Connect with us

arrest

ನಕಲಿ ಲೇಡಿ PSI ಅರೆಸ್ಟ್: 25ಕ್ಕೂ ಅಧಿಕ ಜನರಿಗೆ ಕೋಟ್ಯಂತರ ರೂ. ವಂಚಿಸಿ ಪ್ರಿಯಕರನಿಗೆ ಗಿಫ್ಟ್ ನೀಡುತ್ತಿದ್ದ ಕತೆ!

Published

on

ಚಿಕ್ಕಮಗಳೂರು: ತಾನೊಬ್ಬ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಎಂದು ನಂಬಿಸಿ, ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ಹಣ, ಚಿನ್ನಾಭರಣ ಹಾಗೂ ಐಷಾರಾಮಿ ಕಾರುಗಳನ್ನು ವಂಚಿಸಿದ್ದ ನಕಲಿ ಲೇಡಿ PSIಯೊಬ್ಬಳನ್ನು ಚಿಕ್ಕಮಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಮೂಲದ ನಿವೇದಿತಾ ಗೌಡ ಬಂಧಿತ ಆರೋಪಿಯಾಗಿದ್ದು, ಈಕೆಯ ವಂಚನೆಯ ಜಾಲದ ಕರಾಳ ಮುಖಗಳು ಪೊಲೀಸರ ತನಿಖೆಯಲ್ಲಿ ಬಯಲಾಗಿವೆ.

ಪ್ರಕರಣದ ಪ್ರಮುಖ ಮುಖ್ಯಾಂಶಗಳು:

ನಕಲಿ ಖಾಕಿ ಗಮ್ಮತ್ತು: ತಾನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯ PSI ಎಂದೂ, ಸದ್ಯ ರಜೆಯಲ್ಲಿದ್ದೇನೆ ಎಂದು ಮುಗ್ಧ ಜನರನ್ನು ನಂಬಿಸುತ್ತಿದ್ದಳು. ಅಷ್ಟೇ ಅಲ್ಲದೆ, ಅಚ್ಚುಕಟ್ಟಾಗಿ ಪೊಲೀಸ್ ರೀತಿಯಲ್ಲೇ ಕೂದಲು ಕತ್ತರಿಸಿ, ಅದಕ್ಕೆ ತಕ್ಕ ವೇಷಭೂಷಣ ಧರಿಸಿ ಅಸಲಿ ಅಧಿಕಾರಿಯಂತೆ ಓಡಾಡುತ್ತಿದ್ದಳು.

ವಂಚನೆಯ ಜಾಲ: ಚಿಕ್ಕಮಗಳೂರು ನಗರದಲ್ಲಿ ಕೆಫೆಯೊಂದನ್ನು ನಡೆಸುತ್ತಿದ್ದ ಈಕೆ, ಅಲ್ಲಿಗೆ ಬರುತ್ತಿದ್ದ ಯುವಕರು ಹಾಗೂ ಮಹಿಳೆಯರೊಂದಿಗೆ ಸಲುಗೆ ಬೆಳೆಸಿ ಪರಿಚಯ ಮಾಡಿಕೊಳ್ಳುತ್ತಿದ್ದಳು.

ಕಾರುಗಳ ಕಳ್ಳಾಟ: ಪರಿಚಯವಾದವರ ಬಳಿ ಓಡಾಟಕ್ಕಾಗಿ ಐಷಾರಾಮಿ ಕಾರುಗಳನ್ನು ಪಡೆದುಕೊಂಡು, ನಂತರ ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಳು ಎಂಬ ಗಂಭೀರ ಆರೋಪವೂ ಇದೆ. ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈವರೆಗೆ 25ಕ್ಕೂ ಹೆಚ್ಚು ಮಂದಿಗೆ ಈಕೆ ವಂಚಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪ್ರಿಯಕರನಿಗಾಗಿ ಎಲ್ಲ ದರೋಡೆ!: ತಾನು ಜನರ ಮೋಸದಿಂದ ದೋಚಿದ ಕೋಟ್ಯಂತರ ರೂಪಾಯಿ ಹಣ ಹಾಗೂ ಚಿನ್ನಾಭರಣಗಳನ್ನು ತನ್ನ ಪ್ರಿಯಕರ ದೇವು ಎಂಬಾತನಿಗೆ ನೀಡುತ್ತಿರುವುದಾಗಿ ಆರೋಪಿ ನಿವೇದಿತಾ ಪೊಲೀಸ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾಳೆ.

ಮೊಬೈಲ್‌ನಲ್ಲಿ ನಕಲಿ ಆಧಾರ್‌ ಕಾರ್ಡ್ ಪತ್ತೆ: ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ, ಬೇರೆ ಬೇರೆ ಹೆಸರುಗಳಿರುವ ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಈ ನಕಲಿ ದಾಖಲೆಗಳನ್ನು ಯಾವೆಲ್ಲ ಕೃತ್ಯಗಳಿಗೆ ಬಳಸಲಾಗಿದೆ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.

20ಕ್ಕೂ ಹೆಚ್ಚು ಸಂತ್ರಸ್ತರಿಂದ ದೂರು:

ಈಕೆಯ ಮೋಸಕ್ಕೆ ಬಲಿಯಾದ 20ಕ್ಕೂ ಹೆಚ್ಚು ಮಂದಿ ಪೊಲೀಸರಿಗೆ ದೂರು ನೀಡಿದ್ದು, ಚಿಕ್ಕಮಗಳೂರಿನ ಬಸವನಹಳ್ಳಿ ಹಾಗೂ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸದ್ಯ ಆರೋಪಿ ನಿವೇದಿತಾಳನ್ನು ವಶಕ್ಕೆ ಪಡೆದಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆಕೆಯ ಪ್ರಿಯಕರ ‘ದೇವು’ಗಾಗಿ ಬಲೆ ಬೀಸಿದ್ದಾರೆ.

ಮುಂದಿನ ತನಿಖೆಯಿಂದ ವಂಚನೆಗೆ ಒಳಗಾದವರ ನಿಜವಾದ ಸಂಖ್ಯೆ ಹಾಗೂ ಒಟ್ಟು ವಂಚನೆಯ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ದಸ್ತಗಿರಿ

Published

on

ಬಂಟ್ವಾಳ: ಸುಮಾರು 17 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ಮೂಡಬಿದ್ರೆ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಟ್ವಾಳ ತಲಪಾಡಿ ನಿವಾಸಿ ಹನೀಫ್ @ ಕೊಕ್ಕಡ ಹನೀಫ್ (57) ಬಂಧಿತ ಆರೋಪಿ.

ಪ್ರಕರಣದ ಹಿನ್ನೆಲೆ: ಬಂಟ್ವಾಳ ನಗರ ಪೊಲೀಸ್ ಠಾಣೆಯ ಅ.ಕ್ರ: 163/2009 ರಂತೆ ಕೆ.ಇ. ಕಾಯ್ದೆ (KE Act) ಕಲಂ: 11, 13, 32, 33, 34, 38(a), 43 ರ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದು, ಕಳೆದ 17 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಅಲ್ಲದೆ, ಈತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ 143/2023 ಕಲಂ 143, 147, 448, 427, 436, 307, 149 ಐಪಿಸಿ (IPC) ಪ್ರಕರಣದಲ್ಲೂ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿತ್ತು.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಎಸ್ಐ ಬಶೀರ್, ಹೆಡ್ ಕಾನ್ಸ್‌ಸ್ಟೇಬಲ್‌ಗಳಾದ ಜಗದೀಶ್, ಸಂತೋಷ್ ಹಾಗೂ ಪಿಸಿ ಗವಿ ಸಿದ್ದಪ್ಪ ಅವರ ತಂಡವು ದಿನಾಂಕ 09/10/2026 ರಂದು ಮೂಡಬಿದ್ರೆಯ ಶಿರ್ತಾಡಿ ಎಂಬಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿದೆ.

ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Continue Reading

arrest

ವಿಮಾನದೊಳಗೆ ಹೈಡ್ರಾಮಾ: ಸಿಜೆಪಿ ನಾಯಕರನ್ನು ದಿಢೀರ್ ವಶಕ್ಕೆ ಪಡೆಯಲು ವಿಮಾನದಲ್ಲೇ ಸುತ್ತುವರಿದ ಮಹಿಳಾ ಪೊಲೀಸರು! ಕಾರಣ ಏನು ?

Published

on

ದೆಹಲಿ: ಮುಂಬೈ ಹಾಗೂ ಬೆಂಗಳೂರಿನ ಬಳಿಕ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಆಯೋಜಿಸಲಾಗಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಾಯಕರ ಪ್ರತಿಭಟನೆಗೂ ಮುನ್ನವೇ ಹೈಡ್ರಾಮಾ ನಡೆದಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಂಬೈನಿಂದ ಆಗಮಿಸಿದ್ದ ಸಿಜೆಪಿ ಸಂಸ್ಥಾಪಕ ಸೇರಿದಂತೆ ಪ್ರಮುಖ ನಾಯಕರನ್ನು ದೆಹಲಿ ವಿಮಾನ ನಿಲ್ದಾಣದಲ್ಲೇ ದಿಢೀರ್ ವಶಕ್ಕೆ ಪಡೆಯಲಾಗಿದೆ. ಅದರಲ್ಲೂ, ಈ ಕಾರ್ಯಾಚರಣೆಗೆ ದೆಹಲಿ ಪೊಲೀಸರು ಉದ್ದೇಶಪೂರ್ವಕವಾಗಿಯೇ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದು ವಿಶೇಷ ಚರ್ಚೆಗೆ ಗ್ರಾಸವಾಗಿದೆ.

ಮುಂಬೈನಿಂದ ಹೊರಟ ಏರ್ ಇಂಡಿಯಾ ವಿಮಾನ ದೆಹಲಿ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆಯೇ, ವಿಮಾನದೊಳಗೆ ನುಗ್ಗಿದ ಮಹಿಳಾ ಪೊಲೀಸ್ ಸಿಬ್ಬಂದಿ, ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಹಾಗೂ ಅಶುತೋಷ್ ರಂಕಾ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಮಹಿಳಾ ಪೊಲೀಸರ ಬಳಕೆ ಹಿಂದಿನ ರಣತಂತ್ರವೇನು?

ದೀಪ್ಕೆ ಮತ್ತು ತಂಡವನ್ನು ವಿಮಾನದೊಳಗೆಯೇ ಬಂಧಿಸಲು ಮಹಿಳಾ ಸಿಬ್ಬಂದಿಯನ್ನು ಬಳಸಿಕೊಂಡಿರುವುದರ ಹಿಂದೆ ದೆಹಲಿ ಪೊಲೀಸರ ಎಚ್ಚರಿಕೆಯ ಹೆಜ್ಜೆ ಇದೆ ಎನ್ನಲಾಗಿದೆ. ವಿಮಾನದ ಒಳಭಾಗದ ದಾರಿ (Aisles) ಅತ್ಯಂತ ಕಿರಿದಾಗಿದ್ದು, ಪುರುಷ ಪೊಲೀಸರನ್ನು ಬಳಸಿದರೆ ತಳ್ಳಾಟ, ವಾಗ್ವಾದ ಅಥವಾ ಬಲಪ್ರಯೋಗದಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ದೊಡ್ಡ ಮಟ್ಟದ ನೆಗೆಟಿವ್ ಸುದ್ದಿಯಾಗುವ ಸಾಧ್ಯತೆಯಿತ್ತು.

ಜತೆಗೆ, ಕಳೆದ ಜುಲೈ 20ರಂದು ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಪುರುಷ ಪೊಲೀಸರು ವಿದ್ಯಾರ್ಥಿನಿಯರು ಹಾಗೂ ಸಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಪ್ರತಿಭಟನೆಯೊಂದರಲ್ಲಿ ಪ್ರತಿಭಟನಾಕಾರರು ಮಹಿಳಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂಬ ಅಪಪ್ರಚಾರವೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿಂದಿನ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಎಚ್ಚೆತ್ತ ಪೊಲೀಸರು ಈ ಬಾರಿ ಅತ್ಯಂತ ತಂತ್ರಗಾರಿಕೆಯಿಂದ ಮಹಿಳಾ ಸಿಬ್ಬಂದಿಯನ್ನೇ ಕಳುಹಿಸಿ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.

ವಿಮಾನದೊಳಗೆ ನಾಯಕರ ಆಕ್ರೋಶ, ವೀಡಿಯೊ ವೈರಲ್

ಮಹಿಳಾ ಪೊಲೀಸರು ವಿಮಾನದೊಳಗೆ ಬಂದು ವಶಕ್ಕೆ ಪಡೆದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ ಅಭಿಜಿತ್ ದೀಪ್ಕೆ, ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸಿದರು. “ವಿಮಾನದಿಂದ ಕೆಳಗೆ ಇಳಿಯುವವರೆಗೆ ಕಾಯಬಹುದಿತ್ತಲ್ಲವೇ? ದೇಶ ಎತ್ತ ಸಾಗುತ್ತಿದೆ ನೀವೇ ನೋಡಿ, ನಮ್ಮನ್ನು ನೇರವಾಗಿ ಬಂಧಿಸಲು ವಿಮಾನದೊಳಗೆ ಬಂದಿದ್ದಾರೆ. ಇಂತಹ ಸರ್ವಾಧಿಕಾರಿ ಧೋರಣೆಯನ್ನು ಇಂದಿರಾ ಗಾಂಧಿಯೂ ಮಾಡಿರಲಿಲ್ಲ” ಎಂದು ದೀಪ್ಕೆ ಆಕ್ರೋಶ ಹೊರಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಣ್ಣ ಮಟ್ಟದ ವಾಗ್ಯುದ್ದವನ್ನು ಹೊರತುಪಡಿಸಿ, ಯಾವುದೇ ದೊಡ್ಡ ಗೊಂದಲಕ್ಕೆ ಅವಕಾಶ ನೀಡದೆ ಪೊಲೀಸರು ದೀಪ್ಕೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೆ ಒತ್ತಾಯಿಸಿ ಸಿಜೆಪಿ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಬಂಧನದಿಂದ ದೆಹಲಿಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Continue Reading

arrest

ಪುತ್ತೂರು: ಅಕ್ರಮ ಗೋಸಾಗಾಟ ಪ್ರಕರಣ – ಆರೋಪಿತನ ಮನೆ ಹಾಗೂ ಕೊಟ್ಟಿಗೆ ಜಪ್ತಿ!

Published

on

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಜೂರುಪಂಜ ದೇವಸ್ಯ ಬಳಿ ಅಕ್ಟೋಬರ್ 5 ರಂದು ಬೆಳಕಿಗೆ ಬಂದಿದ್ದ ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಪ್ರಮುಖ ಆರೋಪಿತನಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆಯನ್ನು ನಿಯಮಾನುಸಾರ ಜಪ್ತಿ ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ:

ದಿನಾಂಕ 05.10.2026 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಕುಂಜೂರುಪಂಜ ದೇವಸ್ಯ ಬಳಿಯಿಂದ ಬುಳೇರಿಕಟ್ಟೆ ಮಾರ್ಗವಾಗಿ ಕೇರಳಕ್ಕೆ ಜಾನುವಾರುಗಳನ್ನು ಅಕ್ರಮವಾಗಿ ಹಾಗೂ ಅತ್ಯಂತ ಕ್ರೂರ ರೀತಿಯಲ್ಲಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ 11 ಗೋವುಗಳನ್ನು ರಕ್ಷಿಸಿದ್ದರು.

ವಾಹನದಲ್ಲಿ ಗೋವುಗಳ ಕಾಲುಗಳನ್ನು ಹಗ್ಗದಿಂದ ಬಿಗಿದು, ಯಾವುದೇ ಮುಕ್ತ ಅವಕಾಶವಿಲ್ಲದೆ ಅತ್ಯಂತ ಹಿಂಸಾತ್ಮಕ ಮತ್ತು ಅಮಾನವೀಯ ರೀತಿಯಲ್ಲಿ ಜಾನುವಾರುಗಳನ್ನು ತುರುಕಿಸಿ ಸಾಗಿಸಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಪೊಲೀಸರು ವಾಹನವನ್ನು ಅಡ್ಡಗಟ್ಟುತ್ತಿದ್ದಂತೆ, ಕತ್ತಲಲ್ಲಿ ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸದ್ರಿ ಜಾನುವಾರುಗಳನ್ನು ಅಗತ್ಯ ಪರವಾನಿಗೆ ಇಲ್ಲದೇ ಮಾರಾಟ ಮಾಡಿದ ಪುತ್ತೂರು ಆರ್ಯಾಪು ನಿವಾಸಿ ಶಿವಪ್ರಸಾದ್ (52) ಎಂಬಾತನನ್ನು ದಸ್ತಗಿರಿ ಮಾಡಲಾಗಿತ್ತು.

ಕಾನೂನು ಕ್ರಮ – ಮನೆ ಮತ್ತು ಕೊಟ್ಟಿಗೆ ಜಪ್ತಿ:

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಅ.ಕ್ರ: 125/2026 ರ ಈ ಪ್ರಕರಣದಲ್ಲಿ, ತನಿಖೆ ಮುಂದುವರೆಸುತ್ತಾ ಪೊಲೀಸರು ಕಠಿಣ ಹೆಜ್ಜೆ ಇಟ್ಟಿದ್ದಾರೆ. ತನ್ನ ಮನೆಯಲ್ಲಿದ್ದ ಜಾನುವಾರುಗಳನ್ನು ಅಗತ್ಯ ದಾಖಲೆಪತ್ರಗಳನ್ನು ಪಡೆಯದೇ ಅಕ್ರಮವಾಗಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ, ಪ್ರಮುಖ ಆರೋಪಿತ ಶಿವಪ್ರಸಾದ್ ರವರಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆ ಪರಿಸರವನ್ನು ಅಧಿಕಾರಿಗಳು ದಿನಾಂಕ: 08.10.2026 ರಂದು ನಿಯಮಾನುಸಾರ ಜಪ್ತಿ ಮಾಡಿಕೊಂಡಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರ ತನಿಖೆ ತೀವ್ರಗೊಂಡಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!