Connect with us

Belthangady

ಧರ್ಮಸ್ಥಳ: ಅಡಿಕೆ ಮರದಿಂದ ದೊಂಟಿ ತಾಗಿ ವಿದ್ಯುತ್ ಸ್ಪರ್ಶ: ಚಿಕಿತ್ಸೆ ಫಲಕಾರಿಯಾಗದೆ ನಝೀರ್ ನಿಧನ

Published

on

ಬೆಳ್ತಂಗಡಿ: ಅಡಿಕೆ ಕೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ದೊಂಟಿ (ಕೋಲು) ತಾಗಿ ವಿದ್ಯುತ್ ಆಘಾತಕ್ಕೊಳಗಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಧರ್ಮಸ್ಥಳ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

ಧರ್ಮಸ್ಥಳ ಗ್ರಾಮದ ಅಜಿಕುರಿ ನಿವಾಸಿ ನಝೀರ್ (38) ಮೃತ ವ್ಯಕ್ತಿ. ಅವರು ಅಡಿಕೆ ಮರದ ಸಮೀಪದಲ್ಲೇ ಹಾದುಹೋಗಿದ್ದ ವಿದ್ಯುತ್ ತಂತಿಗೆ ಅಡಿಕೆ ಕೊಯ್ಯಲು ಬಳಸುತ್ತಿದ್ದ ದೊಂಟಿ ಆಕಸ್ಮಿಕವಾಗಿ ತಗುಲಿದ ಪರಿಣಾಮ ತೀವ್ರ ವಿದ್ಯುತ್ ಆಘಾತಕ್ಕೊಳಗಾಗಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Belthangady

ಸೌಜನ್ಯ ಪ್ರಕರಣ: ಹಿಂದೂ ಮುಖಂಡರ ದಿಢೀರ್ ಭೇಟಿ, ನ್ಯಾಯದ ಹೋರಾಟಕ್ಕೆ ಬೆಂಬಲ ಘೋಷಣೆ

Published

on

ಬೆಳ್ತಂಗಡಿ: ಧರ್ಮಸ್ಥಳದ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮರುತನಿಖೆಗೆ ಆದೇಶ ನೀಡಿರುವ ಬೆನ್ನಲ್ಲೇ, ಹೋರಾಟದ ವೇದಿಕೆ ಮತ್ತಷ್ಟು ಬಲಗೊಳ್ಳುತ್ತಿದೆ. ಇದರ ಭಾಗವಾಗಿ, ಸಂಘ ಪರಿವಾರದ ಪ್ರಮುಖ ಹಾಗೂ ಮಾಜಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಮತ್ತು ಹಿಂದೂ ಸಮಾಜದ ಹೋರಾಟಗಾರ ಹಾಗೂ ಹಿಂದೂ ಜಾಗರಣ ವೇದಿಕೆಯಲ್ಲಿ ಮುಂಚೂಣಿಯಲ್ಲಿದ್ದ ಕಾವೂರಿನ ಟಿಕ್ಕಿ ರವಿ ಅವರು ಬುಧವಾರ (ಅಕ್ಟೋಬರ್ 07) ಸೌಜನ್ಯ ಅವರ ಮನೆ ಹಾಗೂ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ದಿಢೀರ್ ಭೇಟಿ ನೀಡಿ, ಸೌಜನ್ಯ ನ್ಯಾಯದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.

ಸೌಜನ್ಯ ಮನೆ ಹಾಗೂ ಆರಾಧನಾ ಸ್ಥಳಕ್ಕೆ ಭೇಟಿ

ಬೆಳಗ್ಗೆ ಧರ್ಮಸ್ಥಳದಲ್ಲಿ ದುಷ್ಟರ ಅಟ್ಟಹಾಸಕ್ಕೆ ಬಲಿಯಾದ ಸೌಜನ್ಯಾಳ (Soujanya Case) ಸಮಾಧಿ ಸ್ಥಳ ಹಾಗೂ ಸೌಜನ್ಯ ಶಕ್ತಿಯ ಆರಾಧನಾ ಸಾನಿಧ್ಯಕ್ಕೆ ಭೇಟಿ ನೀಡಿದ ಕಲ್ಲಡ್ಕ ಕೃಷ್ಣಪ್ಪ ಪೂಜಾರಿ ಹಾಗೂ ಟಿಕ್ಕಿ ರವಿ ಅವರು, 14 ವರ್ಷಗಳ ಹಿಂದೆ ಕ್ರೂರತ್ಯಾಗಕ್ಕೊಳಗಾದ ಸೌಜನ್ಯಳ ಪ್ರತಿಮೆಗೆ ಪ್ರಾರ್ಥಿಸಿ ನಮನ ಸಲ್ಲಿಸಿದರು. ಬಳಿಕ ಸೌಜನ್ಯ ಅವರ ಮನೆಗೆ ತೆರಳಿ ತಾಯಿ ಕುಸುಮಾವತಿ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು. “ನಿಮ್ಮ ಹಾಗೂ ನಮ್ಮೆಲ್ಲರ ಮಗಳು ಸೌಜನ್ಯ ಶಕ್ತಿ ಸ್ವರೂಪಿಣಿಯಾಗಿದ್ದು, ಸೌಜನ್ಯಗೆ ಮಾತ್ರವಲ್ಲದೆ ಈ ಪ್ರದೇಶದಲ್ಲಿ ಅಸ್ವಾಭಾವಿಕವಾಗಿ ಮೃತಪಟ್ಟ ಎಲ್ಲರಿಗೂ ನ್ಯಾಯ ಸಿಗುವವರೆಗೆ ನಮ್ಮ ಧ್ವನಿ ನಿಮ್ಮೊಂದಿಗೆ ಇರಲಿದೆ” ಎಂದು ಅವರು ಭರವಸೆ ನೀಡಿದರು. ನಂತರ ಶ್ರೀಕ್ಷೇತ್ರ ಧರ್ಮಸ್ಥಳದ ಅಣ್ಣಪ್ಪ ಸ್ವಾಮಿಯ ಸಾನಿಧ್ಯಕ್ಕೆ ತೆರಳಿ ಸೌಜನ್ಯಳಿಗೆ ಹಾಗೂ ಇತರ ಅಸ್ವಾಭಾವಿಕವಾಗಿ ಸಾವಿಗೀಡಾದವರಿಗೆ ಹೆಸರೇ ಸೂಚಿಸುವ ಈ ಧರ್ಮದ ಸ್ಥಳದಲ್ಲಿ ಆದಷ್ಟು ಬೇಗ ನ್ಯಾಯ ಒದಗಿಸುವಂತೆ ಪ್ರಾರ್ಥಿಸಿದರು.

ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಭೇಟಿ ಮತ್ತು ಬೆಂಬಲ

ಕಳೆದ 14 ವರ್ಷಗಳಿಂದ ಜೀವಭಯ, ಮಾನಹಾನಿ. ಬಂಧನ, ಗಡಿಪಾರು ಹಾಗೂ ವಿವಿಧ ಮೊಕದ್ದಮೆಗಳನ್ನು ಲೆಕ್ಕಿಸದೆ ಸೌಜನ್ಯಗಾಗಿ ನಿರಂತರ ಹೋರಾಟ ನಡೆಸುತ್ತ ಬಂದಿರುವ ಪ್ರಮುಖ ಸಾಮಾಜಿಕ ನೇತಾರ, ಧಾರ್ಮಿಕ ಸೇನಾನಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ನಾಯಕರು ಭೇಟಿ ನೀಡಿದರು. ಸಮಾಜದಲ್ಲಿ ಅನ್ಯಾಯಗಳ ವಿರುದ್ಧ ಮೌನವಹಿಸುವವರ ಧೋರಣೆ ಹಾಗೂ ಪ್ರಸ್ತುತ ಬೆಳವಣಿಗೆಗಳ ಕುರಿತು ಸುದೀರ್ಘ ಮಾತುಕತೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರ ನೇತೃತ್ವದ ಹೋರಾಟವನ್ನು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯಲು ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ ಅವರು, ಅಕ್ಟೋಬರ್ 10ರಂದು ನಡೆಯಲಿರುವ ‘ನ್ಯಾಯದ ನಡಿಗೆ’ ಹಾಗೂ ನ್ಯಾಯವಾದಿಗಳಿಗೆ ಅಭಿನಂದನಾ ಸಭೆಯಲ್ಲಿ ಭಾಗವಹಿಸುವುದಾಗಿ ಭರವಸೆ ನೀಡಿದರು.

ಹೊಸ ರಾಜಕೀಯ ಮತ್ತು ಸಾಮಾಜಿಕ ಸಂಚಲನ

ಕೆಲ ಸಮಯಗಳ ಹಿಂದೆ ಆರ್‌ಎಸ್‌ಎಸ್ ಹಿರಿಯ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಸೌಜನ್ಯ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದು ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮರುತನಿಖೆಗೆ ಆದೇಶ ನೀಡಿತ್ತು. ಇದೀಗ ಡಾ. ಪ್ರಭಾಕರ ಭಟ್ ಅವರ ಆಪ್ತ ವಲಯದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಮತ್ತು ಹಿಂದೂ ಹೋರಾಟಗಾರ ಟಿಕ್ಕಿ ರವಿ ಅವರು ಸೌಜನ್ಯ ಹೋರಾಟಕ್ಕೆ ಬಹಿರಂಗವಾಗಿ ಧುಮುಕಿರುವುದು ಹಾಗೂ ಇತರ ಹಿಂದೂ ನಾಯಕರು ಕೈಜೋಡಿಸಲು ಮುಂದಾಗಿರುವುದು ಪ್ರಕರಣಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿದೆ. ಮುಂಬರುವ ದಿನಗಳಲ್ಲಿ ಸರಕಾರದ ತನಿಖೆ, ನ್ಯಾಯಾಂಗದ ಆದೇಶ, ಸಾರ್ವಜನಿಕ ಹೋರಾಟ ಯಾವ ರೀತಿಯ ಮಹತ್ವದ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Continue Reading

Belthangady

ಮಂಗಳೂರು: ಪಣಂಬೂರು ಸಮುದ್ರದಲ್ಲಿ ಹುಲಿವೇಷ ತರಬೇತಿಗೆ ಬಂದಿದ್ದ 14 ವರ್ಷದ ಬಾಲಕ ನೀರುಪಾಲು – ಕಡಲಲ್ಲಿ ಮುಳುಗಿ ಕಾಣೆ

Published

on

ಮಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಹುಲಿವೇಷ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲ್ಲೂಕಿನ 14 ವರ್ಷದ ಬಾಲಕನೊಬ್ಬ ಪಣಂಬೂರು ಸಮುದ್ರ ಕಿನಾರೆಯಲ್ಲಿ ಆಟವಾಡುವಾಗ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಕಾಣೆಯಾಗಿರುವ ದಾರುಣ ಘಟನೆ ವರದಿಯಾಗಿದೆ.

ಬೆಳ್ತಂಗಡಿ ತಾಲ್ಲೂಕಿನ ರೆಂಕೆದ ಗುತ್ತು, ಕಸಬಾ ಗ್ರಾಮದ ಶ್ರೇಯಸ್ ಎಸ್. ಕುಂಬಾರ (14) ಕಾಣೆಯಾದ ದುರ್ದೈವಿ ಬಾಲಕ. ಈತನ ತಂದೆ ಸೇಷಪ್ಪ ನೀಡಿದ ದೂರಿನ ಮೇರೆಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 127/2026 ಕಲಂ ಅಡಿಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಅಕ್ಟೋಬರ್ 04, 2026 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ಶ್ರೇಯಸ್ ಹಾಗೂ ಆತನ ನಾಲ್ವರು ಅಪ್ರಾಪ್ತ ಸ್ನೇಹಿತರು ದಸರಾ ಹಬ್ಬದ ಪ್ರಯುಕ್ತ ಮಂಗಳೂರಿನಲ್ಲಿ ಹುಲಿವೇಷ ಹಾಕುವ ತರಬೇತಿಗಾಗಿ ಬಂದಿದ್ದರು. ತರಬೇತಿ ಮುಗಿದ ನಂತರ ಎಲ್ಲರೂ ಸೇರಿ ಸ್ಟೇಟ್‌ ಬ್ಯಾಂಕ್‌ನಿಂದ ಪಣಂಬೂರು ಬೀಚ್‌ಗೆ ತೆರಳಿದ್ದಾರೆ.

ಸಂಜೆ ಸುಮಾರು 4:30 ರಿಂದ 5:00 ಗಂಟೆಯ ಸುಮಾರಿಗೆ ಅಲ್ಲಿನ ಕೂರಿಕಟ್ಟ ಸಮುದ್ರ ಕಿನಾರೆಗೆ ತೆರಳಿ ಆಟವಾಡುತ್ತಿದ್ದರು. ಈ ವೇಳೆ ಸಂಜೆ ಸುಮಾರು 6:00 ಗಂಟೆಗೆ ಶ್ರೇಯಸ್ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ನೀರಿನಲ್ಲಿ ಮುಳುಗಿದ್ದು, ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾನೆ.

ತಡವಾಗಿ ಬೆಳಕಿಗೆ ಬಂದ ಘಟನೆ:

ಘಟನೆ ನಡೆದ ದಿನ ಬಾಲಕನ ಸ್ನೇಹಿತರು ಭಯಭೀತರಾಗಿ ಈ ವಿಷಯವನ್ನು ಶ್ರೇಯಸ್‌ನ ಮನೆಯವರಿಗೆ ತಿಳಿಸಿರಲಿಲ್ಲ. ಬಳಿಕ ಮರುದಿನ ಅಂದರೆ ಅಕ್ಟೋಬರ್ 05, 2026 ರಂದು ಬೆಳಿಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಾಲಕನ ತಂದೆ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶೋಧ ಕಾರ್ಯ ಮುಂದುವರಿಕೆ:

ಕಾಣೆಯಾದ ಬಾಲಕನ ಪತ್ತೆಗಾಗಿ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಹಾಗೂ ಸಮುದ್ರ ವ್ಯಾಪ್ತಿ ಹೊಂದಿರುವ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದ್ದು, ನೆರವು ಕೋರಲಾಗಿದೆ. ಜೊತೆಗೆ ಲೈಫ್ ಗಾರ್ಡ್‌ಗಳು (ಜೀವ ರಕ್ಷಕರು), ಮುಳುಗು ತಜ್ಞರು ಮತ್ತು ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಸಮುದ್ರದಲ್ಲಿ ಶೋಧ ಕಾರ್ಯ ತೀವ್ರವಾಗಿ ಮುಂದುವರಿದಿದೆ.

Continue Reading

Belthangady

ಸೌಜನ್ಯ ಪ್ರಕರಣದ ಮರುತನಿಖೆಗೆ ರಚಿಸಲಾದ ಎಸ್‌ಐಟಿ ತಂಡಕ್ಕೆ ಆಕ್ಷೇಪ: ಶೇಖರ್ ಲಾಯಿಲ ಆಗ್ರಹ

Published

on

ಧರ್ಮಸ್ಥಳದ ಕುಖ್ಯಾತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗಾಗಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರವು ಐವರು ಹಿರಿಯ ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಆದರೆ, ಈ ಮಹತ್ವದ ತಂಡದಲ್ಲಿ ಕೆಲ ಅಧಿಕಾರಿಗಳ ನೇಮಕದ ವಿರುದ್ಧ ಸಾರ್ವಜನಿಕ ವಲಯ ಹಾಗೂ ಹೋರಾಟಗಾರರಿಂದ ತೀವ್ರ ಅಸಮಾಧಾನ ಮತ್ತು ವಿರೋಧ ವ್ಯಕ್ತವಾಗಿದೆ.

ಸಾಮಾಜಿಕ ಹೋರಾಟಗಾರರಾದ ಶೇಖರ್ ಲಾಯಿಲ ಅವರು ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಹೊಸ ತನಿಖಾ ತಂಡದಿಂದ ನಿಷ್ಪಕ್ಷಪಾತ ನ್ಯಾಯ ಸಿಗುವ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.

ವಿವಾದಕ್ಕೆ ಮುಖ್ಯ ಕಾರಣಗಳು:

ಅಧಿಕಾರಿಗಳ ಆಯ್ಕೆಯ ಬಗ್ಗೆ ಅತೃಪ್ತಿ: 14 ವರ್ಷಗಳ ಹಿಂದಿನ ಈ ಪ್ರಕರಣದ ಹಿಂದಿನ ತನಿಖೆಗಳು (ಸಿಐಡಿ, ಸಿಬಿಐ) ಅಸಮರ್ಪಕವಾಗಿದ್ದವು ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ ಹೊಸ ತಂಡದಿಂದ ತನಿಖೆ ನಡೆಸಲು ಆದೇಶಿಸಿತ್ತು. ಆದರೆ, ಪ್ರಸ್ತುತ ರಚಿಸಲಾಗಿರುವ ಎಸ್‌ಐಟಿ ತಂಡದಲ್ಲಿ ವಿವಾದಾತ್ಮಕ ಹಾಗೂ ವಿವಿಧ ಆರೋಪಗಳನ್ನು ಎದುರಿಸಿರುವ ಅಧಿಕಾರಿಗಳನ್ನು ನೇಮಿಸಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡಿದೆ.

ಶಶಿಕುಮಾರ್ ಅವರ ಮೇಲಿನ ಆರೋಪಗಳು: ಎಸ್‌ಐಟಿ ಮುಖ್ಯಸ್ಥರಾಗಿ ನೇಮಕಗೊಂಡಿರುವ ಐಜಿಪಿ ಎನ್. ಶಶಿಕುಮಾರ್ ಅವರ ವಿರುದ್ಧ ಭ್ರಷ್ಟಾಚಾರ, ಕರ್ತವ್ಯಲೋಪ ಹಾಗೂ ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ವಿಫಲರಾದ ಆರೋಪಗಳಿವೆ ಎಂದು ಹೋರಾಟಗಾರರು ದೂರಿದ್ದಾರೆ.

ವೆಂಕಟೇಶ್ ಪ್ರಸನ್ನ ಅವರ ಮೇಲಿನ ಗಂಭೀರ ಆರೋಪಗಳು: ತನಿಖಾ ತಂಡದ ಸದಸ್ಯರಾಗಿರುವ ವೆಂಕಟೇಶ್ ಪ್ರಸನ್ನ ಅವರ ಮೇಲೆ ಭ್ರಷ್ಟಾಚಾರ, ಭೂಗತ ಪಾತಕಿಗಳ ಜೊತೆ ನಂಟು ಹಾಗೂ ಯುವ ನ್ಯಾಯವಾದಿ ನೌಶಾದ್ ಕಾಸಿಂಜಿ ಕೊಲೆ ಪ್ರಕರಣದ ನಂಟು ಮುಂತಾದ ಗಂಭೀರ ಆರೋಪಗಳಿವೆ ಎಂದು ಆರೋಪಿಸಲಾಗಿದೆ.

ಸಮಾಜ ಹಾಗೂ ಹೋರಾಟಗಾರರ ಒತ್ತಾಯ:

ತಂಡದಿಂದ ಕೈಬಿಡಲು ಆಗ್ರಹ: ಇಂತಹ ಗಂಭೀರ ಆರೋಪಗಳನ್ನು ಹೊತ್ತಿರುವ ಅಧಿಕಾರಿಗಳಿಂದ ವಸ್ತುನಿಷ್ಠ ಮತ್ತು ಗುಣಮಟ್ಟದ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ತಕ್ಷಣವೇ ಶಶಿಕುಮಾರ್ ಹಾಗೂ ವೆಂಕಟೇಶ್ ಪ್ರಸನ್ನ ಅವರನ್ನು ಈ ಎಸ್‌ಐಟಿ ತಂಡದಿಂದ ಕೈಬಿಡಬೇಕು.

ದಕ್ಷ ಅಧಿಕಾರಿಗಳ ನೇಮಕಕ್ಕೆ ಆಗ್ರಹ: ಕಳೆದ 14 ವರ್ಷಗಳಿಂದ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ಸಂತ್ರಸ್ತ ಕುಟುಂಬಕ್ಕೆ ನೈಜ ನ್ಯಾಯ ದೊರಕಿಸಿಕೊಡಲು, ರಾಜ್ಯದ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ಈ ತಂಡಕ್ಕೆ ನೇಮಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ.

ರಾಜ್ಯ ಸರ್ಕಾರವು ಈ ಹಿಂದೆ ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಗುಪ್ತಚರ ಇಲಾಖೆಯ ಎಸ್.ಪಿ. ನಿಶಾ ಜೇಮ್ಸ್, ಸಿಐಡಿ ಎಸ್.ಪಿ. ಲೋಕೇಶ್ ಜಗಲಸಾರ್ ಹಾಗೂ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ ವೆಂಕಟೇಶ್ ಪ್ರಸನ್ನ ಅವರನ್ನು ಒಳಗೊಂಡ 5 ಸದಸ್ಯರ ಎಸ್‌ಐಟಿಯನ್ನು ಅಧಿಕೃತವಾಗಿ ಘೋಷಿಸಿತ್ತು. ಸುಪ್ರೀಂ ಕೋರ್ಟ್ ನೀಡಿರುವ ಮೂರು ತಿಂಗಳ ಕಾಲಮಿತಿಯೊಳಗೆ ಸಮಗ್ರ ತನಿಖೆ ನಡೆಸಿ ಸತ್ಯ ಹೊರಬರಬೇಕು ಆದರೆ, ಈ ವಿರೋಧಗಳ ಹಿನ್ನೆಲೆಯಲ್ಲಿ ಸರ್ಕಾರ ಯಾವ ಹೆಜ್ಜೆ ಇಡಲಿದೆ ಎಂಬುದು ಕುತೂಹಲ ಮೂಡಿಸಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!