arrest
ವಿಮಾನದೊಳಗೆ ಹೈಡ್ರಾಮಾ: ಸಿಜೆಪಿ ನಾಯಕರನ್ನು ದಿಢೀರ್ ವಶಕ್ಕೆ ಪಡೆಯಲು ವಿಮಾನದಲ್ಲೇ ಸುತ್ತುವರಿದ ಮಹಿಳಾ ಪೊಲೀಸರು! ಕಾರಣ ಏನು ?
ದೆಹಲಿ: ಮುಂಬೈ ಹಾಗೂ ಬೆಂಗಳೂರಿನ ಬಳಿಕ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ಮಂತರ್ನಲ್ಲಿ ಆಯೋಜಿಸಲಾಗಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಾಯಕರ ಪ್ರತಿಭಟನೆಗೂ ಮುನ್ನವೇ ಹೈಡ್ರಾಮಾ ನಡೆದಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಂಬೈನಿಂದ ಆಗಮಿಸಿದ್ದ ಸಿಜೆಪಿ ಸಂಸ್ಥಾಪಕ ಸೇರಿದಂತೆ ಪ್ರಮುಖ ನಾಯಕರನ್ನು ದೆಹಲಿ ವಿಮಾನ ನಿಲ್ದಾಣದಲ್ಲೇ ದಿಢೀರ್ ವಶಕ್ಕೆ ಪಡೆಯಲಾಗಿದೆ. ಅದರಲ್ಲೂ, ಈ ಕಾರ್ಯಾಚರಣೆಗೆ ದೆಹಲಿ ಪೊಲೀಸರು ಉದ್ದೇಶಪೂರ್ವಕವಾಗಿಯೇ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದು ವಿಶೇಷ ಚರ್ಚೆಗೆ ಗ್ರಾಸವಾಗಿದೆ.
ಮುಂಬೈನಿಂದ ಹೊರಟ ಏರ್ ಇಂಡಿಯಾ ವಿಮಾನ ದೆಹಲಿ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆಯೇ, ವಿಮಾನದೊಳಗೆ ನುಗ್ಗಿದ ಮಹಿಳಾ ಪೊಲೀಸ್ ಸಿಬ್ಬಂದಿ, ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಹಾಗೂ ಅಶುತೋಷ್ ರಂಕಾ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ಮಹಿಳಾ ಪೊಲೀಸರ ಬಳಕೆ ಹಿಂದಿನ ರಣತಂತ್ರವೇನು?
ದೀಪ್ಕೆ ಮತ್ತು ತಂಡವನ್ನು ವಿಮಾನದೊಳಗೆಯೇ ಬಂಧಿಸಲು ಮಹಿಳಾ ಸಿಬ್ಬಂದಿಯನ್ನು ಬಳಸಿಕೊಂಡಿರುವುದರ ಹಿಂದೆ ದೆಹಲಿ ಪೊಲೀಸರ ಎಚ್ಚರಿಕೆಯ ಹೆಜ್ಜೆ ಇದೆ ಎನ್ನಲಾಗಿದೆ. ವಿಮಾನದ ಒಳಭಾಗದ ದಾರಿ (Aisles) ಅತ್ಯಂತ ಕಿರಿದಾಗಿದ್ದು, ಪುರುಷ ಪೊಲೀಸರನ್ನು ಬಳಸಿದರೆ ತಳ್ಳಾಟ, ವಾಗ್ವಾದ ಅಥವಾ ಬಲಪ್ರಯೋಗದಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ದೊಡ್ಡ ಮಟ್ಟದ ನೆಗೆಟಿವ್ ಸುದ್ದಿಯಾಗುವ ಸಾಧ್ಯತೆಯಿತ್ತು.
ಜತೆಗೆ, ಕಳೆದ ಜುಲೈ 20ರಂದು ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಪುರುಷ ಪೊಲೀಸರು ವಿದ್ಯಾರ್ಥಿನಿಯರು ಹಾಗೂ ಸಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಪ್ರತಿಭಟನೆಯೊಂದರಲ್ಲಿ ಪ್ರತಿಭಟನಾಕಾರರು ಮಹಿಳಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂಬ ಅಪಪ್ರಚಾರವೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿಂದಿನ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಎಚ್ಚೆತ್ತ ಪೊಲೀಸರು ಈ ಬಾರಿ ಅತ್ಯಂತ ತಂತ್ರಗಾರಿಕೆಯಿಂದ ಮಹಿಳಾ ಸಿಬ್ಬಂದಿಯನ್ನೇ ಕಳುಹಿಸಿ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.
ವಿಮಾನದೊಳಗೆ ನಾಯಕರ ಆಕ್ರೋಶ, ವೀಡಿಯೊ ವೈರಲ್
ಮಹಿಳಾ ಪೊಲೀಸರು ವಿಮಾನದೊಳಗೆ ಬಂದು ವಶಕ್ಕೆ ಪಡೆದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ ಅಭಿಜಿತ್ ದೀಪ್ಕೆ, ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸಿದರು. “ವಿಮಾನದಿಂದ ಕೆಳಗೆ ಇಳಿಯುವವರೆಗೆ ಕಾಯಬಹುದಿತ್ತಲ್ಲವೇ? ದೇಶ ಎತ್ತ ಸಾಗುತ್ತಿದೆ ನೀವೇ ನೋಡಿ, ನಮ್ಮನ್ನು ನೇರವಾಗಿ ಬಂಧಿಸಲು ವಿಮಾನದೊಳಗೆ ಬಂದಿದ್ದಾರೆ. ಇಂತಹ ಸರ್ವಾಧಿಕಾರಿ ಧೋರಣೆಯನ್ನು ಇಂದಿರಾ ಗಾಂಧಿಯೂ ಮಾಡಿರಲಿಲ್ಲ” ಎಂದು ದೀಪ್ಕೆ ಆಕ್ರೋಶ ಹೊರಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಣ್ಣ ಮಟ್ಟದ ವಾಗ್ಯುದ್ದವನ್ನು ಹೊರತುಪಡಿಸಿ, ಯಾವುದೇ ದೊಡ್ಡ ಗೊಂದಲಕ್ಕೆ ಅವಕಾಶ ನೀಡದೆ ಪೊಲೀಸರು ದೀಪ್ಕೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೆ ಒತ್ತಾಯಿಸಿ ಸಿಜೆಪಿ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಬಂಧನದಿಂದ ದೆಹಲಿಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
arrest
17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ದಸ್ತಗಿರಿ
ಬಂಟ್ವಾಳ: ಸುಮಾರು 17 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ಮೂಡಬಿದ್ರೆ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ ತಲಪಾಡಿ ನಿವಾಸಿ ಹನೀಫ್ @ ಕೊಕ್ಕಡ ಹನೀಫ್ (57) ಬಂಧಿತ ಆರೋಪಿ.
ಪ್ರಕರಣದ ಹಿನ್ನೆಲೆ: ಬಂಟ್ವಾಳ ನಗರ ಪೊಲೀಸ್ ಠಾಣೆಯ ಅ.ಕ್ರ: 163/2009 ರಂತೆ ಕೆ.ಇ. ಕಾಯ್ದೆ (KE Act) ಕಲಂ: 11, 13, 32, 33, 34, 38(a), 43 ರ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದು, ಕಳೆದ 17 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಅಲ್ಲದೆ, ಈತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ 143/2023 ಕಲಂ 143, 147, 448, 427, 436, 307, 149 ಐಪಿಸಿ (IPC) ಪ್ರಕರಣದಲ್ಲೂ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿತ್ತು.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಎಸ್ಐ ಬಶೀರ್, ಹೆಡ್ ಕಾನ್ಸ್ಸ್ಟೇಬಲ್ಗಳಾದ ಜಗದೀಶ್, ಸಂತೋಷ್ ಹಾಗೂ ಪಿಸಿ ಗವಿ ಸಿದ್ದಪ್ಪ ಅವರ ತಂಡವು ದಿನಾಂಕ 09/10/2026 ರಂದು ಮೂಡಬಿದ್ರೆಯ ಶಿರ್ತಾಡಿ ಎಂಬಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿದೆ.
ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
arrest
ಪುತ್ತೂರು: ಅಕ್ರಮ ಗೋಸಾಗಾಟ ಪ್ರಕರಣ – ಆರೋಪಿತನ ಮನೆ ಹಾಗೂ ಕೊಟ್ಟಿಗೆ ಜಪ್ತಿ!
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಜೂರುಪಂಜ ದೇವಸ್ಯ ಬಳಿ ಅಕ್ಟೋಬರ್ 5 ರಂದು ಬೆಳಕಿಗೆ ಬಂದಿದ್ದ ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಪ್ರಮುಖ ಆರೋಪಿತನಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆಯನ್ನು ನಿಯಮಾನುಸಾರ ಜಪ್ತಿ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ:
ದಿನಾಂಕ 05.10.2026 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಕುಂಜೂರುಪಂಜ ದೇವಸ್ಯ ಬಳಿಯಿಂದ ಬುಳೇರಿಕಟ್ಟೆ ಮಾರ್ಗವಾಗಿ ಕೇರಳಕ್ಕೆ ಜಾನುವಾರುಗಳನ್ನು ಅಕ್ರಮವಾಗಿ ಹಾಗೂ ಅತ್ಯಂತ ಕ್ರೂರ ರೀತಿಯಲ್ಲಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ 11 ಗೋವುಗಳನ್ನು ರಕ್ಷಿಸಿದ್ದರು.
ವಾಹನದಲ್ಲಿ ಗೋವುಗಳ ಕಾಲುಗಳನ್ನು ಹಗ್ಗದಿಂದ ಬಿಗಿದು, ಯಾವುದೇ ಮುಕ್ತ ಅವಕಾಶವಿಲ್ಲದೆ ಅತ್ಯಂತ ಹಿಂಸಾತ್ಮಕ ಮತ್ತು ಅಮಾನವೀಯ ರೀತಿಯಲ್ಲಿ ಜಾನುವಾರುಗಳನ್ನು ತುರುಕಿಸಿ ಸಾಗಿಸಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಪೊಲೀಸರು ವಾಹನವನ್ನು ಅಡ್ಡಗಟ್ಟುತ್ತಿದ್ದಂತೆ, ಕತ್ತಲಲ್ಲಿ ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸದ್ರಿ ಜಾನುವಾರುಗಳನ್ನು ಅಗತ್ಯ ಪರವಾನಿಗೆ ಇಲ್ಲದೇ ಮಾರಾಟ ಮಾಡಿದ ಪುತ್ತೂರು ಆರ್ಯಾಪು ನಿವಾಸಿ ಶಿವಪ್ರಸಾದ್ (52) ಎಂಬಾತನನ್ನು ದಸ್ತಗಿರಿ ಮಾಡಲಾಗಿತ್ತು.
ಕಾನೂನು ಕ್ರಮ – ಮನೆ ಮತ್ತು ಕೊಟ್ಟಿಗೆ ಜಪ್ತಿ:
ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಅ.ಕ್ರ: 125/2026 ರ ಈ ಪ್ರಕರಣದಲ್ಲಿ, ತನಿಖೆ ಮುಂದುವರೆಸುತ್ತಾ ಪೊಲೀಸರು ಕಠಿಣ ಹೆಜ್ಜೆ ಇಟ್ಟಿದ್ದಾರೆ. ತನ್ನ ಮನೆಯಲ್ಲಿದ್ದ ಜಾನುವಾರುಗಳನ್ನು ಅಗತ್ಯ ದಾಖಲೆಪತ್ರಗಳನ್ನು ಪಡೆಯದೇ ಅಕ್ರಮವಾಗಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ, ಪ್ರಮುಖ ಆರೋಪಿತ ಶಿವಪ್ರಸಾದ್ ರವರಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆ ಪರಿಸರವನ್ನು ಅಧಿಕಾರಿಗಳು ದಿನಾಂಕ: 08.10.2026 ರಂದು ನಿಯಮಾನುಸಾರ ಜಪ್ತಿ ಮಾಡಿಕೊಂಡಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರ ತನಿಖೆ ತೀವ್ರಗೊಂಡಿದೆ.
arrest
ಮಂಗಳೂರು: ಕೋರಿಯರ್ ಮೂಲಕ ಎಂಡಿಎಂಎ ಸಾಗಾಟ; ₹1.58 ಕೋಟಿ ಮೌಲ್ಯದ ಮಾದಕವಸ್ತು ವಶ, ಮೂವರ ಬಂಧನ!
ಮಂಗಳೂರು: ನಗರದಲ್ಲಿ ನಿಷೇಧಿತ ಮಾದಕವಸ್ತುಗಳನ್ನು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಲು ಸಂಚು ರೂಪಿಸಿದ್ದ ದೊಡ್ಡ ಜಾಲವೊಂದನ್ನು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಉಳ್ಳಾಲ ತಾಲೂಕಿನ ಕುಂಪಲದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ₹1.58 ಕೋಟಿಗೂ ಅಧಿಕ ಮೌಲ್ಯದ ಬೃಹತ್ ಪ್ರಮಾಣದ ಎಂಡಿಎಂಎ (MDMA) ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯ ವಿವರ:
ಮಂಗಳೂರು ನಗರದಲ್ಲಿ ಸಾರ್ವಜನಿಕರನ್ನು, ವಿಶೇಷವಾಗಿ ಯುವ ಜನತೆಯನ್ನು ಗುರಿಯಾಗಿಸಿಕೊಂಡು ನಿಷೇಧಿತ ಎಂಡಿಎಂಎ ಮಾದಕವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಅಕ್ಟೋಬರ್ 08, 2026ರ ರಾತ್ರಿ 10:00 ಗಂಟೆಗೆ ಉಳ್ಳಾಲ ತಾಲೂಕು ಕುಂಪಲದ ಡಿಮಾರ್ಟ್ (D-Mart) ಬಳಿ ದಾಳಿ ನಡೆಸಿದ್ದಾರೆ.
ವಶಪಡಿಸಿಕೊಂಡ ಸೊತ್ತುಗಳ ವಿವರ:
ಅಪರಾಧ ವಸ್ತು: 1 ಕೆಜಿ 796.96 ಗ್ರಾಂ ಎಂಡಿಎಂಎ (ಅಂದಾಜು ಮೌಲ್ಯ ₹ 1,58,34,000/-)
ಇತರೆ ವಸ್ತುಗಳು: 3 ಮೊಬೈಲ್ ಫೋನ್ಗಳು, ಸಾಗಾಟಕ್ಕೆ ಬಳಸಿದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಹಾಗೂ ಆಟೋ ರಿಕ್ಷಾ, ಕೊರಿಯರ್ ರಟ್ಟಿನ ಬಾಕ್ಸ್ ಮತ್ತು ವಾಟರ್ ಪ್ಯೂರಿಫೈಯರ್.
ಒಟ್ಟು ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ: ₹ 1,63,84,000/-
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.
ಬಂಧಿತ ಆರೋಪಿಗಳ ವಿವರ:
ಅಬ್ದುಲ್ ಹಾಪೀಲ್ (25 ವರ್ಷ): ಅನೀಸಾ ಮಂಜಿಲ್, ಬೈದಲಾ ಪೋಸ್ಟ್, ಮಂಗಳ್ಪಾಡಿ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ. (ಈತನ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಪ್ರಕರಣ ದಾಖಲಾಗಿದೆ).
ಜಿಯಾವುಲ್ ಹಕ್ (30 ವರ್ಷ): ವಾಸ: # 1-12/1, ಎಂ.ಜೆ.ಎಂ.156, ಪಿ.ಬಾವ ಹೌಸ್, ಕಸಬಾ ಬೆಂಗ್ರೆ, ಕೂಳೂರು, ಮಂಗಳೂರು. (ಈತನ ವಿರುದ್ಧ ದುಬೈ ದೇಶದ ರಸ್-ಅಲ್-ಖೈಮಾ ಎಂಬಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ 3 ವರ್ಷ ಜೈಲು ಶಿಕ್ಷೆ ಅನುಭವಿಸಿ ಭಾರತಕ್ಕೆ ವಾಪಸಾಗಿರುವ ಹಿನ್ನೆಲೆಯಿದೆ).
ಅಲ್ತಾಫ್ (28 ವರ್ಷ): ಹಾಲಿ ವಾಸ: ಫ್ಲ್ಯಾಟ್ ನಂ. 201, ಆಯಿಷಾ ಅಪಾರ್ಟಮೆಂಟ್, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು (ಸ್ವಂತ ವಿಳಾಸ: ಸಿರಿಸೀಮೆ ನರ್ಸರಿ ಹತ್ತಿರ, ಫೈಸಲ್ ನಗರ, ಬಜಾಲ್ ಗ್ರಾಮ, ಜಲ್ಲಿಗುಡ್ಡೆ ಪೋಸ್ಟ್, ಮಂಗಳೂರು). (ಈತನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಪ್ರಕರಣವಿದೆ).
ವಿನೂತನ ಕೃತ್ಯ – ಪಂಜಾಬ್ನಿಂದ ವಾಟರ್ ಪ್ಯೂರಿಫೈಯರ್ ಒಳಗೆ ಸಾಗಾಟ!
ಆರೋಪಿಗಳು ಪಂಜಾಬ್ ರಾಜ್ಯದ ಅಮೃತಸರದಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸುತ್ತಿದ್ದರು. ಸಿಕ್ಕಿಬೀಳದಂತೆ ತಡೆಯಲು, ವಾಟರ್ ಪ್ಯೂರಿಫೈಯರ್ನ ನೀರು ಸಂಗ್ರಹವಾಗುವ ಒಳಭಾಗದಲ್ಲಿ ಎಂಡಿಎಂಎ ಅನ್ನು ಅತ್ಯಂತ ಸುರಕ್ಷಿತವಾಗಿ ಭದ್ರಪಡಿಸಿ, ಬಳಿಕ ಕೊರಿಯರ್ ಮೂಲಕ ಮಂಗಳೂರಿಗೆ ಕಳುಹಿಸುತ್ತಿದ್ದರು.
ನಂತರ ಈ ಮಾದಕವಸ್ತುವನ್ನು ಕೇರಳ ರಾಜ್ಯ ಹಾಗೂ ಮಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಆದರೆ, ಪೊಲೀಸರು ಆರಂಭಿಕ ಹಂತದಲ್ಲೇ ಕಾರ್ಯಾಚರಣೆ ನಡೆಸಿ ಈ ಅಂತರರಾಜ್ಯ ಜಾಲವನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala3 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala9 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident5 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
