ವಚ್ಚತಾ ಕಾರ್ಮಿಕರ ಸಂಘದ ಅಧ್ಯಕ್ಷೆ ರೇಣುಕಾ ಕುಕ್ಕೇಡಿ , ಕಾರ್ಯದರ್ಶಿ ಸುಮತಿ ವೇಣೂರು ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಸುದೆಮುಗೇರು ಮಾತನಾಡಿ ನಮ್ಮೆಲ್ಲರ ನಡುವಿನ ಭೇದಭಾವಗಳನ್ನು ಮರೆತು ನಮ್ಮೆಲ್ಲರ ಹಕ್ಕುಗಳಿಗಾಗಿ , ನಮ್ಮ ಮೇಲೆ ನಡೆಯುವ ವಿವಿಧ ರೀತಿಯ ದಬ್ಬಾಳಿಕೆಯ ವಿರುದ್ಧ ಸಂಘಟಿತರಾಗಬೇಕಾದ ಅಗತ್ಯವಿದೆ ಎಂದರು.

ಮೊದಲಿಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸ್ವಚ್ಚತಾ ವಾಹನದ ಚಾಲಕ ಶಿವಕುಮಾರ್ ಸ್ವಾಗತಿಸಿ ಶೇಖರ್ ಲಾಯಿಲ ಕಾರ್ಯಕ್ರಮ ನಿರೂಪಿಸಿ , ಧನ್ಯವಾದವಿತ್ತರು.
arrest
ಮಂಗಳೂರು: MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ; 15.30 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ
ಮಂಗಳೂರು: ನಗರದಾದ್ಯಂತ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿತೆಯನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗುರಿಂಗಾನ ನಿವಾಸಿ, ಪ್ರಸ್ತುತ ಪಂಪ್‌ವೆಲ್ ಉಜ್ಜೋಡಿಯ ರಾಧಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ನಂಬರ್ 103ರಲ್ಲಿ ವಾಸ್ತವ್ಯವಿದ್ದ ನಸೀಮಾ @ ನಸೀಮ (42) ಬಂಧಿತ ಆರೋಪಿ.
ಘಟನೆಯ ವಿವರ: ದಿನಾಂಕ 01-11-2026ರಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಮಾದಕ ವಸ್ತು ಸೇವನೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ಪಂಪ್‌ವೆಲ್ ಉಜ್ಜೋಡಿ ಬಳಿಯ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು, ಆರೋಪಿತೆಯ ವಶದಲ್ಲಿದ್ದ ಸುಮಾರು 15,30,000 ರೂಪಾಯಿ ಮೌಲ್ಯದ 153 ಗ್ರಾಂ MDMA ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿತೆಯು ಮಂಗಳೂರು ನಗರದ ವಿವಿಧೆಡೆ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದುದು ವಿಚಾರಣೆ ವೇಳೆ ತಿಳಿದುಬಂದಿದೆ. ಪೊಲೀಸರು ಆರೋಪಿತೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಜಾಲದಲ್ಲಿ ಇನ್ನು ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
Belthangady
ಸೌಜನ್ಯ ಪ್ರಕರಣದ ತನಿಖಾ ಸಮಿತಿ ಪುನಾರಚನೆ: ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ಮುಖ್ಯಸ್ಥರಾಗಿ ನೇಮಕ
ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿ ತಿದ್ದುಪಡಿ ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆ (ಅಪರಾಧಗಳು) ದಿನಾಂಕ 30-10-2026 ರಂದು ಆದೇಶ ಸಂಖ್ಯೆ: ಹೆಚ್‌ಸಿಡಿ 228 ಸಿಒಡಿ 2026 ರಂತೆ ಈ ತಿದ್ದುಪಡಿ ಆದೇಶವನ್ನು ಪ್ರಕಟಿಸಿದೆ.
ಸೆಪ್ಟೆಂಬರ್ 24, 2026 ರಂದು ಹೊರಡಿಸಿದ್ದ ಮೂಲ ಆದೇಶದ ಕೋಷ್ಟಕದ ಕ್ರಮ ಸಂಖ್ಯೆ 01 ಮತ್ತು 05 ರಲ್ಲಿದ್ದ ಅಧಿಕಾರಿಗಳನ್ನು ಬದಲಾಯಿಸಲಾಗಿದೆ.
ತಿದ್ದುಪಡಿ ಆದೇಶದ ಪ್ರಕಾರ:
- ಶ್ರೀ ಚೇತನ್ ಸಿಂಗ್ ರಾಥೋಡ್, ಐಪಿಎಸ್, ಐಜಿಪಿ, ಸಿಐಡಿ, ಬೆಂಗಳೂರು – ಮುಖ್ಯಸ್ಥರಾಗಿ ನೇಮಕ
- ಶ್ರೀ ಶ್ರೀನಿಧಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ – ಸದಸ್ಯರಾಗಿ ನೇಮಕ
ಈ ಇಬ್ಬರು ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಅವರ ಸಹಿಯಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಆದೇಶದ ಪ್ರತಿಯನ್ನು ಡಿಜಿ & ಐಜಿಪಿ, ಸಿಐಡಿ ಮುಖ್ಯಸ್ಥರು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ರವಾನಿಸಲಾಗಿದೆ.
Belthangady
ಸೌಜನ್ಯ ಕೇಸ್ ಮರುತನಿಖೆಗೆ ಬಿಗ್ ಟ್ವಿಸ್ಟ್: ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಹಿಂದೆ ಸರಿದ ಐಜಿಪಿ ಶಶಿಕುಮಾರ್!
ಬೆಂಗಳೂರು: ಧರ್ಮಸ್ಥಳದ ಬಹುಚರ್ಚಿತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಶೇಷ ತನಿಖಾ ತಂಡದ (SIT) ಮರುತನಿಖೆ ಬಿರುಸಿನಿಂದ ಸಾಗುತ್ತಿರುವ ನಡುವೆಯೇ ಮಹತ್ವದ ಬೆಳವಣಿಗೆಯೊಂದು ಸಂಭವಿಸಿದೆ. ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಎನ್. ಶಶಿಕುಮಾರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DG-IGP) ಲಿಖಿತ ಮನವಿ ಸಲ್ಲಿಸಿದ್ದಾರೆ.
ಹೋರಾಟಗಾರರ ಅಪಸ್ವರ ಮತ್ತು ವಿರೋಧ: ಸೌಜನ್ಯ ಕುಟುಂಬಸ್ಥರು ಹಾಗೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಸಂಘಟನೆಗಳು ಐಜಿಪಿ ಶಶಿಕುಮಾರ್ ಅವರ ನೇಮಕಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಶಶಿಕುಮಾರ್ ಅವರು ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ವೇಳೆ ಸ್ಥಳೀಯ ಪ್ರಭಾವಿಗಳೊಂದಿಗೆ ಒಡನಾಟ ಹೊಂದಿದ್ದರು, ಹೀಗಾಗಿ ಅವರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದರು. ಇತ್ತೀಚೆಗೆ ಹೋರಾಟಗಾರರ ನಿಯೋಗವು ಗೃಹ ಸಚಿವರನ್ನು ಭೇಟಿಯಾಗಿ ಎಸ್‌ಐಟಿ ಮುಖ್ಯಸ್ಥರನ್ನು ಬದಲಾಯಿಸುವಂತೆ ಒತ್ತಾಯಿಸಿತ್ತಲ್ಲದೆ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿಯೂ ಎಚ್ಚರಿಸಿತ್ತು.
ತನಿಖೆಯ ಪಾರದರ್ಶಕತೆಗಾಗಿ ನಿರ್ಧಾರ: ಸಾರ್ವಜನಿಕ ವಲಯದಲ್ಲಿ ಎದ್ದಿರುವ ಅಪಸ್ವರಗಳು ಹಾಗೂ ತನಿಖೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಶಿಕುಮಾರ್ ಅವರು ಸ್ವತಃ ತಾವೇ ಈ ಜವಾಬ್ದಾರಿಯಿಂದ ಕೈಬಿಡುವಂತೆ ಡಿಜಿ-ಐಜಿಪಿ ಎಂ.ಎ. ಸಲೀಂ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ವಿಶೇಷವೆಂದರೆ, ಅಕ್ಟೋಬರ್ 28 ರಂದು ಶಶಿಕುಮಾರ್ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮರುತನಿಖೆಯ ಪ್ರಗತಿ ಕುರಿತು ಮಾಹಿತಿ ನೀಡಿದ್ದರು. ಅಲ್ಲದೆ, ಅಕ್ಟೋಬರ್ 30 ರಂದು ಆರಂಭಿಕ ತನಿಖಾಧಿಕಾರಿಗಳು ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರಿಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸಿತ್ತು. ಈ ಹಂತದಲ್ಲೇ ಮುಖ್ಯಸ್ಥರು ಹಿಂದೆ ಸರಿಯಲು ಮನವಿ ಮಾಡಿರುವುದು ಕುತೂಹಲ ಮೂಡಿಸಿದೆ.
ಈಗಾಗಲೇ ತಂಡದ ಮತ್ತೊಬ್ಬ ಪ್ರಮುಖ ಸದಸ್ಯರಾದ ಹೆಚ್ಚುವರಿ ಎಸ್ಪಿ ವೆಂಕಟೇಶ್ ಪ್ರಸನ್ನ ಅವರು ವೈಯಕ್ತಿಕ ಕಾರಣಗಳಿಂದ ಹೊರಬಂದಿದ್ದು, ಇದೀಗ ಮುಖ್ಯಸ್ಥರೂ ವಿನಾಯಿತಿ ಕೋರಿರುವುದರಿಂದ ರಾಜ್ಯ ಸರ್ಕಾರವು ಶೀಘ್ರದಲ್ಲೇ ಎಸ್‌ಐಟಿಗೆ ನೂತನ ದಕ್ಷ ಅಧಿಕಾರಿಯನ್ನು ನೇಮಕ ಮಾಡುವ ಸಾಧ್ಯತೆಯಿದೆ
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
