Connect with us

arrest

ಪೊಲೀಸರ ಮಹತ್ವದ ಕಾರ್ಯಾಚರಣೆ: ನ್ಯಾಯಾಲಯದಿಂದ ಪರಾರಿಯಾಗಲು ಯತ್ನಿಸಿದ ಆರೋಪಿಗೆ ಜೈಲು ಶಿಕ್ಷೆ ಹಾಗೂ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿ ದಸ್ತಗಿರಿ ಮಾಡಿದ ವಿಟ್ಲ ಪೊಲೀಸರು

Published

on

ಪುತ್ತೂರು/ ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಹಾಗೂ ನ್ಯಾಯಾಲಯದಿಂದ ಮಹತ್ವದ ಕ್ರಮಗಳು ಜರುಗಿವೆ.

1. ನ್ಯಾಯಾಲಯ ಕಲಾಪದ ವೇಳೆ ಪರಾರಿಯಾಗಲು ಯತ್ನಿಸಿದ ಆರೋಪಿಗೆ 2 ವರ್ಷ ಜೈಲು ಶಿಕ್ಷೆ:

ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ: 120/2008 (ಕಲಂ: 450, 302, 201 IPC) ಪ್ರಕರಣದಲ್ಲಿ ಆರೋಪಿಯಾಗಿದ್ದ ಪುತ್ತೂರು ಸಿರಿಬಾಗಿಲು ನಿವಾಸಿ ಜಯೇಶ್ @ ಜಯೇಶ್ ಕಾಂತ್ ಎಸ್. ಎನ್ನುವವರ ಜೊತೆಗಿದ್ದ ಶಾಹಿರ್ @ ಶಾಕಿರ್ (41) ಎಂಬಾತನನ್ನು ದಿನಾಂಕ 05.04.2016 ರಂದು ಮಂಗಳೂರು ಕಾರಾಗೃಹದಿಂದ ಪುತ್ತೂರಿನ ಮಾನ್ಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಕರೆತರಲಾಗಿತ್ತು. ಈ ವೇಳೆ ನ್ಯಾಯಾಲಯದಲ್ಲಿ ಕಲಾಪ ನಡೆಯುತ್ತಿದ್ದಾಗ ಆರೋಪಿಯು ಏಕಾಏಕಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದನು.

ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 91/2016, ಕಲಂ: 224 IPC ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಆಗಿನ ಪುತ್ತೂರು ನಗರ ಠಾಣೆಯ ಉಪನಿರೀಕ್ಷಕರಾದ ಖಾದರ್ ರವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ಪ್ರಧಾನ ಹಿರಿಯ ಸಿವಿಲ್ ಮತ್ತು ACJM ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ್ ರವರು ದಿನಾಂಕ 05-10-2026 ರಂದು ಆರೋಪಿಗೆ 2 ವರ್ಷಗಳ ಸಾದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಕಾನೂನು ಅಭಿಯೋಜಕರಾದ ಮನೋಜ್ ಕುಮಾರ್ ರವರು ಸಮರ್ಥವಾಗಿ ವಾದ ಮಂಡನೆ ಮಾಡಿದ್ದರು.

2. 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿ ಬಂಧನ:

ಬ್ಯಾಂಕ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಇಬ್ಬರಿಂದ ಹಣ ಪಡೆದು, ಉದ್ಯೋಗವನ್ನೂ ಕೊಡಿಸದೆ ಹಾಗೂ ಹಣವನ್ನೂ ಹಿಂತಿರುಗಿಸದೆ ವಂಚಿಸಿದ ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 151/2011 (ಕಲಂ: 420, 465, 468, 471 ಜೊತೆಗೆ 34 IPC) ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿ, ಪುತ್ತೂರು ಬಲ್ಯ ನಿವಾಸಿ ಹಿಬ್ಬಾತುಲ್ಲ (52) ಎಂಬಾತನನ್ನು ದಿನಾಂಕ 05-10-2026 ರಂದು ವಿಟ್ಲ ಠಾಣಾ ಸಿಬ್ಬಂದಿಗಳಾದ ಶಿವಾನಂದ ಮಡ್ಡಿ, ಸಿದ್ದಪ್ಪ ಹಾಗೂ ಯಂಕಪ್ಪ ರವರು ಯಶಸ್ವಿಯಾಗಿ ದಸ್ತಗಿರಿ ಮಾಡಿದ್ದಾರೆ. ಬಳಿಕ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ದಸ್ತಗಿರಿ

Published

on

ಬಂಟ್ವಾಳ: ಸುಮಾರು 17 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ಮೂಡಬಿದ್ರೆ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಟ್ವಾಳ ತಲಪಾಡಿ ನಿವಾಸಿ ಹನೀಫ್ @ ಕೊಕ್ಕಡ ಹನೀಫ್ (57) ಬಂಧಿತ ಆರೋಪಿ.

ಪ್ರಕರಣದ ಹಿನ್ನೆಲೆ: ಬಂಟ್ವಾಳ ನಗರ ಪೊಲೀಸ್ ಠಾಣೆಯ ಅ.ಕ್ರ: 163/2009 ರಂತೆ ಕೆ.ಇ. ಕಾಯ್ದೆ (KE Act) ಕಲಂ: 11, 13, 32, 33, 34, 38(a), 43 ರ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದು, ಕಳೆದ 17 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಅಲ್ಲದೆ, ಈತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ 143/2023 ಕಲಂ 143, 147, 448, 427, 436, 307, 149 ಐಪಿಸಿ (IPC) ಪ್ರಕರಣದಲ್ಲೂ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿತ್ತು.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಎಸ್ಐ ಬಶೀರ್, ಹೆಡ್ ಕಾನ್ಸ್‌ಸ್ಟೇಬಲ್‌ಗಳಾದ ಜಗದೀಶ್, ಸಂತೋಷ್ ಹಾಗೂ ಪಿಸಿ ಗವಿ ಸಿದ್ದಪ್ಪ ಅವರ ತಂಡವು ದಿನಾಂಕ 09/10/2026 ರಂದು ಮೂಡಬಿದ್ರೆಯ ಶಿರ್ತಾಡಿ ಎಂಬಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿದೆ.

ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Continue Reading

arrest

ವಿಮಾನದೊಳಗೆ ಹೈಡ್ರಾಮಾ: ಸಿಜೆಪಿ ನಾಯಕರನ್ನು ದಿಢೀರ್ ವಶಕ್ಕೆ ಪಡೆಯಲು ವಿಮಾನದಲ್ಲೇ ಸುತ್ತುವರಿದ ಮಹಿಳಾ ಪೊಲೀಸರು! ಕಾರಣ ಏನು ?

Published

on

ದೆಹಲಿ: ಮುಂಬೈ ಹಾಗೂ ಬೆಂಗಳೂರಿನ ಬಳಿಕ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಆಯೋಜಿಸಲಾಗಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಾಯಕರ ಪ್ರತಿಭಟನೆಗೂ ಮುನ್ನವೇ ಹೈಡ್ರಾಮಾ ನಡೆದಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಂಬೈನಿಂದ ಆಗಮಿಸಿದ್ದ ಸಿಜೆಪಿ ಸಂಸ್ಥಾಪಕ ಸೇರಿದಂತೆ ಪ್ರಮುಖ ನಾಯಕರನ್ನು ದೆಹಲಿ ವಿಮಾನ ನಿಲ್ದಾಣದಲ್ಲೇ ದಿಢೀರ್ ವಶಕ್ಕೆ ಪಡೆಯಲಾಗಿದೆ. ಅದರಲ್ಲೂ, ಈ ಕಾರ್ಯಾಚರಣೆಗೆ ದೆಹಲಿ ಪೊಲೀಸರು ಉದ್ದೇಶಪೂರ್ವಕವಾಗಿಯೇ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದು ವಿಶೇಷ ಚರ್ಚೆಗೆ ಗ್ರಾಸವಾಗಿದೆ.

ಮುಂಬೈನಿಂದ ಹೊರಟ ಏರ್ ಇಂಡಿಯಾ ವಿಮಾನ ದೆಹಲಿ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆಯೇ, ವಿಮಾನದೊಳಗೆ ನುಗ್ಗಿದ ಮಹಿಳಾ ಪೊಲೀಸ್ ಸಿಬ್ಬಂದಿ, ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಹಾಗೂ ಅಶುತೋಷ್ ರಂಕಾ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಮಹಿಳಾ ಪೊಲೀಸರ ಬಳಕೆ ಹಿಂದಿನ ರಣತಂತ್ರವೇನು?

ದೀಪ್ಕೆ ಮತ್ತು ತಂಡವನ್ನು ವಿಮಾನದೊಳಗೆಯೇ ಬಂಧಿಸಲು ಮಹಿಳಾ ಸಿಬ್ಬಂದಿಯನ್ನು ಬಳಸಿಕೊಂಡಿರುವುದರ ಹಿಂದೆ ದೆಹಲಿ ಪೊಲೀಸರ ಎಚ್ಚರಿಕೆಯ ಹೆಜ್ಜೆ ಇದೆ ಎನ್ನಲಾಗಿದೆ. ವಿಮಾನದ ಒಳಭಾಗದ ದಾರಿ (Aisles) ಅತ್ಯಂತ ಕಿರಿದಾಗಿದ್ದು, ಪುರುಷ ಪೊಲೀಸರನ್ನು ಬಳಸಿದರೆ ತಳ್ಳಾಟ, ವಾಗ್ವಾದ ಅಥವಾ ಬಲಪ್ರಯೋಗದಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ದೊಡ್ಡ ಮಟ್ಟದ ನೆಗೆಟಿವ್ ಸುದ್ದಿಯಾಗುವ ಸಾಧ್ಯತೆಯಿತ್ತು.

ಜತೆಗೆ, ಕಳೆದ ಜುಲೈ 20ರಂದು ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಪುರುಷ ಪೊಲೀಸರು ವಿದ್ಯಾರ್ಥಿನಿಯರು ಹಾಗೂ ಸಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಪ್ರತಿಭಟನೆಯೊಂದರಲ್ಲಿ ಪ್ರತಿಭಟನಾಕಾರರು ಮಹಿಳಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂಬ ಅಪಪ್ರಚಾರವೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿಂದಿನ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಎಚ್ಚೆತ್ತ ಪೊಲೀಸರು ಈ ಬಾರಿ ಅತ್ಯಂತ ತಂತ್ರಗಾರಿಕೆಯಿಂದ ಮಹಿಳಾ ಸಿಬ್ಬಂದಿಯನ್ನೇ ಕಳುಹಿಸಿ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.

ವಿಮಾನದೊಳಗೆ ನಾಯಕರ ಆಕ್ರೋಶ, ವೀಡಿಯೊ ವೈರಲ್

ಮಹಿಳಾ ಪೊಲೀಸರು ವಿಮಾನದೊಳಗೆ ಬಂದು ವಶಕ್ಕೆ ಪಡೆದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ ಅಭಿಜಿತ್ ದೀಪ್ಕೆ, ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸಿದರು. “ವಿಮಾನದಿಂದ ಕೆಳಗೆ ಇಳಿಯುವವರೆಗೆ ಕಾಯಬಹುದಿತ್ತಲ್ಲವೇ? ದೇಶ ಎತ್ತ ಸಾಗುತ್ತಿದೆ ನೀವೇ ನೋಡಿ, ನಮ್ಮನ್ನು ನೇರವಾಗಿ ಬಂಧಿಸಲು ವಿಮಾನದೊಳಗೆ ಬಂದಿದ್ದಾರೆ. ಇಂತಹ ಸರ್ವಾಧಿಕಾರಿ ಧೋರಣೆಯನ್ನು ಇಂದಿರಾ ಗಾಂಧಿಯೂ ಮಾಡಿರಲಿಲ್ಲ” ಎಂದು ದೀಪ್ಕೆ ಆಕ್ರೋಶ ಹೊರಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಣ್ಣ ಮಟ್ಟದ ವಾಗ್ಯುದ್ದವನ್ನು ಹೊರತುಪಡಿಸಿ, ಯಾವುದೇ ದೊಡ್ಡ ಗೊಂದಲಕ್ಕೆ ಅವಕಾಶ ನೀಡದೆ ಪೊಲೀಸರು ದೀಪ್ಕೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೆ ಒತ್ತಾಯಿಸಿ ಸಿಜೆಪಿ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಬಂಧನದಿಂದ ದೆಹಲಿಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Continue Reading

arrest

ಪುತ್ತೂರು: ಅಕ್ರಮ ಗೋಸಾಗಾಟ ಪ್ರಕರಣ – ಆರೋಪಿತನ ಮನೆ ಹಾಗೂ ಕೊಟ್ಟಿಗೆ ಜಪ್ತಿ!

Published

on

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಜೂರುಪಂಜ ದೇವಸ್ಯ ಬಳಿ ಅಕ್ಟೋಬರ್ 5 ರಂದು ಬೆಳಕಿಗೆ ಬಂದಿದ್ದ ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಪ್ರಮುಖ ಆರೋಪಿತನಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆಯನ್ನು ನಿಯಮಾನುಸಾರ ಜಪ್ತಿ ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ:

ದಿನಾಂಕ 05.10.2026 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಕುಂಜೂರುಪಂಜ ದೇವಸ್ಯ ಬಳಿಯಿಂದ ಬುಳೇರಿಕಟ್ಟೆ ಮಾರ್ಗವಾಗಿ ಕೇರಳಕ್ಕೆ ಜಾನುವಾರುಗಳನ್ನು ಅಕ್ರಮವಾಗಿ ಹಾಗೂ ಅತ್ಯಂತ ಕ್ರೂರ ರೀತಿಯಲ್ಲಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ 11 ಗೋವುಗಳನ್ನು ರಕ್ಷಿಸಿದ್ದರು.

ವಾಹನದಲ್ಲಿ ಗೋವುಗಳ ಕಾಲುಗಳನ್ನು ಹಗ್ಗದಿಂದ ಬಿಗಿದು, ಯಾವುದೇ ಮುಕ್ತ ಅವಕಾಶವಿಲ್ಲದೆ ಅತ್ಯಂತ ಹಿಂಸಾತ್ಮಕ ಮತ್ತು ಅಮಾನವೀಯ ರೀತಿಯಲ್ಲಿ ಜಾನುವಾರುಗಳನ್ನು ತುರುಕಿಸಿ ಸಾಗಿಸಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಪೊಲೀಸರು ವಾಹನವನ್ನು ಅಡ್ಡಗಟ್ಟುತ್ತಿದ್ದಂತೆ, ಕತ್ತಲಲ್ಲಿ ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸದ್ರಿ ಜಾನುವಾರುಗಳನ್ನು ಅಗತ್ಯ ಪರವಾನಿಗೆ ಇಲ್ಲದೇ ಮಾರಾಟ ಮಾಡಿದ ಪುತ್ತೂರು ಆರ್ಯಾಪು ನಿವಾಸಿ ಶಿವಪ್ರಸಾದ್ (52) ಎಂಬಾತನನ್ನು ದಸ್ತಗಿರಿ ಮಾಡಲಾಗಿತ್ತು.

ಕಾನೂನು ಕ್ರಮ – ಮನೆ ಮತ್ತು ಕೊಟ್ಟಿಗೆ ಜಪ್ತಿ:

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಅ.ಕ್ರ: 125/2026 ರ ಈ ಪ್ರಕರಣದಲ್ಲಿ, ತನಿಖೆ ಮುಂದುವರೆಸುತ್ತಾ ಪೊಲೀಸರು ಕಠಿಣ ಹೆಜ್ಜೆ ಇಟ್ಟಿದ್ದಾರೆ. ತನ್ನ ಮನೆಯಲ್ಲಿದ್ದ ಜಾನುವಾರುಗಳನ್ನು ಅಗತ್ಯ ದಾಖಲೆಪತ್ರಗಳನ್ನು ಪಡೆಯದೇ ಅಕ್ರಮವಾಗಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ, ಪ್ರಮುಖ ಆರೋಪಿತ ಶಿವಪ್ರಸಾದ್ ರವರಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆ ಪರಿಸರವನ್ನು ಅಧಿಕಾರಿಗಳು ದಿನಾಂಕ: 08.10.2026 ರಂದು ನಿಯಮಾನುಸಾರ ಜಪ್ತಿ ಮಾಡಿಕೊಂಡಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರ ತನಿಖೆ ತೀವ್ರಗೊಂಡಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!