Connect with us

court

ಸಿವಿಲ್ ವ್ಯಾಜ್ಯದಲ್ಲಿ ಪೊಲೀಸ್ ಹಸ್ತಕ್ಷೇಪ: ಉಳ್ಳಾಲ ಇನ್‌ಸ್ಪೆಕ್ಟರ್‌ಗೆ ಹೈಕೋರ್ಟ್ ತೀವ್ರ ತರಾಟೆ ಹಾಗೂ ಖಡಕ್ ವಾರ್ನಿಂಗ್!

Published

on

ಬೆಂಗಳೂರು: ನ್ಯಾಯಾಲಯಗಳು ನೂರಾರು ಬಾರಿ ಆದೇಶಿಸಿದ್ದರೂ ಮತ್ತು ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ, ಪೊಲೀಸರು ಸಿವಿಲ್ ವ್ಯಾಜ್ಯಗಳಲ್ಲಿ ಅನಧಿಕೃತವಾಗಿ ಹಸ್ತಕ್ಷೇಪ ಮಾಡುವುದು ಮುಂದುವರಿದಿದೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ, ಸಿವಿಲ್ ವಿವಾದವೊಂದರಲ್ಲಿ ಖಾಸಗಿ ಕಂಪನಿಯ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿದ್ದ ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯ ತನಿಖಾಧಿಕಾರಿಗೆ ಕರ್ನಾಟಕ ಹೈಕೋರ್ಟ್ ತೀವ್ರ ಛೀಮಾರಿ ಹಾಕಿ, ಸಮವಸ್ತ್ರ ಕಳಚುವ ಬಗ್ಗೆ ಖಡಕ್ ಎಚ್ಚರಿಕೆ ನೀಡಿದೆ.

ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಏಕಸದಸ್ಯ ಪೀಠ ಈ ವಿಚಾರಣೆ ನಡೆಸಿದೆ.

ಪ್ರಕರಣದ ಹಿನ್ನೆಲೆ ಏನು?

ಬೆಂಗಳೂರು ಮೂಲದ ಪ್ರತಿಷ್ಠಿತ ‘ಝೈಟ್ ಇಂಟೀರಿಯರ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿಯು ವಾಣಿಜ್ಯ ಕಟ್ಟಡವೊಂದರಲ್ಲಿ ಎಲೆಕ್ಟ್ರಿಕಲ್ ಕಾಮಗಾರಿ ನಡೆಸಿತ್ತು. ಆದರೆ ಒಪ್ಪಂದದಂತೆ ತಮಗೆ ಬರಬೇಕಿರುವ 60,39,046 ರೂ. ಹಣವನ್ನು ಕಂಪನಿ ಪಾವತಿಸಿಲ್ಲ ಎಂದು ಆರೋಪಿಸಿ ಎಲೆಕ್ಟ್ರಿಕಲ್ ಗುತ್ತಿಗೆದಾರ ಸುನೀಲ್ ಕುಮಾರ್ ಪೈ ಅವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ದೂರಿನ ಆಧಾರದ ಮೇಲೆ ಉಳ್ಳಾಲ ಠಾಣೆಯ ತನಿಖಾಧಿಕಾರಿ ವಿರೂಪಾಕ್ಷಯ್ಯ ಅವರು, ಯಾವುದೇ ಸಮರ್ಪಕ ಪರಿಶೀಲನೆ ನಡೆಸದೆ ಕಂಪನಿಯ ನಿರ್ದೇಶಕರು ಹಾಗೂ ಉದ್ಯೋಗಿಗಳ ಬ್ಯಾಂಕ್‌ ಖಾತೆಗಳನ್ನು ಫ್ರೀಜ್ (ಸ್ಥಗಿತ) ಮಾಡಿಸಿದ್ದರು. ಇದರಿಂದ ಕಂಪನಿಯು ತನ್ನ ಉದ್ಯೋಗಿಗಳಿಗೆ ವೇತನ ಪಾವತಿಸಲಾಗದ ಸಂಕಷ್ಟಕ್ಕೆ ಸಿಲುಕಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್‌ ಮೊರೆ ಹೋಗಿತ್ತು.

ನ್ಯಾಯಾಲಯದಲ್ಲಿ ವಾದ-ಪ್ರತಿವಾದ:

ವಿಚಾರಣೆ ವೇಳೆ ಕಂಪನಿ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, “ಎಲೆಕ್ಟ್ರಿಕಲ್ ಉಪಕರಣ ಖರೀದಿ ಮತ್ತು ಸೇವಾ ಶುಲ್ಕವಾಗಿ ಕಂಪನಿಯು ಒಪ್ಪಂದದಂತೆ ಈಗಾಗಲೇ 50,11,983 ರೂ. ಅನ್ನು ಗುತ್ತಿಗೆದಾರರಿಗೆ ಪಾವತಿಸಿದೆ. ಈ ಸತ್ಯಾಂಶವನ್ನು ಮರೆಮಾಚಿ ದೂರು ನೀಡಲಾಗಿದೆ. ಅಲ್ಲದೆ, ಯಾವುದೇ ವಿವಾದ ಉಂಟಾದರೆ ಸಿವಿಲ್ ಕೋರ್ಟ್ ಅಥವಾ ಮಧ್ಯಸ್ಥಿಕೆ ಕೇಂದ್ರವನ್ನು ಸಂಪರ್ಕಿಸಬೇಕೆಂದು ಒಪ್ಪಂದದಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದು ಸಂಪೂರ್ಣ ಸಿವಿಲ್ ವ್ಯಾಜ್ಯವಾಗಿದ್ದರೂ ಪೊಲೀಸರು ಕ್ರಿಮಿನಲ್ ಪ್ರಕರಣವಾಗಿ ತಿರುಚಿ ದೌರ್ಜನ್ಯ ಎಸಗಿದ್ದಾರೆ” ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಹೈಕೋರ್ಟ್ ಚಾಟಿ ಹಾಗೂ ಎಚ್ಚರಿಕೆಯ ನುಡಿಗಳು:

ತನಿಖಾಧಿಕಾರಿ ವಿರೂಪಾಕ್ಷಯ್ಯ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ತನಿಖಾಧಿಕಾರಿಗಳ ಅತಿಉತ್ಸಾಹವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ:

“28 ವರ್ಷ ಸೇವೆ ಸಲ್ಲಿಸಿದ್ದೀರಿ ಎಂಬ ಕಾರಣಕ್ಕೆ ಕಂಪನಿಯ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಿದ್ದೀರಾ? ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರು ಹಸ್ತಕ್ಷೇಪ ಮಾಡುವ ಅಧಿಕಾರ ಯಾರು ಕೊಟ್ಟರು? ಪೊಲೀಸರೆಂದರೆ ಸಿವಿಲ್ ಕೋರ್ಟೇ?” ಎಂದು ಪ್ರಶ್ನಿಸಿದರು.

“ಈ ನ್ಯಾಯಾಲಯವು ಅಮಾನತು ಆದೇಶ ಮಾಡಿದರೆ, ನಿಮ್ಮ ಪೊಲೀಸ್ ಸಮವಸ್ತ್ರವೇ ಇರುವುದಿಲ್ಲ. ಉಳಿದ ಸೇವಾ ಅವಧಿಯನ್ನು ಸರ್ವೀಸ್ ಮ್ಯಾಟರ್ ಮುಂದಿಟ್ಟುಕೊಂಡು ಕೋರ್ಟ್‌ಗೆ ಸುತ್ತುತ್ತಾ ಕಳೆಯಬೇಕಾಗುತ್ತದೆ. ಸಮವಸ್ತ್ರ ಇಲ್ಲವಾದರೆ ಏನಾಗುತ್ತದೆ ಗೊತ್ತಲ್ಲ? ನೀವೇ ಹಾಲು-ಬಿಸ್ಕೆಟ್ ಹಾಕಿ ಪೋಷಿಸಿದ ನಿಮ್ಮ ಮನೆಯ ನಾಯಿ ಸಹ ನಿಮ್ಮನ್ನು ಮೂಸುವುದಿಲ್ಲ. ಮನೆ ಹತ್ತಿರ ಹೋದರೆ ನಾಯಿ ನಿಮ್ಮನ್ನು ನೋಡಿ ಬೊಗಳುತ್ತದೆ.”

“ಅಮಾನತು ಮಾಡಿ, ನಿಮ್ಮ ತಲೆ ಹಾಗೂ ಭುಜಕೀರ್ತಿಯನ್ನು (ಪೊಲೀಸ್ ಕ್ಯಾಪ್, ಯೂನಿಫಾರ್ಮ್ ಮೇಲಿನ ಸ್ಟಾರ್) ಇಳಿಸಲೆ? ಸಮವಸ್ತ್ರ ಹಾಕಿಕೊಂಡು ವಸೂಲಿಗೆ ಇಳಿದಿದ್ದೀರಾ? ಪೊಲೀಸರು ನಿಮ್ಮ ಪವರ್ ತೋರಿಸಿದರೆ, ಕೋರ್ಟ್ ಪವರ್ ನಾನು ತೋರಿಸಲೇ? ಈ ಕೂಡಲೇ ಮಂಗಳೂರು ಪೊಲೀಸ್ ಆಯುಕ್ತರು ಮತ್ತು ತನಿಖಾಧಿಕಾರಿಯನ್ನು ಅಮಾನತುಪಡಿಸಲು ಸರ್ಕಾರಕ್ಕೆ ಆದೇಶಿಸಲೆ?” ಎಂದು ಕಠಿಣ ಪದಗಳಲ್ಲಿ ತರಾಟೆಗೆ ತೆಗೆದುಕೊಂಡರು.

ಸರ್ಕಾರದ ಅಭಿಯೋಜಕರ ಭರವಸೆ ಹಾಗೂ ಮುಂದಿನ ನಡೆ:

ಆರಂಭದಲ್ಲಿ ತನಿಖಾಧಿಕಾರಿ ವಿರೂಪಾಕ್ಷಯ್ಯ ಅವರನ್ನು ಸೇವೆಯಿಂದ ಅಮಾನತುಪಡಿಸಲು ನಿರ್ಧರಿಸಿ ಆದೇಶ ಬರೆಯಲು ಪೀಠ ಮುಂದಾಗಿತ್ತು. ಆದರೆ, ರಾಜ್ಯ ಸರ್ಕಾರದ ಅಭಿಯೋಜಕರು ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಆ ನಿರ್ಧಾರದಿಂದ ನ್ಯಾಯಾಲಯ ಹಿಂದೆ ಸರಿಯಿತು.

ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶನ ನೀಡಿದ್ದು, ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿದೆ

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

court

ಪರಿಷ್ಕೃತ ಫಾರ್ಮ್ 6 ಗೆ ಸುಪ್ರೀಂಕೋರ್ಟ್ ಅನುಮೋದನೆ ಇಲ್ಲ: ಸಿಜೆಐ ಸೂರ್ಯ ಕಾಂತ್ ಸ್ಪಷ್ಟನೆ

Published

on

ಹೊಸದಿಲ್ಲಿ, ಅ.5: ಹೊಸ ಮತದಾರರ ನೋಂದಣಿಗೆ ಬಳಸುವ ಫಾರ್ಮ್ 6 ಗೆ ತಿದ್ದುಪಡಿ ತಂದ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. “ಪರಿಷ್ಕೃತ ಫಾರ್ಮ್ 6 ಗೆ ಸುಪ್ರೀಂಕೋರ್ಟ್ ಅನುಮೋದನೆ ನೀಡಿಲ್ಲ, ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇವೆ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಇಂದು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂಬ ಆರೋಪದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಹೇಳಿಕೆ ನೀಡಿದೆ.

ಕೋರ್ಟ್ ನಲ್ಲಿ ಏನಾಯ್ತು?

ನೋಟಿಸ್ ಜಾರಿ: ಅರ್ಜಿಯ ಬಗ್ಗೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದೆ.

ಯಾರು ತಿದ್ದುಪಡಿ ಮಾಡಿದರು? “ದಾಖಲೆಗಳನ್ನು ನೋಡಿದ ನಂತರ ಫಾರ್ಮ್ 6 ಅನ್ನು ಯಾರು ತಿದ್ದುಪಡಿ ಮಾಡಿದ್ದಾರೆ ಎಂದು ನೋಡಲು ಬಯಸುತ್ತೇವೆ” ಎಂದು ಸಿಜೆಐ ಹೇಳಿದ್ದಾರೆ.

ಅಮಾನತಿಗೆ ನಕಾರ: ಪತ್ರಿಕಾ ವರದಿಗಳ ಆಧಾರದ ಮೇಲೆ ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಲು ನ್ಯಾಯಪೀಠ ನಿರಾಕರಿಸಿದೆ.

    ಫಾರ್ಮ್ 6 ವಿವಾದ ಏನು?

    ಫಾರ್ಮ್ 6 ಎಂಬುದು ಹೊಸ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಬಳಸುವ ಅಧಿಕೃತ ಅರ್ಜಿ. ಇದು ‘ಮತದಾರರ ನೋಂದಣಿ ನಿಯಮಗಳು, 1960’ರ ಭಾಗ.

    ಆಯೋಗದ ಪ್ರಕಾರ, ತಾವು ಫಾರ್ಮ್ 6 ಅನ್ನು ತಿದ್ದುಪಡಿ ಮಾಡಿಲ್ಲ, ಕೇವಲ ಹೆಚ್ಚುವರಿ ಘೋಷಣೆ (annexure) ಸೇರಿಸಿದ್ದೇವೆ ಎಂದು ಹೇಳಿದೆ.

    ಈ ಹೊಸ ಘೋಷಣೆಯ ಪ್ರಕಾರ, ಹೊಸ ಮತದಾರರು ತಮ್ಮ ಪೋಷಕರು ಅಥವಾ ಅಜ್ಜ-ಅಜ್ಜಿಯರ ಹೆಸರು ಹಿಂದಿನ SIR (ವಿಶೇಷ ತೀವ್ರ ಪರಿಷ್ಕರಣೆ) ಪಟ್ಟಿಯಲ್ಲಿ ಇದೆಯೇ ಎಂದು ಹೇಳುವುದು ಕಡ್ಡಾಯವಾಗಿತ್ತು.

    ಆದರೆ ಈ ಬಗ್ಗೆ ಕಾನೂನು ಸಚಿವಾಲಯಕ್ಕೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು RTI ಉತ್ತರದಲ್ಲಿ ತಿಳಿದುಬಂದಿತ್ತು ಎಂಬ ಆರೋಪ ಕೇಳಿಬಂದಿತ್ತು.

    ಮತದಾರರಿಗೆ ಇದರ ಅರ್ಥವೇನು?

    ನೀವು ಹೊಸ ಮತದಾರರಾಗಿ ನೋಂದಾಯಿಸಲು ಹೋಗುತ್ತಿದ್ದರೆ, ಅಧಿಕೃತ voter.eci.gov.in ಅಥವಾ ನಿಮ್ಮ BLO ಬಳಿ ಇರುವ ಮೂಲ ಫಾರ್ಮ್ 6 ಮಾತ್ರ ಭರ್ತಿ ಮಾಡಿ.

    ನಿಮ್ಮ ಪೋಷಕರ ಹಳೆಯ ದಾಖಲೆ ಇಲ್ಲ ಎಂಬ ಕಾರಣಕ್ಕೆ ನಿಮ್ಮ ಅರ್ಜಿ ತಿರಸ್ಕೃತವಾಗುವುದಿಲ್ಲ. ಸುಪ್ರೀಂಕೋರ್ಟ್ ಈ ವಿಷಯವನ್ನು ಪರಿಶೀಲಿಸುತ್ತಿದೆ.

    ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಿದ ನಂತರ ಅಂತಿಮ ತೀರ್ಪು ಬರಲಿದೆ.

    ಆಯೋಗದ ಹಿಂದಿನ ಹೇಳಿಕೆಯಲ್ಲಿ ಈ ಹೊಸ ಘೋಷಣೆಗೆ ಸುಪ್ರೀಂಕೋರ್ಟ್ ಅನುಮೋದನೆ ಇದೆ ಎಂದು ಹೇಳಲಾಗಿತ್ತು, ಆದರೆ ಇಂದು ಕೋರ್ಟ್ ಅದನ್ನು ನಿರಾಕರಿಸಿದೆ.

    ಮತದಾರರು ಗೊಂದಲಕ್ಕೆ ಒಳಗಾಗಬೇಡಿ, ಅಧಿಕೃತ ಮಾಹಿತಿಗಾಗಿ ನಿಮ್ಮ ತಾಲ್ಲೂಕು ಚುನಾವಣಾ ಕಚೇರಿಯನ್ನು ಸಂಪರ್ಕಿಸಿ.

    Continue Reading

    complaint

    ಸೌಜನ್ಯ ಕೇಸ್: SIT ನಲ್ಲಿ ಕಳಂಕಿತ ಅಧಿಕಾರಿಗಳ ನೇಮಕಕ್ಕೆ ಆಕ್ಷೇಪ – ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಾಯಿ ಕುಸುಮಾವತಿ

    Published

    on

    ಹೊಸ ತನಿಖಾ ತಂಡದಲ್ಲಿ ‘ಕಳಂಕಿತ’ ಅಧಿಕಾರಿಗಳ ನೇಮಕಕ್ಕೆ ಗಿರೀಶ್ ಮಟ್ಟಣ್ಣನವರ ತೀವ್ರ ವಿರೋಧ

    ಧರ್ಮಸ್ಥಳದ ಕುಖ್ಯಾತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡದ (SIT) ರಚನೆ ಹಾಗೂ ಅದರಲ್ಲಿರುವ ಕೆಲವು ಅಧಿಕಾರಿಗಳ ಹಿನ್ನೆಲೆಯು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ನ್ಯಾಯಯುತ ತನಿಖೆ ನಡೆಯಬೇಕೆಂಬ ಆಶಯಕ್ಕೆ ವಿರುದ್ಧವಾಗಿ, ಹಿಂದಿನ ತನಿಖೆಯಲ್ಲಿ ಲೋಪವೆಸಗಿದ ಹಾಗೂ ಕಳಂಕಿತರೆನ್ನಲಾದ ಅಧಿಕಾರಿಗಳನ್ನೇ ಮರುತನಿಖಾ ತಂಡಕ್ಕೂ ನೇಮಿಸಲಾಗಿದೆ ಎಂದು ಸೌಜನ್ಯಳ ತಾಯಿ ಕುಸುಮಾವತಿ ಪರ ವಕೀಲರು ಹಾಗೂ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ತನಿಖಾ ತಂಡದ ನ್ಯಾಯಪರತೆ ಮತ್ತು ಸಾಮರ್ಥ್ಯದ ಬಗ್ಗೆ ಪ್ರಶ್ನಿಸಿ ಸೌಜನ್ಯಳ ತಾಯಿ ಕುಸುಮಾವತಿ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿದ್ದರೆ, ಮಾಜಿ ಪೊಲೀಸ್ ಅಧಿಕಾರಿ ಹಾಗೂ ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರು ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.

    ತಾಯಿ ಕುಸುಮಾವತಿ ಪರ ವಕೀಲರ ವಾದವೇನು?

    ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ದೂರಿನಲ್ಲಿ ಕುಸುಮಾವತಿ ಪರ ವಕೀಲರು ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ:

    • ಪ್ರಕರಣದ ಆರಂಭಿಕ ತನಿಖೆಯಿಂದಲೇ ಗಂಭೀರ ಲೋಪಗಳು ನಡೆದಿವೆ. ಸ್ಥಳದಲ್ಲಿ ಸಿಗಬಹುದಾದ ಸಾಕ್ಷ್ಯಗಳನ್ನು ಸರಿಯಾಗಿ ಸಂಗ್ರಹಿಸಿಲ್ಲ, ಮಹತ್ವದ ಸಾಕ್ಷ್ಯಗಳನ್ನು ಕಡೆಗಣಿಸಲಾಗಿದೆ.
    • ದೂರವಾಣಿ ಕರೆಗಳ ಟವರ್ ಲೊಕೇಶನ್ ಮಾಹಿತಿಯನ್ನು ಸಮರ್ಪಕವಾಗಿ ದಾಖಲಿಸಿಲ್ಲ, ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಆಂತರಿಕ ಮಾದರಿಗಳ ಸಂಗ್ರಹದಲ್ಲೂ ಲೋಪವಾಗಿದೆ.
    • ಈ ಹಿಂದೆ ತನಿಖೆಯಲ್ಲಿ ಲೋಪ ಎಸಗಿದ ಮತ್ತು ಪ್ರಭಾವಿಗಳಿಗೆ ಸಹಾಯ ಮಾಡಿದ ಆರೋಪ ಹೊತ್ತಿರುವ ಅದೇ ಅಧಿಕಾರಿಗಳನ್ನೇ ಮತ್ತೆ ಹೊಸ ತಂಡಕ್ಕೆ ನೇಮಿಸಿದರೆ, ಹಿಂದಿನ ತಪ್ಪುಗಳೇ ಪುನರಾವರ್ತನೆಯಾಗುವ ಆತಂಕವಿದೆ.

    ಈ ಹಿನ್ನೆಲೆಯಲ್ಲಿ ಹೊಸ ತನಿಖೆಯನ್ನು ಹಿಂದಿನ ತನಿಖೆಗಳಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿ, ಯಾವುದೇ ಪೂರ್ವಾಗ್ರಹವಿಲ್ಲದೆ ನಡೆಸಬೇಕು ಮತ್ತು ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದು ವಕೀಲರು ತಿಳಿಸಿದ್ದಾರೆ.

    ಮಟ್ಟಣ್ಣನವರ ಆಕ್ರೋಶ

    ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಗಿರೀಶ್ ಮಟ್ಟಣ್ಣನವರು, “ಕಳಂಕಿತ ಮತ್ತು ಶಂಕಿತ ಹಿನ್ನೆಲೆ ಇರುವ ಅಧಿಕಾರಿಗಳನ್ನು ಕರ್ತವ್ಯದಿಂದ ದೂರವಿಡಿ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಎಚ್ಚರಿಸಿದ್ದರೂ, ಸರ್ಕಾರ ಅದನ್ನು ಉಲ್ಲಂಘಿಸಿದೆ” ಎಂದು ಆರೋಪಿಸಿದ್ದಾರೆ.

    “ತನಿಖಾ ತಂಡದಲ್ಲಿರುವ ಅಧಿಕಾರಿ ಶಶಿಕುಮಾರ್ ಅವರಿಗೂ ಧರ್ಮಸ್ಥಳದ ಪ್ರಭಾವಿಗಳಿಗೂ ನೇರ ಸಂಪರ್ಕವಿದೆ ಎಂಬುದಕ್ಕೆ ಆಡಿಯೋ ಸಾಕ್ಷ್ಯವಿದೆ. ಸರ್ಕಾರಕ್ಕೆ ನಿಜವಾದ ನ್ಯಾಯ ಒದಗಿಸುವ ಇಚ್ಛಾಶಕ್ತಿ ಇಲ್ಲ, ಕೇವಲ ತನಿಖೆಯ ನಾಟಕ ಮಾಡುತ್ತಿದೆ. ಪ್ರಭಾವಿಗಳನ್ನು ಕಾಪಾಡಲು ಹಿಂದಿನಂತೆಯೇ ವ್ಯವಸ್ಥೆ ನಡೆಯುತ್ತಿದೆ,” ಎಂದು ಅವರು ದೂರಿದ್ದಾರೆ.

    ಕಳಂಕ ರಹಿತ, ರಾಜಕೀಯ ಪ್ರಭಾವದಿಂದ ಮುಕ್ತ, ಪ್ರಾಮಾಣಿಕ ಸೇವಾ ದಾಖಲೆ ಹೊಂದಿರುವ ನಿಷ್ಪಕ್ಷ ಅಧಿಕಾರಿಗಳ ತಂಡವನ್ನು ನೇಮಿಸಬೇಕು, ಇಲ್ಲದಿದ್ದರೆ ಕೋರ್ಟ್ ಆದೇಶಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ ಎಂದು ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

    ಒಟ್ಟಾರೆ ಸೌಜನ್ಯ ಪ್ರಕರಣದ ಮರುತನಿಖೆ ಇದೀಗ ಕೇವಲ ತನಿಖೆಯಾಗಿ ಉಳಿದಿಲ್ಲ, ಅದು ನ್ಯಾಯಾಂಗದ ನಿರ್ದೇಶನವನ್ನು ಸರ್ಕಾರ ಎಷ್ಟರ ಮಟ್ಟಿಗೆ ಪಾಲಿಸುತ್ತಿದೆ ಎಂಬುದರ ಪರೀಕ್ಷೆಯಾಗಿದೆ ಎಂಬುದು ತಾಯಿ ಕುಸುಮಾವತಿ ಮತ್ತು ಹೋರಾಟಗಾರರ ಆಶಯವಾಗಿದೆ.

    Continue Reading

    Bantawala

    ಬಂಟ್ವಾಳ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ: ಆರ್​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್​​ಗೆ ಪೊಲೀಸ್ ನೋಟಿಸ್!

    Published

    on

    ಬಂಟ್ವಾಳ (Bantwal) ಅಬ್ದುಲ್ ರೆಹಮಾನ್ (Abdul Rehman) ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರ್​ಎಸ್​ಎಸ್ (RSS)​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್​ಗೆ (Kalladka Prabhakar Bhat) ನೋಟಿಸ್ ನೀಡಲಾಗಿದೆ. ಪೊಲೀಸ್ ಇಲಾಖೆಯಿಂದ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆಯ ಕ್ರಮದ ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಕ್ರೋಶ ಹೊರಹಾಕಿದೆ.ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡಿರುವುದು ಕರಾವಳಿ ಭಾಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಪ್ರಕರಣದ ಹಿನ್ನೆಲೆ ಮತ್ತು ಹತ್ಯೆಯ ವಿವರ

    2025ರ ಮೇ 25ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾಕೋಡಿ (ಕುರಿಯಾಲ ಗ್ರಾಮ) ಬಳಿ ಅಬ್ದುಲ್ ರೆಹಮಾನ್ ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪಿಕ್‌ಅಪ್ ಟ್ರಕ್‌ನಿಂದ ಮರಳು ಇಳಿಸುತ್ತಿದ್ದ ವೇಳೆ ಈ ಮಾರಣಾಂತಿಕ ದಾಳಿ ನಡೆದಿತ್ತು. ಈ ಘಟನೆಯಲ್ಲಿ ಮೃತ ಅಬ್ದುಲ್ ರೆಹಮಾನ್ ಜತೆಗೆ ಕಲಂದರ್ ಶಫಿ ಎಂಬುವವರ ಮೇೆಯೂ ಗಂಭೀರ ಹಲ್ಲೆ ನಡೆಸಲಾಗಿತ್ತು. ಸುಹಾಸ್ ಶೆಟ್ಟಿ ಹತ್ಯೆಯಾದ ಕೆಲವೇ ದಿನಗಳಲ್ಲಿ ಈ ಕೃತ್ಯ ನಡೆದಿದ್ದರಿಂದ, ಇದು ಪ್ರತಿಕಾರದ ಕೊಲೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು ಮತ್ತು ರಾಜ್ಯಾದ್ಯಂತ ದೊಡ್ಡ ಸಂಚಲನ ಮೂಡಿಸಿತ್ತು.

    ಈ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು, ಈ ಪ್ರಕರಣದ ತನಿಖೆಯಲ್ಲಿ ಕೆಲವೊಂದು ಸತ್ಯಾಂಶಗಳು ಮತ್ತು ಸನ್ನಿವೇಶಗಳನ್ನು ಖಚಿತ ಪಡಿಸಿಕೊಳ್ಳುವ ಸಲುವಾಗಿ ನಿಮ್ಮನ್ನು ವಿಚಾರಣೆ ಮಾಡುವ ಅಗತ್ಯ ಕಂಡುಬರುತ್ತದೆ . ಎಂದು ನೋಟಿಸಿನಲ್ಲಿ ತಿಳಿಸಿದ್ದು, ತನಿಖೆಗೆ ಸಹಕರಿಸುವಂತೆ ಈ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ತೀವ್ರ ಆಕ್ರೋಶ

    ಆರ್​ಎಸ್​ಎಸ್ (RSS)​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್​ಗೆ (Kalladka Prabhakar Bhat) ನೋಟಿಸ್ ನೀಡಲಾಗಿರುವ ಪೊಲೀಸ್ ಇಲಾಖೆಯ ಕ್ರಮದ ವಿರುದ್ಧ ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗದಳ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಬಗ್ಗೆ ಕಿಡಿಕಾರಿರುವ ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್, ಅಬ್ದುಲ್ ರೆಹಮಾನ್ ಹತ್ಯೆಗೂ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜಕೀಯ ಪ್ರೇರಿತವಾಗಿ ಹಿಂದೂ ಸಂಘಟನೆಗಳನ್ನು ಹಾಗೂ ಮುಖಂಡರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

    ಎಸ್​ಪಿ ಕಚೇರಿ ಚಲೋ ಹೋರಾಟದ ಎಚ್ಚರಿಕೆ

    ಈ ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಅನಗತ್ಯವಾಗಿ ಸಿಲುಕಿಸುವ ಪ್ರಯತ್ನ ನಡೆದರೆ ಹಿಂದೂ ಸಂಘಟನೆಗಳು ಸುಮ್ಮನಿರುವುದಿಲ್ಲ ಎಂದು ಶರಣ್ ಪಂಪ್‌ವೆಲ್ ಎಚ್ಚರಿಕೆ ನೀಡಿದ್ದಾರೆ. ಎಸ್​ಪಿಯವರು ಈ ಕೇಸ್​ನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ರನ್ನ ಸಿಲುಕಿಸಿದ್ರೆ, ಹಿಂದೂ ಸಂಘಟನೆಗಳು ರಸ್ತೆಗೆ ಇಳಿಯುತ್ತದೆ. ನಿಮ್ಮ ಎಸ್​ಪಿ ಕಚೇರಿ ಚಲೋ ಎಂಬ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ. ಅವರಿಗೂ ಈ ಪ್ರಕರಣಕ್ಕೂ ಏನು ಸಂಬಂಧವಿಲ್ಲ, ನ್ಯಾಯಾಲಯ ಕೋಕಾ ಕೇಸ್​ನಲ್ಲಿ ಜಾಮೀನು ಕೊಟ್ಟಿದೆ. ಆದರೂ ಪೊಲೀಸ್ ಇಲಾಖೆ ಗೂಂಡಾ ಕಾಯ್ದೆ ಹಾಕುತ್ತಾರೆ. ಇವರಿಗೆ ಒತ್ತಡ ಹಾಕುತ್ತಿರುವವರು ಯಾರು? ಕರಾವಳಿಯ ಹಿಂದೂ ಸಂಘಟನೆಯ ಕಾರ್ಯಕರ್ತರು ರಸ್ತೆಗೆ ಇಳಿಯುತ್ತೇವೆ. ಕೊಲೆಯಾಗಿ ಒಂದು ವರ್ಷ ಕಳೆದಿದೆ, ಎರಡೆರಡು ಚಾರ್ಜ್ ಶೀಟ್ ಆಗಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಹಾಗು ಈ ಕೊಲೆಗೆ ಏನು ಸಂಬಂಧ ಇದೆ. ಈ ಹಿಂದೆ ಇದೆ ರೀತಿ ವಿಚಾರಣೆ ಎಂದು ಹೇಳಿ 9 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದು ನೂರಕ್ಕೆ ನೂರು ಹಿಂದೂ ಸಂಘಟನೆಗಳನ್ನ ಟಾರ್ಗೆಟ್ ಮಾಡುವ ಹುನ್ನಾರ ಎಂದು ಶರಣ್ ಪಂಪ್ ವೆಲ್ ಆರೋಪಿಸಿದ್ದಾರೆ.

    Continue Reading

    ads (2)
    ads (3)
    ads (4)
    ads (5)
    ads (6)
    ads (1)
    ads (8)
    ads (7)

    Trending

    Copyright © 2025 Deevatige

    error: Content is protected !!