Connect with us

BJP

ಫಾರ್ಮ್ 6ರ ಮೇಲಿನ ಹೆಚ್ಚುವರಿ ಡಿಕ್ಲರೇಷನ್ ವಾಪಸ್: ಚುನಾವಣಾ ಆಯೋಗದಿಂದ ಭಾಗಶಃ ಹಿಮ್ಮುಖ ಹೆಜ್ಜೆ

Published

on

ನವದೆಹಲಿ: ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆನ್‌ಲೈನ್ ಫಾರ್ಮ್ 6 ಅರ್ಜಿಯೊಂದಿಗೆ ಲಗತ್ತಿಸಲಾಗಿದ್ದ ಹೆಚ್ಚುವರಿ ವಿಶೇಷ ತೀವ್ರ ಪರಿಷ್ಕರಣೆ ಘೋಷಣೆಯನ್ನು ಭಾರತೀಯ ಚುನಾವಣಾ ಆಯೋಗವು ಹಿಂಪಡೆದಿದೆ. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪೂರ್ಣಗೊಂಡಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ, ಆನ್‌ಲೈನ್ ‘ಫಾರ್ಮ್ 6’ ಅರ್ಜಿಯೊಂದಿಗೆ ಲಗತ್ತಿಸಲಾಗಿದ್ದ ಹೆಚ್ಚುವರಿ ಘೋಷಣಾ ಪತ್ರದ (Additional Declaration) ಕಡ್ಡಾಯ ನಿಯಮವನ್ನು ಭಾರತೀಯ ಚುನಾವಣಾ ಆಯೋಗವು (ECI) ಹಿಂಪಡೆದಿದೆ.

‘ದಿ ಹಿಂದೂ’ ಪತ್ರಿಕೆಯ ವಿಶೇಷ ವರದಿಯ ಪ್ರಕಾರ, ಸಾರ್ವಜನಿಕವಾಗಿ ಮತ್ತು ಕಾನೂನಾತ್ಮಕವಾಗಿ ವ್ಯಾಪಕ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಆಯೋಗವು ಸೆಪ್ಟೆಂಬರ್ 29ರಂದು ತನ್ನ ತಂತ್ರಾಂಶದಿಂದ ಪೋಷಕರ ಮತ್ತು ವಂಶಾವಳಿ ವಿವರ ಕೇಳುವ ಕಾಲಮ್‌ಗಳನ್ನು ಸದ್ದಿಲ್ಲದೆ ತೆಗೆದುಹಾಕಿದೆ. ಇದರಿಂದಾಗಿ, ಎಸ್‌ಐಆರ್ ಮುಗಿದಿರುವ ಪ್ರದೇಶಗಳ ಹೊಸ ಅರ್ಜಿದಾರರು ಇನ್ನುಮುಂದೆ ‘ಮತದಾರರ ನೋಂದಣಿ ನಿಯಮಗಳು-1960’ರ ಅಡಿ ನಿಗದಿಪಡಿಸಲಾದ ಕಡ್ಡಾಯ ನಮೂನೆ-6ನ್ನು ಮಾತ್ರ ಭರ್ತಿ ಮಾಡಿದರೆ ಸಾಕು.

ವಿವಾದಕ್ಕೆ ಕಾರಣವೇನು? ಕೇಂದ್ರ ಸರ್ಕಾರದ ಅಧಿಸೂಚನೆ ಅಥವಾ ಸಂಸತ್ತಿನ ಪರಾಮರ್ಶೆ ಇಲ್ಲದೆ, ಚುನಾವಣಾ ಆಯೋಗವು ತನ್ನ ‘ಇಸಿಐನೆಟ್’ (ECINET) ತಂತ್ರಾಂಶದ ಮೂಲಕ ‘ಫಾರ್ಮ್ 6’ ಜೊತೆ ಪೋಷಕರ ಹಳೆಯ ಮತದಾರರ ವಿವರಗಳ ಮ್ಯಾಪಿಂಗ್ ಡಿಕ್ಲರೇಷನ್ ಅನ್ನು ಏಕಪಕ್ಷೀಯವಾಗಿ ಸೇರ್ಪಡೆಗೊಳಿಸಿತ್ತು. 1960ರ ನಿಯಮಾವಳಿ ತಿದ್ದುಪಡಿ ಮಾಡುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಇದ್ದು, ಆಯೋಗವು ಕಾನೂನಿನ ಚೌಕಟ್ಟು ಮೀರಿ ನಡೆದುಕೊಂಡಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.

ಖುದ್ದು ಚುನಾವಣಾ ಆಯುಕ್ತರಾದ ಡಾ. ಸುಖ್‌ಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರೇ ಈ ಅನಧಿಕೃತ ಬದಲಾವಣೆಯನ್ನು ವಿರೋಧಿಸಿ ಆಂತರಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ತಾಂತ್ರಿಕ ನಿಯಮವು ಹೊಸ ಮತದಾರರು, ಗ್ರಾಮೀಣ ಭಾಗದ ನಾಗರಿಕರು ಹಾಗೂ ವಲಸೆ ಕಾರ್ಮಿಕರಿಗೆ ಮತದಾನದ ಹಕ್ಕು ಪಡೆಯಲು ದೊಡ್ಡ ಅಡೆತಡೆಯಾಗಿ ಪರಿಣಮಿಸಿತ್ತು.

ಮುಂದುವರಿದ ಆತಂಕ: ಆಯೋಗವು ಎಸ್‌ಐಆರ್ ಪೂರ್ಣಗೊಂಡಿರುವ ರಾಜ್ಯಗಳಲ್ಲಿ ಈ ನಿಯಮವನ್ನು ಸಡಿಲಗೊಳಿಸಿದ್ದರೂ, ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆ ಪ್ರಗತಿಯಲ್ಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಈ ಹೆಚ್ಚುವರಿ ಘೋಷಣಾಪತ್ರದ ನಿಯಮವನ್ನು ಇಂದಿಗೂ ಮುಂದುವರಿಸಲಾಗಿದೆ. ಇದರಿಂದ ಆ ಪ್ರದೇಶಗಳ ಅರ್ಹ ಮತದಾರರು ಇಂದಿಗೂ ತಾಂತ್ರಿಕ ಕಿರುಕುಳ ಹಾಗೂ ಹಕ್ಕು ವಂಚಿತರಾಗುವ ಆತಂಕವನ್ನು ಎದುರಿಸುತ್ತಿದ್ದಾರೆ. ನಾಗರಿಕ ಸಮಾಜದ ನಿರಂತರ ವಿರೋಧಕ್ಕೆ ಇದು ಭಾಗಶಃ ಸಿಕ್ಕ ಜಯವಾಗಿದ್ದರೂ, ಸಂಪೂರ್ಣ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಬಗ್ಗೆ ಗಂಭೀರ ಪ್ರಶ್ನೆಗಳು ಹಾಗೆಯೇ ಉಳಿದಿವೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Article

ಕರಾವಳಿ ರಾಜಕೀಯದ ಹೊಸ ಸಂಚಲನ – ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಯಾರು ? ಆಡಿಯೋ ವಿವಾದ ಮತ್ತು ಪರಿವಾರದ ಹಿನ್ನೆಲೆ

Published

on

ಕಲ್ಲಡ್ಕ ಪ್ರಭಾಕರ ಭಟ್‌ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಕೆಲದಿನಗಳ ಹಿಂದೆ ಸೌಜನ್ಯ ಮನೆ ಮತ್ತು ತಿಮರೋಡಿ ಮನೆಗೆ ಭೇಟಿ ನೀಡಿ ಸೌಜನ್ಯ ಹೋರಾಟಕ್ಕೆ ಧ್ವನಿಯೆತ್ತಿ ಬೆಂಬಲ ಘೋಷಿಸಿದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ
ಮಂಗಳೂರು: ಕರ್ನಾಟಕದ ಕರಾವಳಿ ರಾಜಕೀಯ ವಲಯದಲ್ಲಿ ಇತ್ತೀಚೆಗೆ ಸಂಘ ಪರಿವಾರದ ಪ್ರಮುಖ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ವೈರಲ್ ಆಡಿಯೋ ಒಂದು ತೀವ್ರ ಚರ್ಚೆಗೆ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಬಿರುಸಿಗೆ ಕಾರಣವಾಗಿದೆ. ಬಂಟ್ವಾಳದಲ್ಲಿ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಬಂಧಿಸಿರುವುದನ್ನು ವಿರೋಧಿಸಿ ವಿಎಚ್‌ಪಿ ಮತ್ತು ಬಜರಂಗದಳದಿಂದ ನಡೆದ ಪ್ರತಿಭಟನಾ ಸಭೆಯು ಈ ಎಲ್ಲಾ ಬೆಳವಣಿಗೆಗಳಿಗೆ ನಾಂದಿ ಹಾಡಿತು. ಈ ಹಿನ್ನೆಲೆಯಲ್ಲಿ, ಕರಾವಳಿ ರಾಜಕೀಯದ ಪ್ರಮುಖ ಮುಖಂಡರಾಗಿರುವ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ರಾಜಕೀಯ ಮತ್ತು ಸಾಂಸ್ಥಿಕ ಹಿನ್ನೆಲೆ ಏನು, ಈ ವಿವಾದ ಸೃಷ್ಟಿಯಾಗಲು ಕಾರಣವಾದ ಅಂಶಗಳೇನು ಮತ್ತು ಪಕ್ಷದ ಹಿತದೃಷ್ಟಿಯಿಂದ ಅವರು ಎತ್ತಿರುವ ಗಂಭೀರ ಪ್ರಶ್ನೆಗಳೇನು ? ಅವರು ಪ್ರಶ್ನಿಸಲು ಸಮರ್ಥರೇ ? ಪಕ್ಷದಲ್ಲಿ ಅವರು ಏನು ? ಎಂಬ ಸಂಪೂರ್ಣ ನೋಟ ಇಲ್ಲಿದೆ.

ಈ ವಿವಾದದ ಕೇಂದ್ರಬಿಂದುವಾಗಿರುವ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರು ಪಕ್ಷ ಹಾಗೂ ಸಂಘ ಪರಿವಾರಕ್ಕಾಗಿ ಮೂರು ದಶಕಗಳಿಗೂ ಅಧಿಕ ಕಾಲದಿಂದ ಪ್ರಾಮಾಣಿಕವಾಗಿ ಶ್ರಮಿಸಿರುವ ಧೀಮಂತ ವ್ಯಕ್ತಿಯಾಗಿದ್ದಾರೆ. 1989ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಶಾಖಾ ಶಿಕ್ಷಕರಾಗಿ ತಮ್ಮ ಸಾರ್ವಜನಿಕ ಬದುಕನ್ನು ಆರಂಭಿಸಿದ ಇವರು, 1990ರ ಅಯೋಧ್ಯೆ ರಾಮಜನ್ಮ ಭೂಮಿ ಮುಕ್ತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತರ ಪ್ರದೇಶದಲ್ಲಿ 15 ದಿನಗಳ ಕಾಲ ಜೈಲು ವಾಸವನ್ನೂ ಅನುಭವಿಸಿದ್ದಾರೆ. 1991-92ರಲ್ಲಿ ಕುರ್ನಾಡು ಮಂಡಲದಲ್ಲಿ ಸಂಘದ ವಿಸ್ತಾರಕನಾಗಿ, 1992ರ ಅಯೋಧ್ಯೆ ಕರಸೇವೆಯಲ್ಲಿ, ಮತ್ತು 1992-93ರಲ್ಲಿ ಹಿಂದೂ ಜಾಗರಣಾ ವೇದಿಕೆಯ ಗೋಳ್ತಮಜಲು ಮಂಡಲ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ 1993-94ರಲ್ಲಿ ಬಾಳ್ತಿಲ ಗ್ರಾಮ ಬಿಜೆಪಿ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರಾಗಿಯೂ, 2022ರಿಂದ 3 ವರ್ಷಗಳ ಕಾಲ ಕೇಂದ್ರ ಸರಕಾರದ ದಿಶಾ ಸಮಿತಿಯ ಸದಸ್ಯರಾಗಿಯೂ ಜನ ಸೇವೆಗೈದಿದ್ದಾರೆ.

ಮಾಜಿ ಶಾಸಕ ರುಕ್ಮಯ ಪೂಜಾರಿ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾಗಿದ್ದ ರಾಧಕೃಷ್ಣ ಅಡ್ಯಂತಾಯರು, ದಿವಂಗತ ಕಲ್ಲಡ್ಕ ರಾಮಪ್ಪ ಪೂಜಾರಿ ಏಳ್ತಿಮಾರ್‌, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಸೇರಿದಂತೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರವರೆಗಿನ ಎಲ್ಲರ ನೇತೃತ್ವದಲ್ಲಿ ಎಲ್ಲಾ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಸಂಚಾಲಕರಾಗಿ ದೀರ್ಘಕಾಲದಿಂದ ಗುರುತಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಅವರ ಅನುಯಾಯಿಯಾಗಿರುವ ಇವರು, ನೇರ ನಡೆನುಡಿಗೆ ಹೆಸರಾಗಿದ್ದಾರೆ.

ಈ ವಿವಾದ ಪ್ರಸ್ತಾವವಾಗಲು ಮತ್ತು ಕಲ್ಲಡ್ಕ ಅವರ ಆಡಿಯೋ ವೈರಲ್ ಆಗಲು ಬಂಟ್ವಾಳದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನಡೆದ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಬೆಳವಣಿಗೆಗಳೇ ಪ್ರಮುಖ ಕಾರಣವಾಗಿವೆ. ಸದರಿ ಸಭೆಯಲ್ಲಿ ಭಾಗವಹಿಸಿದ್ದ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಅವರು, “ಕರಾವಳಿ ತೀರದವರು ಅವಲಕ್ಕಿ ಪ್ರಿಯರು. ನಮ್ಮ ಬಾಯಲ್ಲಿ ಅವಲಕ್ಕಿ ಇಟ್ಟಂತೆ ನಮ್ಮ ಶಾಸಕರು ಮತ್ತು ಸಂಸದರೂ ಬಾಯಲ್ಲಿ ಅವಲಕ್ಕಿ ತುಂಬಿಕೊಂಡಿದ್ದಾರೆ” ಎಂದು ಸ್ಥಳೀಯ ಜನಪ್ರತಿನಿಧಿಗಳನ್ನು ಕಟುವಾಗಿ ಟೀಕಿಸಿದ್ದರು. ಕರಾವಳಿ ಭಾಗದ ನಾಯಕರ ವಿರುದ್ಧ ಹೊರಗಿನಿಂದ ಬಂದು ಪಾಠ ಮಾಡುವುದನ್ನು ಖಂಡಿಸಿದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಇಷ್ಟು ವರ್ಷಗಳಿಂದ ಸಂಘಪರಿವಾರಕ್ಕಾಗಿ ದುಡಿದ ನಳಿನ್ ಕುಮಾರ್ ಕಟೀಲ್, ಸತ್ಯಜಿತ್ ಹಾಗೂ ಅರುಣ್ ಕುಮಾರ್ ಪುತ್ತಿಲರಂತಹ ನಾಯಕರನ್ನು ಕಡೆಗಣಿಸುತ್ತಿರುವುದನ್ನು ಪ್ರಶ್ನಿಸಿದ್ದರು. ಮುಂದುವರಿದು, ಕಲ್ಲಡ್ಕ ಪ್ರಭಾಕರ ಭಟ್‌ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗುವಂತೆ ಅಗ್ರಹ ಮಾಡಿದ ಬೆನ್ನಲ್ಲೇ ಕೆಲದಿನಗಳ ಹಿಂದೆ ಧರ್ಮಸ್ಥಳದ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಅವರ ಮನೆ ಹಾಗೂ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ದಿಢೀರ್ ಭೇಟಿ ನೀಡಿ ನ್ಯಾಯದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಈ ಎಲ್ಲಾ ಬೆಳವಣಿಗೆಗಳ ಮುಂದುವರಿದ ಭಾಗವಾಗಿ, ಪಕ್ಷದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರು ವೈರಲ್ ಆಗಿರುವ ಆಡಿಯೋ ಮೂಲಕ ಕಠಿಣ ಸಂದೇಶವನ್ನು ರವಾನಿಸಿದ್ದಾರೆ. ಕರಾವಳಿ ನಾಯಕರನ್ನು ಹಗುರವಾಗಿ ಮಾತನಾಡಿರುವ ಬಗ್ಗೆ ನನಗೆ ನೋವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಆಂತರಿಕ ವಿಚಾರಗಳಲ್ಲಿ ಏನೇ ಸಮಸ್ಯೆಗಳಿದ್ದರೂ ಮುಖಂಡರ ಮೂಲಕ ಬಗೆಹರಿಸಿ ಪಕ್ಷಕ್ಕೆ ಯಾವುದೇ ರೀತಿಯ ಡ್ಯಾಮೇಜ್ ಆಗದಂತೆ ನೋಡಿಕೊಂಡಿರುವ ಕಲ್ಲಡ್ಕ ಅವರ ಈ ನೇರ ಎಚ್ಚರಿಕೆಯು, ಕರಾವಳಿ ಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕುವ ಮತ್ತು ಹೊರಗಿನವರ ಹಸ್ತಕ್ಷೇಪವನ್ನು ಸಹಿಸದ ಆಕ್ರೋಶದ ಪ್ರತಿಬಿಂಬವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Continue Reading

accident

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರು

Published

on

ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.

ಕರಿಕ್ಕಳ – ನಿಂತಿಕಲ್ ಮಧ್ಯೆ ಮುಚ್ಚಿಲ ಎಂಬಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಎದುರಿನಿಂದ ಹೋಗುತ್ತಿದ್ದ ಕಾರು ಸಡನ್ನಾಗಿ ಬ್ರೇಕ್‌ ಹಾಕಿದ ಪರಿಣಾಮ ಶಾಸಕರ ಕಾರು ಅದಕ್ಕೆ ಡಿಕ್ಕಿ ಹೊಡೆದಿದೆಯೆನ್ನಲಾಗಿದೆ.

ಅಪಘಾತದ ವಿವರ:
ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಕಾರು ಜಖಂಗೊಂಡಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Continue Reading

Bantawala

ಸಂಘ ಪರಿವಾರದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಆಡಿಯೋ ವೈರಲ್! “ಹೊರಗಿನಿಂದ ಬಂದು ಹಿಂದುತ್ವದ ಪಾಠ ಬೇಡ”: ಸತೀಶ್ ದಾವಣಗೆರೆ ಭಾಷಣದ ಬೆನ್ನಲ್ಲೇ ಬಯಲಾದ ಆಕ್ರೋಶ

Published

on

ಬಂಟ್ವಾಳ ಹಿಂದುತ್ವ ವಿವಾದ: ಶಾಸಕರ ವಿರುದ್ಧದ ಹೇಳಿಕೆಗೆ ಬಿಜೆಪಿ ಮುಖಂಡ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ತೀವ್ರ ಆಕ್ರೋಶ;

ಬಂಟ್ವಾಳ: ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಬಂಧಿಸಿರುವುದನ್ನು ವಿರೋಧಿಸಿ ವಿಎಚ್‌ಪಿ (VHP) ಮತ್ತು ಬಜರಂಗದಳದಿಂದ ಇತ್ತೀಚೆಗೆ ನಡೆದ ಪ್ರತಿಭಟನಾ ಸಭೆಯು ಕರಾವಳಿ ರಾಜಕೀಯದಲ್ಲಿ ಭಾರೀ ಬಿರುಸಿಗೆ ಕಾರಣವಾಗಿದೆ. ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡರೊಬ್ಬರು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರೆ, ಇದಕ್ಕೆ ಪ್ರತಿಯಾಗಿ ಬಿಜೆಪಿ ಮುಖಂಡರೊಬ್ಬರ ಹೆಸರಿನಲ್ಲಿ ಹರಿದಾಡುತ್ತಿರುವ ಆಡಿಯೋ ಕ್ಲಿಪ್ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಿ.ಸಿ. ರೋಡ್ ಸಭೆ: ಕರಾವಳಿ ನಾಯಕರ ವಿರುದ್ಧ ಸತೀಶ್ ದಾವಣಗೆರೆ ಆಕ್ರೋಶ
ಬಿ.ಸಿ.ರೋಡಿನ ರಕ್ತೇಶ್ವರಿ ಸನ್ನಿಧಿ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಅವರು ಕರಾವಳಿಯ ಬಿಜೆಪಿ ಶಾಸಕರು ಹಾಗೂ ಸಂಸದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. “ನೀವು ಇಂದು ಆಡಳಿತದಲ್ಲಿದ್ದೀರಿ ಮತ್ತು ಗೆದ್ದಿದ್ದೀರಿ ಎಂದಾದರೆ ಅದು ಈ ಕೇಸರಿ ಕಾರ್ಯಕರ್ತರಿಂದಲೇ” ಎಂದು ನೆನಪಿಸಿದ ಅವರು, ಸ್ಥಳೀಯ ಶಾಸಕರು ಸರ್ಕಾರದ ಗಮನಕ್ಕೆ ಕರಾವಳಿಯ ವಾಸ್ತವಿಕ ವಿಷಯಗಳನ್ನು ತರಬೇಕು ಎಂದು ಆಗ್ರಹಿಸಿದ್ದರು.

ಮುಖ್ಯಮಂತ್ರಿಗಳ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅವರು, “ಕರಾವಳಿ ತೀರದವರು ಅವಲಕ್ಕಿ ಪ್ರಿಯರು. ನಮ್ಮ ಬಾಯಲ್ಲಿ ಅವಲಕ್ಕಿ ಇಟ್ಟಂತೆ ನಮ್ಮ ಶಾಸಕರು ಮತ್ತು ಸಂಸದರೂ ಬಾಯಲ್ಲಿ ಅವಲಕ್ಕಿ ತುಂಬಿಕೊಂಡಿದ್ದಾರೆ” ಎಂದು ಕಟುವಾಗಿ ಟೀಕಿಸಿದ್ದರು.

ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಆಡಿಯೋ ವೈರಲ್
ಸತೀಶ್ ದಾವಣಗೆರೆ ಅವರ ಈ ಹೇಳಿಕೆಗೆ ಬಿಜೆಪಿ ಪ್ರಮುಖರಾದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾದ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕರ್ನಾಟಕ ಬಿಜೆಪಿ ಐಟಿ ಸೆಲ್‌ನ ಮಾಜಿ ಮುಖ್ಯಸ್ಥ ವಿಕಾಸ್ ಪುತ್ತೂರು ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆನ್ನಲಾದ ಈ ಆಡಿಯೋದಲ್ಲಿ, ಕರಾವಳಿ ಭಾಗದ ನಾಯಕರ ವಿರುದ್ಧ ಹೊರಗಿನಿಂದ ಬಂದು ಪಾಠ ಮಾಡುವುದನ್ನು ಖಂಡಿಸಲಾಗಿದೆ.

“ಮೊನ್ನೆ ದಾವಣಗೆರೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಮುಸ್ಲಿಮರೆಲ್ಲರೂ ಒಗ್ಗೂಡಿ ಕಾಂಗ್ರೆಸ್ ಪರ ಮತ ಹಾಕಿದ್ದರೂ ಅಲ್ಲಿ ಕಾಂಗ್ರೆಸ್ ಗೆದ್ದಿದೆ. ಅಲ್ಲಿ ಜಾತಿ ರಾಜಕಾರಣ ಮಾಡಿ, ಜಾತಿಗೆ ಮತ ಕೊಟ್ಟವರು ಇಲ್ಲಿಗೆ ಬಂದು ನಮಗೆ ಹಿಂದುತ್ವದ ಬೋಧನೆ ಮಾಡುತ್ತಾರೆ” ಎಂದು ಆಡಿಯೋದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ಮತ್ತೊಂದು ಆಡಿಯೋ ವೈರಲ್: ಮುಖಂಡರ ಅಸಮಾಧಾನ

ಸತೀಶ್ ದಾವಣಗೆರೆ ಅವರ ಈ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಪ್ರಮುಖ ಕೃಷ್ಣಪ್ಪ ಕಲ್ಲಡ್ಕ ಅವರ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಾಗಲೇ ಅದನ್ನು ಸಮರ್ಥಿಸಿಕೊಂಡ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ಇನ್ನೊಂದು ಆಡಿಯೋ ವೈರಲ್‌ ಆಗಿದೆ. ಈ ಕುರಿತು ಆಡಿಯೋದಲ್ಲಿ ಅವರು ಮಾತನಾಡಿರುವ ಮುಖ್ಯಾಂಶಗಳು ಹೀಗಿವೆ:

ಪ್ರತಿಭಟನಾ ಹೇಳಿಕೆಗೆ ಆಕ್ಷೇಪ: ಬಿಸಿರೋಡಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸತೀಶ್ ದಾವಣಗೆರೆ ಅವರು ಮಾತನಾಡಿದ ಕೆಲವು ವಿಚಾರಗಳು ಸಂಪೂರ್ಣ ತಪ್ಪು ಎಂದು ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಗಂಟಾಘೋಷವಾಗಿ ತಿಳಿಸಿದ್ದಾರೆ.

ನಳಿನ್ ಕುಮಾರ್ ಕಟೀಲ್ ಸೇವೆ ಸ್ಮರಣೆ: ಹಿಂದೂ ಸಮಾಜ, ಸಂಘಟನೆ ಹಾಗೂ ಕಾರ್ಯಕರ್ತರಿಗೆ ಎಲ್ಲಾ ರೀತಿಯ ಸಹಾಯ ಮಾಡಿರುವ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರನ್ನು ಹಿಂದೂ ನಾಯಕರು ಮಾತನಾಡಿ ಮುಗಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ವರ್ಷಗಳಿಂದ ಸಂಘಪರಿವಾರಕ್ಕಾಗಿ ದುಡಿದ ನಳಿನ್ ಕುಮಾರ್ ಕಟೀಲ್, ಸತ್ಯಜಿತ್ ಹಾಗೂ ಅರುಣ್ ಕುಮಾರ್ ಪುತ್ತಿಲರಂತಹ ನಾಯಕರನ್ನು ಎಲ್ಲಿಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಪಕ್ಷ ಮತ್ತು ಸಂಘಟನೆಗೆ ಎಚ್ಚರಿಕೆ: ಈಗ ಮತ್ತೊಮ್ಮೆ ಕಷ್ಟದ ಸಂದರ್ಭದಲ್ಲಿ ಬಿಜೆಪಿ ಸಂಘಟನೆ ಇದ್ದು, ಬಿಸಿರೋಡಿನಲ್ಲಿ ಹಿಂದೂ ನಾಯಕರೊಬ್ಬರು ಎಲ್ಲಾ ಶಾಸಕರು ಹಾಗೂ ಎಂ.ಪಿ.ಗಳನ್ನು ದೂಷಿಸಿದರೆ ಪಕ್ಷ ಮತ್ತು ಸಂಘಟನೆ ಹೇಗೆ ಉಳಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ‘ನಾವು ಏನಾದರೂ ಸತ್ಯ ಹೇಳಿದರೆ ಅದಕ್ಕೂ ದೂರು ನೀಡಿ CCB ಪೊಲೀಸರನ್ನು ಮನೆಗೆ ಕಳುಹಿಸುತ್ತೀರಿ’ ಎಂದು ಆರೋಪಿಸಿದ್ದಾರೆ.

ಸಮನ್ವಯಕ್ಕೆ ಆಗ್ರಹ: ಪ್ರತಾಪ್ ಸಿಂಹ, ಕೆ.ಎಸ್. ಈಶ್ವರಪ್ಪ ಮತ್ತು ಅನಂತ್ ಕುಮಾರ್ ಹೆಗಡೆ ಅವರಂತಹ ಮುಖಂಡರನ್ನು ಕುಳಿತು ಮಾತನಾಡಿಸಿ, ಸಮನ್ವಯ ಸಮಿತಿ ಮಾಡಿಕೊಂಡು ಇಡೀ ಹಿಂದೂ ಸಮಾಜದ ಎಲ್ಲರನ್ನು ಒಟ್ಟು ಮಾಡುವುದು ಬಿಟ್ಟು ಜನಪ್ರತಿನಿಧಿಗಳಿಗೆ ಅವಮಾನ ಮಾಡುವುದು ಸರಿಯಲ್ಲ ಎಂದು ಆಡಿಯೋದಲ್ಲಿ ಖಂಡಿಸಲಾಗಿದೆ.

“ಇನ್ನು ಮುಂದೆ ಸಂಘಟನೆಗೆ ಆರ್ಥಿಕ ಸಹಕಾರವಿಲ್ಲ” – ಎಚ್ಚರಿಕೆ
ಆಡಿಯೋ ಮುಂದುವರಿದು, “ಇವರೆಲ್ಲ ಇಲ್ಲಿ ಬಂದು ನಮಗೆ ಹಿಂದುತ್ವದ ಪಾಠ ಮಾಡಲು ಹೊರಟಿದ್ದಾರೆ. ಇದು ನಮ್ಮ ಭದ್ರಕೋಟೆ, ನಾವು ಹಿಂದುತ್ವಕ್ಕೆ ಸೇವೆ ಸಲ್ಲಿಸಿ ಸಾಕೋ ಸಾಕಾಗಿದೆ” ಎಂದು ಆಕ್ರೋಶ ಹೊರಹಾಕಲಾಗಿದೆ. ಇಂಥವರಿಗೆ ಸಂಘ ಪರಿವಾರದಲ್ಲಿ ಯಾವುದೇ ಜವಾಬ್ದಾರಿ ನೀಡಬಾರದು ಎಂದೂ, ಇವರ ಪ್ರವಾಸಗಳು ಮುಂದುವರಿದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದೂ ಎಚ್ಚರಿಸಲಾಗಿದೆ.

ಈ ಹೇಳಿಕೆಗಳನ್ನು ಈಗ ಕಾಂಗ್ರೆಸ್ ಪಕ್ಷವು ಅಸ್ತ್ರವಾಗಿ ಬಳಸಿ ಕಟ್ ಮಾಡಿ ಪ್ರಚಾರ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಆಡಿಯೋದಲ್ಲಿ, “ದಾವಣಗೆರೆಯವರು ತಕ್ಷಣ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಬೇಕು” ಎಂದು ಆಗ್ರಹಿಸಲಾಗಿದೆ. ಕೊನೆಯಲ್ಲಿ, “ಇನ್ನು ಮುಂದೆ ನಾವು ಸಂಘಟನೆಗೆ ಒಂದು ರೂಪಾಯಿಯ ಸಹಕಾರ ಮಾಡುವುದಿಲ್ಲ, ಸಂಘಟನೆಯ ಕಾರ್ಯಕ್ರಮಕ್ಕೂ ಬರುವುದಿಲ್ಲ. ನಾವು ಬಿಜೆಪಿ, ಅಷ್ಟೇ” ಎಂದು ಸ್ಪಷ್ಟಪಡಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!