Connect with us

national

Gen- Z ಜೊತೆ ಮೋದಿ Reconnect : ಯುವ ಮತದಾರರನ್ನು ಸೆಳೆಯಲು ಪ್ರಧಾನಿ ಹೂಡಿದ ‘ಇನ್‌ಸ್ಟಾ’ ಮಾಸ್ಟರ್ ಪ್ಲ್ಯಾನ್ ವರ್ಕ್ ಆಗುತ್ತಾ ?

Published

on

ವಿಶೇಷ ವರದಿ

ಉದ್ಯೋಗ, ಶಿಕ್ಷಣ ಕ್ಷೇತ್ರದ ಅನಿಶ್ಚಿತತೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶದ ಯುವಜನತೆ—ವಿಶೇಷವಾಗಿ ಝೆನ್-ಜಿ (Gen Z) ಪೀಳಿಗೆ—ತಿರುಗಿಬಿದ್ದಿರುವ ಬೆನ್ನಲ್ಲೇ, ಆಡಳಿತಾರೂಢ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಯುವ ಮತದಾರರೊಂದಿಗೆ ಹೊಸ ತರಹದ ಬಾಂಧವ್ಯ ಗಟ್ಟಿಗೊಳಿಸಲು ಭಾರಿ ಕಸರತ್ತು ನಡೆಸುತ್ತಿದ್ದಾರೆ.

ಇತ್ತೀಚೆಗೆ ನೀಟ್ (NEET) ಪರೀಕ್ಷೆಯಲ್ಲಾದ ಅಕ್ರಮಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಜಂತರ್ ಮಂತರ್ ಸೇರಿದಂತೆ ದೇಶಾದ್ಯಂತ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ಬೃಹತ್ ಪ್ರತಿಭಟನೆಯು ಸರ್ಕಾರದ ವಿರುದ್ಧ ಯುವಸಮುದಾಯಕ್ಕಿರುವ ಆಕ್ರೋಶವನ್ನು ಎತ್ತಿ ತೋರಿಸಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರ, ಪರೀಕ್ಷಾ ಸುಧಾರಣೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ನೀಡಿದ್ದಲ್ಲದೆ, ಯುವಕರನ್ನು ತಲುಪಲು ಸಂಪೂರ್ಣ ಹೊಸ ಡಿಜಿಟಲ್ ತಂತ್ರಗಾರಿಕೆಗೆ ಮೊರೆಹೋಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ಫುಲ್ ಆ್ಯಕ್ಟಿವ್: ರಾತ್ರಿ 11ರ ನಂತರವೇ ಪೋಸ್ಟ್ ಯಾಕೆ?

ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಅತ್ಯಂತ ಸಕ್ರಿಯರಾಗಿದ್ದಾರೆ. ಝೆನ್-ಜಿ ಪೀಳಿಗೆಯನ್ನು ತಲುಪಲು ಅವರು ಕೈಗೊಂಡಿರುವ ಡಿಜಿಟಲ್ ತಂತ್ರಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿವೆ:

ಟ್ರೆಂಡಿಂಗ್ ಶೈಲಿಯ ವಿಡಿಯೋಗಳು: ಬೈಕರ್ ಜಾಕೆಟ್, ಸನ್ ಗ್ಲಾಸ್ ಧರಿಸಿ ರ‍್ಯಾಪ್ ಸೌಂಡ್‌ಟ್ರ‍್ಯಾಕ್‌ನಲ್ಲಿ ಕಾಣಿಸಿಕೊಳ್ಳುವ ಕ್ಲಿಪ್‌ಗಳಿಂದ ಹಿಡಿದು, ಜನಪ್ರಿಯ ಸಿಟ್‌ಕಾಮ್ ‘ಫ್ರೆಂಡ್ಸ್’ (Friends) ಥೀಮ್ ಆಧರಿಸಿದ ವಿಡಿಯೋಗಳವರೆಗೆ ಮೋದಿ ಯುವಶೈಲಿಯಲ್ಲಿ ಮಿಂಚುತ್ತಿದ್ದಾರೆ.

‘ಹಾಯ್ ಫ್ರೆಂಡ್ಸ್’ ಸೆಲ್ಫಿ ವಿಡಿಯೋ: ಜುಲೈ 31 ರಂದು ಪೋಸ್ಟ್ ಮಾಡಲಾದ ಅಪರೂಪದ ಸೆಲ್ಫಿ ವಿಡಿಯೋದಲ್ಲಿ ಮೋದಿ ಅತ್ಯಂತ ಸಾಂದರ್ಭಿಕವಾಗಿ ‘ಹಾಯ್.. ಫ್ರೆಂಡ್ಸ್’ ಎಂದು ಶುಭಕೋರಿದ್ದರು. ಆರಂಭದಲ್ಲಿ ಟ್ರೋಲ್‌ಗೆ ಒಳಗಾದರೂ, ನಂತರದ ವಿಡಿಯೋಗಳಲ್ಲಿ ಕ್ಯಾಮೆರಾ ಆಂಗಲ್, ಬೆಳಕು ಹಾಗೂ ವಿಷಯಗಳಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ.

‘ಗೆಟ್ ರೆಡಿ ವಿತ್ ಮಿ’ (GRWM) ಟ್ರೆಂಡ್: ರಾಷ್ಟ್ರೀಯ ಕೈಮಗ್ಗ ದಿನದಂದು (ಆಗಸ್ಟ್ 7) ಪ್ರಧಾನಿಯವರು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ ‘GRWM’ ಟ್ರೆಂಡ್ ಬಳಸಿ, ಕೈಮಗ್ಗ ಉಡುಪುಗಳನ್ನು ತೊಟ್ಟು ಭಾರತದ ನೇಕಾರರನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದ್ದರು.

ಟೈಮಿಂಗ್ ಗೇಮ್: ಝೆನ್-ಜಿಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುವ ಮಧ್ಯರಾತ್ರಿ 11 ಗಂಟೆಯ ನಂತರವೇ ಈ ಪೋಸ್ಟ್‌ಗಳು ಹೆಚ್ಚಾಗಿ ಹೊರಬೀಳುತ್ತಿರುವುದು ಯೋಜಿತ ತಂತ್ರದ ಭಾಗವಾಗಿದೆ.

40 ಕೋಟಿ ಯುವ ಮತದಾರರ ಮೇಲಿದೆಯಾ ಕಣ್ಣು?

ಭಾರತದಲ್ಲಿ 55 ಕೋಟಿಗೂ ಹೆಚ್ಚು ಇನ್‌ಸ್ಟಾಗ್ರಾಮ್ ಬಳಕೆದಾರರಿದ್ದು, ಇದರಲ್ಲಿ 18–24 ವರ್ಷದ ಝೆನ್-ಜಿಗಳು ಶೇ. 30 ರಷ್ಟಿದ್ದಾರೆ. ದೇಶದ 1.4 ಶತಕೋಟಿ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.

2029 ರ ಸಾರ್ವತ್ರಿಕ ಚುನಾವಣೆ ವೇಳೆಗೆ ದೇಶದಲ್ಲಿ ಸುಮಾರು 40 ಕೋಟಿಗೂ ಹೆಚ್ಚು ಝೆನ್-ಜಿ ಮತದಾರರು ನಿರ್ಣಾಯಕ ಶಕ್ತಿಯಾಗಲಿದ್ದಾರೆ. ಈ ಬೃಹತ್ ವೋಟ್‌ಬ್ಯಾಂಕ್ ಅನ್ನು ಸೆಳೆಯುವುದು ಮತ್ತು 4ನೇ ಅವಧಿಗೆ ಅಧಿಕಾರಕ್ಕೇರುವ ಹಾದಿಯನ್ನು ಸುಗಮಗೊಳಿಸುವುದು ಬಿಜೆಪಿಯ ಮಾಸ್ಟರ್ ಪ್ಲ್ಯಾನ್‌ನ ಮುಖ್ಯ ಉದ್ದೇಶ ಎನ್ನಲಾಗಿದೆ. ಇತ್ತೀಚಿನ ಸಂಪುಟ ಸಭೆಯಲ್ಲೂ ಪ್ರಧಾನಿಯವರು, ಯುವಕರನ್ನು ತಲುಪಲು ಸಚಿವರು ರೀಲ್ಸ್ ಹಾಗೂ ಜಾಲತಾಣಗಳನ್ನು ವ್ಯಾಪಕವಾಗಿ ಬಳಸಬೇಕೆಂದು ಸೂಚಿಸಿದ್ದರು.

ಯುವ ದನಿ ಸೈಡ್‌ಲೈನ್ ಆಗಿದೆಯೇ?

2024 ರಲ್ಲಿ ಆಯ್ಕೆಯಾದ ಸಂಸದರ ಸರಾಸರಿ ವಯಸ್ಸು ದಾಖಲೆಯ 56 ವರ್ಷಗಳನ್ನು ತಲುಪಿದೆ. ಶಾಸಕಾಂಗದಲ್ಲಿ ಯುವ ಪ್ರಾತಿನಿಧ್ಯದ ಕೊರತೆಯೇ ಯುವಸಮುದಾಯದ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬದಿಗೊತ್ತಲ್ಪಡಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

“ಭಾರತದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ವಿದ್ಯಾರ್ಥಿಗಳ ರಾಜಕೀಯ ಭಾಗವಹಿಸುವಿಕೆಯ ಸುದೀರ್ಘ ಇತಿಹಾಸವಿದೆ. ಆದರೆ ಕಳೆದ ಒಂದು ದಶಕದಲ್ಲಿ ವಿದ್ಯಾರ್ಥಿಗಳು ಕೇವಲ ಅಧ್ಯಯನಕ್ಕಷ್ಟೇ ಸೀಮಿತವಾಗಿರಬೇಕು, ರಾಜಕೀಯ ಬೇಡ ಎಂಬ ವಾತಾವರಣ ಸೃಷ್ಟಿಸಲಾಯಿತು. ಇದರಿಂದ ಅವರ ನಿಜವಾದ ಕಷ್ಟ-ಸುಖಗಳನ್ನು ಅರಿಯುವುದು ಕಷ್ಟವಾಯಿತು.”

— ಶಿಪ್ರಾ ಬದುನಿ, ಸಿಇಒ (ಯಂಗ್ ಲೀಡರ್ಸ್ ಫಾರ್ ಆಕ್ಟಿವ್ ಸಿಟಿಜನ್‌ಶಿಪ್ – YLAC)

ಶಿಪ್ರಾ ಬದುನಿ ಅವರ ಪ್ರಕಾರ, ಬರಿ ಸೋಶಿಯಲ್ ಮೀಡಿಯಾ ರೀಲ್ಸ್‌ಗಳಿಂದಷ್ಟೇ ರಾಜಕೀಯ ಅಂತರ ಕಡಿಮೆಯಾಗುವುದಿಲ್ಲ. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿರುವ ವ್ಯವಸ್ಥಿತ ವೈಫಲ್ಯಗಳನ್ನು ಸರಿಪಡಿಸಿ, ಸರ್ಕಾರದ ವಿವಿಧ ಹಂತಗಳಲ್ಲಿ ಯುವಜನರೊಂದಿಗೆ ರಚನಾತ್ಮಕವಾಗಿ ಮಾತನಾಡಿದಾಗ ಮಾತ್ರ ನೈಜ ಸುಧಾರಣೆ ಸಾಧ್ಯ.

ಝೆನ್-ಜಿಗಳಿಗೆ ಪ್ರಧಾನಿ ನೀಡಿದ ಸಂದೇಶವೇನು?

ಯುವಜನತೆಯನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರವನ್ನು ಒತ್ತಿಹೇಳಿದ್ದಾರೆ:

“ಪ್ರತಿಯೊಂದು ಪೀಳಿಗೆಯೂ ತನ್ನದೇ ಆದ ಸವಾಲು ಮತ್ತು ರಾಷ್ಟ್ರೀಯ ಜವಾಬ್ದಾರಿಯನ್ನು ಹೊಂದಿರುತ್ತದೆ.”

“ನಿಮ್ಮ ಜೀವನದ ಮುಂದಿನ 30 ರಿಂದ 35 ವರ್ಷಗಳ ಪ್ರತಿ ನಿರ್ಧಾರವೂ ‘ವಿಕಸಿತ ಭಾರತ’ದ ಪ್ರಯಾಣದ ಮೇಲೆ ಪ್ರಭಾವ ಬೀರುತ್ತದೆ.”

“ನೀವು ತೆಗೆದುಕೊಳ್ಳುವ ನಿರ್ಧಾರ ದೇಶಕ್ಕೆ ಹೇಗೆ ಪ್ರಯೋಜನಕಾರಿ ಎಂಬುದನ್ನು ಯೋಚಿಸಿ. ದೇಶಕ್ಕೆ ನಿಮ್ಮ ಅಗತ್ಯವಿದೆ.”

ಒಟ್ಟಿನಲ್ಲಿ, ಪ್ರತಿಭಟನೆಗಳ ಮೂಲಕ ಆಡಳಿತ ವ್ಯವಸ್ಥೆಗೆ ಎಚ್ಚರಿಕೆ ರವಾನಿಸಿದ್ದ ಝೆನ್-ಜಿಗಳನ್ನು ರೀಲ್ಸ್ ಹಾಗೂ ಡಿಜಿಟಲ್ ಮೋಡಿಯ ಮೂಲಕ ತಲುಪಲು ಬಿಜೆಪಿ ಮುಂದಾಗಿದೆ. ಸದ್ಯಕ್ಕೆ ಪ್ರಧಾನಿಯವರ ವಿಡಿಯೋಗಳಿಗೆ ಸಿಗುತ್ತಿರುವ ಮಿಲಿಯನ್‌ಗಟ್ಟಲೆ ವೀವ್ಸ್ ಮತ್ತು ಕಾಮೆಂಟ್‌ಗಳನ್ನು ನೋಡಿದರೆ ಈ ‘ಮಾಸ್ಟರ್ ಪ್ಲ್ಯಾನ್’ ಕೆಲಸ ಮಾಡುತ್ತಿರುವಂತೆ ತೋರುತ್ತಿದೆಯಾದರೂ, ಯುವಕರ ಉದ್ಯೋಗ ಮತ್ತು ಶಿಕ್ಷಣದ ನೈಜ ಸಮಸ್ಯೆಗಳಿಗೆ ಸರ್ಕಾರ ನೀಡುವ ಉತ್ತರವೇ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

national

ಎಲ್ ನೀನೋ(EL Nino) ಮುನ್ಸೂಚನೆ: ರಾಜ್ಯಕ್ಕೆ ಮತ್ತೆ ಬರಗಾಲದ ಭೀತಿ! ತಮಿಳುನಾಡು ಕಾವೇರಿ ಕ್ಯಾತೆಗೆ ಆತಂಕ

Published

on

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಉಂಟಾಗಿದ್ದ ಅಭಾವ ಸದ್ಯಕ್ಕೆ ಶಮನಗೊಂಡು, ಜಲಾಶಯಗಳಿಗೆ ಜೀವಕಳೆ ಬಂದಿದೆ. ಆದರೆ, ಈ ಸಮಾಧಾನಕರ ವಾತಾವರಣ ಬಹಳ ದಿನ ಇರುವುದು ಅನುಮಾನ. ಏಕೆಂದರೆ, ಮಳೆ ಕೊರತೆಗೆ ಪ್ರಮುಖ ಕಾರಣವಾಗಿದ್ದ ‘ಎಲ್ ನೀನೋ’ (El Niño) ವಿದ್ಯಮಾನ ಮತ್ತೆ ಪ್ರಬಲಗೊಳ್ಳುತ್ತಿದ್ದು, ಕರ್ನಾಟಕಕ್ಕೆ ಮುಂಬರುವ ದಿನಗಳಲ್ಲಿ ಮತ್ತೆ ಭೀಕರ ಮಳೆ ಕೊರತೆ ಎದುರಾಗುವ ಆತಂಕ ಎದುರಾಗಿದೆ.

1. ಫೆಸಿಫಿಕ್‌ನಲ್ಲಿ ಎಲ್ ನೀನೋ ಪ್ರಬಲ: ವಿಶ್ವಸಂಸ್ಥೆ ಹಾಗೂ IMD ಎಚ್ಚರಿಕೆ

ಪಶ್ಚಿಮ ಫೆಸಿಫಿಕ್ ಸಾಗರದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದ್ದು, ಎಲ್ ನೀನೋ ಪ್ರಭಾವ ಮತ್ತೆ ತೀವ್ರಗೊಳ್ಳುತ್ತಿದೆ ಎಂದು ವಿಶ್ವಸಂಸ್ಥೆಯ ಹವಾಮಾನ ಸಂಸ್ಥೆ (WMO) ಹಾಗೂ ಭಾರತೀಯ ಹವಾಮಾನ ಇಲಾಖೆ (IMD) ಆತಂಕಕಾರಿ ವರದಿ ನೀಡಿವೆ.

ಜೂನ್-ಜುಲೈ ಆಘಾತ: ಜೂನ್ ಮತ್ತು ಜುಲೈ ತಿಂಗಳಲ್ಲಿ ರಾಜ್ಯವು ಎದುರಿಸಿದ ತೀವ್ರ ಮಳೆ ಕೊರತೆಗೆ ಈ ಎಲ್ ನೀನೋ ಪ್ರಭಾವವೇ ಮುಖ್ಯ ಕಾರಣವಾಗಿತ್ತು.

ಆಗಸ್ಟ್ ಮಧ್ಯದಿಂದ ಎಫೆಕ್ಟ್: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಆಗಸ್ಟ್ ಮಧ್ಯಭಾಗದಿಂದಲೇ ಮಳೆಯ ಪ್ರಮಾಣ ಗಣನೀಯವಾಗಿ ಇಳಿಮುಖವಾಗಲಿದೆ.

ಹಿಂಗಾರಿಗೂ ಕುತ್ತು: ಈ ಒಣ ಹವಾಮಾನವು ಸೆಪ್ಟೆಂಬರ್ ಮತ್ತು ಅಕ್ಟೋಬರ್ ವರೆಗೂ ಮುಂದುವರೆಯಲಿದ್ದು, ವಾಡಿಕೆಯಂತೆ ಬರಬೇಕಾದ ಹಿಂಗಾರು (North-East Monsoon) ಮಳೆಯ ಮೇಲೆಯೂ ತೀವ್ರ ದುಷ್ಪರಿಣಾಮ ಬೀರಲಿದೆ.

2. ಜಲಾಶಯಗಳ ಸ್ಥಿತಿ ಹಾಗೂ ಕುಡಿಯುವ ನೀರಿನ ಅಭಾವ

ಪ್ರಸ್ತುತ ಜುಲೈ ಕೊನೆಯಲ್ಲಿ ಬಿದ್ದ ಮಳೆಯಿಂದಾಗಿ ಕೆಆರ್‌ಎಸ್, ಕಬಿನಿ, ಹಾರಂಗಿ, ಆಲಮಟ್ಟಿ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಿಗೆ ಉತ್ತಮ ಒಳಹರಿವು (Inflow) ದಾಖಲಾಗಿತ್ತು. ಆದರೆ ಮುಂದೆ ಒಳಹರಿವು ಸಂಪೂರ್ಣ ಕ್ಷೀಣಿಸಿದರೆ ಪರಿಸ್ಥಿತಿ ಬಿಗಡಾಯಿಸಲಿದೆ.

ಪ್ರಮುಖ ಸವಾಲುಗಳು:

ಕೃಷಿ ಮತ್ತು ಕುಡಿಯುವ ನೀರು: ಪ್ರಸ್ತುತ ಸಂಗ್ರಹವಾಗಿರುವ ನೀರನ್ನು ಕೃಷಿ ನಾಟಿ ಹಾಗೂ ಬೆಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳ ಕುಡಿಯುವ ನೀರಿಗೆ ಬಳಸಲೇಬೇಕಿದೆ.ಮುಂಚಿತವಾಗಿಯೇ ಬೇಸಿಗೆ ಬಿಸಿ: ಮುಂದಿನ ವರ್ಷದ ಬೇಸಿಗೆ ಆರಂಭಕ್ಕೂ ಮುನ್ನವೇ (ಡಿಸೆಂಬರ್-ಜನವರಿಯಲ್ಲೇ) ಜಲಾಶಯಗಳಲ್ಲಿ ನೀರು ತಳಕಾಣುವ ಭೀತಿ ವ್ಯಕ್ತವಾಗಿದೆ.

3. ತಮಿಳುನಾಡು ಕಾವೇರಿ ಕ್ಯಾತೆ: ಸರ್ಕಾರಕ್ಕೆ ಉರುಳಾಗುವ ಸಾಧ್ಯತೆ!

ಕಳೆದ ತಿಂಗಳಲ್ಲಿ ಜಲಾಶಯಗಳು ಭರ್ತಿಯಾಗಿದ್ದರಿಂದ, ಕೆಆರ್‌ಎಸ್ ಮತ್ತು ಕಬಿನಿಯಿಂದ ತಮಿಳುನಾಡಿಗೆ ನಿಯಮಾನುಸಾರ ನೀರು ಹರಿಸಿ ಸದ್ಯಕ್ಕೆ ಸುಪ್ರೀಂ ಕೋರ್ಟ್ ಹಾಗೂ ತಮಿಳುನಾಡಿನ ಸರ್ಕಾರದ ಒತ್ತಡದಿಂದ ರಾಜ್ಯ ಸರ್ಕಾರ ಪಾರಾಗಿತ್ತು. ಆದರೆ, ಮುಂದಿನ ದಿನಗಳಲ್ಲಿ ಮತ್ತೆ ಸಂಕಷ್ಟ ಎದುರಾಗಲಿದೆ:

ಸೆಪ್ಟೆಂಬರ್-ಅಕ್ಟೋಬರ್ ಸಂಕಷ್ಟ: ಈ ತಿಂಗಳುಗಳಲ್ಲಿ ಮಳೆ ಕೈಕೊಟ್ಟರೆ, ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನಿಗದಿಪಡಿಸಿದ ಕೋಟಾದಷ್ಟು ನೀರನ್ನು ತಮಿಳುನಾಡಿಗೆ ಹರಿಸುವುದು ಅಸಾಧ್ಯವಾಗುತ್ತದೆ.

ಮತ್ತೆ ತಕರಾರು: ನೀರು ಹರಿಸದಿದ್ದರೆ ತಮಿಳುನಾಡು ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಕ್ಯಾತೆ ತೆಗೆಯುವುದು ಖಚಿತ.

ಸರ್ಕಾರಕ್ಕೆ ಇಕ್ಕಟ್ಟು: ಒಂದೆಡೆ ರಾಜ್ಯದ ರೈತರ ಬೆಳೆ ಹಾಗೂ ಕುಡಿಯುವ ನೀರಿನ ಅಗತ್ಯ, ಇನ್ನೊಂದೆಡೆ ಕಾನೂನು ಹೋರಾಟ—ಈ ಎರಡರ ನಡುವೆ ಸಿಲುಕಿ ರಾಜ್ಯ ಸರ್ಕಾರ ತೀವ್ರ ತಲೆನೋವು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಸದ್ಯದ ಮಳೆ ನೀಡಿದ ನೆಮ್ಮದಿ ತಾತ್ಕಾಲಿಕ ಮಾತ್ರ. ಎಲ್ ನೀನೋ ಪ್ರಭಾವದಿಂದಾಗಿ ಮುಂಬರುವ ಸೆಪ್ಟೆಂಬರ್ ಹಾಗೂ ಹಿಂಗಾರು ಋತುವಿನಲ್ಲಿ ಮಳೆ ಮತ್ತೆ ಕೈಕೊಟ್ಟರೆ, ರಾಜ್ಯವು ಅಭೂತಪೂರ್ವ ಜಲಸಂಕಷ್ಟ ಹಾಗೂ ರಾಜಕೀಯ/ಕಾನೂನು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹವಾಮಾನ ಇಲಾಖೆಯ ಈ ಎಚ್ಚರಿಕೆಯ ಹಿನ್ನೆಲೆಯಲ್ಲಿ ಸರ್ಕಾರ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.

Continue Reading

Condolences

ವಿಡಿಯೋ ಕರೆಯಲ್ಲಿ ತಂದೆಯ ಅಂತ್ಯಕ್ರಿಯೆ: ಬರಲಾಗದ ಮಕ್ಕಳು, ಮನಕಲಕಿದ ಸೋನಿಪತ್ ಘಟನೆ; ಮಕ್ಕಳ ನಡತೆಗೆ ಬೇಸರ ವ್ಯಕ್ತಪಡಿಸಿದ ನೆಟ್ಟಿಗರು !

Published

on

 ತನ್ನ ಮೂವರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಅವರ ಪೋಷಣೆಯಲ್ಲಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ತಂದೆಯೊಬ್ಬರು ಸೋನಿಪತ್‌ನ ವೃದ್ಧಾಶ್ರಮವೊಂದರಲ್ಲಿ ಇತ್ತೀಚೆಗೆ ನಿಧನರಾಗಿದ್ದಾರೆ. ಆದರೆ ದುರಂತವೆಂದರೆ, ಅವರ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಮಕ್ಕಳಲ್ಲಿ ಯಾರೂ ಬರಲು ಸಾಧ್ಯವಾಗಲಿಲ್ಲ. ಬದಲಾಗಿ, ನೇಪಾಳ, ಉತ್ತರ ಪ್ರದೇಶ ಮತ್ತು ಮುಂಬೈನಲ್ಲಿದ್ದ ಹೆಣ್ಣುಮಕ್ಕಳು ವಿಡಿಯೋ ಕರೆಯ ಮೂಲಕ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಹೃದಯವಿದ್ರಾವಕ ಘಟನೆ ನಡೆದಿದೆ.

ಮುಂಬೈನಿಂದ ಸೋನಿಪತ್ ವೃದ್ಧಾಶ್ರಮಕ್ಕೆ
ಮೃತಪಟ್ಟವರು ಮೂಲತಃ ಮುಂಬೈ ಮೂಲದ ಶಿವಚರಣ್ ರಾಮ್ ರತನ್ ಗುಪ್ತಾ. ಮಾಜಿ ಜವಳಿ ವ್ಯಾಪಾರಿಯಾಗಿದ್ದ ಇವರು, ಸೋನಿಪತ್‌ನ ಪಶ್ಚಿಮ ರಾಮ್ ನಗರದಲ್ಲಿ ಸಮಾಜ ಕಲ್ಯಾಣ ಶಿಕ್ಷಾ ಸಮಿತಿ ನಡೆಸುತ್ತಿರುವ ವೃದ್ಧಾಶ್ರಮದಲ್ಲಿ ಸುಮಾರು ಒಂದೂವರೆ ವರ್ಷಗಳಿಂದ ವಾಸಿಸುತ್ತಿದ್ದರು. ತಮ್ಮ ಪತ್ನಿ ಮೀನಾ ಅವರೊಂದಿಗೆ ವೃದ್ದಾಶ್ರಮಕ್ಕೆ ಅಲ್ಲಿಗೆ ತೆರಳಿದ್ದ ಗುಪ್ತಾ, ಪತ್ನಿಯ ನಿಧನದ ನಂತರವೂ ಅಲ್ಲಿಯೇ ಉಳಿದಿದ್ದರು.

ಅನಾರೋಗ್ಯದಿಂದ ನಿಧನ, ವಿಡಿಯೋ ಕರೆಯಲ್ಲಿ ಮಕ್ಕಳು
ಗುಪ್ತಾ ಅವರು ದೀರ್ಘಕಾಲದ ಅನಾರೋಗ್ಯದಿಂದ ಮಂಗಳವಾರ ಮುಂಜಾನೆ 3:30 ರ ಸುಮಾರಿಗೆ ಕೊನೆಯುಸಿರೆಳೆದರು. ಅವರ ಮರಣದ ನಂತರ, ವೃದ್ಧಾಶ್ರಮದ ಆಡಳಿತ ಮಂಡಳಿ ಅವರ ಮೂವರು ಹೆಣ್ಣುಮಕ್ಕಳನ್ನು ಸಂಪರ್ಕಿಸಿತು. ಆದರೆ, ಪುತ್ರಿಯರಿಗೆ ಅಂತ್ಯಕ್ರಿಯೆಗಾಗಿ ಹರಿಯಾಣದ ಸೋನಿಪತ್‌ಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಡಿಯೋ ಕರೆಯ ಮೂಲಕವೇ ಅವರು ಅಂತಿಮ ವಿಧಿಗಳಲ್ಲಿ ಭಾಗವಹಿಸಿದರು. ವೃದ್ಧಾಶ್ರಮದ ಆಡಳಿತ ಮಂಡಳಿ ಮತ್ತು ಸ್ಥಳೀಯ ಸಮುದಾಯದ ಸದಸ್ಯರ ಸಹಾಯದಿಂದ ಅಂತ್ಯಕ್ರಿಯೆಯನ್ನು ನಡೆಸಲಾಯಿತು.

“ಬರುವುದಿಲ್ಲ” ಎಂದ ಮಕ್ಕಳು
ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದ್ ಕುಮಾರ್ ಅವರ ಪ್ರಕಾರ, ಗುಪ್ತಾ ಅವರು ತಮ್ಮ ಹೆಣ್ಣುಮಕ್ಕಳೊಂದಿಗೆ ಆಗಾಗ್ಗೆ ದೂರವಾಣಿ ಮೂಲಕ ಮಾತನಾಡುತ್ತಿದ್ದರು. ಆದರೆ ಅವರು ಅನಾರೋಗ್ಯಕ್ಕೆ ಒಳಗಾದ ನಂತರ, ಅವರ ಫೋನ್ ಕರೆಗಳು ವಿರಳವಾಗಿದ್ದವು.

ತಂದೆಯ ಸಾವಿಗೆ ಸುಮಾರು 20 ದಿನಗಳ ಮೊದಲು ಅವರ ತಂದೆಯ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಮತ್ತು ಅವರ ಸಾವು ಬದುಕಿನ ಹೋರಾಟದ ಅಂತಿಮ ದಿನಗಳು ಸನ್ನಿಹಿತವಾಗುತ್ತಿರುವ ಬಗ್ಗೆ ಹೆಣ್ಣುಮಕ್ಕಳಿಗೆ ತಿಳಿಸಲಾಗಿತ್ತು. “ಶಿವಚರಣ್ ಅವರು ತಮ್ಮ ಹೆಣ್ಣುಮಕ್ಕಳೊಂದಿಗೆ ಫೋನ್ ಮೂಲಕ ಮಾತನಾಡುತ್ತಿದ್ದರು. ಅವರು ಅನಾರೋಗ್ಯಕ್ಕೆ ಒಳಗಾದ ನಂತರ, ಅವರ ಕರೆಗಳು ನಿಂತು ಹೋದವು. ನಾವು ಅವರ ಸ್ಥಿತಿಯ ಬಗ್ಗೆ ಅವರಿಗೆ ತಿಳಿಸಿದ್ದೇವೆ, ಆದರೆ ಅವರು ಬರಲಿಲ್ಲ” ಎಂದು ಕುಮಾರ್ ಹೇಳಿಕೊಂಡಿದ್ದಾರೆ.

ಗುಪ್ತಾ ನಿಧನರಾದ ನಂತರ, ಆಡಳಿತ ಮಂಡಳಿಯು ಮತ್ತೆ ಹೆಣ್ಣುಮಕ್ಕಳನ್ನು ಸಂಪರ್ಕಿಸಿ, ಸೋನಿಪತ್‌ಗೆ ಬಂದರೆ ವ್ಯವಸ್ಥೆ ಮಾಡಬಹುದು ಎಂದು ಹೇಳಿತು. ಆದರೆ, ಪ್ರಯಾಣಿಸಲು ಸಮಯವಿಲ್ಲ ಎಂದು ಅವರು ಹೇಳಿದರು ಎಂದು ಕುಮಾರ್ ತಿಳಿಸಿದರು.

ನಂತರ ಹೆಣ್ಣುಮಕ್ಕಳು ವಿಡಿಯೋ ಕರೆಯ ಮೂಲಕ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು ಮತ್ತು ತಮ್ಮ ತಂದೆಯ ಅಂತಿಮ ವಿಧಿಗಳನ್ನು ದೂರದಿಂದಲೇ ವೀಕ್ಷಿಸಿದರು.

₹5,100 ಕಳುಹಿಸಿದ ಮಗಳು
ನೇಪಾಳದಲ್ಲಿ ವಾಸಿಸುವ ಮತ್ತು ಶಿಕ್ಷಕಿಯಾಗಿ ಕೆಲಸ ಮಾಡುವ ಅವರ ಮಗಳು ಅನಿತಾ, ಆನ್‌ಲೈನ್‌ನಲ್ಲಿ ₹5,100 ರೂ.ಗಳನ್ನು ಕಳುಹಿಸಿದ್ದು, ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ಸರಿಯಾಗಿ ನಡೆಸುವಂತೆ ವಿನಂತಿಸಿದ್ದರು.

ಚಿತಾಭಸ್ಮ ವಿಸರ್ಜನೆಗೂ ಮನವಿ
ಅಂತ್ಯಕ್ರಿಯೆಯ ನಂತರ, ಹೆಣ್ಣುಮಕ್ಕಳು ವೃದ್ಧಾಶ್ರಮಕ್ಕೆ ಅಂತ್ಯಕ್ರಿಯೆಯ ಪ್ರಕ್ರಿಯೆಯ ವಿಡಿಯೋಗಳನ್ನು ಕಳುಹಿಸಲು ಕೋರಿಕೊಂಡರು. ಅವರಲ್ಲಿ ಒಬ್ಬರು “ಇದಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ( ಶವ ಸಂಸ್ಕಾರ ಕ್ರಿಯೆಗಳಿಗೆ ) ನಾವು ಊಟ ಮಾಡಬೇಕು ಮತ್ತು ಸ್ನಾನ ಮಾಡಬೇಕು” ಎಂದು ಕರೆಯ ಮೂಲಕ ಹೇಳುವುದು ಕೇಳಿಸಿತು ಎಂದು ವರದಿಯಾಗಿದೆ.

ಕುಟುಂಬವು ಆರಂಭದಲ್ಲಿ ಗುಪ್ತಾ ಅವರ ಚಿತಾಭಸ್ಮವನ್ನು ಇಡಬೇಕೆಂದು ಕೇಳಿತ್ತು. ನಂತರ ಅವರು ಸೋನಿಪತ್‌ಗೆ ಬರಲು ನಮಗೆ ಸಮಯವಿಲ್ಲ ಎಂದು ತಿಳಿಸಿ, ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ನೀವೇ ವಿಸರ್ಜಿಸಿ ಬಿಡಿ ಎಂಬಂತೆ ಆಡಳಿತ ಮಂಡಳಿಗೆ ವಿನಂತಿಸಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಅನೇಕರು ಮಕ್ಕಳ ನಡತೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬಹುತೇಕ ನೆಟ್ಟಿಗರು ಹೆತ್ತು ,ಹೊತ್ತು, ಸಾಕಿ ಸಲಹಿ ಉದ್ಯೋಗ ಕರುಣಿಸಿ ಸಮಾಜದಲ್ಲಿ ಉನ್ನತ ಸ್ಥಾನಮಾನ ನೀಡಿದ ತಂದೆ ತಾಯಿಗಳನ್ನು, ಅವರ ಅಂತಿಮ ದಿನಗಳ ಯೋಗಕ್ಷೇಮ ನೋಡಿಕೊಳ್ಳುವುದು ಹಾಗಿರಲಿ, ಅಂತಿಮ ಸಂಸ್ಕಾರಕ್ಕಾದರೂ ಬಂದು ತಮ್ಮ ಋಣ ತೀರಿಸಿಕೊಳ್ಳಬೇಕಿತ್ತು ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

Continue Reading

Condolences

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಜಂತರ್ ಮಂತರ್ ಪ್ರತಿಭಟನೆ: ರಾಜಕೀಯ ಸಂಚಲನ ಹಾಗೂ ಪ್ರಮುಖ ನಾಯಕರ ಪ್ರತಿಕ್ರಿಯೆಗಳು; “ಒಂದೆಡೆ ಕ್ಷಮೆಯ ಮಾತು, ಮತ್ತೊಂದೆಡೆ ಪೊಲೀಸ್ ಪ್ರಕರಣಗಳು. ಇದು ಯಾವ ರೀತಿಯ ಕ್ಷಮೆ?”

Published

on

ದೆಹಲಿಯ ಜಂತರ್ ಮಂತರ್‌ನಲ್ಲಿ ದೇಶದ ನೀಟ್ (NEET) ಪರೀಕ್ಷಾರ್ಥಿಗಳು ಮತ್ತು ಯುವಜನತೆ ನಡೆಸಿದ ಪ್ರತಿಭಟನೆಯು ದೇಶಾದ್ಯಂತ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಪೋಷಕರ ಕನಸುಗಳು ನುಚ್ಚುನೂರಾದ ಹಿನ್ನೆಲೆಯಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಹೋರಾಟದ ತೀವ್ರತೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಿದ ಘಟನೆಯೂ ನಡೆದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋ ಸಂದೇಶ ಮತ್ತು ಅದಕ್ಕೆ ವಿರೋಧ ಪಕ್ಷಗಳು ಹಾಗೂ ಗಣ್ಯರ ಪ್ರತಿಕ್ರಿಯೆಗಳು ರಾಜಕೀಯ ಕಾವನ್ನು ಮತ್ತಷ್ಟು ಹೆಚ್ಚಿಸಿವೆ.

1. ಶಿಕ್ಷಣ ಸಚಿವರ ರಾಜೀನಾಮೆ ಹಾಗೂ ವಿದ್ಯಾರ್ಥಿಗಳ ಆಕ್ರೋಶ

ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆ ರದ್ದತಿ ಹಾಗೂ ವರ್ಷಪೂರ್ತಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ನಿರಾಶೆಯಿಂದಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳು ಮತ್ತು ಪೋಷಕರ ನಿರಂತರ ಆಕ್ರೋಶದ ಪರಿಣಾಮವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ತಮ್ಮ ಭವಿಷ್ಯವೇ ಕತ್ತಲೆಯಾಗಿದೆ ಎಂದು ಮನನೊಂದು ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದು, ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿತು.

2. ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋ ಸಂದೇಶ

ಪ್ರತಿಭಟನೆಯ ವೇಳೆ ಕೆಲ ವಿದ್ಯಾರ್ಥಿಗಳು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯ ವಿರುದ್ಧ ಬಳಸಿದ ನಿಂದನೀಯ ಮಾತುಗಳ ಕುರಿತು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.

ಪ್ರಧಾನಿ ಹೇಳಿಕೆ: “ದಾರಿತಪ್ಪಿದ ಮಕ್ಕಳಿಗೆ ಸರಿಯಾದ ಹಾದಿ ತೋರಿಸಬೇಕು, ಕಾನೂನು ಕ್ರಮವೇ ಪ್ರತಿಯೊಂದಕ್ಕೂ ಪರಿಹಾರವಲ್ಲ. ನನ್ನನ್ನು ಮತ್ತು ನನ್ನ ತಾಯಿಯನ್ನು ನಿಂದಿಸಿದ ಯುವಕರನ್ನು ನಾನು ಕ್ಷಮಿಸುತ್ತೇನೆ. ನಿಂದನೆಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಎಲ್ಲರೂ ಒಟ್ಟಾಗಿ ದೇಶಕ್ಕಾಗಿ ಕೆಲಸ ಮಾಡೋಣ” ಎಂದು ಭಾವುಕರಾಗಿ ಸಮಾಜಕ್ಕೆ ಮನವಿ ಮಾಡಿದರು.

ಪ್ರಧಾನಿ ಮೋದಿ ಅವರ ʼಕ್ಷಮೆಯʼ ಹೇಳಿಕೆ ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಾಗುತ್ತಿರುವ ಎಫ್ಐಆರ್ ಗಳ ನಡುವಿನ ವ್ಯತ್ಯಾಸವನ್ನು ಪ್ರತಿಪಕ್ಷಗಳು ಹಾಗೂ ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸುತ್ತಿದ್ದಾರೆ. “ಒಂದೆಡೆ ಕ್ಷಮೆಯ ಮಾತು, ಮತ್ತೊಂದೆಡೆ ಪೊಲೀಸ್ ಪ್ರಕರಣಗಳು. ಇದು ಯಾವ ರೀತಿಯ ಕ್ಷಮೆ?” ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ

3. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ

ರಾಹುಲ್ ಗಾಂಧಿ ಅವರು ನೀಟ್ ಅಕ್ರಮದಿಂದಾಗಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳನ್ನು ಹಾಗೂ ಮಹಾಬಲಿಪುರಂನಲ್ಲಿ ಸಂಕಷ್ಟಕ್ಕೊಳಗಾದ ಪೋಷಕರನ್ನು ನೇರವಾಗಿ ಭೇಟಿಯಾಗಿ ಸಾಂತ್ವನ ಹೇಳಿದರು. ಪ್ರಧಾನಿ ಮೋದಿ ವೀಡಿಯೋಗೆ ತಿರುಗೇಟು ನೀಡಿದ ಅವರು:

ಕ್ಷಮೆಯ ಅಗತ್ಯವಿಲ್ಲ, ಕ್ಷಮೆಯಾಚನೆ ಬೇಕು: “ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ನೋವು ಪದಗಳಿಗೆ ಸಿಗದಂತದ್ದು. ಕಳಪೆ ಶಿಕ್ಷಣ ವ್ಯವಸ್ಥೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ವಿದ್ಯಾರ್ಥಿಗಳ ಶ್ರಮ ವ್ಯರ್ಥವಾಗಿದೆ. ಪ್ರಧಾನಿಯವರು ಇದುವರೆಗೆ ನೊಂದ ಯಾವುದೇ ಪೋಷಕರನ್ನಾಗಲಿ ಅಥವಾ ಭವಿಷ್ಯ ಹಾಳಾದ ವಿದ್ಯಾರ್ಥಿಗಳನ್ನಾಗಲಿ ಭೇಟಿಯಾಗಿಲ್ಲ.”

“ಭಾರತದ ವಿದ್ಯಾರ್ಥಿಗಳಿಗೆ ಪ್ರಧಾನಿಯವರ ‘ಕ್ಷಮೆ’ ಬೇಕಿಲ್ಲ, ಬದಲಾಗಿ ಪ್ರಧಾನಿಯವರೇ ವಿದ್ಯಾರ್ಥಿಗಳ ಬಳಿ ಕ್ಷಮೆಯಾಚಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

4. ಕೆಪಿಸಿಸಿ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಖಾರವಾದ ಟೀಕೆ

ಪ್ರಧಾನಿ ಅವರ ವೀಡಿಯೋವನ್ನು “ರೀಲ್” ಎಂದು ಕರೆದಿರುವ ಬಿ.ಕೆ. ಹರಿಪ್ರಸಾದ್, ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ:

“ತಾನು ಮಾಡಿದರೆ ರಾಜತಂತ್ರ, ಬೇರೆಯವರು ಮಾಡಿದರೆ ಅಪರಾಧ ಎನ್ನಲು ಪ್ರಧಾನಿ ಮೋದಿ ಉದಾಹರಣೆ. ದಶಕಗಳಿಂದ ವಿರೋಧಿಗಳ ಕುಟುಂಬಗಳ ಮೇಲಿನ ನಿಂದನೆಗೆ ಮೌನಸಮ್ಮತಿ ನೀಡಿದವರು ಇಂದು ಮಾತೃಗೌರವದ ಪ್ರವಚನ ನೀಡುತ್ತಿರುವುದು ಬೆಂಕಿ ಹಚ್ಚಿದವನೇ ಅಗ್ನಿಶಾಮಕನಂತೆ ಪೋಸ್ ಕೊಟ್ಟ ಹಾಗಿದೆ.”

ತಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ರಾಜೀವ್ ಗಾಂಧಿಯವರ ಹತ್ಯೆಯಂತಹ ಅತ್ಯಂತ ಭೀಕರ ದುರಂತವನ್ನು ಅನುಭವಿಸಿದರೂ, ಪ್ರತಿಕ್ರಿಯೆಯಾಗಿ ದ್ವೇಷ ಸಾಧಿಸದೆ ಕ್ಷಮೆಯನ್ನು ಆರಿಸಿಕೊಂಡಿದ್ದರು. ಅದು ಕ್ಯಾಮೆರಾ ಮುಂದೆ ಮಾಡಿದ ಆಟವಲ್ಲ, ಅವರ ಸಂಸ್ಕಾರ ಎಂದು ನೆನಪಿಸಿದರು.

5. ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಪ್ರಶ್ನೆ

ಪ್ರಧಾನಿಯವರ ಕ್ಷಮಾದಾನದ ಹೇಳಿಕೆಯನ್ನು ನೇರವಾಗಿ ಪ್ರಶ್ನೆ ಮಾಡಿರುವ ಅಭಿಜಿತ್ ದೀಪ್ಕೆ:

“ಸರ್, ನೀವು ಕೇವಲ ರೀಲ್ಸ್‌ನಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ಕ್ಷಮಿಸುತ್ತೀರಾ ಅಥವಾ ಅವರ ಮೇಲೆ ದಾಖಲಾಗಿರುವ ಎಫ್‌ಐಆರ್ ಹಾಗೂ ಕೇಸ್‌ಗಳನ್ನು ಹಿಂಪಡೆಯುತ್ತೀರಾ?” ಎಂದು ಸವಾಲು ಹಾಕಿದ್ದಾರೆ.

ಪ್ರಧಾನಿ ವಿರುದ್ಧ ಹೇಳಿಕೆ ನೀಡಿದ್ದ ನೋಯ್ಡಾ ಮೂಲದ ಹದಿಹರೆಯದ ಯುವತಿಯ ಮೇಲಿನ ಎಫ್‌ಐಆರ್ ಪ್ರಸ್ತಾಪಿಸಿದ ಅವರು, ಬಿಜೆಪಿ ಐಟಿ ಸೆಲ್‌ನ ಸದಸ್ಯರು ಮಹಿಳೆಯರನ್ನು ನಿಂದಿಸಿದಾಗ ಅವರ ಮೇಲೂ ಇದೇ ರೀತಿ ಪ್ರಕರಣ ದಾಖಲಿಸಲಾಗುತ್ತದೆಯೇ ಎಂದು ಚಾಟಿ ಬೀಸಿದ್ದಾರೆ.

6. ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಹೇಳಿಕೆ

ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಬೆಂಬಲ ಸೂಚಿಸಿದ್ದ ನಟ ಪ್ರಕಾಶ್ ರಾಜ್, ಸಾಮಾಜಿಕ ಜಾಲತಾಣ ‘X’ ನಲ್ಲಿ ಧ್ವನಿ ಎತ್ತಿದ್ದಾರೆ:

ಪೋಷಕರ ದೃಷ್ಟಿಕೋನ: “ಮಕ್ಕಳು ಹಿರಿಯರಿಗೆ ಕೋಪದಲ್ಲಿ ಅಥವಾ ಆಕ್ರೋಶದಲ್ಲಿ ಅವಾಚ್ಯ ಪದ ಬಳಸಿದಾಗ ಹಿರಿಯರಾಗಿ ಅವರಿಗೆ ಎಚ್ಚರಿಕೆ ನೀಡಿ ತಿದ್ದಬೇಕೇ ಹೊರತು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು, ಪೋಲಿಸ್ ದೂರು ನೀಡುವುದು ಅಥವಾ ಕಿರುಕುಳ ನೀಡುವುದು ಸರಿಯಾದ ಕ್ರಮವಲ್ಲ” ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

ನೀಟ್ ಪರೀಕ್ಷೆಯ ಅಕ್ರಮ, ಶಿಕ್ಷಣ ಸಚಿವರ ರಾಜೀನಾಮೆ, ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ಪೋಷಕರ ಆಕ್ರಂದನದಿಂದ ತತ್ತರಿಸಿರುವ ಯುವಜನತೆಗೆ ಪ್ರಧಾನಿಯವರ ‘ಕ್ಷಮೆ’ಗಿಂತ ಹೆಚ್ಚಾಗಿ ನ್ಯಾಯ ಬೇಕಿದೆ ಎನ್ನುವುದು ವಿರೋಧ ಪಕ್ಷಗಳು ಮತ್ತು ಹೋರಾಟಗಾರರ ಸ್ಪಷ್ಟ ನಿಲುವಾಗಿದೆ.

Continue Reading

Trending

Copyright © 2025 Deevatige

error: Content is protected !!