Connect with us

Belthangady

ಮನೆಗಳಲ್ಲಿ ಅನಧಿಕೃತವಾಗಿ ವಸತಿ ನಿಲಯ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ -ಡಿವೈಎಸ್ಪಿ ರೋಹಿಣಿ ಕೆ.ಸಿ.

Published

on

ಬೆಳ್ತಂಗಡಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ಕೆ.ಸಿ ರವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಕುಂದುಕೊರತೆಗಳ ಸಭೆ ನಡೆಯಿತು

ಬೆಳ್ತಂಗಡಿ ತಾಲೂಕಿನಲ್ಲಿ ಕಾನೂನು ಬಾಹಿರವಾಗಿ ಮತ್ತು ಅನಧಿಕೃತವಾಗಿ ಕೆಲವೊಂದು ಮನೆಗಳಲ್ಲಿ ವಸತಿ ನಿಲಯಗಳನ್ನು ನಡೆಸುತ್ತಿದ್ದಾರೆ. ಇಲ್ಲಿ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಲಾಗುತ್ತಿದೆಯೇ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮುಖಂಡ ಬಿ.ಕೆ ವಸಂತ ಪ್ರಶ್ನಿಸಿದರು.

ಅನಧಿಕೃತ ವಸತಿ ನಿಲಯಗಳ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ಮಾಹಿತಿ ಸಂಗ್ರಹಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ತಿಳಿಸಿದರು. ತಾಲೂಕಿನ ಅಲ್ಲಲ್ಲಿ ವಲಸೆ ಕಾರ್ಮಿಕರಿದ್ದು , ಅವರ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಹಿಂದಿನ ಸಭೆಯಲ್ಲಿ ಹೇಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಬಿ.ಕೆ ವಸಂತ್, ವಲಸೆ ಕಾರ್ಮಿಕರು ಯಾವ ರಾಜ್ಯ, ದೇಶದವರು ಎಂದು ತಿಳಿಯಲು ಅವರ ಅಧಿಕೃತ ದಾಖಲೆಗಳನ್ನು ಸಂಗ್ರಹಿಸುವುದು ಅಗತ್ಯವಿದೆ ಎಂದು ಸಲಹೆ ನೀಡಿದರು.

ಈಗಾಗಲೇ ರಾಜ್ಯದಲ್ಲಿ ವಿದೇಶಿಗರು ಅನಧಿಕೃತವಾಗಿ ವಾಸಿಸುವ ಬಗ್ಗೆ ಮಾಹಿತಿ ಬರುತ್ತಿದ್ದು , ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ ಮಾತನಾಡುತ್ತಾ, ಪರಿಶಿಷ್ಟ ಜಾತಿ /ಪಂಗಡಗಳ ಅನುದಾನ ಉಪಯೋಗಿಸುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಸಭೆಯಲ್ಲಿ ಹಾಜರಾಗಬೇಕು. ದಲಿತರ ಕುಂದುಕೊರತೆಗಳ ಸಭೆಗೆ ಅಧಿಕಾರಿಗಳು ಗೈರು ಹಾಜರಾಗಿ , ಸಿಬ್ಬಂದಿಗಳನ್ನು ಕಳುಹಿಸುತ್ತಿರುವುದು ಸರಿಯಲ್ಲ , ಇದು ಕೂಡ ದಲಿತ ದೌರ್ಜನ್ಯಕ್ಕೆ ಸಮ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಹಿರಿಯ ದಲಿತ ನಾಯಕ ಸಂಜೀವ ಆರ್. ಪರಿಶಿಷ್ಟ ಜಾತಿ/ಪಂಗಡಗಳ ಅನುದಾನ ವಿನಿಯೋಗ ಮಾಡದಿರುವುದು ಕೂಡ ದೌರ್ಜನ್ಯಕ್ಕೆ ಸಮವಾಗಿದೆ. ಅಂತಹ ಅಧಿಕಾರಿಗಳ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಶಿರ್ಲಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಎಂ.ಕೆ. ಮಾತನಾಡುತ್ತಾ ರಸ್ತೆಯ ಇಕ್ಕೆಲಗಳಲ್ಲಿ ಅಧಿಕೃತ ಮತ್ತು ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಹಲವು ಕಡೆಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯತುಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿದರು.

ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಗೋಡು ಮಾತನಾಡುತ್ತಾ ಶಿರ್ಲಾಲು ಗ್ರಾಮದ ಬಾಬು ನಲ್ಕೆ ಎಂಬವರ ಪಟ್ಟಾ ಜಮೀನನ್ನು ಸ್ಥಳೀಯ ಮೇಲ್ಜಾತಿಯ ವ್ಯಕ್ತಿಯೊಬ್ಬ ಅತಿಕ್ರಮಿಸಿ , ಜಮೀನಿನ ಕೃಷಿ ನಾಶ ಮಾಡಿರುವ ಬಗ್ಗೆ ದೂರು ನೀಡಿದ್ದರೂ ವೇಣೂರು ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ.

ಜಿಲ್ಲಾಧಿಕಾರಿಯವರು ಜಿಲ್ಲಾ ಎಸ್ಪಿರವರಿಗೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದ್ದರೂ ವೇಣೂರು ಪೊಲೀಸರು ಅದ್ಯಾಕೋ ಸಿವಿಲ್ ಸ್ವರೂಪದ ಪ್ರಕರಣ ಎಂದು ಹಿಂಬರಹ ನೀಡಿರುವುದು ಸರಿಯಲ್ಲ. ಅಧಿಕೃತ ದಾಖಲೆಗಳನ್ನು ಹೊಂದಿರುವ ಜಮೀನಿನಲ್ಲಿದ್ದ ಕೃಷಿ ನಾಶ ಮಾಡಿರುವುದು ದಲಿತ ದೌರ್ಜನ್ಯವಾಗಿದೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿದರು.

ಈ ಬಗ್ಗೆ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಡಿವೈಎಸ್ಪಿಯವರು ವೇಣೂರು ಪಿಎಸ್ಐ ಗೆ ಸೂಚಿಸಿದರು. ದಸಂಸ(ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ರಮೇಶ್ ಆರ್. ಮಾತನಾಡುತ್ತಾ ಈ ಹಿಂದೆ ಪ್ರಸನ್ನ ಕಾಲೇಜಿನಲ್ಲಿದ್ದ ದೈಹಿಕ ಶಿಕ್ಷಣ ಶಿಕ್ಷಕನೋರ್ವ ರಾಜ್ಯ , ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಸ್ಥಾನ ದೊರಕಿಸಿ ಕೊಡುತ್ತೇನೆಂದು ಆಮಿಷವೊಡ್ಡಿ ನಗರದ ಕೆಲ್ಲಗುತ್ತು , ರೆಂಕೆದಗುತ್ತು ಪರಿಸರದ ಹಲವು ದಲಿತ ಯುವಕರಿಂದ ತಲಾ 8,000 ರೂಪಾಯಿಗಳನ್ನು ಪಡೆದು ಮೋಸ ಮಾಡಿದ್ದಾರೆ, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿ ಎರಡು ತಿಂಗಳಾದರೂ ಆರೋಪಿ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಲಿಕೆ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಸೇಸಪ್ಪ ಅಳದಂಗಡಿ ಮಾತನಾಡುತ್ತಾ ಅಳದಂಗಡಿಯಲ್ಲಿ ಪೊಲೀಸ್ ಹೊರ ಠಾಣೆ ತೆರೆಯಬೇಕು‌. ಅಳದಂಗಡಿ, ನಾರಾವಿ ಭಾಗದಲ್ಲಿ ಯಾವುದೇ ಘಟನೆ ನಡೆದರೂ 15-20 ಕಿ.ಮೀ ದೂರದಲ್ಲಿರುವ ವೇಣೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕಾಗಿದೆ ಎಂದರು.

ಕೃಷ್ಣಪ್ಪ ನಾರಾವಿ ಮಾತನಾಡುತ್ತಾ ಪೊಲೀಸ್ ಠಾಣೆ ಸೇರಿದಂತೆ ಸರ್ಕಾರಿ ಇಲಾಖೆಗಳಲ್ಲಿ ದಲಿತರ ಕೆಲಸಗಳನ್ನು ತಡವಾಗಿ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಉಪ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರ ಎಲ್ಲಾ ಕೆಲಸಗಳನ್ನು ತ್ವರಿತವಾಗಿ ನಡೆಸುವುದಲ್ಲದೇ, ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ನಡೆದುಕೊಳ್ಳಲು ಸೂಚಿಸಿದರು.



ನಾಗರಿಕ ಸೇವಾ ಟ್ರಸ್ಟ್ ನ ಟ್ರಸ್ಟಿ ಬಾಬು ಎ.ಮಾತನಾಡುತ್ತಾ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸರ್ಕಾರದ ನಿಯಮಾವಳಿಗಳಂತೆ ಶಿಕ್ಷಣ ಸಂಸ್ಥೆಗಳಲ್ಲಿ ಒಬ್ಬನೇ ಒಬ್ಬ ದಲಿತ ಶಿಕ್ಷಕ/ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳದಿರುವುದು ದಲಿತ ದೌರ್ಜನ್ಯವಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಶೇಖರ್ ಲಾಯಿಲ ಮಾತನಾಡುತ್ತಾ ಜಿಲ್ಲೆಯಲ್ಲಿ ನಕಲಿ ದಾಖಲೆಗಳ ಮೂಲಕ ನಕಲಿ ಜಾತಿ ಪ್ರಮಾಣಪತ್ರಗಳನ್ನು ಪಡೆದು ಚುನಾವಣಾ ಸ್ಪರ್ಧೆ, ಉದ್ಯೋಗ ಪಡೆಯಲಾಗುತ್ತದೆ. ಈ ಬಗ್ಗೆ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸಿಬ್ಬಂದಿಯನ್ನು ಪ್ರಶ್ನಿಸಿದರು. ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯನೋರ್ವ ನಕಲಿ ದಾಖಲೆಗಳನ್ನು ನೀಡಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದುಕೊಂಡ ಬಗ್ಗೆ 2000ನೇ ಇಸವಿಯಲ್ಲಿ ದೂರು ನೀಡಿದ್ದರೂ ಇಂದಿನ ತನಕವೂ ತನಿಖೆ ನಡೆಸದ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದರು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಪಿಎಸ್ಐ , ಇನ್ಸ್‌ಪೆಕ್ಟರ್ , ಡಿವೈಎಸ್ಪಿ ಹುದ್ದೆಗಳು ಸೇರಿದಂತೆ ಬಹುತೇಕ ಹುದ್ದೆಗಳು ಖಾಲಿಯಿದೆ. ಎಸ್ಪಿಯವರು ಎಸ್ಐಟಿಗೆ ನೇಮಕಗೊಂಡು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇರುವ ಸಿಬ್ಬಂದಿಗಳು ನಾಲ್ಕು ಜಿಲ್ಲೆಗಳ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂದರು.

ಯಾವುದೇ ದಾಖಲೆಗಳಿಲ್ಲದೇ ಸಭೆಗೆ ಕೈ ಬೀಸಿಕೊಂಡು ಬಂದು ಹಾಜರಾದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಆಗ ಮಧ್ಯೆ ಪ್ರವೇಶಿಸಿದ ಡಿವೈಎಸ್ಪಿ ಮುಂದಿನ ಸಭೆಗೆ ಸೂಕ್ತ ದಾಖಲೆಗಳೊಂದಿಗೆ ಸಭೆಗೆ ಬರುವಂತೆ ಸೂಚಿಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ‌.ಎಸ್ , ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ್ ಉಪಸ್ಥಿತರಿದ್ದರು‌. ಸಭೆಯಲ್ಲಿ ಬೆಳ್ತಂಗಡಿ ಪೊಲೀಸ್ ಉಪ ವಿಭಾಗದ ಪೊಲೀಸ್ ಠಾಣೆಗಳ ಪಿಎಸ್ಐ ಗಳು ಹಾಜರಿದ್ದರು. ಸಭೆಯಲ್ಲಿ ದಲಿತ ಮುಖಂಡರಾದ ಸೇಸಪ್ಪ ನೆಕ್ಕಿಲು , ಶ್ರೀನಿವಾಸ್ ಉಜಿರೆ , ಸದಾನಂದ ನಾಲ್ಕೂರು , ಪ್ರಭಾಕರ್ ನಾಯ್ಕ್ , ದಯಾನಂದ ಇಂದಬೆಟ್ಟು ಉಪಸ್ಥಿತರಿದ್ದರು. ಡಿವೈಎಸ್ಪಿ ಕಛೇರಿಯ ಎಎಸ್ಐ ಲಾರೆನ್ಸ್‌ ಹಿಂದಿನ ಸಭೆಯ ವರದಿ ಮಂಡಿಸಿದರು. ಹೆಡ್ ಕಾನ್ಸ್‌ಟೇಬಲ್ ಪ್ರವೀಣ್ ಎಂ. ಸಹಕರಿಸಿದರು. ಹೆಡ್ ಕಾನ್ಸ್‌ಟೇಬಲ್ ಮನೋಹರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಬೆಳ್ತಂಗಡಿ: ಗುರುವಾಯನಕೆರೆ ಬಳಿ ಪತ್ತೆಯಾದ ಮೃತದೇಹದ ಗುರುತು ಪತ್ತೆ – ಯತೀಶ್ ಗೌಡ ಕೊಲೆ ಶಂಕೆ, ಮೂವರು ವಶಕ್ಕೆ

Published

on

ಬೆಳ್ತಂಗಡಿ, ದಕ್ಷಿಣ ಕನ್ನಡ: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಸಮೀಪದ ಅಲಾದಿಕೊಟ್ಟಿಗೆ ಎಂಬಲ್ಲಿ ಜೂನ್ 1ರಂದು ಬೆಳಿಗ್ಗೆ ಪತ್ತೆಯಾಗಿದ್ದ ಅಪರಿಚಿತ ಮೃತದೇಹದ ಗುರುತು ಪತ್ತೆಯಾಗಿದ್ದು, ಇದು ಕೊಲೆ ಎಂದು ಶಂಕಿಸಲಾಗಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ, ದಿ. ಕೂಸಪ್ಪ ಗೌಡ ಮತ್ತು ಪದ್ಮಾವತಿ ದಂಪತಿಯ ದ್ವಿತೀಯ ಪುತ್ರ ಯತೀಶ್ ಗೌಡ (33) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಯತೀಶ್, ಕಳೆದ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದು, ನಾಪತ್ತೆಯಾಗಿದ್ದರು.

ಘಟನೆಯ ಹಿನ್ನೆಲೆ ಮತ್ತು ದೂರು:

ಜೂನ್ 1ರಂದು ಬೆಳಿಗ್ಗೆ ಗುರುವಾಯನಕೆರೆಯ ಶ್ರೀದೇವಿ ಹಾರ್ಡ್‌ವೇರ್ ಬಳಿ ಅಪರಿಚಿತ ಮೃತದೇಹ ಇರುವ ಬಗ್ಗೆ ಭಾವಚಿತ್ರ ಸಹಿತ ಮಾಹಿತಿ ವಾಟ್ಸಾಪ್‌ ಮೂಲಕ ಮೃತರ ಸಹೋದರ ನಿತಿನ್ (34) ಅವರಿಗೆ ತಲುಪಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ನಿತಿನ್, ಮೃತದೇಹವನ್ನು ತನ್ನ ಸಹೋದರ ಯತೀಶ್ ಗೌಡ ಎಂದು ಗುರುತಿಸಿದ್ದಾರೆ.

ಸಿಸಿಟಿವಿ ತನಿಖೆ ಮತ್ತು ಕೊಲೆ ಶಂಕೆ:

ಮೃತದೇಹದ ಮೇಲೆ ಹಲ್ಲೆಯ ಗುರುತುಗಳಿದ್ದ ಹಿನ್ನೆಲೆಯಲ್ಲಿ, ದೂರುದಾರರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಜೂನ್ 1ರ ಬೆಳಿಗ್ಗಿನ ಸಮಯ ಮೂವರು ವ್ಯಕ್ತಿಗಳು ಯತೀಶ್ ಅವರ ಮೇಲೆ ಹಲ್ಲೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಗಳ ತೀವ್ರ ಹಲ್ಲೆಯಿಂದಾಗಿಯೇ ಯತೀಶ್ ಮೃತಪಟ್ಟಿರುವುದಾಗಿ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್ ಕಾರ್ಯಾಚರಣೆ, ಮೂವರ ವಶಕ್ಕೆ:

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಿತಿನ್ ನೀಡಿದ ದೂರಿನನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ : 65/2026, ಕಲಂ: 115(2), 103 ಜೊತೆಗೆ 3(5) ಬಿ.ಎನ್.ಎಸ್ (BNS) ರಂತೆ ಕೊಲೆ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ:

ಯಶೋಧರ (35) – ನಿವಾಸಿ: ಮಿತ್ತಬಾಗಿಲು, ಬೆಳ್ತಂಗಡಿ

ಮೋಹನ್ (30) – ನಿವಾಸಿ: ಚಾರ್ವಾಕ, ಕಡಬ

ಇಬ್ರಾಹಿಂ (54) – ನಿವಾಸಿ: ಪದಂಗಡಿ, ಬೆಳ್ತಂಗಡಿ

ವಶಕ್ಕೆ ಪಡೆದಿರುವ ಮೂವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕೊಲೆಗೆ ನಿಖರವಾದ ಕಾರಣ ಮತ್ತು ಹಲ್ಲೆಯ ಹಿಂದಿನ ಸತ್ಯಾಸತ್ಯತೆಗಳನ್ನು ಪತ್ತೆಹಚ್ಚಲು ಬೆಳ್ತಂಗಡಿ ಪೊಲೀಸರು ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Continue Reading

accident

ಬೆಳ್ತಂಗಡಿ – ಪುತ್ತೂರು ಭಾಗದಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು : ಇಬ್ಬರು ಬಲಿ

Published

on

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಪುತ್ತೂರು ಭಾಗಗಳಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ತಲಾ ಓರ್ವರು ಮೃತಪಟ್ಟ ದುರ್ಘಟನೆಗಳು ವರದಿಯಾಗಿವೆ.

ಮುಂಡಾಜೆ: ಬೈಕ್-ಕಾರು ಭೀಕರ ಅಪಘಾತ; ಚಿಕಿತ್ಸೆ ಫಲಿಸದೆ ಯುವಕ ಸಾವು


ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೋಮಂತಡ್ಕ ಅಗರಿ ಕ್ರಾಸ್ ಬಳಿ ಭಾನುವಾರ ನಡೆದ ಬೈಕ್ ಹಾಗೂ ಕಾರಿನ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ, ಸೋಮವಾರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾರ್ಯತಡ್ಕ ನಿವಾಸಿ ಗಣೇಶ್ (36) ಮೃತಪಟ್ಟ ದುರ್ದೈವಿ.

ಘಟನೆಯ ವಿವರ:

ಭಾನುವಾರ ಉಜಿರೆ ಕಡೆಯಿಂದ ಕಕ್ಕಿಂಜೆ ಕಡೆಗೆ ಗಣೇಶ್ ಅವರು ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಚಾರ್ಮಾಡಿ ಕಡೆಯಿಂದ ಬರುತ್ತಿದ್ದ ಕಾರಿನ ಬಲಭಾಗದ ಸೈಡ್ ಮಿರರ್‌ಗೆ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ.

ಮೃತ ಗಣೇಶ್ ಅವರು ಅವಿವಾಹಿತರಾಗಿದ್ದು, ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸಂತಾಪ:

ಮೃತ ಗಣೇಶ್ ಅವರು ಕಾರ್ಯತಡ್ಕದಲ್ಲಿ ‘ಗಣೇಶ್ ಸ್ಟುಡಿಯೋ’ ನಡೆಸುತ್ತಿದ್ದು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (SKPA) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಬೆಳ್ತಂಗಡಿ ವಲಯದ ಸಕ್ರಿಯ ಸದಸ್ಯರಾಗಿದ್ದರು. ಯುವ ಛಾಯಾಗ್ರಾಹಕನ ಅಕಾಲಿಕ ನಿಧನಕ್ಕೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ತೀವ್ರ ಸಂತಾಪ ವ್ಯಕ್ತಪಡಿಸಿದೆ.‌

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯ ಕೆಂಜಳ ತಿರುವಿನಲ್ಲಿ ಭೀಕರ ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು, 7 ಮಂದಿಗೆ ಗಾಯ

ಕಡಬ: ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಂಜಳದ ಅಪಾಯಕಾರಿ ತಿರುವಿನಲ್ಲಿ ಮೇ 25ರಂದು ಸಂಜೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಟೆಂಪೋ ಟ್ರಾವೆಲರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಬೆಂಗಳೂರಿನತ್ತ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಹಾಗೂ ಧರ್ಮಸ್ಥಳದ ಕಡೆಯಿಂದ ಸುಬ್ರಹ್ಮಣ್ಯದತ್ತ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಡುವೆ ಈ ಅಪಘಾತ ನಡೆದಿದೆ. ಬೆಂಗಳೂರು ದೇವನಹಳ್ಳಿ ಕೋಟೆ ನಿವಾಸಿ ಸಂಜು ವಿ. ಅವರು ಚಲಾಯಿಸುತ್ತಿದ್ದ ಟೆಂಪೋ ಟ್ರಾವೆಲರ್ (ಕೆಎ 43 ಎ 6435) ನಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಶೇಟ್ ಮಲ್ಲಿಕಾ ಮದ್ರಾಸ್ ಅವರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಕೆಂಜಳದ ಅಪಾಯಕಾರಿ ತಿರುವಿನಲ್ಲಿ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ.

ಮೃತರು ಮತ್ತು ಗಾಯಾಳುಗಳ ವಿವರ: ಅಪಘಾತದ ತೀವ್ರತೆಗೆ ಟೆಂಪೋ ಟ್ರಾವೆಲರ್‌ನಲ್ಲಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಕೆರೆಸಂದ್ರಮನೆ ನಿವಾಸಿ ಅಂಜನಮ್ಮ (47) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಅಪಘಾತದಲ್ಲಿ 5 ವರ್ಷದ ಬಾಲಕಿ ನಯಾನಿಕಾ ತೀವ್ರವಾಗಿ ಗಾಯಗೊಂಡಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳಿದಂತೆ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ನರಸಿಂಹಯ್ಯ, ವಿ. ಮಂಜುನಾಥ್, ವಿ. ಗಂಗಾಧರ್, ಪವಿತ್ರಾ, ಸಿರಿಪ್ರಿಯಾ ಹಾಗೂ ರತ್ನಮ್ಮ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಟೆಂಪೋದಲ್ಲಿದ್ದ ಲೋಕೇಶ್ ದೇವನಹಳ್ಳಿ, ಪವನ್ ಸೋಮನಹಳ್ಳಿ ಕನಕಪುರ, ಕವಿತಾ ಸಿ.ಎಂ., ಜೀವನ್, ಆಶಾ, ಪ್ರೀತಮ್ ಹಾಗೂ ಶಿವ ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Continue Reading

Belthangady

ಕಾರಿನೊಳಗೆ ಸಿಲುಕಿಕೊಂಡ ಮಗು; ಸಮಯಪ್ರಜ್ಞೆ ಮೆರೆದು ಗ್ಲಾಸ್ ಒಡೆದು ರಕ್ಷಿಸಿದ ಸಾರ್ವಜನಿಕರು

Published

on

ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕ ಜಂಕ್ಷನ್ ಬಳಿ ಚಾಲಕನ ಅಜಾಗರೂಕತೆಯಿಂದಾಗಿ ಕಾರಿನ ಡೋರ್ ಆಟೋಮೆಟಿಕ್ ಲಾಕ್ ಆಗಿ, ಮಗುವೊಂದು ಕಾರಿನೊಳಗೆ ಸಿಲುಕಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮೇ 25ರಂದು ಸೋಮವಾರ ನಡೆದಿದೆ.

ಘಟನೆಯ ವಿವರ: ಮದ್ದಡ್ಕದ ಕುವೆಟ್ಟು ನಿವಾಸಿಯೊಬ್ಬರು ತಮ್ಮ ಮಗುವಿನೊಂದಿಗೆ ಕಾರಿನಲ್ಲಿ ಬಂದಿದ್ದು, ರಸ್ತೆ ಬದಿಯ ಅಂಗಡಿಯೊಂದರ ಬಳಿ ಕಾರನ್ನು ನಿಲ್ಲಿಸಿದ್ದರು. ಚಾಲಕನು ಕಾರಿನ ಕೀ ಮತ್ತು ಮಗುವನ್ನು ಒಳಗಡೆಯೇ ಬಿಟ್ಟು, ಇಂಜಿನ್ ಆಫ್ ಮಾಡಿ ಹೊರಗೆ ಇಳಿದು ಅಂಗಡಿಗೆ ತೆರಳಿದ್ದಾರೆ. ಆದರೆ, ಅವರು ಇಳಿದ ತಕ್ಷಣ ಕಾರಿನ ಸೆಂಟ್ರಲ್ ಲಾಕಿಂಗ್ ಸಿಸ್ಟಮ್‌ನಿಂದಾಗಿ ಡೋರ್‌ಗಳು ಆಟೋಮೆಟಿಕ್ ಆಗಿ ಲಾಕ್ ಆಗಿವೆ.

ಕಾರಿನ ಕೀ ಒಳಗಡೆಯೇ ಇದ್ದಿದ್ದರಿಂದ ಹೊರಗಿನಿಂದ ಬಾಗಿಲು ತೆರೆಯಲು ಸಾಧ್ಯವಾಗದೆ ಚಾಲಕ ಗಾಬರಿಗೊಂಡಿದ್ದಾರೆ. ಇದೇ ವೇಳೆ ಕಾರಿನ ಒಳಗಿದ್ದ ಮಗು ಗಾಬರಿಗೊಂಡು ಜೋರಾಗಿ ಅಳಲು ಪ್ರಾರಂಭಿಸಿದೆ. ಬಿಸಿಲಿನ ಬೇಗೆಯೂ ಹೆಚ್ಚಿದ್ದರಿಂದ ಕಾರಿನೊಳಗೆ ಉಸಿರಾಟದ ತೊಂದರೆಯಾಗುವ ಭೀತಿ ಎದುರಾಗಿತ್ತು.

ಸಾರ್ವಜನಿಕರ ಸಮಯಪ್ರಜ್ಞೆ: ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಮತ್ತು ಅಂಗಡಿ ಮುಂಗಟ್ಟುಗಳ ಮಾಲೀಕರು ಕಾರಿನ ಬಳಿ ಧಾವಿಸಿ ಬಂದಿದ್ದಾರೆ. ಕಂಪನಿಕೀ ಇಲ್ಲದೆ ಬಾಗಿಲು ತೆರೆಯಲು ಕಂಬಿ, ಸ್ಕ್ರೂಡ್ರೈವರ್ ಬಳಸಿ ವಿವಿಧ ರೀತಿಯಲ್ಲಿ ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಮಗುವಿನ ಅಳು ಹೆಚ್ಚಾಗುತ್ತಿರುವುದನ್ನು ಮತ್ತು ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಾರ್ವಜನಿಕರು ಸಮಯಪ್ರಜ್ಞೆ ಮೆರೆದಿದ್ದಾರೆ.

ಮಗುವಿಗೆ ಯಾವುದೇ ಗಾಯವಾಗದಂತೆ ಎಚ್ಚರಿಕೆ ವಹಿಸಿ, ಕಾರಿನ ಹಿಂಬದಿಯ ಕಿಟಕಿಯ ಗ್ಲಾಸ್ (ಗಾಜು) ಅನ್ನು ಬಲವಾಗಿ ಒಡೆದಿದ್ದಾರೆ. ತದನಂತರ ಒಳಗಡೆಯಿದ್ದ ಬಾಗಿಲಿನ ಲಾಕ್ ಅನ್ನು ತೆಗೆದು ಮಗುವನ್ನು ಯಶಸ್ವಿಯಾಗಿ ಹೊರಗೆ ತಂದು ರಕ್ಷಿಸಿದ್ದಾರೆ. ಸಾರ್ವಜನಿಕರ ಈ ತ್ವರಿತ ನಿರ್ಧಾರ ಮತ್ತು ಸಮಯಪ್ರಜ್ಞೆಗೆ ಸ್ಥಳೀಯರು ಹಾಗೂ ಮಗುವಿನ ಪೋಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Continue Reading

Trending

Copyright © 2025 Deevatige

error: Content is protected !!