Connect with us

BANGALORE

ಮಹಿಳೆಯರಿಗಾಗಿ ಚಪ್ಪಲಿ ಪ್ರತಿಭಟನೆ : ಬೆಂಗಳೂರಿನಲ್ಲಿ ಅಕ್ಟೋಬರ್ 8 ರಂದು ಸಿಇಒ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ; CJP ಕ್ರಮ

Published

on

ಬೆಂಗಳೂರು: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತೆಯರಿಗೆ ದೆಹಲಿ ಪೊಲೀಸರು ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಗಂಭೀರ ಆರೋಪ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಕ್ರಮಗಳನ್ನು ಖಂಡಿಸಿ, ಕಾಕ್ರೋಚ್ ಜನತಾ ಪಾರ್ಟಿ (CJP) ವತಿಯಿಂದ ನಾಳೆ (ಅಕ್ಟೋಬರ್ 8) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿನೂತನ ‘ಮಹಿಳೆಯರಿಗಾಗಿ ಚಪ್ಪಲಿ ಪ್ರತಿಭಟನೆ’ ಹಮ್ಮಿಕೊಳ್ಳಲಾಗಿದೆ.

ನಾಳೆ ಬೆಳಗ್ಗೆ 10:30 ರಿಂದ ಫ್ರೀಡಂ ಪಾರ್ಕ್‌ನಲ್ಲಿ ಈ ಪ್ರತಿಭಟನಾ ಸಭೆ ಹಾಗೂ ಕಾರ್ಯಕ್ರಮಗಳು ಆರಂಭವಾಗಲಿವೆ.

ಪ್ರತಿಭಟನೆಯ ಪ್ರಮುಖ ಮುಖ್ಯಾಂಶಗಳು:

ಪೀಪಲ್ಸ್ ಟ್ರಿಬ್ಯುನಲ್ (ಜನಾಭಿಪ್ರಾಯ ಸಭೆ): ಚಪ್ಪಲಿ ಪ್ರತಿಭಟನೆಗೂ ಮುನ್ನ, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ಹೆಸರು ಕೈಬಿಡಲಾದ ಕನ್ನಡಿಗರೊಂದಿಗೆ ಸಂವಾದ ನಡೆಸಲು ಜನಾಭಿಪ್ರಾಯ ಸಭೆಯನ್ನು ಆಯೋಜಿಸಲಾಗಿದೆ.

ಮಹಿಳಾ ಪತ್ರಕರ್ತೆಯರ ಪರ ಒಗ್ಗಟ್ಟು: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಹಾಗೂ ಅವರ ಪರವಾಗಿ ದನಿಯೆತ್ತಲು ಈ ಚಪ್ಪಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. “ನಮ್ಮ ಮಹಿಳೆಯರ ಒಗ್ಗಟ್ಟಿಗಾಗಿ ಚಪ್ಪಲ್ ಪ್ರತಿಭಟನೆ” ನಡೆಯಲಿದೆ. “ನಿಮ್ಮೆಲ್ಲರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಡಲು ಎದುರು ನೋಡುತ್ತಿದ್ದೇವೆ!” ಎಂದು ರಾಂಕಾ ಹೇಳಿದ್ದಾರೆ.

CJP ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ರಾಂಕಾ ಅವರ ಪೋಸ್ಟ್ ಅನ್ನು ಹಂಚಿಕೊಂಡು “ಅಕ್ಟೋಬರ್ 8 ರಂದು ಬೆಂಗಳೂರಿನಲ್ಲಿ ಸಿಗೋಣ!” ಎಂದು ಹೇಳಿದ್ದಾರೆ. 

ಪ್ರಮುಖರ ಭಾಗಿ: CJP ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸಹ-ಸಂಚಾಲಕ ಅಶುತೋಷ್ ರಾಂಕಾ, ವಕ್ತಾರ ಸೌರವ್ ದಾಸ್ ಹಾಗೂ ಖ್ಯಾತ ನಟ ಪ್ರಕಾಶ್ ರಾಜ್ ಸೇರಿದಂತೆ ವಿವಿಧ ನಾಗರಿಕ ಸಮಾಜ ಮತ್ತು ಯುವ ಸಂಘಟನೆಗಳ ಪ್ರಮುಖರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಮುಂದಿನ ಹೆಜ್ಜೆ: ಮತದಾರರ ಪಟ್ಟಿ ಅಕ್ರಮಗಳನ್ನು ವಿರೋಧಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ CJP ಆಗ್ರಹಿಸುತ್ತಿದ್ದು, ಬೆಂಗಳೂರಿನ ಪ್ರತಿಭಟನೆಯ ಬೆನ್ನಲ್ಲೇ ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕೂಡ ಸಂಘಟನೆ ಯೋಜಿಸಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

BANGALORE

‘ವೋಟ್ ಚೋರಿ’ ವಿರುದ್ಧ ಬೆಂಗಳೂರಿನಲ್ಲಿ ಜನತಾ ನ್ಯಾಯಾಲಯ ಸಮಾವೇಶ – ಎಸ್‌ಐಆರ್ (SIR) ರದ್ದತಿಗೆ ಆಗ್ರಹ

Published

on

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಕ್ಟೋಬರ್ 8ರಂದು ಬೃಹತ್ ಪ್ರತಿಭಟನೆ ಮತ್ತು ‘ಜನತಾ ನ್ಯಾಯಾಲಯ’ ಸಮಾವೇಶವು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಮಾವೇಶದಲ್ಲಿ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ, ಸಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಭಿಜಿತ್ ದೀಪ್ಕೆ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್ ಭಾಗವಹಿಸಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಈ ಸಮಾವೇಶದ ಪ್ರಮುಖ ಭಾಷಣಗಳ ಸಬ್‌ಟೈಟಲ್ ಸಹಿತ ವಿಶೇಷ ವರದಿ ಇಲ್ಲಿದೆ:

ಧ್ರುವ್ ರಾಠಿ: “ಸರ್ಕಾರ ಬದಲಿಸಲು ಬಂದಿಲ್ಲ, ಇದು ಪ್ರತಿಯೊಬ್ಬ ನಾಗರಿಕನ ಹೋರಾಟ”

ಮುಖ್ಯಾಂಶಗಳು:

ಜರ್ಮನಿಯಲ್ಲಿ ವಾಸವಿರುವ ಖ್ಯಾತ ಯೂಟ್ಯೂಬರ್ ಹಾಗೂ ರಾಜಕೀಯ ವಿಶ್ಲೇಷಕ ಧ್ರುವ್ ರಾಠಿ ಅವರು ತಮ್ಮ ಜೀವನದ ಮೊದಲ ಪ್ರತಿಭಟನೆಯಲ್ಲಿ ಮಾತನಾಡಿದರು.

“ನಾನು ಸರ್ಕಾರ ಬದಲಿಸಲು ಬಂದಿಲ್ಲ. ನನಗೆ ಎಲಾನ್ ಮಸ್ಕ್ ಅಥವಾ ಸೊರೊಸ್ ಯಾವುದೇ ಹಣ ನೀಡಿಲ್ಲ. ಇದು ಎಲ್ಲ ನಾಗರಿಕರ ಮೇಲೂ ಪರಿಣಾಮ ಬೀರುವ ವಿಚಾರ” ಎಂದು ಸ್ಪಷ್ಟಪಡಿಸಿದರು.

ಪಶ್ಚಿಮ ಬಂಗಾಳದಲ್ಲಿ 70 ಲಕ್ಷ ಹಾಗೂ ಬಿಹಾರದಲ್ಲಿ 75 ಲಕ್ಷ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

“ಬಿಜೆಪಿ ಮತದಾರರಿಗೂ ನಾನು ಹೇಳುತ್ತೇನೆ, ಈ ಹೋರಾಟವನ್ನು ಬೆಂಬಲಿಸಿ. ಇದು ಯಾವುದೇ ಪಕ್ಷದಿಂದ ಬಂದ ಹೋರಾಟವಲ್ಲ, ನಾನು ಒಬ್ಬ ಸಾಮಾನ್ಯ ನಾಗರಿಕನಾಗಿ ಮಾತನಾಡುತ್ತಿದ್ದೇನೆ” ಎಂದರು.

ಕೊನೆಯ ಘೋಷಣೆ: ‘ವೋಟ್ ಚೋರ್, ಗದ್ದಿ ಛೋಡ್’ ಹಾಗೂ ‘ಭಾರತ್ ಮಾತಾ ಕಿ ಜೈ’.

ಅಭಿಜಿತ್ ದೀಪ್ಕೆ: “SIR ಪ್ರಕ್ರಿಯೆ ಸಂಪೂರ್ಣ ರದ್ದಾಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ”

ಮುಖ್ಯಾಂಶಗಳು:

ಸಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಭಿಜಿತ್ ದೀಪ್ಕೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಹರಿಹಾಯ್ದರು.

“ದೇಶ ಉಳಿಯುವುದು ವೋಟ್ ಉಳಿದರೆ ಮಾತ್ರ. ಮತ ಹೋದರೆ ಎಲ್ಲವನ್ನೂ ಮರೆತಂತೆ ಆಗುತ್ತದೆ. ನಮ್ಮ ಹೋರಾಟ ಕೇವಲ ರಾಜೀನಾಮೆಗಷ್ಟೇ ಅಲ್ಲ, SIR ಪ್ರಕ್ರಿಯೆಯನ್ನೇ ರದ್ದುಪಡಿಸುವವರೆಗೆ ಮುಂದುವರಿಯಲಿದೆ” ಎಂದರು.

“ಬಡವರು, ಯುವಕರು ಮತ್ತು ವೋಟ್ ಮಾಡದವರ ಮತಗಳನ್ನು ತೆಗೆದುಹಾಕುವ ಮೂಲಕ ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸುವುದು ಬಿಜೆಪಿಯ ಗುರಿಯಾಗಿದೆ” ಎಂದು ಆರೋಪಿಸಿದರು.

ಗಾಂಧಿ, ಅಂಬೇಡ್ಕರ್ ಮತ್ತು ನೆಹರು ಅವರ ಕೊಡುಗೆಯನ್ನು ಸ್ಮರಿಸುತ್ತಾ, ಪ್ರಜಾಪ್ರಭುತ್ವವನ್ನು ಮರಳಿ ಪಡೆಯಲು ರಸ್ತೆಗಳೇ ನಮ್ಮ ವೇದಿಕೆ ಎಂದರು.

ಕೊನೆಯ ಘೋಷಣೆ: ‘ಗ್ಯಾನು, ನಿನ್ನ ಸರದಿ ಬಂತು’.

ಪ್ರಕಾಶ್ ರಾಜ್: “ಪ್ರಜೆಗಳನ್ನು ಕೊಲ್ಲಲು ಸಾಧ್ಯವಿಲ್ಲ, ಅದಕ್ಕೇ ಅವರ ವೋಟುಗಳನ್ನು ತೆಗೆದಿದ್ದಾರೆ”

ಮುಖ್ಯಾಂಶಗಳು:

ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಸಮಾವೇಶದಲ್ಲಿ ಮಾತನಾಡಿ, ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

“ಆದಿವಾಸಿಗಳು, ಬಡವರು ಮತ್ತು ಮುಸ್ಲಿಮರ ವೋಟುಗಳನ್ನು ತೆಗೆದಿದ್ದಾರೆ. ಪ್ರಜೆಗಳನ್ನು ಕೊಲ್ಲುವುದಕ್ಕೆ ಸಾಧ್ಯವಿಲ್ಲ, ಅದಕ್ಕೇ ಅವರ ವೋಟುಗಳನ್ನು ತೆಗೆದಿದ್ದಾರೆ” ಎಂದು ತೀವ್ರವಾಗಿ ಆರೋಪಿಸಿದರು.

“ಗ್ಯಾನೇಶ್ ಕುಮಾರ್ ಹೋದರೆ ಮತ್ತೊಬ್ಬ ಅಜ್ಞಾನೇಶ್ ಬರುತ್ತಾನೆ. ನಮಗೆ SIR ರದ್ದಾಗಬೇಕು. ಕಳ್ಳ ಗ್ಯಾನೇಶ್ ವಿಚಾರಣೆ ನಡೆಯಬೇಕು, ಅವರ ಮೇಲೆ ಕೇಸ್ ದಾಖಲಾಗಬೇಕು” ಎಂದು ಆಗ್ರಹಿಸಿದರು.

“ನಾವು ಯಾವುದೇ ರಾಜಕೀಯ ಪಕ್ಷವಲ್ಲ, ಈ ದೇಶದ ಪ್ರಜೆಗಳು. SIR ರದ್ದುಗೊಳಿಸಿ ಜನರ ಘನತೆ ಮತ್ತು ಹಕ್ಕನ್ನು ಮರಳಿಸುವವರೆಗೆ ಶಾಂತಿಯುತ ಹೋರಾಟ ಮುಂದುವರಿಯಲಿದೆ” ಎಂದು ಘೋಷಿಸಿದರು.

ಈ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮೂರೂ ಗಣ್ಯರು, ಮತದಾರರ ಪಟ್ಟಿಯ ಪರಿಷ್ಕರಣೆಯ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತೀವ್ರವಾಗಿ ಖಂಡಿಸಿದ್ದು, SIR ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವವರೆಗೆ ತಮ್ಮ ಶಾಂತಿಯುತ ಹೋರಾಟ ನಿಲ್ಲುವುದಿಲ್ಲ ಎಂದು ಒಮ್ಮತದಿಂದ ಎಚ್ಚರಿಕೆ ನೀಡಿದ್ದಾರೆ

Continue Reading

arrest

8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬೆಂಗಳೂರಿನ ವಿದ್ಯಾರ್ಥಿನಿಯರು ಪತ್ತೆ: ಒಬ್ಬಳು ಗರ್ಭಿಣಿ !

Published

on

ಬೆಂಗಳೂರು: ರಾಜಧಾನಿಯ ವಿದ್ಯಾರಣ್ಯಪುರದಿಂದ ಕಳೆದ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರನ್ನು ಸಿಐಡಿ (CID) ಅಧಿಕಾರಿಗಳು ಸುರಕ್ಷಿತವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ನಾಪತ್ತೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಪತ್ತೆಯಾದ ಯುವತಿಯರು.

ಪ್ರಕರಣದ ಹಿನ್ನೆಲೆ: ಕಳೆದ ಜನವರಿ 31 ರಂದು ಕಾಲೇಜಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಇಬ್ಬರೂ ವಿದ್ಯಾರ್ಥಿನಿಯರು ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಸ್ಥಳೀಯ ಪೊಲೀಸರ ಆರಂಭಿಕ ತನಿಖೆಯಲ್ಲಿ ಯಾವುದೇ ಮಹತ್ವದ ಸುಳಿವು ಸಿಗಲಿಲ್ಲ. ಈ ನಡುವೆ ಇಬ್ಬರೂ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದಾಗ ಅಲ್ಲಿನ ಮಹಿಳೆಯೊಬ್ಬರ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದ ಫೋಟೋ ಲಭ್ಯವಾಗಿತ್ತು.

ತನಿಖೆ ವಿಳಂಬವಾದ ಹಿನ್ನೆಲೆಯಲ್ಲಿ ತನಿಷ್ಕಾ ಅವರ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಹೈಕೋರ್ಟ್, ತನಿಖೆಯ ಜವಾಬ್ದಾರಿಯನ್ನು ಸಿಐಡಿಗೆ ವರ್ಗಾಯಿಸಿ ಆದೇಶಿಸಿತ್ತು.

ಸುಳ್ಳು ಹೇಳಿ ಯುವಕನ ಜೊತೆ ತೆರಳಿದ್ದ ಯುವತಿಯರು: ಮನೆಯಲ್ಲಿದ್ದ ಕೌಟುಂಬಿಕ ಒತ್ತಡಕ್ಕೆ ಹೆದರಿ ಹೊರಬಂದಿದ್ದ ತನಿಷ್ಕಾ ಮತ್ತು ತೇಜಸ್ವಿನಿಗೆ ಮಲೆ ಮಹದೇಶ್ವರ ಬೆಟ್ಟದ ಆವರಣದಲ್ಲಿ ಕನಕಪುರ ಮೂಲದ ಯುವಕನೊಬ್ಬನ ಪರಿಚಯವಾಗಿತ್ತು. “ನಾವಿಬ್ಬರೂ ಅನಾಥ ಅಕ್ಕ-ತಂಗಿಯರು, ನಮಗೆ ಯಾರೂ ಇಲ್ಲ” ಎಂದು ಯುವತಿಯರು ಸುಳ್ಳು ಹೇಳಿದ್ದರು. ಇದನ್ನು ನಂಬಿದ ಯುವಕ ಇಬ್ಬರನ್ನೂ ತನ್ನ ಮನೆಗೆ ಕರೆದೊಯ್ದಿದ್ದನು. ಬಳಿಕ ಯುವಕ ತನಿಷ್ಕಾಳನ್ನು ಮದುವೆಯಾಗಿದ್ದು, ತೇಜಸ್ವಿನಿಯನ್ನು ತಂಗಿಯಂತೆ ತನ್ನ ಮನೆಯಲ್ಲೇ ಇರಿಸಿಕೊಂಡಿದ್ದನು.

ಸಿಐಡಿ ಬಲೆಗೆ ಬಿದ್ದಿದ್ದು ಹೇಗೆ? ಇತ್ತೀಚೆಗೆ ತನಿಷ್ಕಾ ಹೊಸ ಸಿಮ್ ಕಾರ್ಡ್‌ ಪಡೆಯಲು ತನ್ನ ಮೂಲ ಆಧಾರ್ ಕಾರ್ಡ್ ನೀಡಿದ್ದಳು. ಸಿಐಡಿ ಅಧಿಕಾರಿಗಳು ಈಗಾಗಲೇ ಈ ಆಧಾರ್ ಸಂಖ್ಯೆಯ ಮೇಲೆ ತೀವ್ರ ನಿಗಾ ವಹಿಸಿದ್ದರಿಂದ, ಟೆಲಿಕಾಂ ಸರ್ವಿಸ್ ಪ್ರೊವೈಡರ್ ಮೂಲಕ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ರವಾನೆಯಾಯಿತು. ಆಧಾರ್ ಮಾಹಿತಿ ಹಾಗೂ ನೆಟ್‌ವರ್ಕ್ ಲೊಕೇಶನ್ ಬೆನ್ನತ್ತಿದ ಸಿಐಡಿ ತಂಡ, ಇಬ್ಬರೂ ಯುವತಿಯರಿದ್ದ ಜಾಗವನ್ನು ಪತ್ತೆಹಚ್ಚಿ ಅವರನ್ನು ವಶಕ್ಕೆ ಪಡೆದಿದೆ.

ಪ್ರಸ್ತುತ ತನಿಷ್ಕಾ ಗರ್ಭಿಣಿಯಾಗಿದ್ದು, ಸಿಐಡಿ ಪೊಲೀಸರು ಇಬ್ಬರೂ ಯುವತಿಯರನ್ನು ಇಂದು ಹೈಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

Continue Reading

BANGALORE

ಬೆಳ್ತಂಗಡಿಯ ಯುವ ವಕೀಲನ ವಿರುದ್ಧ ಬೆಂಗಳೂರಿನಲ್ಲಿ FIR ದಾಖಲು: ಮದುವೆಯಾಗುವುದಾಗಿ ನಂಬಿಸಿ ವಂಚನೆ, ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ

Published

on

ಬೆಳ್ತಂಗಡಿ/ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಮದುವೆಯಾಗಲು ನಿರಾಕರಿಸಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕಟ್ಟಿಲ್ಕೊಡಿ ನಿವಾಸಿ ಜಿಜೊ ಪೌಲ್ ಅವರ ಮಗ, ಪ್ರಸ್ತುತ ಬೆಳ್ತಂಗಡಿ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಜಿತಿನ್ ಜಿಜೋ (26) ಎಂಬಾತನೇ ಆರೋಪಿಯಾಗಿದ್ದಾನೆ.

ಪ್ರಕರಣದ ಹಿನ್ನೆಲೆ: ಬೆಂಗಳೂರು ನಿವಾಸಿಯಾಗಿರುವ 36 ವರ್ಷದ ಮಹಿಳೆಯು 2021ರಲ್ಲಿ ವಿವಾಹವಾಗಿದ್ದು, ಪತಿಯೊಂದಿಗಿನ ಭಿನ್ನಾಭಿಪ್ರಾಯದ ಕಾರಣ ನ್ಯಾಯಾಲಯದಲ್ಲಿ ಗೃಹಹಿಂಸೆ (Domestic Violence) ದಾವೆ ಹೂಡಿದ್ದರು. ಈ ವೇಳೆ, 2025ರ ಫೆಬ್ರವರಿಯಲ್ಲಿ ಯಲಹಂಕದಲ್ಲಿ ವಾಸವಿದ್ದ ವಕೀಲ ಜಿತಿನ್ ಜಿಜೊ ಪರಿಚಯವಾಗಿ, ಅವರನ್ನೇ ತಮ್ಮ ಪ್ರಕರಣದ ವಕೀಲರನ್ನಾಗಿ ನೇಮಿಸಿಕೊಂಡಿದ್ದರು.

ಪ್ರಕರಣದ ವಿಚಾರವಾಗಿ ಮಾತನಾಡುತ್ತಾ ಜಿತಿನ್ ಜಿಜೋ ಮಹಿಳೆಯನ್ನು ಪ್ರೀತಿಸುವುದಾಗಿ ತಿಳಿಸಿ, ಪತಿಯಿಂದ ಶೀಘ್ರವೇ ವಿಚ್ಛೇದನ ಕೊಡಿಸಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಅಲ್ಲದೆ ಮಹಿಳೆ ವಾಸವಿದ್ದ ಕಟ್ಟಡದ 3ನೇ ಮಹಡಿಯಲ್ಲಿ ಬಾಡಿಗೆಗೆ ಮನೆ ಪಡೆದು, ಆಗಾಗ್ಗೆ ಅವರ ಮನೆಗೆ ಬಂದು ಆಕೆಯ ಇಷ್ಟವಿಲ್ಲದಿದ್ದರೂ ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದ ಎನ್ನಲಾಗಿದೆ.

ಸಂಶಯ, ಸಾಕ್ಷ್ಯ ನಾಶ ಹಾಗೂ ಕೊಲೆಗೆ ಯತ್ನ: 2026ರಲ್ಲಿ ಮಹಿಳೆಗೆ ಪತಿಯಿಂದ ವಿಚ್ಛೇದನ ಲಭಿಸಿದ ಬಳಿಕ, ಜಿತಿನ್ ಆಕೆಯ ಮೇಲೆ ಅನುಮಾನ ಪಡಲು ಪ್ರಾರಂಭಿಸಿ ನಿಂದಿಸುತ್ತಿದ್ದ. ಸೆಪ್ಟೆಂಬರ್ 2 ರಂದು ಮಹಿಳೆಯ ಮನೆಗೆ ಬಂದ ಆರೋಪಿ, ಆಕೆಯ ಮೊಬೈಲ್‌ನಲ್ಲಿದ್ದ ‘Signal App’ ಸಂಭಾಷಣೆ ಹಾಗೂ ಮದುವೆಯ ಭರವಸೆ ನೀಡಿದ್ದ ಪ್ರಮುಖ ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿಹಾಕಿದ್ದ.

ಇದನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಆರೋಪಿ, “ನನ್ನ ವಕೀಲ ವೃತ್ತಿಗೆ ಅವಮಾನವಾಗುತ್ತದೆ, ನಿನ್ನನ್ನು ಕೊಲ್ಲುತ್ತೇನೆ” ಎಂದು ಬೆದರಿಕೆಯೊಡ್ಡಿ, ಮೈಮೇಲಿದ್ದ ಬಟ್ಟೆ ಹರಿದು, ಮುಖ, ಎದೆ, ಬೆನ್ನಿನ ಭಾಗಗಳಿಗೆ ನಿರಂತರವಾಗಿ ಹೊಡೆದು, ದೇಹಕ್ಕೆ ಕಚ್ಚಿ ವಿಕೃತ ಮೆರೆದಿದ್ದಾನೆ. ಅಲ್ಲದೆ ಕೋಣೆಯಲ್ಲಿದ್ದ ಸ್ಟ್ಯಾಂಡ್ ಫ್ಯಾನ್‌ನಿಂದ ಹಲ್ಲೆ ನಡೆಸಿ, ವೇಲ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲ್ಲಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಹೇಗೋ ಆತನಿಂದ ತಪ್ಪಿಸಿಕೊಂಡು ಓಡಿಬಂದು ಸಮೀಪದ ಎನ್‌ಆರ್‌ಆರ್ (N.R.R) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಪೊಲೀಸ್ ದೂರು – ಆರೋಪಿ ನಾಪತ್ತೆ: ಘಟನೆಗೆ ಸಂಬಂಧಿಸಿ ಸಂತ್ರಸ್ತೆ ನೀಡಿದ ದೂರಿನನ್ವಯ ಸೆಪ್ಟೆಂಬರ್ 3 ರಂದು ಬಾಗಲಗುಂಟೆ ಪೊಲೀಸರು ಜಿತಿನ್ ಜಿಜೊ ವಿರುದ್ಧ BNS-2023 ರ ವಿವಿಧ ಸೆಕ್ಷನ್‌ಗಳಡಿ (u/s 69, 126(2), 115(2), 118(1), 74, 351(2), 352, 238) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಜಿತಿನ್ ಜಿಜೊ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗೆ ಜಾಲ ಬೀಸಿದ್ದಾರೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!