Connect with us

Bantawala

ಪೆರುವಾಯಿ ಸೊಸೈಟಿ ಆವರಣದಲ್ಲಿ ಮಲಗಿದ್ದ ನಾಲ್ಕು ಹಸುಗಳ ತಡರಾತ್ರಿ ಕದ್ದೊಯ್ದ ಪ್ರಕರಣ..ಐವತ್ತು ದಿನಗಳ ಬಳಿಕ ವಿಟ್ಲ ಪೊಲೀಸರ ಬಲೆಗೆ ಬಿದ್ದ ಖದೀಮ..

Published

on

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಸೊಸೈಟಿ ಆವರಣದಲ್ಲಿ ರಾತ್ರಿ ಹೊತ್ತು ಹಾಯಾಗಿ ನಿದ್ರಿಸಿದ್ದ ನಾಲ್ಕು ಗೋವುಗಳನ್ನು ಗೇಟ್ ಮುರಿದು18-11-2025 ರಂದು ಕಳ್ಳತನ ನಡೆಸಲಾಗಿತ್ತು.

ಹುಲ್ಲು ಮೇಯಲು ಹೋಗಿದ್ದ ಗಣೇಶ ರೈ ಹಾಗೂ ನಾರಾಯಣ ನಾಯ್ಕ ಎಂಬುವವರ ಒಟ್ಟು 04 ದನಗಳು ಕಳ್ಳತನವಾಗಿದ್ದರ ಬಗ್ಗೆ ಗಣೇಶ ರೈ ಎಂಬುವವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 169/2025 ರಂತೆ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ವಿಟ್ಲ ಪೊಲೀಸರು ದಿನಾಂಕ:08-01-2026 ರಂದು ಪ್ರಕರಣದ ಆರೋಪಿಯಾದ ಉಳ್ಳಾಲ ತಾಲೂಕು ಕೋಡಿ ನಿವಾಸಿ ಝುಲ್ಫಾನ್ ಮಾಲಿಕ್ ಉಳ್ಳಾಲ್(30) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟ್ ಡಿಗೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಎಸ್ಪಿಯವರು ಮಾಹಿತಿ ನೀಡಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಅಜ್ಜಿಯ ಮನೆಗೇ ಕನ್ನ ಹಾಕಿದ ಪುಳ್ಳಿ! ಗೆಳೆಯನೊಂದಿಗೆ ಸೇರಿ ಕಳವು ಮಾಡಿ ಸಿಕ್ಕಿಬಿದ್ದ ಆರೋಪಿಗಳ ಬಂಧನ!

Published

on

ಬಂಟ್ವಾಳ: ಮನೆಯೊಂದರಲ್ಲಿ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಅತ್ಯಂತ ಚುರುಕಾಗಿ ಬೇಧಿಸಿರುವ ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಬಂಟ್ವಾಳ ಬಾಳ್ತಿಲ ನಿವಾಸಿ ಕುಮಾರಿ ಪೃಥ್ವಿ (18) ಮತ್ತು ಮಂಗಳೂರು ಸುರತ್ಕಲ್‌ ನಿವಾಸಿ ಕಿಶಾನ್‌ (22) ಬಂಧಿತ ಆರೋಪಿಗಳು.

ಪ್ರಕರಣದ ಹಿನ್ನೆಲೆ:

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳ್ಪಾಡಿ ಎಂಬಲ್ಲಿನ ಮನೆಯೊಂದರಲ್ಲಿ ಇತ್ತೀಚೆಗೆ ಚಿನ್ನಾಭರಣ ಕಳ್ಳತನ ನಡೆದಿತ್ತು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 71/2026 ಕಲಂ: 303(2) ಬಿ ಎನ್‌ ಎಸ್‌ -2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, ಅವರಿಂದ ಒಟ್ಟು ರೂ. 2,50,000/- ಮೌಲ್ಯದ 21 ಗ್ರಾಂ ಚಿನ್ನಾಭರಣ ಹಾಗೂ ರೂ. 600/- ನಗದು ಹಣವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಅಜ್ಜಿಯ ಮನೆಗೇ ಕನ್ನ ಹಾಕಿದ ಮೊಮ್ಮಗಳು!

ಬಂಧಿತ ಆರೋಪಿ ಪೃಥ್ವಿ ಎಂಬಾಕೆಯ ವರ್ತನೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಕೆ ಬೋಳ್ಪಾಡಿಯ ನಿವಾಸಿ ರೋಹಿಣಿ ಶೆಟ್ಟಿ ಎಂಬವರ ಮೃತ ಪುತ್ರ ಸುರೇಶ್ ಅವರ ಮಗಳಾಗಿದ್ದಾಳೆ. ಅಂದರೆ, ಕಳ್ಳತನ ನಡೆದ ರೋಹಿಣಿ ಶೆಟ್ಟಿ ಅವರ ಮನೆ ಪೃಥ್ವಿಯ ಸ್ವಂತ ಅಜ್ಜಿಯ ಮನೆಯಾಗಿದೆ. ಪೃಥ್ವಿ ತನ್ನ ಗೆಳೆಯ, ಸುರತ್ಕಲ್ ಮೂಲದ ಕಿಶಾನ್ ಎಂಬಾತನ ಜೊತೆ ಸೇರಿಕೊಂಡು ಸ್ವಂತ ಅಜ್ಜಿಯ ಮನೆಯಲ್ಲೇ ನಗ-

ನಗದು ಕಳವು ಮಾಡಿ, ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಳೇ ಚಾಳಿ ಮುಂದುವರಿಸಿದ್ದ ಕಿಲಾಡಿ ಯುವತಿ:

ಆರೋಪಿ ಪೃಥ್ವಿ ಈ ಹಿಂದೆಯೂ ಇಂತಹದ್ದೇ ಕೃತ್ಯ ಎಸಗಿದ್ದಳು ಎನ್ನುವ ಆಘಾತಕಾರಿ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ. ಸುಮಾರು 4 ತಿಂಗಳುಗಳ ಹಿಂದೆಯೂ ಬಂಟ್ವಾಳ ತಾಲೂಕಿನ ಕೊಳಕೀರು ಎಂಬಲ್ಲಿ ತನ್ನ ಆತ್ಮೀಯರ ಮನೆಯೊಂದರಲ್ಲಿ ಬಂಗಾರದ ಬಳೆಯನ್ನು ಕದ್ದು ಸಿಕ್ಕಿಬಿದ್ದಿದ್ದಳು. ಕದ್ದ ಬಳೆಯನ್ನು ಅಕ್ಕಸಾಲಿಗನಿಗೆ ಮಾರಾಟ ಮಾಡಿದ್ದ ಆಕೆ, ಬಳಿಕ ಸಿಕ್ಕಿಬಿದ್ದಾಗ ವಾರೀಸುದಾರರು ಅದನ್ನು ವಾಪಸ್ ಪಡೆದುಕೊಂಡಿದ್ದರು ಎನ್ನಲಾಗಿದೆ. ಹಳೇ ಚಾಳಿ ಬಿಡದ ಈಕೆ ಈಗ ಮತ್ತೆ ಗೆಳೆಯನೊಂದಿಗೆ ಸೇರಿ ಅಜ್ಜಿಯ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದಿದ್ದಾಳೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ತಂಡ:

ಈ ಕಳ್ಳತನ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಬಂಟ್ವಾಳ ನಗರ ಠಾಣೆಯ ತನಿಖಾಧಿಕಾರಿ ಎ.ಎಸ್.ಐ ನವೀನ್, ಹೆಡ್ ಕಾನ್‌ಸ್ಟೇಬಲ್‌ಗಳಾದ ಸುರೇಶ್ ಕುಮಾರ್‌, ರಾಜೇಶ್, ರಕ್ಷೀತ್, ಕಾನ್‌ಸ್ಟೇಬಲ್‌ಗಳಾದ ಬಸವರಾಜ ಕುಡಗುಂಟಿ, ನಾಗನಾಥ, ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಗಳಾದ ರೇವತಿ, ಭಾಗ್ಯಮ್ಮ ಮತ್ತು ಮಾಲಾಶ್ರೀ ರವರುಗಳು ಶ್ಲಾಘನೀಯ ಪಾತ್ರ ವಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಬೆರಳಚ್ಚು ಘಟಕದ ಸಚಿನ್ ಮತ್ತು ಉದಯ್ ಹಾಗೂ ಜಿಲ್ಲಾ ಗಣಕಯಂತ್ರ ವಿಭಾಗದ ದಿವಾಕರ ಮತ್ತು ಸಂಪತ್‌ರವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ತಾಂತ್ರಿಕ ಸಹಕಾರ ನೀಡಿರುತ್ತಾರೆ




Continue Reading

Bantawala

ಪಣೋಳಿಬೈಲು ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದ ಅಗೇಲು ಸೇವೆ ಸಮರ್ಪಣೆ!

Published

on

ಬಂಟ್ವಾಳ: ತುಳುನಾಡಿನ ಇತಿಹಾಸ ಪ್ರಸಿದ್ಧ, ಪರಮ ಕಾರಣೀಕ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಪಣೋಳಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಭಾನುವಾರ ಗರಿಷ್ಠ ಪ್ರಮಾಣದ ಅಗೇಲು ಸೇವೆ ನಡೆದಿದೆ. ಅಂದು ಒಂದೇ ದಿನ ಭಕ್ತರಿಂದ ಬರೋಬ್ಬರಿ 4,180 ಅಗೇಲು ಸೇವೆಗಳು ಸಂದಾಯವಾಗುವ ಮೂಲಕ ಕ್ಷೇತ್ರದ ಕಾರಣೀಕ ಶಕ್ತಿಗೆ ಸಾಕ್ಷಿಯಾಯಿತು .

ಇಷ್ಟೊಂದು ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಏಕದಿನದಲ್ಲಿ ಅಗೇಲು ಸೇವೆ ಸಲ್ಲಿಸುತ್ತಿರುವುದು ಕಲ್ಲುರ್ಟಿ ದೈವದ ಮೇಲಿನ ಅವರ ಅಚಲ ಭಕ್ತಿ ಮತ್ತು ನಂಬಿಕೆಯ ಸಂಕೇತವಾಗಿದೆ. ಇದು ಈ ವರ್ಷದಲ್ಲಿ ಸಂದಾಯವಾದ ಅತ್ಯಂತ ಗರಿಷ್ಠ ಸಂಖ್ಯೆಯ ಅಗೇಲು ಸೇವೆಯಾಗಿದೆ.

ಶೈಕ್ಷಣಿಕ ವರ್ಷದ ಆರಂಭ: ಪ್ರಾರ್ಥನೆ ಸಲ್ಲಿಸಿದ ಭಕ್ತರ ದಂಡು

ಪ್ರಸ್ತುತ ಶಾಲಾ-ಕಾಲೇಜುಗಳ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಲ್ಲುರ್ಟಿ ದೈವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಲು ಭಕ್ತರು ಮುಗಿಬಿದ್ದಿದ್ದರು. ಮಕ್ಕಳ ಉತ್ತಮ ವಿದ್ಯಾಭ್ಯಾಸ, ಉನ್ನತ ಶಿಕ್ಷಣ ಸಂಸ್ಥೆಗಳ ಆಯ್ಕೆ, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಹರಕೆ ತೀರಿಸಲು ಹಾಗೂ ವಿದೇಶಕ್ಕೆ ತೆರಳುವ ಭಕ್ತರ ಕನಸು ಸಾಕಾರಗೊಂಡ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಲು ಕರಾವಳಿ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಸನ್ನಿಧಿಗೆ ಭೇಟಿ ನೀಡಿ ಅಗೇಲು ಸೇವೆ ಸಲ್ಲಿಸಿದರು. ಸಾಮಾನ್ಯವಾಗಿ ಶಾಲಾ-ಕಾಲೇಜು ರಜೆ ಅಥವಾ ವಿಶೇಷ ಹಬ್ಬಗಳ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ಹರಕೆ ತೀರಿಸುವುದು ಕ್ಷೇತ್ರದ ವಿಶೇಷತೆಯಾಗಿದೆ.

ನಿರಂತರವಾಗಿ ಸಾಗಿದ ಪ್ರಸಾದ ವಿತರಣೆ

ಸಾಮಾನ್ಯ ದಿನಗಳಲ್ಲಿ ಮಧ್ಯಾಹ್ನ 1:30ರ ಬಳಿಕ ಅಗೇಲು ಸೇವೆಯ ಪ್ರಸಾದ ವಿತರಣೆ ಆರಂಭಗೊಳ್ಳುತ್ತದೆ. ಆದರೆ ಭಾನುವಾರ ಇತಿಹಾಸದಲ್ಲೇ ಗರಿಷ್ಠ ಸಂಖ್ಯೆಯ ಸೇವೆಗಳು ಇದ್ದ ಕಾರಣ ಪ್ರಕ್ರಿಯೆ ಸ್ವಲ್ಪ ತಡವಾಗಿ ಆರಂಭಗೊಂಡು, ಸಂಜೆಯ ನಂತರವೂ ನಿರಂತರವಾಗಿ ಸಾಗಿತು. ಕ್ಷೇತ್ರಕ್ಕೆ ಹರಿದುಬಂದಿದ್ದ ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ದೈವದ ಪ್ರಸಾದ ಸ್ವೀಕರಿಸಿದರು.

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹಾಗೂ ಸೇವೆಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.

ಕಳೆದ ವರ್ಷ ಜೂನ್ 22ರಂದು ಆ ವರ್ಷದ ಗರಿಷ್ಠ ಅಂದರೆ 3,871 ಅಗೇಲು ಸೇವೆಗಳು ಸಂದಾಯವಾಗಿದ್ದವು.

ಅದಕ್ಕೂ ಮುನ್ನ, 2024ರ ಜೂನ್ 2ರಂದು 3,908 ಅಗೇಲು ಸೇವೆಗಳು ಸಲ್ಲಿಕೆಯಾಗಿದ್ದವು. ಆದರೆ ಈ ಬಾರಿ ಭಾನುವಾರ 4,180 ಸೇವೆಗಳು ಸಲ್ಲಿಕೆಯಾಗಿದೆ.

ಪಣೋಳಿಬೈಲು ಕ್ಷೇತ್ರದ ಪ್ರಮುಖ ವಿಶೇಷತೆಗಳು:

  • ಸಜೀಪ ಮೂಡದ ಪುಣ್ಯಕ್ಷೇತ್ರ: ಈ ಪ್ರಸಿದ್ಧ ಕಾರಣೀಕ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಸುಂದರ ಪರಿಸರದಲ್ಲಿದೆ.
  • ವಿಶೇಷ ಸೇವೆಗಳ ದಿನ: ಈ ದೈವಸ್ಥಾನದಲ್ಲಿ ವಾರದ ಮೂರು ದಿನಗಳು ಅಂದರೆ ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳಂದು ಮಾತ್ರ ವಿಶೇಷ ಅಗೇಲು ಸೇವೆ ನಡೆಯುತ್ತದೆ. ಉಳಿದ ದಿನಗಳಲ್ಲಿ ಕ್ಷೇತ್ರದಲ್ಲಿ ಕೋಲ ಸೇವೆ ಜರುಗುತ್ತದೆ.
  • ಭಾವೈಕ್ಯತೆಯ ಸನ್ನಿಧಿ: ಪಣೋಳಿಬೈಲು ಕ್ಷೇತ್ರವು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಇಲ್ಲಿ ಜಾತಿ, ಮತ, ಭೇದವಿಲ್ಲದೆ ಎಲ್ಲಾ ಧರ್ಮದವರೂ ಮುಕ್ತವಾಗಿ ಬಂದು ದೈವಕ್ಕೆ ಹರಕೆ ಸಲ್ಲಿಸಿ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿಕೊಳ್ಳುವ ಅಪೂರ್ವ ಭಾವೈಕ್ಯತೆಯ ಕೇಂದ್ರವಾಗಿದೆ.
Continue Reading

accident

ಪೆರುವಾಯಿ: ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದ ಕೋಳಿ ಸಾಗಾಟದ ಪಿಕಪ್; ಚಾಲಕ ಅದೃಷ್ಟವಶಾತ್ ಪಾರು!

Published

on

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿ ವ್ಯಾಪ್ತಿಯ ಪೆರುವಾಯಿ ಗ್ರಾಮದ ಮುಖ್ಯ ಸೇತುವೆ ಬಳಿ ಶುಕ್ರವಾರ ಮುಂಜಾನೆ ಭೀಕರ ಅಪಘಾತವೊಂದು ಸಂಭವಿಸಿದೆ. ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಪಲ್ಟಿ ಹೊಡೆದಿದ್ದು, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮುಂಜಾನೆ ಸಂಭವಿಸಿದ ಅವಘಡ:

ಶುಕ್ರವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಕೋಳಿಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವು ಪೆರುವಾಯಿ ಸೇತುವೆ ತಲುಪುತ್ತಿದ್ದಂತೆ, ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನವು ನಿಯಂತ್ರಣ ಕಳೆದುಕೊಂಡು ನೇರವಾಗಿ ಸೇತುವೆಯಿಂದ ಕೆಳಕ್ಕೆ ಬಿದ್ದಿದೆ. ಅಪಘಾತದ ತೀವ್ರತೆಗೆ ವಾಹನವು ಸಂಪೂರ್ಣವಾಗಿ ಪಲ್ಟಿಯಾಗಿದ್ದು, ಸ್ಥಳೀಯರು ತಕ್ಷಣ ಧಾವಿಸಿ ಚಾಲಕನನ್ನು ರಕ್ಷಿಸಿದ್ದಾರೆ.

ಕಿರಿದಾದ ಸೇತುವೆ, ಪಕ್ಕದಲ್ಲೇ ಟ್ರಾನ್ಸ್‌ಫಾರ್ಮರ್: ಹೆಚ್ಚಿದ ಅಪಘಾತಗಳ ಭೀತಿ

ಪೆರುವಾಯಿ ಸೇತುವೆಯು ಕರ್ನಾಟಕ ಹಾಗೂ ಕೇರಳ ರಾಜ್ಯಗಳನ್ನು ಜೋಡಿಸುವ ಅಂತರರಾಜ್ಯ ಗಡಿಭಾಗದ ಅತ್ಯಂತ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಈ ರಸ್ತೆಯ ಮೂಲಕ ಪ್ರತಿನಿತ್ಯ ಕೇರಳದ ಬೆರಿಪದವು, ಉಪ್ಪಳ ಮುಂತಾದ ಭಾಗಗಳಿಗೆ ನೂರಾರು ವಾಹನಗಳು ಸಂಚರಿಸುತ್ತವೆ.

ಆದರೆ, ಈ ಸೇತುವೆ ಅತ್ಯಂತ ಕಿರಿದಾಗಿದ್ದು, ವಾಹನ ಸವಾರರಿಗೆ ತೀವ್ರ ಮುಜುಗರ ಉಂಟುಮಾಡುತ್ತಿದೆ. ಇದರ ಜೊತೆಗೆ ಸೇತುವೆಯ ತೀರಾ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದ್ದು, ಇದು ಅಪಘಾತಗಳಿಗೆ ನೇರ ಆಹ್ವಾನ ನೀಡುವಂತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇದೇ ತಿರುವಿನಲ್ಲಿ ಹತ್ತಕ್ಕೂ ಹೆಚ್ಚು ವಾಹನಗಳು ಅಪಘಾತಕ್ಕೀಡಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅಕ್ರಮ ಕೆಂಪುಕಲ್ಲು ಸಾಗಾಟದ ಹಾವಳಿ:

ಕೇರಳ ಕಡೆಯಿಂದ ಪ್ರತಿನಿತ್ಯ ಈ ಮಾರ್ಗವಾಗಿ ಕೆಂಪುಕಲ್ಲಿನ ಅಕ್ರಮ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಇದರಿಂದಾಗಿ ಈ ಕಿರಿದಾದ ರಸ್ತೆಯಲ್ಲಿ ವಾಹನಗಳ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಇದು ಕೂಡ ಇಲ್ಲಿನ ಸರಣಿ ಅಪಘಾತಗಳಿಗೆ ಪ್ರಮುಖ ಕಾರಣಗಳಲ್ಲೊಂದು ಎಂದು ಸ್ಥಳೀಯರು ದೂರಿದ್ದಾರೆ.

ಗ್ರಾಮಸ್ಥರ ಆಕ್ರೋಶ – ಅಭಿವೃದ್ಧಿಗೆ ಬಿಗಿ ಪಟ್ಟು:

“ಇದು ಅಂತರರಾಜ್ಯ ಸಂಪರ್ಕದ ಪ್ರಮುಖ ರಸ್ತೆಯಾಗಿದ್ದರೂ, ಯಾವುದೇ ಸರ್ಕಾರಗಳು ಈ ಸೇತುವೆಯ ಅಭಿವೃದ್ಧಿಗೆ ಮುತುವರ್ಜಿ ವಹಿಸಿಲ್ಲ. ಸೇತುವೆಯನ್ನು ಅಗಲಗೊಳಿಸದೆ, ಅಪಾಯಕಾರಿ ತಿರುವನ್ನು ಸರಿಪಡಿಸದೆ ಮತ್ತು ಇಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅನ್ನು ಬೇರೆಡೆಗೆ ಸ್ಥಳಾಂತರಿಸದ ಹೊರತು ಈ ಭಾಗದಲ್ಲಿ ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲ” ಎಂದು ಪೆರುವಾಯಿ ಗ್ರಾಮಸ್ಥರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಇನ್ನಾದರೂ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ (PWD) ಎಚ್ಚೆತ್ತುಕೊಂಡು, ತಕ್ಷಣವೇ ಮಧ್ಯಪ್ರವೇಶಿಸಿ ಸೇತುವೆಯನ್ನು ವಿಸ್ತರಿಸಬೇಕು ಹಾಗೂ ಅಗತ್ಯವಿರುವ ಕಡೆಗಳಲ್ಲಿ ಸುರಕ್ಷತಾ ತಡೆಗೋಡೆಗಳನ್ನು (Crash Barriers) ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೆ ನಿಖರವಾದ ಕಾರಣ ಏನೆಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.




Continue Reading

Trending

Copyright © 2025 Deevatige

error: Content is protected !!