Connect with us

Dakshina Kannada

‘ಕಂಬಳದ ಭೀಷ್ಮ’ ಗುಣಪಾಲ ಕಡಂಬ ಅವರಿಗೆ ಸಾರ್ವಜನಿಕ ವೇದಿಕೆಯಲ್ಲೇ ಅವಮಾನ ; ಕಂಬಳಾಭಿಮಾನಿಗಳಿoದ ತೀವ್ರ ಆಕ್ರೋಶ

Published

on

ಮಂಗಳೂರು : ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆದ ರಾಮ-ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ಕಂಬಳದ ಭೀಷ್ಮ ಎಂದೇ ಖ್ಯಾತಿ ಗಳಿಸಿರುವ ಕಂಬಳದ ತೀರ್ಪುಗಾರರಾಗಿ ಮತ್ತು ಸಂಘಟಕರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ ಗುಣಪಾಲ ಕಡಂಬ ಅವರಿಗೆ ವ್ಯಕ್ತಿಯೊಬ್ಬರು ಸಾರ್ವಜನಿಕ ವೇದಿಕೆಯಲ್ಲೇ ಅಸಭ್ಯವಾಗಿ ವರ್ತಿಸಿ, ಅವಮಾನ ಮಾಡಿರುವ ಘಟನೆ ನಡೆದಿದೆ.
ಕಂಬಳ ಕ್ಷೇತ್ರದ ಹಿರಿಯ ಮಾರ್ಗದರ್ಶಕ, ‘ಕಂಬಳದ ಭೀಷ್ಮ’ ಎಂದೇ ಕರೆಯಲ್ಪಡುವ ಗುಣಪಾಲ ಕಡಂಬ ಅವರಿಗೆ ವೇದಿಕೆಯಲ್ಲೇ ಅವಮಾನ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ. ಈ ಘಟನೆಯು ಕಂಬಳ ಪ್ರೇಮಿಗಳು ಮತ್ತು ಕರಾವಳಿಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಂಬಳ ಅನ್ನೋದು ಕರಾವಳಿ ಕರ್ನಾಟಕದ ವಿಶೇಷವಾಗಿ ತುಳುನಾಡಿನ ಹೆಮ್ಮೆಯ ಪಾರಂಪರಿಕ ಕ್ರೀಡೆ. ಕೃಷಿಯ ಹಿನ್ನೆಲೆ ಹೊಂದಿರುವ ಈ ಕ್ರೀಡೆ ಇಂದು ದೇಶಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.


ಹಿರಿಯ ತೀರ್ಪುಗಾರ ಗುಣಪಾಲ ಕಡಂಬ ಅವರು ಎಂದಿನoತೆ ಕಂಬಳದ ವೀಕ್ಷಕ ವಿವರಣೆಯನ್ನು ನೀಡುತ್ತಿದ್ದರು. ರಾತ್ರಿ ಸುಮಾರು 11.45ರ ಸುಮಾರಿಗೆ ಕಂಬಳದ ಕೋಣಗಳನ್ನು ಬಿಡುವ ಆರಂಭಿಕ ಸ್ಥಾನದ ವೀಕ್ಷಕ ವಿವರಣಾ ಕೌಂಟರ್‌ಗೆ ನುಗ್ಗಿದ ಅರುಣ್ ಶೆಟ್ಟಿ ಎಂಬಾತ ಮೈಕ್ ಕಸಿದುಕೊಂಡು ಗುಣಪಾಲ ಕಡಂಬ ಅವರರಿಗೆ ‘ಈರ್ ಒಂತೆ ಮನಿಪಂದೆ ಕುಲ್ವರಾ, ಮುಲ್ಪ ಎರು ಬುಡ್ಯೆರೆ ಉಂಡು, ಯಾನ್ ಅರುಣ್ ಶೆಟ್ಟಿ ಪಾತೆರುನಿ’ ಎಂದು ಜಂಭದಿoದ ಹೇಳಿದ್ದಾನೆ. ಆಗ ಗುಣಪಾಲ ಕಡಂಬ ಅವರು ‘ಎಂಕ್ಲು ಮೈಕ್ ಬಂದ್ ಮಲ್ತ್ದ್ ಕುಲ್ಲುವ, ನಿಕ್ಲ್ ಏಪ ಬೋಡಾಂಡಲ ಎರು ಬುಡ್ಲೆ’ ಎಂದು ಹೇಳಿದ್ದಾರೆ. (‘ನೀವು ಸ್ವಲ್ಪ ಸುಮ್ಮನೆ ಕುಳಿತುಕೊಳ್ಳಿ, ಇಲ್ಲಿ ಕೋಣ ಬಿಡೋಕಿದೆ.. ನಾನು ಅರುಣ್ ಶೆಟ್ಟಿ ಮಾತಾಡೋದು’ ಎಂದು ಹೇಳಿದಾಗ ಗುಣಪಾಲ ಕಡಂಬ ಅವರು ‘ನಾವು ಮೈಕ್ ಬಂದ್ ಮಾಡಿ ಕೂತ್ಕೋತೇವೆ.. ನೀವು ಯಾವಾಗ ಬೇಕಾದರೂ ಕೋಣಗಳನ್ನು ಬಿಡಿ’) ಎಂದು ಹೇಳಿದ್ದಾರೆ.


ಇದೊಂದು ಸಣ್ಣಪುಟ್ಟ ವಾಗ್ವಾದ ಆದರೂ ಸಹ ಕಂಬಳ ಕ್ರೀಡಾಕೂಟಕ್ಕೆ ಒಂದು ಶಿಸ್ತಿನ ಚೌಕಟ್ಟನ್ನು ತಂದು, ಇದೊಂದು ಅಥ್ಲೆಟಿಕ್ ಕ್ರೀಡೆ ಎನ್ನುವಷ್ಟರ ಮಟ್ಟಿಗೆ ದಶಕಗಳ ಕಾಲ ಬೆವರು ಹರಿಸಿ ದುಡಿದು ಕಂಬಳದ ಭೀಷ್ಮ ಎಂದೇ ಖ್ಯಾತಿಯನ್ನು ಪಡೆದುಕೊಂಡಿರುವ ಹಿರಿಯ ಕಂಬಳ ಹೋರಾಟಗಾರ ಗುಣಪಾಲ ಕಡಂಬ ಅವರಿಗೆ ಈ ರೀತಿ ಅವಮಾನ ಮಾಡಿದ್ದಕ್ಕೆ ಕಂಬಳಾಭಿಮಾನಿಗಳು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗುಣಪಾಲ ಕಡಂಬ ಅವರಿಗೆ ಸಾರ್ವಜನಿಕವಾಗಿ ಅವಮಾನ ಮಾಡಿ ಅರುಣ್ ಶೆಟ್ಟಿ ಮತ್ತು ಕಂಬಳ ಆಯೋಜಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.


ಗುಣಪಾಲ ಕಡಂಬ ಅವರು ಕಂಬಳ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಕಂಬಳದಲ್ಲಿ ಲೇಸರ್ ಫಿನಿಶಿಂಗ್ ಮತ್ತು ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.ನೂರಾರು ಯುವ ತೀರ್ಪುಗಾರರಿಗೆ ಮತ್ತು ಓಟಗಾರರಿಗೆ ಅಕಾಡೆಮಿ ಮೂಲಕ ತರಬೇತಿ ನೀಡಿದ್ದಾರೆ. ವಿವಾದಗಳಿಲ್ಲದೆ ಕಂಬಳ ನಡೆಸಲು ಅವರು ಹಾಕಿಕೊಟ್ಟ ನಿಯಮಗಳು ಇಂದಿಗೂ ಪಾಲಿಸಲ್ಪಡುತ್ತಿವೆ. ಇಂತಹ ಹಿರಿಯ ಚೇತನಗಳಿಗೆ ಗೌರವ ನೀಡುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ.


ಈ ಘಟನೆ ವಿಡಿಯೋ ಅಥವಾ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಕಂಬಳ ಅಭಿಮಾನಿಗಳು ಗುಣಪಾಲ ಕಡಂಬ ಅವರ ಪರವಾಗಿ ನಿಂತಿದ್ದಾರೆ. ಕಂಬಳಕ್ಕೆ ಆಧುನಿಕ ಸ್ಪರ್ಶ ನೀಡಿದ ಮತ್ತು ಶಿಸ್ತು ತಂದ ವ್ಯಕ್ತಿಗೆ ಈ ರೀತಿ ಅವಮಾನ ಮಾಡಿರುವುದು ಸರಿಯಲ್ಲ ಎಂಬುದು ಎಲ್ಲರ ಅಭಿಪ್ರಾಯ.


ಈತನ್ಮಧ್ಯೆ ಕಂಬಳ ಕ್ರೀಡೆಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಗುಣಪಾಲ ಕಡಂಬ ಅವರಿಗೆ ಅವಮಾನ ಆಗಿದ್ದನ್ನು ಖಂಡಿಸಿ ‘ಗುಣಪಾಲ ಕಡಂಬ ಅಭಿಮಾನಿ ಬಳಗ’ ಹೆಸರಿನಲ್ಲಿ ಹತ್ತಾರು ವಾಟ್ಸಾಪ್ ಗುಂಪುಗಳನ್ನು ರಚಿಸಿದ್ದು, ಸಾವಿರಾರು ಮಂದಿ ಈ ಗ್ರೂಪ್‌ಗಳಿಗೆ ಸೇರಿ ಕಡಂಬ ಅವರ ಪರವಾಗಿ ಧ್ವನಿಗೂಡಿಸಿದ್ದಾರೆ. ಒಂದು ವೇಳೆ ಅರುಣ್ ಶೆಟ್ಟಿ ಎಂಬಾತ ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದಲ್ಲಿ ಹೋರಾಟ ರೂಪಿಸುವ ಯೋಜನೆಯನ್ನು ಗುಣಪಾಲ ಕಡಂಬ ಅಭಿಮಾನಿ ಬಳಗದವರು ಮಾಡಿದ್ದಾರೆ.


ಕಂಬಳದ ಶಿಸ್ತು ಮತ್ತು ಘನತೆಯನ್ನು ಕಾಪಾಡುವಲ್ಲಿ ಕಂಬಳ ಶಿಸ್ತು ಸಮಿತಿ (kambala discipline committee ) ಅತ್ಯಂತ ನಿರ್ಣಾಯಕ ಪಾತ್ರ ವಹಿಸಬೇಕಿದೆ. ಗುಣಪಾಲ ಕಡಂಬ ಅವರಂತಹ ಹಿರಿಯರಿಗೆ ಅವಮಾನವಾದಾಗ, ಸಮಿತಿಯು ಕೇವಲ ಖಂಡನೆಗೆ ಸೀಮಿತವಾಗದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ ಎಂಬುದು ಕಂಬಳ ಪ್ರೇಮಿಗಳ ಒತ್ತಾಯವಾಗಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

award

ಮುಂಬೈನಲ್ಲಿ ಸಾರ್ವಜನಿಕ ಸೇವೆ ಮತ್ತು ಫಿಟ್ನೆಸ್ ಸಾಧನೆಯ ಹೈರಾಕ್ಸ್: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಯಶಸ್ಸು

Published

on

ಮುಂಬೈ: ಆಡಳಿತದ ಬಿಡುವಿಲ್ಲದ ಜವಾಬ್ದಾರಿಗಳ ನಡುವೆಯೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಜಾಗತಿಕ ಮಟ್ಟದ ಪ್ರತಿಷ್ಠಿತ ‘ಹೈರಾಕ್ಸ್’ (HYROX) ಫಿಟ್ನೆಸ್ ರೇಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.

ಮುಂಬೈನ ಎನ್‌ಇಎಸ್‌ಸಿಒ (NESCO) ಹಾಲ್‌ನಲ್ಲಿ ಆಯೋಜನೆಗೊಂಡಿದ್ದ ಈ ಕಠಿಣ ಸ್ಪರ್ಧೆಯಲ್ಲಿ ದೇಶ-ವಿದೇಶಗಳ ಸಾವಿರಾರು ಫಿಟ್ನೆಸ್ ಉತ್ಸಾಹಿಗಳು ಭಾಗವಹಿಸಿದ್ದರು. ಈ ಸಾಹಸಮಯ ರೇಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಮಂಗಳೂರಿನ ಖ್ಯಾತ ಫಿಟ್ನೆಸ್ ತರಬೇತುದಾರ ಹಾಗೂ ಪವರ್‌ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಕೂಡ ಸಾಥ್ ನೀಡಿ ಯಶಸ್ಸು ಸಾಧಿಸಿದ್ದಾರೆ.

ಏನಿದು ಹೈರಾಕ್ಸ್ (HYROX)?

ವಿಶ್ವದ ಅತಿದೊಡ್ಡ ಫಿಟ್ನೆಸ್ ರೇಸ್ ಎಂದು ಖ್ಯಾತಿ ಪಡೆದಿರುವ ಹೈರಾಕ್ಸ್, ಅತ್ಯಂತ ಕಠಿಣ ಹಾಗೂ ಸವಾಲಿನ ಸ್ಪರ್ಧೆಯಾಗಿದೆ. ಇದು ಒಟ್ಟು 8 ಕಿ.ಮೀ. ಓಟ ಮತ್ತು 8 ವಿವಿಧ ಫಂಕ್ಷನಲ್ ವರ್ಕೌಟ್ ಸ್ಟೇಷನ್‌ಗಳನ್ನು ಒಳಗೊಂಡಿರುತ್ತದೆ.

ಈ ಸವಾಲಿನಲ್ಲಿ ಸ್ಪರ್ಧಾಳುಗಳು ಸ್ಕೀ ಎರ್ಗ್ (SkiErg), ಸ್ಲೆಡ್ ಪುಶ್, ಸ್ಲೆಡ್ ಪುಲ್, ಬರ್ಪಿ ಬ್ರಾಡ್ ಜಂಪ್, ರೋಯಿಂಗ್, ಫಾರ್ಮರ್ಸ್ ಕ್ಯಾರಿ, ಸ್ಯಾಂಡ್‌ಬ್ಯಾಗ್ ಲುಂಜಸ್ ಮತ್ತು ವಾಲ್ ಬಾಲ್‌ನಂತಹ ಕಠಿಣ ಹಂತಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಂಡಿರುವ ಈ ರೇಸ್, 2025ರ ಮೇ ತಿಂಗಳಲ್ಲಿ ಮುಂಬೈ ಮೂಲಕ ಭಾರತಕ್ಕೆ ಪಾದಾರ್ಪಣೆ ಮಾಡಿತ್ತು.

ಆಡಳಿತದ ಜೊತೆ ಫಿಟ್ನೆಸ್‌ಗೆ ಒತ್ತು

2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾದ ದರ್ಶನ್ ಎಚ್.ವಿ. ಅವರು 2025ರ ಜೂನ್ 18ರಂದು ದಕ್ಷಿಣ ಕನ್ನಡ ಜಿಲ್ಲೆಯ 134ನೇ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ದೈನಂದಿನ ಕಚೇರಿ ಕೆಲಸಗಳು, ಸಾರ್ವಜನಿಕ ಸಮಸ್ಯೆಗಳ ನಿವಾರಣೆ ಹಾಗೂ ಆಡಳಿತಾತ್ಮಕ ಬಿಡುವಿಲ್ಲದ ಒತ್ತಡದ ನಡುವೆಯೂ ಫಿಟ್ನೆಸ್ ಕಾಯ್ದುಕೊಂಡಿರುವ ಇವರ ಹೈರಾಕ್ಸ್ ಸಾಧನೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಇವರೊಂದಿಗೆ ಹೆಜ್ಜೆಹಾಕಿದ ಪ್ರದೀಪ್ ಕುಮಾರ್ ಆಚಾರ್ಯ ಅವರು ಮಂಗಳೂರಿನ ಹೆಸರಾಂತ ಪವರ್‌ಲಿಫ್ಟರ್ ಆಗಿದ್ದು, ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದವರು. ಪ್ರಸ್ತುತ ಮಂಗಳೂರಿನಲ್ಲಿ ನೂರಾರು ಯುವಕರಿಗೆ ಫಿಟ್ನೆಸ್ ತರಬೇತುದಾರರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಜಿಲ್ಲಾ ಆಡಳಿತದ ಚುಕ್ಕಾಣಿ ಹಿಡಿದು ಆರೋಗ್ಯಕರ ಬದುಕಿಗೆ ಮುಂಚೂಣಿಯಲ್ಲಿ ನಿಂತಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ಈ ಸಾಧನೆ, ದಕ್ಷಿಣ ಕನ್ನಡ ಜಿಲ್ಲೆಯ ಯುವಜನತೆಗೆ ಫಿಟ್ನೆಸ್ ಮತ್ತು ಶಿಸ್ತಿನ ಬಗ್ಗೆ ದೊಡ್ಡ ಮಟ್ಟದ ಪ್ರೇರಣೆ ನೀಡಿದೆ

Continue Reading

accident

ಬ್ರೇಕಿಂಗ್ ನ್ಯೂಸ್: ಕಾರ್ಕಳ – ಮೂಡುಬಿದ್ರೆ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ; ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಪ್ರಾಣಾಪಾಯದಿಂದ ಪಾರು

Published

on

ಕಾರ್ಕಳ: ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಹಾಗೂ ಅವರ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರ್ಕಳದಿಂದ ಮೂಡುಬಿದ್ರೆಯತ್ತ ವೇಗವಾಗಿ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ (KA 70 A 0099) ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿದೆ.

ಘಟನೆಯ ವಿವರ ಹಾಗೂ ರಕ್ಷಣಾ ಕಾರ್ಯ: ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಜುಗಳು ಪುಡಿಯಾಗಿವೆ. ಕಾರಿನ ಒಳಗೆ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಸಹ, ಡಿಕ್ಕಿಯ ತೀವ್ರತೆಯಿಂದಾಗಿ ಮುಂಭಾಗದಲ್ಲಿ ಕುಳಿತಿದ್ದ ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಒಳಗೆ ಸಿಲುಕಿಕೊಂಡಿದ್ದರು. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಧಾವಿಸಿ ಬಂದು, ಅತ್ಯಂತ ಪ್ರಯಾಸಪಟ್ಟು ಅವರನ್ನ ಕಾರಿನಿಂದ ಹೊರತೆಗೆದಿದ್ದಾರೆ.

ಆಸ್ಪತ್ರೆಗೆ ದಾಖಲು: ಅಪಘಾತದಲ್ಲಿ ಗಾಯಗೊಂಡಿರುವ ರಮಾನಾಥ ರೈ ಹಾಗೂ ಕಾರು ಚಾಲಕರನ್ನು ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಬಸ್ ಹಾಗೂ ಕಾರಿನಲ್ಲಿದ್ದ ಇತರೆ ಕೆಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ.

ರಮಾನಾಥ ರೈಯವರು ಒಡಿಯೂರಿನಲ್ಲಿ ನಡೆದ ಒಡಿಯೂರು ಶ್ರೀ ವಿಕಾಸವಾಹಿನಿ ಸಂಭ್ರಮ ಹಾಗೂ ನೇರಳಕಟ್ಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಂಗಳೂರಿನ ಕಾರ್ಯಕ್ರಮದ ಮುಗಿಸಿ ಕಾರ್ಕಳದ ಮತ್ತೊಂದು ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

CONGRESS

ಮಂಗಳೂರು ಹಳೆ ಬಂದರು ಪ್ರದೇಶಕ್ಕೆ ಸಿಎಂ ಭೇಟಿ: ಮೀನುಗಾರಿಕೆ ವ್ಯವಹಾರ ಸ್ಥಗಿತಗೊಳಿಸಿದ್ದಕ್ಕೆ ಆಕ್ರೋಶ, ತನಿಖೆಗೆ ಆದೇಶ

Published

on

ಮಂಗಳೂರು, ಸೆ. 19: ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕಾ ಧಕ್ಕೆ ಹಳೆ ಬಂದರು ಪ್ರದೇಶಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕಮಾರ್ ಅವರು, ತಮ್ಮ ಭೇಟಿಯ ವೇಳೆ ಮೀನುಗಾರಿಕಾ ವ್ಯವಹಾರ ಹಾಗೂ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಈ ಬಗ್ಗೆ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಅಧಿಕಾರಿಗಳೇ ಅಥವಾ ಪೊಲೀಸರೇ ಚಟುವಟಿಕೆಗಳನ್ನು ನಿಲ್ಲಿಸಿದ್ದರೆ ಅವರನ್ನು ಇಂದೇ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು. ರಾಜ್ಯ ಹಾಗೂ ಹೊರರಾಜ್ಯಗಳಿಂದ ಬರುವ ಮೀನುಗಾರರು ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ವ್ಯವಹಾರಗಳು ಎಂದಿನಂತೆ ಸುಗಮವಾಗಿ ನಡೆಯಬೇಕು ಎಂದು ಸಿಎಂ ತಿಳಿಸಿದರು. ಮೀನುಗಾರಿಕೆಯು ಆರ್ಥಿಕತೆಯ ದೊಡ್ಡ ಶಕ್ತಿಯಾಗಿದ್ದು, ಧಕ್ಕೆಯಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು, ಸುರಕ್ಷತೆ ಒದಗಿಸುವುದು ಹಾಗೂ ಸಣ್ಣ ದೋಣಿ ಮೀನುಗಾರರಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ಅಳಿವೆ ಬಾಗಿಲಿಗೆ ಹೂಳೆತ್ತದೆ ಇರುವುದು ಅಪಾಯಕಾರಿಯಾಗಿದೆ ಎಂಬ ಮೀನುಗಾರರ ಅಳಲಿಗೆ ಸ್ಪಂದಿಸಿ, ಡ್ರೆಜಿಂಗ್ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದ ತಾಂತ್ರಿಕ ಸಮಿತಿಯ ಸಲಹೆ ಪಡೆದು ಶೀಘ್ರವೇ ಸರ್ಕಾರವೇ ಸ್ವಂತ ಡ್ರೆಜಿಂಗ್ ಯಂತ್ರ ಖರೀದಿಸುವುದೋ ಅಥವಾ ಲೀಸ್‌ಗೆ ಪಡೆಯುವುದೋ ಎಂಬ ಬಗ್ಗೆ ತೀರ್ಮಾನಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಕರಾವಳಿಯ ಅಭಿವೃದ್ಧಿಗೆ ಹೊಸ ಪಥದ ಚಿಂತನೆ ನಡೆಸಲಾಗಿದ್ದು, ಹೂಡಿಕೆದಾರರನ್ನು ಆಕರ್ಷಿಸಲು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ಕಸ್ತೂರಿ ರಂಗನ್ ವರದಿ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಜನಸಾಮಾನ್ಯರ ಬದುಕು ನಮಗೆ ಮುಖ್ಯವಾಗಿದ್ದು, ಹಿಂದೆಯೂ ನಾವು ಈ ವರದಿಯನ್ನು ತಿರಸ್ಕರಿಸಿದ್ದೇವೆ ಎಂದರು. ಕಾನೂನು ಚೌಕಟ್ಟಿನಲ್ಲಿ ಜನರಿಗೆ ಆಗುವ ಅನ್ಯಾಯ ತಪ್ಪಿಸಲು ವಾಸ್ತವ ಅಂಶಗಳನ್ನು ಅರಿಯಲು ಜನರ ಬಳಿಗೆ ಬಂದಿರುವುದಾಗಿ ತಿಳಿಸಿದರು. ಸಚಿವ ಸಂಪುಟದ ಅನುಮೋದನೆ ಕುರಿತು ಬಿಜೆಪಿ ಟೀಕೆಗಳಿಗೆ ಉತ್ತರಿಸಿ, “ನಾವು ನುಡಿದಂತೆ ನಡೆಯುತ್ತೇವೆ, ಅದೇ ನಮ್ಮ ಶಕ್ತಿ” ಎಂದು ಸ್ಪಷ್ಟಪಡಿಸಿದರು. ಈ ಭೇಟಿಯ ವೇಳೆ ಸಚಿವ ಯು.ಟಿ. ಖಾದರ್, ವಿವಿಧ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಮೀನುಗಾರಿಕಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

Trending

Copyright © 2025 Deevatige