Connect with us

Bantawala

ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯಬಾರದು; ಸತ್ಯ ಹೊರಬರಬೇಕು” – ಸೌಜನ್ಯ ಮರುತನಿಖೆ ಬಗ್ಗೆ ಕಲ್ಲಡ್ಕ ಭಟ್ ಖಡಕ್ ಎಚ್ಚರಿಕೆ

Published

on

SIT ಮೇಲೆಯೇ ಅನುಮಾನ! ಮಂಗಳೂರು ಕಮಿಷನರ್ ಬಿಟ್ಟರೆ ಉಳಿದವರ ಮೇಲೆ ವಿಶ್ವಾಸ ಇಲ್ಲ:‌ ಸೌಜನ್ಯಳಿಗೆ ಈ ಬಾರಿ ನ್ಯಾಯ ಸಿಗಲೇಬೇಕು – ಕಲ್ಲಡ್ಕ ಭಟ್ ಗುಡುಗು

ಬಂಟ್ವಾಳ, ಸೆ.28: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಿರುವುದನ್ನು ಸ್ವಾಗತಿಸಿರುವ ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ತನಿಖಾ ತಂಡದ ಕೆಲವು ಅಧಿಕಾರಿಗಳ ಕುರಿತು ಜನರಲ್ಲಿ ಸಣ್ಣ ಸಂಶಯವಿದೆ ಎಂದು ಹೇಳಿದ್ದಾರೆ.

ಬಂಟ್ವಾಳದಲ್ಲಿ ಬಜರಂಗದಳ ಹಾಗೂ ವಿಹಿಂಪ ಹಮ್ಮಿಕೊಂಡಿದ್ದ ಬಿಸಿರೋಡ್ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, “SIT ರಚನೆಯಾಗಿರುವುದು ಒಳ್ಳೆಯದು. ಆದರೆ SITಯಲ್ಲಿರುವ ಎಲ್ಲ ಅಧಿಕಾರಿಗಳ ಬಗ್ಗೆ ಪರಿಪೂರ್ಣ ವಿಶ್ವಾಸ ಮೂಡಿಲ್ಲ. ಸಣ್ಣ ಸಂಶಯ ಇದೆ” ಎಂದು ಹೇಳಿದರು.

ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಒಳ್ಳೆಯ ಕಮಿಷನರ್. ಅವರು ಆ ಕಡೆ, ಈ ಕಡೆ ಹೋಗುವುದಿಲ್ಲ ಎಂಬ ವಿಶ್ವಾಸವಿದೆ. ಆದರೆ ಉಳಿದ ಅಧಿಕಾರಿಗಳ ಬಗ್ಗೆ ನಮಗೆ ಸಂಶಯವಿದೆ. ಅಧಿಕಾರಿಗಳು ಯಾವುದೇ ಒತ್ತಡ, ಪ್ರಭಾವಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು ಎಂದು ಅವರು ಹೇಳಿದರು.

’14 ವರ್ಷಗಳಿಂದ ಸೌಜನ್ಯಳ ಆತ್ಮ ಓಡಾಡುತ್ತಿದೆ’

“ಕಳೆದ 14 ವರ್ಷಗಳಿಂದ ಸೌಜನ್ಯಳ ಆತ್ಮ ಓಡಾಡುತ್ತಿದೆ. ಬೇರೆ ಯಾವುದೇ ಪ್ರಕರಣ ಈ ರೀತಿಯಾಗಿ ಉಳಿದಿಲ್ಲ. ಈ ಬಾರಿ ಆಕೆಗೆ ನ್ಯಾಯ ಒದಗಿಸುವ ಕೆಲಸವಾಗಬೇಕು. SIT ಅಧಿಕಾರಿಗಳಲ್ಲಿ ನನ್ನ ವಿನಂತಿ ಏನೆಂದರೆ, ಯಾರ ಕಡೆಗೂ ನೋಡದೆ ಸತ್ಯ ಏನೆಂಬುದನ್ನು ಹುಡುಕಬೇಕು. ಪ್ರಾಮಾಣಿಕ ತನಿಖೆ ನಡೆದರೆ ನೂರಕ್ಕೆ ನೂರು ಸತ್ಯ ಹೊರಬರಲಿದೆ” ಎಂದು ಪ್ರಭಾಕರ್ ಭಟ್ ಹೇಳಿದರು.

ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಉಲ್ಲೇಖಿಸಿದ ಅವರು, “ಈ ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಹೊಸ ತನಿಖಾ ತಂಡದಲ್ಲಿ ಸೇರಿಸಬಾರದು ಎಂಬುದನ್ನು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸಂತೋಷ್ ರಾವ್ ಅವರನ್ನು ಪ್ರಕರಣಕ್ಕೆ ಮತ್ತೆ ಸೇರಿಸಬಾರದು ಎಂಬುದನ್ನೂ ಕೋರ್ಟ್ ಹೇಳಿದೆ” ಎಂದು ತಿಳಿಸಿದರು.

‘ಬಲವಾದ ಅಧಿಕಾರಿಗಳಿದ್ದರೆ ವಿಶ್ವಾಸ ಹೆಚ್ಚುತ್ತಿತ್ತು’

“ಅಪರಾಧಿಗಳನ್ನು ಪತ್ತೆಹಚ್ಚುವ ತಾಕತ್ತು ಪೊಲೀಸರಿಗೆ ಇದೆ. ಮಂಗಳೂರು ಪೊಲೀಸ್ ಆಯುಕ್ತರ ರೀತಿಯ ಬಲವಾದ ಇನ್ನಷ್ಟು ಅಧಿಕಾರಿಗಳನ್ನು SITಯಲ್ಲಿ ಸೇರಿಸಬೇಕಿತ್ತು. ಹಾಗೆ ಮಾಡಿದ್ದರೆ ಜನರಲ್ಲಿ ಮತ್ತಷ್ಟು ವಿಶ್ವಾಸ ಮೂಡುತ್ತಿತ್ತು. ಉಳಿದವರು ಏನು ಎಂಬುದು ಜನರಿಗೂ ಗೊತ್ತಿದೆ, ನಿಮಗೂ ಗೊತ್ತಿದೆ. ಆ ರೀತಿಯ ಸಣ್ಣ ಗೊಂದಲ ನಮ್ಮಲ್ಲಿದೆ” ಎಂದು ಅವರು ಹೇಳಿದರು.

ಹಿನ್ನೆಲೆ: ಒಂದು ತಿಂಗಳ ಹಿಂದೆ ಸೌಜನ್ಯ ಮನೆಗೆ ದಿಢೀರ್ ಭೇಟಿ

ಈ ಹೇಳಿಕೆಗೂ ಒಂದು ತಿಂಗಳ ಮೊದಲು, ಅಂದರೆ ಆಗಸ್ಟ್ 26, 2026 ರಂದು, ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿರುವ ಸೌಜನ್ಯ ಅವರ ಮನೆಗೆ ದಿಢೀರ್ ಭೇಟಿ ನೀಡಿ, ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು.

ಧರ್ಮಸ್ಥಳ ಗ್ರಾಮದ ಪಾಂಗಾಳದಲ್ಲಿರುವ ಸೌಜನ್ಯ ಅವರ ಮನೆಯಲ್ಲಿ ಅವರ ತಾಯಿ ಕುಸುಮಾವತಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದರು. ಮಗಳ ಅಗಲಿಕೆಯಿಂದ ಕಂಗಾಲಾಗಿ, ನ್ಯಾಯಕ್ಕಾಗಿ ಸುದೀರ್ಘ ವರ್ಷಗಳಿಂದ ಹೋರಾಟ ನಡೆಸುತ್ತಿರುವ ಕುಟುಂಬಕ್ಕೆ ಈ ಭೇಟಿ ಸಾಂತ್ವನ ನೀಡುವ ಜೊತೆಗೆ, ತನಿಖೆಯ ದಿಕ್ಕಿನಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದು ಹೇಳಲಾಗಿತ್ತು.

ಈ ಸಂದರ್ಭದಲ್ಲಿ ಉದ್ಯಮಿ ಸದಾನಂದ ನಾವರ, ಪ್ರಮುಖರಾದ ಪುರಂದರ, ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸಹೋದರ ಮೋಹನ್ ಶೆಟ್ಟಿ ಉಜಿರೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಆ ಭೇಟಿಯ ಬೆನ್ನಲ್ಲೇ ಈಗ SIT ಬಗ್ಗೆ ಅವರು ನೀಡಿರುವ ಈ ಹೇಳಿಕೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ

SIT ಬಗ್ಗೆ ವಿವರ: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರವು ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಐವರು ಸದಸ್ಯರ SIT ರಚಿಸಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ನಾಲ್ವರು ಹಿರಿಯ ಅಧಿಕಾರಿಗಳು ತಂಡದಲ್ಲಿದ್ದಾರೆ. ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

award

ಬಾಗಲಕೋಟೆ ರಾಜ್ಯ ಮಟ್ಟದ ಜೂಡೋ ಪಂದ್ಯಾಟ: ವಿಟ್ಲದ ಜೆ.ಸಿ. ಪ್ರೌಢಶಾಲೆಯ ಧನ್ವಿಗೆ ತೃತೀಯ ಸ್ಥಾನ

Published

on

ವಿಟ್ಲ: ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬಾಗಲಕೋಟೆಯ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 2026-27ನೇ ಸಾಲಿನ ರಾಜ್ಯಮಟ್ಟದ ಜೂಡೋ ಪಂದ್ಯಾವಳಿಯಲ್ಲಿ ವಿಟ್ಲದ ಜೆ.ಸಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಧನ್ವಿ ಸಣ್ಣಗುತ್ತು -63 ಕೆ.ಜಿ. ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಸಾಧನೆಗೈದಿದ್ದಾರೆ.

ಬಾಗಲಕೋಟೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ದೈಹಿಕ ಶಿಕ್ಷಕರ ಸಂಘದ ಸಹಯೋಗದಲ್ಲಿ ಅಕ್ಟೋಬರ್ 9ರಂದು ನಡೆದ 14 ಮತ್ತು 17 ವರ್ಷದೊಳಗಿನ ವಯೋಮಿತಿಯ ಈ ರಾಜ್ಯಮಟ್ಟದ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಚಾಲನೆ ನೀಡಿದ್ದರು. ಈ ಪಂದ್ಯಾವಳಿಯು ಮೂರು ದಿನಗಳ ಕಾಲ ನಡೆಯಲಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ.

ಸಾಧನೆಯ ಹಿನ್ನೆಲೆ ಹಾಗೂ ಮಾರ್ಗದರ್ಶನ: ಈ ಪ್ರತಿಭಾವಂತ ಕ್ರೀಡಾಪಟು ಧನ್ವಿ ಅವರು ನೋಟರಿ ವಕೀಲರು ಹಾಗೂ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ಮತ್ತು ಶ್ವೇತಾ ದಂಪತಿಯ ಪುತ್ರಿಯಾಗಿದ್ದಾರೆ.

ಧನ್ವಿಯವರ ಈ ಯಶಸ್ಸಿನ ಹಿಂದೆ ಮಾಧವ ಅಳಿಕೆ ಅವರ ಮಾರ್ಗದರ್ಶನವಿದ್ದು, ರೋಹಿತ್ ಎಸ್.ಎನ್., ನಿಖಿಲ್ ಕೆ.ಟಿ., ತನುಶ್ರೀ ಡಿ. ಬಂಗೇರ, ಭವಿಶ್ ಸಿಂಹಮೂಲೆ ಹಾಗೂ ಸುಧೀನ್ ಆಚಾರ್ ಅವರು ಅತ್ಯುತ್ತಮ ತರಬೇತಿ ನೀಡಿರುತ್ತಾರೆ. ವಿದ್ಯಾರ್ಥಿನಿಯ ಈ ಕ್ರೀಡಾ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಊರ ನಾಗರಿಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 700 ಕ್ಕೂ ಹೆಚ್ಚು ಕ್ರೀಡಾಪಟುಗಳು (350 ಬಾಲಕರು ಮತ್ತು 350 ಬಾಲಕಿಯರು) ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ

Continue Reading

arrest

17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ದಸ್ತಗಿರಿ

Published

on

ಬಂಟ್ವಾಳ: ಸುಮಾರು 17 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ಮೂಡಬಿದ್ರೆ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಟ್ವಾಳ ತಲಪಾಡಿ ನಿವಾಸಿ ಹನೀಫ್ @ ಕೊಕ್ಕಡ ಹನೀಫ್ (57) ಬಂಧಿತ ಆರೋಪಿ.

ಪ್ರಕರಣದ ಹಿನ್ನೆಲೆ: ಬಂಟ್ವಾಳ ನಗರ ಪೊಲೀಸ್ ಠಾಣೆಯ ಅ.ಕ್ರ: 163/2009 ರಂತೆ ಕೆ.ಇ. ಕಾಯ್ದೆ (KE Act) ಕಲಂ: 11, 13, 32, 33, 34, 38(a), 43 ರ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದು, ಕಳೆದ 17 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಅಲ್ಲದೆ, ಈತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ 143/2023 ಕಲಂ 143, 147, 448, 427, 436, 307, 149 ಐಪಿಸಿ (IPC) ಪ್ರಕರಣದಲ್ಲೂ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿತ್ತು.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಎಸ್ಐ ಬಶೀರ್, ಹೆಡ್ ಕಾನ್ಸ್‌ಸ್ಟೇಬಲ್‌ಗಳಾದ ಜಗದೀಶ್, ಸಂತೋಷ್ ಹಾಗೂ ಪಿಸಿ ಗವಿ ಸಿದ್ದಪ್ಪ ಅವರ ತಂಡವು ದಿನಾಂಕ 09/10/2026 ರಂದು ಮೂಡಬಿದ್ರೆಯ ಶಿರ್ತಾಡಿ ಎಂಬಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿದೆ.

ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Continue Reading

accident

ಪುಂಜಾಲಕಟ್ಟೆ ಬಳಿ ಸಿಡಿಲು ಬಡಿದು ಮನೆ ಸಂಪೂರ್ಣ ಧ್ವಂಸ; ಮಹಿಳೆಗೆ ಗಂಭೀರ ಗಾಯ

Published

on

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಅನಿಲ್ದಡ್ಡ ಎಂಬಲ್ಲಿ ಸೋಮವಾರ (ಅ.5) ಬೆಳಿಗ್ಗೆ ಸಂಭವಿಸಿದ ಭೀಕರ ಸಿಡಿಲು ಬಡಿತಕ್ಕೆ ಮನೆಯೊಂದು ಸಂಪೂರ್ಣ ಹಾನಿಗೊಂಡಿದ್ದು, ಮನೆಯಲ್ಲಿದ್ದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ವಿವರ: ಇಲ್ಲಿನ ನಿವಾಸಿ ನಾಗೇಶ್ ಕುಲಾಲ್ ಅವರ ಹಂಚಿನ ಮನೆಗೆ ಇಂದು ಬೆಳಿಗ್ಗೆ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ತೀವ್ರತೆಗೆ ಇಡೀ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಂತೆ ಹಾನಿಗೊಂಡಿದ್ದು, ಹೆಂಚಿನ ಭಾವಣೆ ಸಹಿತ ಮನೆಯೊಳಗಿನ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

ಅಡುಗೆ ಮನೆಯಲ್ಲಿದ್ದಾಗ ದುರ್ಘಟನೆ: ಘಟನೆ ಸಂಭವಿಸಿದ ಸಮಯದಲ್ಲಿ ಕುಶಾಲಾಕ್ಷಿ ಅವರು ಅಡುಗೆ ಮನೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ ಸಿಡಿಲು ಬಡಿದಿದೆ. ಆ ಸಮಯದಲ್ಲಿ ನಾಗೇಶ್ ಕುಲಾಲ್ ಅವರು ಸಮೀಪದಲ್ಲಿದ್ದ ತಂದೆಯ ಮನೆಗೆ ತೆರಳಿದ್ದರು. ಮನೆಯಲ್ಲಿ ಪತಿ-ಪತ್ನಿ ಇಬ್ಬರೇ ವಾಸವಿದ್ದು, ಅಕ್ಕಪಕ್ಕದಲ್ಲಿ ಬೇರೆ ಮನೆಗಳು ಇಲ್ಲದಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಆಸ್ಪತ್ರೆಗೆ ದಾಖಲು: ಸಿಡಿಲು ಬಡಿತದಿಂದ ಗಂಭೀರವಾಗಿ ಗಾಯಗೊಂಡ ಕುಶಾಲಾಕ್ಷಿ ಅವರನ್ನು ತಕ್ಷಣವೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಮುಂದುವರಿದಿದೆ.

ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!