Dharmasthala
ಸೌಜನ್ಯಾ ಪ್ರಕರಣದ ಎಸ್‌ಐಟಿಯಿಂದ ನನ್ನನ್ನು ಕೈಬಿಡಿ: ಎಎಸ್‌ಪಿ ಡಾ.ವೆಂಕಟೇಶ್ ಪ್ರಸನ್ನ ರಾಜ್ಯ ಸರ್ಕಾರಕ್ಕೆ ಲಿಖಿತ ಮನವಿ
ಬೆಂಗಳೂರು: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತಮ್ಮನ್ನು ಕೈಬಿಡುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಡಾ. ವೆಂಕಟೇಶ್ ಪ್ರಸನ್ನ ಅವರು ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಹಿನ್ನೆಲೆ ಏನು? ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆಗಾಗಿ ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ ಎಸ್‌ಐಟಿಯನ್ನು ರಚಿಸಲಾಗಿತ್ತು. ಈ ತಂಡದಲ್ಲಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ನಿಶಾ ಜೇಮ್ಸ್, ಲೋಕೇಶ್ ಜಗಲಸಾರ್ ಹಾಗೂ ಎಎಸ್ಪಿ ವೆಂಕಟೇಶ್ ಪ್ರಸನ್ನ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು.
ಆದರೆ, ಎಸ್‌ಐಟಿಯಲ್ಲಿ ನೇಮಕಗೊಂಡಿರುವ ಕೆಲವು ಅಧಿಕಾರಿಗಳ ವಿರುದ್ಧ ಮೃತ ಸೌಜನ್ಯಾ ಅವರ ತಾಯಿ ಕುಸುಮಾವತಿ ಹಾಗೂ ವಿವಿಧ ಸಾಮಾಜಿಕ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತನಿಖಾ ತಂಡ ರಚನೆಯಾಗಿಲ್ಲ ಎಂದು ಆರೋಪಿಸಿದ್ದ ಕುಸುಮಾವತಿ ಅವರು, ಪಾರದರ್ಶಕ ತನಿಖೆಗಾಗಿ ಸಮರ್ಥ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸುವಂತೆ ಆಗ್ರಹಿಸಿದ್ದರು.
ಕುಟುಂಬದವರ ಈ ಆಕ್ಷೇಪಗಳು ಮತ್ತು ವಿವಾದದ ಬೆನ್ನಲ್ಲೇ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಅವರು ಎಸ್‌ಐಟಿ ತಂಡದಿಂದ ಹೊರಬರಲು ನಿರ್ಧರಿಸಿದ್ದು, ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಸಲ್ಲಿಸಿರುವುದು ಈಗ ತನಿಖೆಯ ಬಗ್ಗೆ ಆರಂಭದಲ್ಲೇ ಚರ್ಚೆ ಉಂಟು ಮಾಡಿದೆ. ಸರ್ಕಾರದ ಮುಂದಿನ ತೀರ್ಪು ಏನಾಗಲಿದೆ ಮತ್ತು ಈ ಮನವಿಯನ್ನು ಸರ್ಕಾರ ಪುರಸ್ಕರಿಸಲಿದೆಯೇ ಎಂಬುದು ಕಾದು ನೋಡಬೇಕಿದೆ.
ಪತ್ರ ಬರೆದಿದ್ದು ನಿಜ-ಎಎಸ್ಪಿ
ಎಸ್‌ಐಟಿ ತಂಡದಲ್ಲಿ ತಮ್ಮ ಹೆಸರನ್ನು ಕೈ ಬಿಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಲಿಖಿತವಾಗಿ ಎಎಸ್ಪಿ ವೆಂಕಟೇಶ್ ಪ್ರಸನ್ನ ಪತ್ರ ಬರೆದು ಮನವಿ ಮಾಡಿದ್ದಾರೆ. ತಮ್ಮ ಮೇಲೆ ಮೃತರ ಕುಟುಂಬದವರು ಅವಿಶ್ವಾಸ ವ್ಯಕ್ತಪಡಿಸಿರುವುದರಿಂದ ತನಿಖಾ ತಂಡದಲ್ಲಿ ಮುಂದುವರೆಯಲು ನೈತಿಕ ಪ್ರಶ್ನೆ ಎದುರಾಗಿದೆ ಎಂದು ಅವರು ವಿನಂತಿಸಿದ್ದಾರೆ.
Belthangady
ಸೌಜನ್ಯ ಪ್ರಕರಣ: ಹಿಂದೂ ಮುಖಂಡರ ದಿಢೀರ್ ಭೇಟಿ, ನ್ಯಾಯದ ಹೋರಾಟಕ್ಕೆ ಬೆಂಬಲ ಘೋಷಣೆ
ಬೆಳ್ತಂಗಡಿ: ಧರ್ಮಸ್ಥಳದ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮರುತನಿಖೆಗೆ ಆದೇಶ ನೀಡಿರುವ ಬೆನ್ನಲ್ಲೇ, ಹೋರಾಟದ ವೇದಿಕೆ ಮತ್ತಷ್ಟು ಬಲಗೊಳ್ಳುತ್ತಿದೆ. ಇದರ ಭಾಗವಾಗಿ, ಸಂಘ ಪರಿವಾರದ ಪ್ರಮುಖ ಹಾಗೂ ಮಾಜಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಮತ್ತು ಹಿಂದೂ ಸಮಾಜದ ಹೋರಾಟಗಾರ ಹಾಗೂ ಹಿಂದೂ ಜಾಗರಣ ವೇದಿಕೆಯಲ್ಲಿ ಮುಂಚೂಣಿಯಲ್ಲಿದ್ದ ಕಾವೂರಿನ ಟಿಕ್ಕಿ ರವಿ ಅವರು ಬುಧವಾರ (ಅಕ್ಟೋಬರ್ 07) ಸೌಜನ್ಯ ಅವರ ಮನೆ ಹಾಗೂ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ದಿಢೀರ್ ಭೇಟಿ ನೀಡಿ, ಸೌಜನ್ಯ ನ್ಯಾಯದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
ಸೌಜನ್ಯ ಮನೆ ಹಾಗೂ ಆರಾಧನಾ ಸ್ಥಳಕ್ಕೆ ಭೇಟಿ
ಬೆಳಗ್ಗೆ ಧರ್ಮಸ್ಥಳದಲ್ಲಿ ದುಷ್ಟರ ಅಟ್ಟಹಾಸಕ್ಕೆ ಬಲಿಯಾದ ಸೌಜನ್ಯಾಳ (Soujanya Case) ಸಮಾಧಿ ಸ್ಥಳ ಹಾಗೂ ಸೌಜನ್ಯ ಶಕ್ತಿಯ ಆರಾಧನಾ ಸಾನಿಧ್ಯಕ್ಕೆ ಭೇಟಿ ನೀಡಿದ ಕಲ್ಲಡ್ಕ ಕೃಷ್ಣಪ್ಪ ಪೂಜಾರಿ ಹಾಗೂ ಟಿಕ್ಕಿ ರವಿ ಅವರು, 14 ವರ್ಷಗಳ ಹಿಂದೆ ಕ್ರೂರತ್ಯಾಗಕ್ಕೊಳಗಾದ ಸೌಜನ್ಯಳ ಪ್ರತಿಮೆಗೆ ಪ್ರಾರ್ಥಿಸಿ ನಮನ ಸಲ್ಲಿಸಿದರು. ಬಳಿಕ ಸೌಜನ್ಯ ಅವರ ಮನೆಗೆ ತೆರಳಿ ತಾಯಿ ಕುಸುಮಾವತಿ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು. “ನಿಮ್ಮ ಹಾಗೂ ನಮ್ಮೆಲ್ಲರ ಮಗಳು ಸೌಜನ್ಯ ಶಕ್ತಿ ಸ್ವರೂಪಿಣಿಯಾಗಿದ್ದು, ಸೌಜನ್ಯಗೆ ಮಾತ್ರವಲ್ಲದೆ ಈ ಪ್ರದೇಶದಲ್ಲಿ ಅಸ್ವಾಭಾವಿಕವಾಗಿ ಮೃತಪಟ್ಟ ಎಲ್ಲರಿಗೂ ನ್ಯಾಯ ಸಿಗುವವರೆಗೆ ನಮ್ಮ ಧ್ವನಿ ನಿಮ್ಮೊಂದಿಗೆ ಇರಲಿದೆ” ಎಂದು ಅವರು ಭರವಸೆ ನೀಡಿದರು. ನಂತರ ಶ್ರೀಕ್ಷೇತ್ರ ಧರ್ಮಸ್ಥಳದ ಅಣ್ಣಪ್ಪ ಸ್ವಾಮಿಯ ಸಾನಿಧ್ಯಕ್ಕೆ ತೆರಳಿ ಸೌಜನ್ಯಳಿಗೆ ಹಾಗೂ ಇತರ ಅಸ್ವಾಭಾವಿಕವಾಗಿ ಸಾವಿಗೀಡಾದವರಿಗೆ ಹೆಸರೇ ಸೂಚಿಸುವ ಈ ಧರ್ಮದ ಸ್ಥಳದಲ್ಲಿ ಆದಷ್ಟು ಬೇಗ ನ್ಯಾಯ ಒದಗಿಸುವಂತೆ ಪ್ರಾರ್ಥಿಸಿದರು.

ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಭೇಟಿ ಮತ್ತು ಬೆಂಬಲ
ಕಳೆದ 14 ವರ್ಷಗಳಿಂದ ಜೀವಭಯ, ಮಾನಹಾನಿ. ಬಂಧನ, ಗಡಿಪಾರು ಹಾಗೂ ವಿವಿಧ ಮೊಕದ್ದಮೆಗಳನ್ನು ಲೆಕ್ಕಿಸದೆ ಸೌಜನ್ಯಗಾಗಿ ನಿರಂತರ ಹೋರಾಟ ನಡೆಸುತ್ತ ಬಂದಿರುವ ಪ್ರಮುಖ ಸಾಮಾಜಿಕ ನೇತಾರ, ಧಾರ್ಮಿಕ ಸೇನಾನಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ನಾಯಕರು ಭೇಟಿ ನೀಡಿದರು. ಸಮಾಜದಲ್ಲಿ ಅನ್ಯಾಯಗಳ ವಿರುದ್ಧ ಮೌನವಹಿಸುವವರ ಧೋರಣೆ ಹಾಗೂ ಪ್ರಸ್ತುತ ಬೆಳವಣಿಗೆಗಳ ಕುರಿತು ಸುದೀರ್ಘ ಮಾತುಕತೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರ ನೇತೃತ್ವದ ಹೋರಾಟವನ್ನು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯಲು ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ ಅವರು, ಅಕ್ಟೋಬರ್ 10ರಂದು ನಡೆಯಲಿರುವ ‘ನ್ಯಾಯದ ನಡಿಗೆ’ ಹಾಗೂ ನ್ಯಾಯವಾದಿಗಳಿಗೆ ಅಭಿನಂದನಾ ಸಭೆಯಲ್ಲಿ ಭಾಗವಹಿಸುವುದಾಗಿ ಭರವಸೆ ನೀಡಿದರು.
ಹೊಸ ರಾಜಕೀಯ ಮತ್ತು ಸಾಮಾಜಿಕ ಸಂಚಲನ
ಕೆಲ ಸಮಯಗಳ ಹಿಂದೆ ಆರ್‌ಎಸ್‌ಎಸ್ ಹಿರಿಯ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಸೌಜನ್ಯ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದು ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮರುತನಿಖೆಗೆ ಆದೇಶ ನೀಡಿತ್ತು. ಇದೀಗ ಡಾ. ಪ್ರಭಾಕರ ಭಟ್ ಅವರ ಆಪ್ತ ವಲಯದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಮತ್ತು ಹಿಂದೂ ಹೋರಾಟಗಾರ ಟಿಕ್ಕಿ ರವಿ ಅವರು ಸೌಜನ್ಯ ಹೋರಾಟಕ್ಕೆ ಬಹಿರಂಗವಾಗಿ ಧುಮುಕಿರುವುದು ಹಾಗೂ ಇತರ ಹಿಂದೂ ನಾಯಕರು ಕೈಜೋಡಿಸಲು ಮುಂದಾಗಿರುವುದು ಪ್ರಕರಣಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿದೆ. ಮುಂಬರುವ ದಿನಗಳಲ್ಲಿ ಸರಕಾರದ ತನಿಖೆ, ನ್ಯಾಯಾಂಗದ ಆದೇಶ, ಸಾರ್ವಜನಿಕ ಹೋರಾಟ ಯಾವ ರೀತಿಯ ಮಹತ್ವದ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
Dharmasthala
ಸೌಜನ್ಯ ಕೇಸ್ ಎಸ್‌ಐಟಿ ರಚನೆ: ಕುಟುಂಬದವರ ಆಕ್ಷೇಪವಿದ್ದರೆ ಮರುಪರಿಶೀಲನೆಗೆ ಸರ್ಕಾರ ಸಿದ್ಧ – ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ
ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರವು ಸೆಪ್ಟೆಂಬರ್ 24 ರಂದು 5 ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು. ಐಜಿಪಿ ಎನ್. ಶಶಿಕುಮಾರ್ ನೇತೃತ್ವದ ಈ ತಂಡದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಗುಪ್ತವಾರ್ತೆ ಎಸ್ಪಿ ನಿಶಾ ಜೇಮ್ಸ್, ಸಿಐಡಿ ಎಸ್ಪಿ ಲೋಕೇಶ್ ಜಗಲ್ಸರ್ ಹಾಗೂ ಬೆಂಗಳೂರು ಗ್ರಾಮಾಂತರ ಎಎಸ್ಪಿ ವೆಂಕಟೇಶ್ ಪ್ರಸನ್ನ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಆದರೆ, ಎಸ್‌ಐಟಿ ರಚನೆ ಬೆನ್ನಲ್ಲೇ ತಂಡದಲ್ಲಿರುವ ಕೆಲವು ಅಧಿಕಾರಿಗಳ ನೇಮಕಾತಿ ಹಾಗೂ ಸೇರ್ಪಡೆ ಬಗ್ಗೆ ಸೌಜನ್ಯ ಕುಟುಂಬಸ್ಥರು ಮತ್ತು ಸಾರ್ವಜನಿಕ ವಲಯದಿಂದ ತೀವ್ರ ಅಪಸ್ವರ ಹಾಗೂ ಆಕ್ಷೇಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಇಂದು (ಸೆ. 30) ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕುಟುಂಬದವರ ಆಕ್ಷೇಪಣೆಗಳ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಮುಖ ಹೇಳಿಕೆಗಳು:
ಒಳ್ಳೆಯ ಉದ್ದೇಶದೊಂದಿಗೆ SIT ರಚನೆ: ” ನೋಡಿ ನಾವು SIT ರಚನೆ ಮಾಡಬೇಕಾದರೆ ಒಳ್ಳೆಯ ಉದ್ದೇಶದಿಂದ ತನಿಖಾ ತಂಡವನ್ನು ರಚನೆ ಮಾಡಿರುತ್ತೇವೆ, ಯಾವುದರಲ್ಲಿ ವೈಯಕ್ತಿಕ ಆಸಕ್ತಿಯೂ ಇಲ್ಲ, ಕೆಟ್ಟ ಹೆಸರು ಬರಬೇಕು ಎಂದೂ ಇಲ್ಲ. SIT ರಚನೆ ಆದ ಮೇಲೆ ಕೆಲ ಜನ ಹಾಗೂ ವಿಶೇಷವಾಗಿ ಕುಟುಂಬದವರು ಕೂಡಾ ಸ್ವಲ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು.”
“ಯಾರದ್ದೇ ಭಾವನೆಗಳಿಗೆ ನೋವು ತರುವ ಉದ್ದೇಶ ನಮ್ಮಲ್ಲಿ ಇಲ್ಲ. ಈ ಪ್ರಕರಣಕ್ಕೆ ಮುಕ್ತಾಯ ಸಿಗಬೇಕು, ಅಂತಿಮವಾಗಿ ಸತ್ಯಾಂಶವನ್ನು ಹೊರಗೆ ತಂದು ನ್ಯಾಯ ಕೊಡಿಸಬೇಕು ಎಂಬುವುದೇ ಆಗಿದೆ. ಅಕಸ್ಮಾತ್ ಸಾರ್ವಜನಿಕರಿಗೆ ಹಾಗೂ ಕುಟುಂಬದವರಿಗೆ XYZ ನೇಮಕಾತಿಯಿಂದ ತೊಂದರೆ ಇದ್ದರೆ ಅದನ್ನು ಕೂಡಾ ಪರಿಶೀಲನೆ ಮಾಡಲು ಸರ್ಕಾರ ತಯಾರಿದೆ. ನಾವು ಜನರಿಗೋಸ್ಕರವೇ ಇರುವ ಸರಕಾರ ಅಲ್ಲವೇ ? , ಯಾರ ಮನಸ್ಸಿಗೂ ಬೇಸರ ಮಾಡಿಸುವುದು ನಮ್ಮ ಉದ್ದೇಶವಿಲ್ಲ, ಜನರಿಗೆ ಬೇಸರ ಮಾಡ್ಬಿಟ್ಟು, ಯಾವುದೋ ಎಸ್ ಐ ಟಿ ಮಾಡ್ಬಿಟ್ಟು ನಮಗೆ ಅಂತ ಹಠ ಇಲ್ಲ. ಸುಪ್ರೀಂ ಕೋರ್ಟ್ ಆದೇಶ ಏನು ಇದೆಯೋ ಅದರ ಪ್ರಕಾರ ಮಾಡುತ್ತಿದ್ದೇವೆ.”
ಸಿಬಿಐ ತನಿಖೆಯ ವೈಫಲ್ಯದ ಬಗ್ಗೆ ಗೃಹ ಸಚಿವರ ಪ್ರತಿಕ್ರಿಯೆ:
ಈ ಸಂದರ್ಭದಲ್ಲಿ ಸಿಬಿಐ ತನಿಖೆಯ ಬಗ್ಗೆಯೂ ಮಾತನಾಡಿದ ಅವರು, “ಸೌಜನ್ಯ ಪ್ರಕರಣದಲ್ಲಿ ಯಾರಿಗೆ ಛೀಮಾರಿ ಹಾಕಿರೋದು? ಸುಪ್ರೀಂ ಕೋರ್ಟ್‌ನವರು ಅವರು ಸಿಬಿಐಗೆ ತಾನೇ? ಸಿಬಿಐ ಸರಿಯಾಗಿ ಕೆಲಸ ಮಾಡಿಲ್ಲ, ಅಲ್ಲಿ ಹೋಗೂ ಇಲ್ಲ, ಅಲ್ಲಿ ಏನು ಪತ್ತೆ ಮಾಡಿಲ್ಲ, ಸ್ಥಳಕ್ಕೆ ಹೋಗಿಲ್ಲ ಅಂತಾ ಅವರಿಗೆ ಚಾಟಿ ಬೀಸಿಬಿಟ್ಟು ವಾಪಾಸು ನಮಗೆ ಕೊಟ್ಟಿದ್ದಾರೆ. ಅಂದರೆ ಕರ್ನಾಟಕ ಪೊಲೀಸರು ಸಮರ್ಥರಾಗಿದ್ದಾರೆ” ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಕುಟುಂಬದವರ ವಿಶ್ವಾಸವನ್ನು ಗಳಿಸಿಯೇ ಮುಂದಿನ ಹೆಜ್ಜೆ ಇಡುವುದಾಗಿ ಗೃಹಚಿವರು ಭರವಸೆ ನೀಡಿದ್ದಾರೆ
Dharmasthala
ಧರ್ಮಸ್ಥಳ ಸೌಜನ್ಯ ಪ್ರಕರಣ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಕ್ಟೋಬರ್ 10 ರಂದು ‘ನ್ಯಾಯದ ನಡೆ’ ಅಭಿನಂದನಾ ಸಭೆ ಹಾಗೂ ಮರುತನಿಖೆಗೆ ಆಗ್ರಹ
ಮರುತನಿಖೆಗೆ ಸ್ವಾಗತ, ಆದರೆ ನಿಷ್ಪಕ್ಷಪಾತ ತನಿಖೆ ಆಗಬೇಕು- ಮಹೇಶ್ ಶೆಟ್ಟಿ ತಿಮರೋಡಿ
SIT ವರದಿ ಎಲ್ಲಿ? ಸರ್ಕಾರ ಯಾಕೆ ಮುಚ್ಚಿಡುತ್ತಿದೆ? ಬಹಿರಂಗಪಡಿಸಿ – ಗಿರೀಶ್ ಮಟ್ಟಣ್ಣವರ್
ಧರ್ಮಸ್ಥಳದ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು 14 ವರ್ಷಗಳು ಗತಿಸಿದ್ದು, ನಿರಂತರ ಹೋರಾಟದ ಫಲಶ್ರುತಿಯೆಂಬಂತೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 10 ರಂದು ನ್ಯಾಯದ ನಡಿಗೆ ಮೂಲಕ ಉಜಿರೆಯಿಂದ ಬೆಳ್ತಂಗಡಿವರೆಗೆ 5 ಕಿ.ಮೀ ಕಾಲ್ನಡಿಗೆ ಜಾಥಾ ಹಾಗೂ ಅಭಿನಂದನಾ ಸಮಾರಂಭ ನಡೆಸಿ ಪ್ರಕರಣ ಸಂಬಂಧ ಬೆಂಬಲಿಸಿದ ವಕೀಲರು, ಹೋರಾಟಗಾರರನ್ನು ಅಭಿನಂದಿಸಲಾಗುವುದು ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸೆ. 29 ರಂದು ತಿಮರೋಡಿ ಮನೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ಟೋಬರ್ 10 ರಂದು ಬೆಳಿಗ್ಗೆ 10 ಗಂಟೆಗೆ ನ್ಯಾಯ ನಡೆ ಅಭಿನಂದನಾ ಸಭೆ ನಡೆಯಲಿದ್ದು, ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಅಂದು ತನಿಖೆ ಮಾಡಿದ ಅಧಿಕಾರಿಗಳನ್ನು ಪಕ್ಕಕ್ಕಿಟ್ಟು ಮರು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವುದು ಸ್ವಾಗತಾರ್ಹ. ತನಿಖೆಯನ್ನು ಯಾರೇ ಮಾಡಲಿ, ನ್ಯಾಯಯುತವಾಗಿ ಮಾಡಲಿ ಅನ್ನುವುದೇ ನಮ್ಮ ಆಶಯ. ಪೊಲೀಸ್ ಕಾನ್‌ಸ್ಟೇಬಲ್ ನೇತೃತ್ವದ ತಂಡ ಬೇಕಾದರೂ ತನಿಖೆ ಮಾಡಲಿ, ನಮಗೆ ನ್ಯಾಯ ಸಿಗಬೇಕು, ಅತ್ಯಾಚಾರಿ ಯಾರೆಂದು ಗೊತ್ತಾಗಬೇಕೆಂದರು.
ಗೃಹಮಂತ್ರಿಗಳೇ ಇದಕ್ಕೆ ಉತ್ತರದಾಯಿತ್ವ ಹೊಂದಿದ್ದಾರೆ. ಅವರು ನ್ಯಾಯಯುತವಾಗಿ ತನಿಖೆ ನಡೆಸುವಂತೆ ನೋಡಿಕೊಳ್ಳಬೇಕು. ಈ ಪ್ರಕರಣದಲ್ಲಿ ಸಂತೋಷ್ ರಾವ್ ಅಲ್ಲದಿದ್ದರೆ ಇನ್ಯಾರು ಈ ಕೃತ್ಯ ಎಸಗಿರುವುದು ಎಂಬುದನ್ನು SIT ತನಿಖೆ ನಡೆಸಿ ಸೌಜನ್ಯಳಿಗೆ ನ್ಯಾಯ ಸಿಕೊಡಬೇಕು ಎಂದರು
ಪತ್ರಿಕಾ ಗೋಷ್ಠಿಯಲ್ಲಿ ಈ ಕುರಿತು ವಿವರಗಳನ್ನು ಹಂಚಿಕೊಳ್ಳಲಾಗಿದ್ದು, ಪತ್ರಿಕಾ ಪ್ರಕಟಣೆಯ ಮುಖ್ಯಾಂಶಗಳು ಮತ್ತು ಹೋರಾಟಗಾರರ ಮಾತುಗಳ ವಿವರವಾದ ವರದಿ ಇಲ್ಲಿದೆ:
ಸುಪ್ರೀಂ ಕೋರ್ಟ್ ಐತಿಹಾಸಿಕ ಆದೇಶ ಮತ್ತು ಹಿನ್ನೆಲೆ
ಬರುವ ಅಕ್ಟೋಬರ್ 10, 2026 ಕ್ಕೆ ಸೌಜನ್ಯ ದಾರುಣ ಸಾವು ಕಂಡು 14 ವರ್ಷಗಳು ಪೂರ್ಣಗೊಳ್ಳಲಿದ್ದು, ಇಷ್ಟು ವರ್ಷಗಳ ಕಾಲ ನ್ಯಾಯ ಮರೀಚಿಕೆಯಾಗಿ ಉಳಿದಿತ್ತು.
ಸೌಜನ್ಯ ತಾಯಿ ಕುಸುಮಾವತಿ ಅವರು ಸಲ್ಲಿಸಿದ್ದ ಎಸ್‌ಎಲ್‌ಪಿ ಅರ್ಜಿಯ (SLP 5763/26) ವಿಚಾರಣೆ ನಡೆಸಿರುವ ಮಾನ್ಯ ಸರ್ವೋಚ್ಚ ನ್ಯಾಯಾಲಯವು, ಸೆಪ್ಟೆಂಬರ್ 22, 2026 ರಂದು ಹೊಸ ಎಸ್‌ಐಟಿ (SIT) ರಚಿಸಿ ಮರುತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
2012ರಲ್ಲಿ ಕರ್ನಾಟಕ ರಾಜ್ಯ ಪೊಲೀಸರು ಮತ್ತು ತದನಂತರ ಕೇಂದ್ರದ ಸಿಬಿಐ (CBI) ನಡೆಸಿದ ಕಳಪೆ ತನಿಖೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, “ನೀವು ಯಾರನ್ನು ರಕ್ಷಣೆ ಮಾಡಲು ತನಿಖೆ ಮಾಡಿದ್ದೀರಿ?” ಎಂದು ಪ್ರಶ್ನಿಸಿರುವುದು ಪ್ರಭಾವಿಗಳನ್ನು ರಕ್ಷಿಸುತ್ತಿರುವ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಈ ಸುದೀರ್ಘ ಹೋರಾಟದ ಬಳಿಕ ಮರುತನಿಖೆಗೆ ಆದೇಶ ಹೊರಬಂದಿರುವುದು ನ್ಯಾಯಾಂಗ ವ್ಯವಸ್ಥೆಯಲ್ಲಿ ಐತಿಹಾಸಿಕ ಮೈಲಿಗಲ್ಲು ಹಾಗೂ ಅಸಹಾಯಕ ಜನಸಾಮಾನ್ಯರಿಗೆ ನಂಬಿಕೆ ಮೂಡಿಸುವ ಆಶಾಕಿರಣವಾಗಿದೆ.
ಅಕ್ಟೋಬರ್ 10ರಂದು ‘ನ್ಯಾಯದ ನಡೆ’ ಹಾಗೂ ಅಭಿನಂದನಾ ಸಭೆ
ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಸ್ವಾಗತಿಸಿ, ಹೋರಾಟವನ್ನು ಬೆಂಬಲಿಸಿದ ಎಲ್ಲ ನ್ಯಾಯವಾದಿಗಳು, ಸಾಮಾಜಿಕ ಜಾಲತಾಣಗಳು, ಯೂಟ್ಯೂಬ್ ಮಾಧ್ಯಮಗಳು, ಪತ್ರಿಕೆಗಳು ಹಾಗೂ ಕೋಟಿ ಕೋಟಿ ಜನಸಾಮಾನ್ಯರಿಗೆ ಅಭಿನಂದನೆ ಸಲ್ಲಿಸಲು ಅಕ್ಟೋಬರ್ 10 ರಂದು ಬೆಳಿಗ್ಗೆ 10 ಗಂಟೆಗೆ ‘ನ್ಯಾಯದ ನಡೆ’ ಅಭಿನಂದನಾ ಸಭೆಯನ್ನು ಆಯೋಜಿಸಲಾಗಿದೆ.
ಅಂದು ಉಜಿರೆಯಿಂದ ಬೆಳ್ತಂಗಡಿಯವರೆಗೆ 5 ಕಿಲೋಮೀಟರ್ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಲಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರ ಆಕ್ರೋಶ ಹಾಗೂ ಆಗ್ರಹಗಳು
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಗಿರೀಶ್ ಮಟ್ಟೆಣ್ಣವರ ಹಾಗೂ ಇತರರು ಸರ್ಕಾರದ ತನಿಖಾ ವೈಫಲ್ಯ ಮತ್ತು ಮುಂದಿನ ಆಗ್ರಹಗಳ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ:
ನಿಷ್ಪಕ್ಷಪಾತ ತನಿಖೆಗೆ ಆಗ್ರಹ: ತನಿಖೆಯನ್ನು ಯಾರು ಬೇಕಾದರೂ ಮಾಡಲಿ, ಆದರೆ ನ್ಯಾಯಯುತವಾಗಿ, ರೋಸ್ಟರ್ ಅಥವಾ ಪೊಲೀಸ್ ಕಾನ್‌ಸ್ಟೆಬಲ್ ನೇತೃತ್ವದ ತಂಡದಿಂದ ಆದರೂ ಸರಿಯೇ, ನಿಜವಾದ ಅಪರಾಧಿಗಳು ಯಾರೆಂಬುದು ಹೊರಬರಬೇಕು. ಗೃಹಮಂತ್ರಿಗಳು ಇದಕ್ಕೆ ಉತ್ತರದಾಯಿಯಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
ಸಿಬಿಐ ಹಾಗೂ ಹಿಂದಿನ ತನಿಖೆಗಳ ವೈಫಲ್ಯ: ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐ ತನಿಖೆಯನ್ನೇ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವುದು ಸಿಬಿಐ ಯಾರನ್ನು ರಕ್ಷಿಸಲು ಪ್ರಯತ್ನಿಸಿತ್ತು ಎಂಬದನ್ನು ಸ್ಪಷ್ಟಪಡಿಸುತ್ತದೆ. ಲೋಕಾಯುಕ್ತ ಒಂದು ಬಾರಿ, ಸಿಐಡಿ ಎರಡು ಬಾರಿ ಹಾಗೂ ನಂತರ ಸಿಬಿಐ ತನಿಖೆ ನಡೆಸಿದರೂ ನಿಜವಾದ ಆರೋಪಿಗಳನ್ನು ಪತ್ತೆ ಮಾಡಿಲ್ಲ.
ಬೆದರಿಕೆ ಹಾಕುವ ಅಧಿಕಾರಿಗಳಿಗೆ ಎಚ್ಚರಿಕೆ: ಹೊಸದಾಗಿ ರಚನೆಯಾಗಿರುವ ಎಸ್‌ಐಟಿ ತಂಡ ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಸಾಕ್ಷಿದಾರರಿಗೆ ಬೆದರಿಕೆ ಹಾಕುವ ಘಟನೆಗಳು ಮರುಕಳಿಸಬಾರದು, ಹಾಗೇನಾದರೂ ಆದರೆ ಅಂತಹ ಅಧಿಕಾರಿಗಳು ಅಮಾನತುಗೊಳ್ಳುವುದು ಖಚಿತ ಎಂದು ಎಚ್ಚರಿಸಲಾಗಿದೆ. ನಾವು ಸಾಕ್ಷಿ ನೀಡುವುದಿಲ್ಲ ಎಂಬ ಸಾರ್ವಜನಿಕ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಸಾಕ್ಷಿ ಸಲ್ಲಿಸಲಿದ್ದೇವೆ ಎಂದರು.
ಎಸ್‌ಐಟಿ ವರದಿ ಬಹಿರಂಗಪಡಿಸಲು ಆಗ್ರಹ: ಧರ್ಮಸ್ಥಳ ಪ್ರಕರಣದಲ್ಲಿ ಹಿಂದೆ ರಚಿಸಲಾದ ಎಸ್‌ಐಟಿ ತನಿಖಾ ತಂಡದ ವರದಿ ಹಿನ್ನೆಲೆಯಲ್ಲಿ, ರಾಜ್ಯ ಮಹಿಳಾ ಆಯೋಗವು ತನಿಖೆ ಮುಂದುವರೆಸಲು ಕೋರಿದ್ದರೂ ಸರ್ಕಾರ ವರದಿಯನ್ನು ಬಹಿರಂಗಪಡಿಸದೆ ಮುಚ್ಚಿಟ್ಟಿದೆ. ಇದರಿಂದ ಪ್ರಭಾವಿಗಳನ್ನು ರಕ್ಷಿಸುವ ಸಂಶಯ ಮೂಡಿದ್ದು, ತಕ್ಷಣ ವರದಿಯನ್ನು ಬಹಿರಂಗಪಡಿಸಬೇಕು.
ಈ ಹಿಂದೆ CID ತನಿಖಾಧಿಕಾರಿಗಳು ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದರು. ಈ ಬಾರಿ ಅಂತಹ ಘಟನೆ ನಡೆಯಬಾರದು. SIT ವರದಿ ಎಲ್ಲಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್, ಗೋವಿಂದ ಕಾರಜೋಳ ಸೇರಿದಂತೆ ಅನೇಕರು ಪ್ರಶ್ನಿಸಿದ್ದಾರೆ. ನಾವು ಕೂಡ ಕೇಳುತ್ತಿದ್ದೇವೆ. ಬಂಗ್ಲೆ ಗುಡ್ಡದಲ್ಲಿ ಲಭ್ಯವಾದ ಅಸ್ಥಿಪಂಜರಗಳು ಕ್ರೂರವಾಗಿ ಕೊಲೆಯಾದವರು ಎಂದು FSL ವರದಿ ತಿಳಿಸಿದೆ. ಆದರೆ ಈ ವರದಿಗಳು ಎಲ್ಲೂ ಇಲ್ಲ. ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆ ಕೊಲೆ ಪ್ರಕರಣದ ಆರೋಪಿ ನಾಪತ್ತೆ, ಲಾಡ್ಜ್‌ನಲ್ಲಿ ಬಾಯಿಗೆ ಬಟ್ಟೆ ಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ನಾಪತ್ತೆ. ಇದು ನಾವು ಹೇಳುತ್ತಿಲ್ಲ, SIT ಅಧಿಕಾರಿಗಳೇ ಉಲ್ಲೇಖಿಸಿದ್ದಾರೆ. ಪತ್ತೆಯಾದ ಅಸ್ಥಿಪಂಜರದ ಬಾಯಿಗೆ ಕೈ ಇಡಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ. ಆದರೆ ಸರ್ಕಾರ ಇದನ್ನೆಲ್ಲ ಯಾಕೆ ಮುಚ್ಚಿಡುತ್ತಿದೆ? ಎಂದು ಪ್ರಶ್ನಿಸಿದರು.
ಸೌಜನ್ಯ ಸಹಾಯವಾಣಿ ಆರಂಭಿಸಿ: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿ ಬಾಲಕಿಯರ ಸುರಕ್ಷತೆಗಾಗಿ ರಾಜ್ಯ ಸರ್ಕಾರ “ಸೌಜನ್ಯ ಸಹಾಯವಾಣಿ” (HELP LINE) ತೆರೆಯಬೇಕು ಹಾಗೂ ಕಾಮುಕ, ಸಮಾಜಘಾತುಕ ವ್ಯಕ್ತಿಗಳಿಂದ ಜನರನ್ನು ರಕ್ಷಿಸುವ ಭರವಸೆ ನೀಡಬೇಕು.
ತನಿಖಾಧಿಕಾರಿ ನೇಮಕದ ಬಗ್ಗೆ ಆಕ್ಷೇಪ: ತನಿಖಾಧಿಕಾರಿಯಾಗಿ ಶಶಿಕುಮಾರ್ ಅವರ ನೇಮಕದ ಬಗ್ಗೆಯೂ ಕೆಲವು ಆರೋಪಗಳಿದ್ದು, ತಾಯಿ ಕುಸುಮಾವತಿ ಚಂದಪ್ಪಗೌಡ ಅವರು ಪ್ರಕರಣದ ತನಿಖೆ ಅತ್ಯಂತ ನಿಷ್ಪಕ್ಷಪಾತವಾಗಿ ಹಾಗೂ ಉತ್ತಮ ರೀತಿಯಲ್ಲಿ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಸ್ವಾಗತಿಸಿ, ಸೌಜನ್ಯ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲಾ ನ್ಯಾಯವಾದಿಗಳು, ಸಾಮಾಜಿಕ ಜಾಲತಾಣ, ಯೂಟ್ಯೂಬ್ ಮಾಧ್ಯಮಗಳು, ಪತ್ರಿಕೆಗಳು ಮತ್ತು ಕೋಟಿ ಕೋಟಿ ಜನಸಾಮಾನ್ಯರನ್ನು ಅಭಿನಂದಿಸಲು ‘ನ್ಯಾಯದ ನಡಿಗೆ’ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಕುಮಾರಿ ಸೌಜನ್ಯಳ 14ನೇ ವರ್ಷದ ಪುಣ್ಯಸ್ಮರಣೆಯ ಈ ಸಂದರ್ಭದಲ್ಲಿ ನೂತನ SIT ತಂಡ ಪ್ರಾಮಾಣಿಕ ತನಿಖೆ ನಡೆಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಗಿದೆ.
ತನಿಖಾಧಿಕಾರಿ ಶಶಿಕುಮಾರ್ ನೇಮಕದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇವರ ಬಗ್ಗೆ ಅನೇಕ ಆರೋಪಗಳಿವೆ. ಅಂತಹ ಅಧಿಕಾರಿಯ ವಿರುದ್ಧವೇ ಒಂದು SIT ರಚಿಸಬೇಕಾಗಿದೆ ಎಂದರು. ತಾಯಿ ಕುಸುಮಾವತಿ ಚಂದಪ್ಪಗೌಡ ಮಾತನಾಡಿ, ಒಳ್ಳೆಯ ರೀತಿಯಲ್ಲಿ ತನಿಖೆಯಾಗಬೇಕು ಎಂದು ಹೇಳಿದರು. ಕಾರ್ಯಕ್ರಮವನ್ನು ಅನಿಲ್ ಅಂತರ ಸ್ವಾಗತಿಸಿ, ವಂದಿಸಿದರು.
ಈ ಅಭಿನಂದನಾ ಸಭೆಯ ಯಶಸ್ಸಿಗಾಗಿ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆಡಳಿತ ಮತ್ತು ಮಾಧ್ಯಮ ಮಿತ್ರರು ಸಂಪೂರ್ಣ ಸಹಕಾರ ನೀಡಬೇಕೆಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.
-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala3 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala9 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident5 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
