Connect with us

Dakshina Kannada

ಮಂಗಳೂರಿನಲ್ಲಿ ಕರಾವಳಿ ಉತ್ಸವ; ಪೊಲೀಸರಿಂದ ಸಂಚಾರಿ ಸಲಹೆಗಳು ಜಾರಿ

Published

on

ದಕ್ಷಿಣಕನ್ನಡ ಜಿಲ್ಲಾಡಳಿತದಿಂದ ಎರಡು ವಾರಗಳ ಕಾಲ ನಡೆಯುವ ಕರಾವಳಿ ಉತ್ಸವದಲ್ಲಿ ಸೇರಬಹುದಾದ ಜನ ಮತ್ತು ವಾಹನದಟ್ಟಣೆಯ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಮಂಗಳೂರು ಪೊಲೀಸ್ ಇಲಾಖೆ ಸಂಚಾರಿ ಸಲಹೆಗಳನ್ನು ಹೊರಡಿಸಿದೆ.

ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಉದ್ಘಾಟನೆಯು ಡಿ. 21 ರಂದು ಸಂಜೆ ಮಂಗಳೂರು ನಗರದ ಕರಾವಳಿ ಮೈದಾನದಲ್ಲಿ ನೆರವೇರಲಿದೆ. ನಂತರ ಹೊಸ ವರ್ಷದ ಜನವರಿ 2ರವರೆಗೆ ಸಂಜೆ ವೇಳೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿರುತ್ತದೆ. ಸದರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ವಾಹನಗಳು ಸೇರಲಿದ್ದು, ಈ ಸಮಯ ನಗರದ ಕೆಲವೊಂದು ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇರುವುದರಿಂದ ಸಂಚಾರ ನಿಯಮಗಳಲ್ಲಿ ಬದಲಾದ ಮಾರ್ಗ ಸೂಚಿ ಈ ರೀತಿ ಇದ್ದು-

👉ಲಾಲ್ ಬಾಗ್ ನಿಂದ – ಕರಾವಳಿ ಮೈದಾನದ ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ.

👉ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗಧಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸತಕ್ಕದ್ದು.

👉ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಪ್ಲಾಕ್ಸ್ ಗಳನ್ನು ಅಳವಡಿಸಿದ್ದು, ಮಾರ್ಗಸೂಚಿಯನ್ನು ಅನುಸರಿಸುವುದು.

ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳಗಳು

-ಉರ್ವ ಮಾರ್ಕೆಟ್ ಮೈದಾನ –(ಕಾರು)
-ಗಾಂಧಿನಗರ ಸರಕಾರಿ ಶಾಲೆ (ಪ್ರೆಸ್ ಕ್ಲಬ್ನ ಬಳಿ) – (ದ್ವಿಚಕ್ರ/ಕಾರು)
-ಲೇಡಿಹಿಲ್ ಚರ್ಚ್ ಪಾರ್ಕಿಂಗ್ – (ದ್ವಿಚಕ್ರ/ಕಾರು)
-ಕೆನರಾ ಸ್ಕೂಲ್ ಮೈದಾನ, ಮಣ್ಣಗುಡ್ಡೆ – (ದ್ವಿಚಕ್ರ/ಕಾರು)
-ತಿಮ್ಮಪ್ಪ ಹೋಟೆಲ್ ಅವರಣ – (ದ್ವಿಚಕ್ರ/ಕಾರು)
-ಸ್ಕೌಟ್ & ಗೈಡ್ ಹಾಲ್ ಅವರಣ (ಕರಾವಳಿ ಮೈದಾನ ಹಿಂಭಾಗ)- (ದ್ವಿಚಕ್ರ)
-ಉರ್ವ ಮಾರ್ಕೆಟ್ ರಸ್ತೆ – (ದ್ವಿಚಕ್ರ)
-ಹ್ಯಾಟ್ ಹಿಲ್ ರಸ್ತೆ – (ದ್ವಿಚಕ್ರ)

ಸದರಿ ಕಾರ್ಯಕ್ರಮಗಳ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾದ್ಯತೆಗಳು ಇರುವುದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ
ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತರಾಗಿರ ಬೇಕೆಂದು ಜಿಲ್ಲಾ ಪೊಲೀಸ್ ಇಲಾಖೆ ವಿನಂತಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

court

ವಕೀಲರ ರಕ್ಷಣೆಗಾಗಿ ಆಗ್ರಹ: ನಾಳೆ (ನವೆಂಬರ್ 3) ರಾಜ್ಯಾದ್ಯಂತ ನ್ಯಾಯಾಲಯ ಕಲಾಪಗಳಿಂದ ವಕೀಲರು ದೂರ ಉಳಿಯಲು ಕರೆ.

Published

on

​ಬೆಂಗಳೂರು: ವಕೀಲರ ಮೇಲೆ ನಡೆಯುತ್ತಿರುವ ಸರಣಿ ಹಲ್ಲೆಗಳು ಮತ್ತು ಕೊಲೆಗಳನ್ನು ಖಂಡಿಸಿ ಹಾಗೂ ಕಟ್ಟುನಿಟ್ಟಿನ ‘ವಕೀಲರ ರಕ್ಷಣಾ ಕಾಯ್ದೆ’ (Advocates Protection Act) ಜಾರಿಗೆ ಒತ್ತಾಯಿಸಿ, ದಿ ವಕೀಲರ ಅಸೋಸಿಯೇಷನ್ ಬೆಂಗಳೂರು (The Advocates’ Association, Bengaluru) ವತಿಯಿಂದ ನಾಳೆ ಅಂದರೆ ನವೆಂಬರ್ 3, 2026ರ ಮಂಗಳವಾರ ರಾಜ್ಯಾದ್ಯಂತ ನ್ಯಾಯಾಲಯ ಕಲಾಪಗಳಿಂದ ವಕೀಲರು ಸಂಪೂರ್ಣವಾಗಿ ದೂರ ಉಳಿದು (Abstain from work) ಪ್ರತಿಭಟಿಸಲು ಕರೆ ನೀಡಲಾಗಿದೆ.


​ಇತ್ತೀಚೆಗೆ ವೈಟ್‌ಫೀಲ್ಡ್‌ನ ವಕೀಲರಾದ ಮಂಜುನಾಥ್ ಮತ್ತು ಅನ್ನಪೂರ್ಣೇಶ್ವರಿ ನಗರದ ಶ್ರೀರಾಮ್ ಅವರ ಬರ್ಬರ ಕೊಲೆ ಹಾಗೂ ಗೌರಿಬಿದನೂರಿನ ವಕೀಲ ವೆಂಕಟರಮಣ ಸನ್ನಕಿ ಅವರ ಮೇಲಿನ ಹತ್ಯೆ ಯತ್ನದ ಘಟನೆಗಳನ್ನು ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದೆ. ವಕೀಲರಿಗೆ ವೃತ್ತಿಯಲ್ಲಿ ಸೂಕ್ತ ಭದ್ರತೆ ಇಲ್ಲದಿರುವುದನ್ನು ವಿರೋಧಿಸಿ ಮತ್ತು ವಕೀಲರ ರಕ್ಷಣಾ ಕಾಯ್ದೆಯನ್ನು ಬಲಪಡಿಸುವಂತೆ ಒತ್ತಾಯಿಸಿ ಅಕ್ಟೋಬರ್ 29ರಂದು ನಡೆದ ಸರ್ವಸಭೆಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
​ಈ ಹಿನ್ನೆಲೆಯಲ್ಲಿ, ನವೆಂಬರ್ 3ರಂದು ಮಂಗಳವಾರದಂದು ಕರ್ತವ್ಯದಿಂದ ದೂರ ಉಳಿಯುವಂತೆ ನಿರ್ಧರಿಸಲಾಗಿದ್ದು, ರಾಜ್ಯದ ಎಲ್ಲಾ ವಕೀಲರ ಸಂಘಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಪ್ರವೀಣ್ ಗೌಡ, ಉಪಾಧ್ಯಕ್ಷ ಗಿರೀಶ್ ಕುಮಾರ್ ಸಿ.ಎಸ್. ಹಾಗೂ ಖಚಾಂಚಿ ಶ್ವೇತಾ ರವಿಶಂಕರ್ ಮನವಿ ಮಾಡಿದ್ದಾರೆ

Continue Reading

Bantawala

ವಿಟ್ಲದ ಖ್ಯಾತ ವೈದ್ಯ ಡಾ. ವಿ.ಕೆ. ಹೆಗ್ಡೆ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Published

on

ವಿಟ್ಲದ ಖ್ಯಾತ ವೈದ್ಯ, ಪುಷ್ಪಾಕ್ ಹೆಲ್ತ್ ಸೆಂಟರ್ ಸಂಸ್ಥಾಪಕ *ಡಾ. ವಿ.ಕೆ. ಹೆಗ್ಡೆ* ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.1987 ರಿಂದ ವಿಟ್ಲದಲ್ಲಿ ನಿರಂತರವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಾ ಬಂದಿರುವ ಡಾ. ವಿ.ಕೆ. ಹೆಗ್ಡೆ ಅವರ ವೃತ್ತಿಪರ ಪಯಣವು ಗ್ರಾಮೀಣ ಪ್ರದೇಶದಲ್ಲಿ ದೀರ್ಘಕಾಲದ ಪ್ರಾಥಮಿಕ ಆರೋಗ್ಯ ಸೇವೆಯ ನಿರಂತರ ಅಧ್ಯಾಯವಾಗಿದೆ.ವೈದ್ಯಕೀಯ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಪರಿಗಣಿಸದೆ, ಜನರ ಆರೋಗ್ಯದ ಅಗತ್ಯಗಳಿಗೆ ಸ್ಪಂದಿಸುವ ಮಾನವೀಯ ಸೇವೆಯಾಗಿ ಅವರು ಅಳವಡಿಸಿಕೊಂಡಿದ್ದಾರೆ. ಗ್ರಾಮೀಣ ಹಾಗೂ ಅರೆನಗರ ಪ್ರದೇಶದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ, ವೈಯಕ್ತಿಕ ವೈದ್ಯಕೀಯ ಕಾಳಜಿ ಮತ್ತು ಮಾನವೀಯ ಸ್ಪಂದನೆಯನ್ನು ನೀಡುತ್ತಾ ಬಂದಿದ್ದಾರೆ.ವೈದ್ಯಕೀಯ ವೃತ್ತಿಯ ಜೊತೆಗೆ ರೋಟರಿ ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿಯೂ ದೀರ್ಘಕಾಲದ ಕೊಡುಗೆ ನೀಡಿದ್ದಾರೆ.ವಿಶೇಷವಾಗಿ ಕೋವಿಡ್-19 ಮಹಾಮಾರಿಯ ಸಂಕಷ್ಟದ ಅವಧಿಯಲ್ಲಿ ವೈದ್ಯಕೀಯ ಸೇವೆಯ ನಿರಂತರತೆಯನ್ನು ಕಾಪಾಡಿ, ಅಗತ್ಯವಿರುವ ರೋಗಿಗಳಿಗೆ ಸಲಹೆ, ಚಿಕಿತ್ಸೆ, ಮಾರ್ಗದರ್ಶನ ಮತ್ತು ಸೂಕ್ತ ರೆಫರಲ್ ನೆರವು ನೀಡಿದ ಅವರ ಸೇವಾ ಬದ್ಧತೆಯು ಈ ನಾಮನಿರ್ದೇಶನದ ಪ್ರಮುಖ ಅಂಶವಾಗಿದೆ.

Continue Reading

CONGRESS

ಕಸ್ತೂರಿ ರಂಗನ್ ವರದಿ: ಜನರ ಆತಂಕ ಸಂಸದರ ಗಮನಕ್ಕೆ ತರದಿರುವುದು ಕಳವಳಕಾರಿ – ಎಂ. ವೆಂಕಪ್ಪ ಗೌಡ

Published

on

ಸುಳ್ಯ: ಕಸ್ತೂರಿ ರಂಗನ್ ವರದಿಯಿಂದ ಸುಳ್ಯ ತಾಲೂಕಿನ ಹಲವು ಗ್ರಾಮಗಳ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಜನರ ಬದುಕಿನ ಅಳಿವು-ಉಳಿವಿನ ಈ ಗಂಭೀರ ವಿಚಾರವನ್ನು ಸಂಬಂಧಪಟ್ಟ ಸಂಸದರ ಗಮನಕ್ಕೆ ಪರಿಣಾಮಕಾರಿಯಾಗಿ ತಲುಪಿಸದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಹೇಳಿದ್ದಾರೆ.

ವರದಿಯಿಂದ ಬಾಧಿತವಾಗಿರುವ ಪ್ರದೇಶಗಳ ಜನರು ಹಲವು ವರ್ಷಗಳಿಂದ ಭಯದಲ್ಲೇ ಜೀವನ ನಡೆಸುತ್ತಿದ್ದು, ಇದರ ವಿರುದ್ಧ ಈಗಾಗಲೇ ಹಲವು ಹಂತದ ಹೋರಾಟಗಳು ನಡೆದಿವೆ. ಜನರ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯನ್ನು ಏಳು ಬಾರಿ ತಿರಸ್ಕರಿಸಿ ವಾಪಸ್ ಕಳುಹಿಸಿದೆ. ಆದರೆ, ಈ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಕೇಂದ್ರ ಸರ್ಕಾರದ ಬಳಿಯೇ ಇರುವುದರಿಂದ, ಬಾಧಿತ ಗ್ರಾಮಗಳ ಜನರ ಭವಿಷ್ಯ ಕೇಂದ್ರದ ನಿರ್ಧಾರದ ಮೇಲೆ ನಿಂತಿದೆ. ಆದ್ದರಿಂದ, ಸ್ಥಳೀಯ ಸಂಸದರು ಮತ್ತು ಕೇಂದ್ರ ಸಚಿವರು ಈ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

ಇತ್ತೀಚೆಗೆ ಸುಳ್ಯ ತಾಲೂಕಿಗೆ ಆಗಮಿಸಿದ್ದ ಸಂಸದರು ವರದಿ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೂ, ಸ್ಥಳದಲ್ಲಿದ್ದ ಹೋರಾಟಗಾರರು ಅವರಿಗೆ ಜನರ ಸಮಸ್ಯೆಗಳನ್ನು ವಿವರಿಸುವ ಮನವಿ ಸಲ್ಲಿಸದಿರುವುದು ಮತ್ತು ಒತ್ತಡ ಹೇರದಿರುವುದು ಬೇಸರದ ಸಂಗತಿ. ಈ ಹೋರಾಟ ಕೇವಲ ರಾಜ್ಯ ಸರ್ಕಾರಕ್ಕೆ ಮಾತ್ರ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಕಸ್ತೂರಿ ರಂಗನ್ ವರದಿಯ ವಿಷಯವು ಕೇಂದ್ರ ప్రభుత్వದ ನಿರ್ಧಾರಕ್ಕೆ ಸಂಬಂಧಿಸಿದ ಮಹತ್ವದ ವಿಚಾರವಾಗಿರುವುದರಿಂದ, ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಕೇಂದ್ರದ ಮೇಲೆಯೂ ಒತ್ತಡ ತರಬೇಕು. ಜನಸಾಮಾನ್ಯರ ನೈಜ ಸಮಸ್ಯೆಗಳನ್ನು ಸಂಸದರ ಗಮನಕ್ಕೆ ತಲುಪಿಸುವ ಜವಾಬ್ದಾರಿಯನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ವೆಂಕಪ್ಪ ಗೌಡ ಅವರು ತಿಳಿಸಿದ್ದಾರೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!